ADVERTISEMENT

ಅತ್ತಿಬೆಲೆ ಪಟಾಕಿ ಲೀಲೆ

ಕೆ.ಶಿವಣ್ಣ
Published 1 ನವೆಂಬರ್ 2013, 19:30 IST
Last Updated 1 ನವೆಂಬರ್ 2013, 19:30 IST

ತಮಿಳುನಾಡು ಗಡಿಯಲ್ಲಿರುವ ಅತ್ತಿಬೆಲೆ, ಹೊಸೂರಿನಲ್ಲಿ ಈಗ ಪಟಾಕಿಗಳದ್ದೇ ಕಾರುಬಾರು. ಈ ಪ್ರದೇಶದಲ್ಲಿ ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ರಾಷ್ಟ್ರೀಯ ಹೆದ್ದಾರಿ 7ರಲ್ಲಿರುವ ಅತ್ತಿಬೆಲೆ ಗಡಿ ಬಳಿ ಬರುತ್ತಿದ್ದಂತೆಯೇ ಪಟಾಕಿ ಅಂಗಡಿಗಳ ಉದ್ದನೆಯ ಸಾಲುಗಳು ಕಂಡುಬರುತ್ತವೆ. ಪುಟಾಣಿ ಮಕ್ಕಳು ಸೇರಿದಂತೆ ಪಟಾಕಿ ಅಂಗಡಿಗಳ ಮಾಲೀಕರ ಏಜೆಂಟರು ಪೀಪಿ ಊದುತ್ತಾ, ಗ್ರಾಹರಕನ್ನು ತಮ್ಮತ್ತ ಸೆಳೆಯಲು ರಿಯಾಯಿತಿಯ ಘೋಷಣೆಗಳನ್ನು ಕೂಗುವುದು ಕಂಡುಬರುತ್ತದೆ.

‘ಶೇ 75, 80, 90 ಡಿಸ್ಕೌಂಟ್‌ ಕೊಡುತ್ತೇವೆ ಬನ್ನಿ ಬನ್ನಿ’ ಎಂಬ ಕೂಗು ಇಲ್ಲಿ ಸಾಮಾನ್ಯ.
ಅಂಗಡಿ ಬಳಿ ಹೋಗುತ್ತಿದ್ದಂತೆಯೇ, ಬಗೆಬಗೆಯ ಪಟಾಕಿಗಳು ಗ್ರಾಹಕರ ಗಮನ ಸೆಳೆಯುತ್ತವೆ. ಇಲ್ಲಿ ₨ 20ರಿಂದ ₨20ಸಾವಿರ ಮೌಲ್ಯದ ಪಟಾಕಿಗಳು ದೊರೆಯುತ್ತವೆ. ರಾಷ್ಟ್ರೀಯ ಹೆದ್ದಾರಿ 7ರ ಚಂದಾಪುರದಿಂದ ಅತ್ತಿಬೆಲೆವರೆಗೆ ಸುಮಾರು 500ಕ್ಕೂ ಹೆಚ್ಚು ಅಂಗಡಿಗಳು ತಲೆ ಎತ್ತಿವೆ ಎಂದರೆ ಪಟಾಕಿಗಳ ಸದ್ದು ಎಷ್ಟಿರಬಹುದು ಎಂಬ ಅಂದಾಜು ದೊರೆಯುತ್ತದೆ.
ಸ್ಟ್ಯಾಂಡರ್ಡ್ ಕಂಪೆನಿಯ ಪಟಾಕಿಗಳಿಗೆ ಹೆಚ್ಚಿನ ಬೇಡಿಕೆ ಇರುವುದಾಗಿ ಇಲ್ಲಿನ ಅಂಗಡಿ ಮಾಲೀಕ ಮಂಜುನಾಥ್‌ ಹೇಳುತ್ತಾರೆ. ಸ್ಟ್ಯಾಂಡರ್ಡ್ ಕಂಪೆನಿಯಲ್ಲದೆ ಸುಪ್ರೀಂ, ಹಿಂದೂಸ್ತಾನ್ ಮತ್ತಿತರ ಕಂಪೆನಿಗಳ ಪಟಾಕಿಗಳು ಮಾರಾಟಕ್ಕಿವೆ ಎಂಬುದು ಅವರು ನೀಡುವ ವಿವರಣೆ.

‘ಅತ್ತಿಬೆಲೆ, ಹೊಸೂರಿನಲ್ಲಿ ಬೆಂಗಳೂರಿಗಿಂತ ಕಡಿಮೆ ದರದಲ್ಲಿ ಪಟಾಕಿಗಳು ದೊರೆಯುತ್ತವೆ. ಆಯ್ಕೆಗೆ ಹೆಚ್ಚಿನ ಅಂಗಡಿಗಳು ಇವೆ. ಹಾಗಾಗಿ ಪ್ರತಿವರ್ಷ ನಾವು ಇಲ್ಲಿಂದಲೇ ಪಟಾಕಿ ತೆಗೆದುಕೊಂಡು ಹೋಗುತ್ತೇವೆ’ ಎನ್ನುತ್ತಾರೆ ಬೆಂಗಳೂರಿನ ಬಿಪಿಒ ಕಂಪೆನಿಯೊಂದರ ಉದ್ಯೋಗಿ ಅಲೆಕ್‌್ಸ.

‘ಹತ್ತು ವರ್ಷಗಳಿಂದ ದೀಪಾವಳಿ ಸಮಯದಲ್ಲಿ ಈ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ಈ ವರ್ಷ ₨ 40 ಲಕ್ಷ ಬಂಡವಾಳ ಹಾಕಲಾಗಿದೆ, ಶಿವಕಾಶಿಯಲ್ಲಿ 6 ತಿಂಗಳು ಮುಂಚಿತವಾಗಿಯೇ ಹಣ ಪಾವತಿ ಮಾಡಿ ಆರ್ಡರ್‌ ಬುಕ್‌ ಮಾಡುವುದರಿಂದ ಕಡಿಮೆ ಬೆಲೆಗೆ ಪಟಾಕಿಗಳು ಸಿಗುತ್ತವೆ. ಹಾಗಾಗಿ ಶೇ 90ರವರೆಗೂ ಎಂಆರ್‌ಪಿ ದರದಲ್ಲಿ ರಿಯಾಯಿತಿ ನೀಡುತ್ತಿದ್ದೇವೆ. ಇದಲ್ಲದೇ ಶೇ 10ರಷ್ಟು ಕ್ಯಾಶ್‌ ಡಿಸ್ಕೌಂಟ್‌ ಸಹ ಕೊಡುತ್ತಿದ್ದೇವೆ. ರಿಯಾಯಿತಿ ಆಕರ್ಷಣೆಯಿಂದಾಗಿ ಸ್ಥಳೀಯ ಗ್ರಾಹಕರಲ್ಲದೇ ಶಿವಮೊಗ್ಗ, ತುಮಕೂರು, ರಾಮನಗರ, ಮೈಸೂರುಗಳಿಂದಲೂ ಇಲ್ಲಿಗೆ ಬರುತ್ತಾರೆ. ಅವರಲ್ಲಿ ಕೆಲವರು ವ್ಯಾಪಾರಿಗಳು ಸೇರಿದ್ದಾರೆ. ಇಲ್ಲಿಂದ ಕೊಂಡೊಯ್ದು ಅಲ್ಲಿ ಮಾರಾಟ ಮಾಡುತ್ತಾರೆ’ ಎನ್ನುತ್ತಾರೆ ಅಂಗಡಿಯೊಂದರ ಮಾಲೀಕ ಶ್ರೀನಿವಾಸ್‌ ರೆಡ್ಡಿ.

‘ಪಟಾಕಿ ವ್ಯಾಪಾರ ಅತ್ಯಂತ ಸೂಕ್ಷ್ಮವಾದದ್ದು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಂಪೂರ್ಣ ನಷ್ಟವಾಗುತ್ತದೆ. ಅಂಗಡಿಗಳಿಗೆ ಯಾವುದೇ ವಿಮೆ ಇರುವುದಿಲ್ಲ. ಪಟಾಕಿಗಳಿಗೆ ಕಾಯಂ ಅಂಗಡಿ ಸಹ ಇರುವುದಿಲ್ಲ. ಹಬ್ಬದ ಅಂಗವಾಗಿ ತಾತ್ಕಾಲಿಕವಾಗಿ ನಿರ್ಮಿಸಿರುವ ಟೆಂಟ್‌ಗಳಲ್ಲಿ ಅಂಗಡಿಗಳನ್ನು ತೆರೆಯುವುದು ಸಾಮಾನ್ಯ. ಮುನ್ನೆಚ್ಚರಿಕೆ ಕ್ರಮವಾಗಿ ಫೈರ್‌ಬಾಕ್ಸ್,  ಧೂಮಪಾನ ನಿಷೇಧಿಸಲಾಗಿದೆ ಎಂಬ ಬೋರ್ಡ್‌ಗಳನ್ನು ಹಾಕಿದ್ದೇವೆ. ಬಕೆಟ್‌ಗಳಲ್ಲಿ ಮರಳನ್ನು ಇಟ್ಟಿರುವುದಲ್ಲದೆ ನೀರಿನ ವ್ಯವಸ್ಥೆಯನ್ನೂ ಎಚ್ಚರಿಕೆಯ ದೃಷ್ಟಿಯಿಂದ ಮಾಡಲಾಗಿದೆ’ ಎಂದು ವಿವರಿಸುತ್ತಾರೆ ಮತ್ತೊಬ್ಬ ವ್ಯಾಪಾರಿ ಮಧು. ಪಟಾಕಿಗಳನ್ನು ಕೊಳ್ಳಲು ಬಂದವರು ವ್ಯಾಪಾರದಲ್ಲಿ ಜಾಣ್ಮೆ ತೋರಬೇಕು. ಇಲ್ಲವಾದಲ್ಲಿ ಟೋಪಿ ಗ್ಯಾರಂಟಿ ಎಂಬ ಮಾತನ್ನು ಹೇಳುತ್ತಾರೆ ಅವರು.

ಅಗ್ಗದ ದರದಲ್ಲಿ ಬಗೆಬಗೆಯ ಪಟಾಕಿಗಳನ್ನು ಕೊಳ್ಳಲು ಜನರ ದಂಡು ಅತ್ತಿಬೆಲೆಯತ್ತ ಈ ಸಮಯದಲ್ಲಿ ಧಾವಿಸುವುದರಿಂದ ಈ ಮಾರ್ಗದಲ್ಲಿ ಜನಜಂಗುಳಿ ಹೆಚ್ಚು. ಇದರಿಂದ ಟ್ರಾಫಿಕ್‌ ಜಾಮ್‌ ಕೂಡ ಆಗುತ್ತದೆ. ದೀಪಾವಳಿ ಆಸುಪಾಸಿನ ಒಂದು ವಾರ ಅತ್ತಿಬೆಲೆ, ಹೊಸೂರಿನಲ್ಲಿ ಪಟಾಕಿಗಳ  ಕಾರುಬಾರು ಕಡಿಮೆಯೇನೂ ಇರುವುದಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.