ADVERTISEMENT

ಅನಿರೀಕ್ಷಿತ ಪ್ರವೇಶ; ಪ್ರಶಸ್ತಿಯ ಸುಖ

ಅಮಿತ್ ಎಂ.ಎಸ್.
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST
ಅನಿರೀಕ್ಷಿತ ಪ್ರವೇಶ; ಪ್ರಶಸ್ತಿಯ ಸುಖ
ಅನಿರೀಕ್ಷಿತ ಪ್ರವೇಶ; ಪ್ರಶಸ್ತಿಯ ಸುಖ   

ಚಿತ್ರರಂಗಕ್ಕೆ ಕಾಲಿಟ್ಟ ವರ್ಷದಲ್ಲಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಅಚ್ಚರಿ ಮೂಡಿಸಿದ ಅಂಜಲಿ ಪಾಟೀಲ್ ಕನ್ನಡ ನೆಲಕ್ಕೆ ಕಾಲಿರಿಸಿದ್ದಾರೆ. ಈ. ಚೆನ್ನಗಂಗಪ್ಪ ಅವರ ನಿರ್ದೇಶನದ `ಅಪ್ನಾ ದೇಶ್' ಎಂಬ ಗಿರಿಜನರ ಕಥೆಯುಳ್ಳ ಚಿತ್ರದ ಮೂಲಕ ಅಂಜಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಗಿರಿಜನರ ಬದುಕು ಹಾಗೂ ನಕ್ಸಲ್ ಚಳವಳಿಯನ್ನು ತಳುಕು ಹಾಕಿಕೊಂಡ `ಅಪ್ನಾ ದೇಶ್' ನಾಯಕಿ ಪ್ರಧಾನ ಚಿತ್ರ. ಹಿಂದಿಯಲ್ಲಿ ನಕ್ಸಲ್ ಹೋರಾಟದ ತಳಹದಿಯಲ್ಲಿ ಪ್ರಕಾಶ್ ಝಾ ನಿರ್ದೇಶನದ `ಚಕ್ರವ್ಯೆಹ್'ನಲ್ಲಿ ನಟಿಸಿ ಗಮನ ಸೆಳೆದವರು ಅಂಜಲಿ ಪಾಟೀಲ್.

ನಾಸಿಕ್ ಮೂಲದವರಾದ ಅಂಜಲಿ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ (ಎನ್‌ಎಸ್‌ಡಿ) ಚಿನ್ನದ ಪದಕ ವಿಜೇತೆ. ಪುಣೆಯಲ್ಲಿ ರಂಗಭೂಮಿ ಪದವಿ ಮುಗಿಸಿ ನಿರ್ದೇಶನದ ಕನಸು ಹೊತ್ತು ಎನ್‌ಎಸ್‌ಡಿ ಸೇರಿದ ಅವರು ನಟಿಯಾಗುತ್ತೇನೆಂದು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲವಂತೆ.

ಪ್ರಶಾಂತ್ ನಾಯರ್ ನಿರ್ದೇಶನದ `ಡೆಲ್ಲಿ ಇನ್ ಎ ಡೇ' ಚಿತ್ರದಲ್ಲಿ ನಟಿಸುವ ಅವಕಾಶ ಆಕಸ್ಮಿಕವಾಗಿ ಒಲಿದು ಬಂದಿತು. ಬಳಿಕ ಕ್ಯಾಮೆರಾ ಹಿಂದಿನ ಕೆಲಸಕ್ಕಿಂತ, ಅದನ್ನು ಎದುರಿಸುವ ಕಾಯಕ ಮೆಚ್ಚುಗೆಯಾಯಿತು. ಹಾಗೆಂದು ತಮ್ಮ ಮೂಲ ಆಸಕ್ತಿ ಹಾಗೂ ಗುರಿಯನ್ನು ಅಂಜಲಿ ಪಾಟೀಲ್ ಮರೆತಿಲ್ಲ.

ಇತ್ತೀಚೆಗಷ್ಟೆ ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಅಂಜಲಿ ಮುಡಿಗೇರಿದೆ. ಆಕೆ ನಟಿಸಿದ್ದು ಸಿಂಹಳಿ ಚಿತ್ರ `ಒಬ ನಥುವ ಒಬ ಎಕ್ಕ'ದಲ್ಲಿ. ಅಲ್ಪಸಂಖ್ಯಾತ ತಮಿಳು ಸಮುದಾಯದ ಯುವತಿಯಾಗಿ ಅವರು ನಟಿಸಿದ್ದರು. ಚಿಕ್ಕವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಪ್ರಶಸ್ತಿ ದೊರೆತದ್ದು ತಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಿದೆ ಎನ್ನುತ್ತಾರೆ ಅಂಜಲಿ.

ಹಿಂದಿಯ `ಗ್ರೀನ್ ಬ್ಯಾಂಗಲ್ಸ್' ಮತ್ತು ತೆಲುಗಿನ `ಪ್ರತ್ಯಯಂ' ಅಂಜಲಿ ನಟಿಸಿರುವ ಮತ್ತೆರಡು ಚಿತ್ರಗಳು. ಪ್ರಕಾಶ್ ಝಾ ನಿರ್ದೇಶನದ ಮುಂದಿನ ಚಿತ್ರ `ಸತ್ಯಾಗ್ರಹ'ದಲ್ಲಿಯೂ ಅಂಜಲಿ ಅವಕಾಶ ಪಡೆದುಕೊಂಡಿದ್ದಾರೆ. ಅವರು ನಟಿಸಿರುವ ಮಲಯಾಳಂ ಚಿತ್ರ `ಎಂಟೆ' ಜನವರಿಯಲ್ಲಿ ತೆರೆಕಾಣುತ್ತಿದೆ. ಮೂಲತಃ ರಂಗಭೂಮಿ ಹಿನ್ನೆಲೆಯುಳ್ಳವರಾದ ಅಂಜಲಿ ನಾಟಕಗಳ ನಿರ್ದೇಶನದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಎನ್‌ಎಸ್‌ಡಿಯಲ್ಲಿ ಇರುವಾಗ ಗಿರೀಶ ಕಾರ್ನಾಡರ `ಹಯವದನ' ನಾಟಕ ಓದಿ ಪ್ರಭಾವಿತರಾಗಿದ್ದ ಅಂಜಲಿ `ಅಪ್ನಾ ದೇಶ್' ಚಿತ್ರದಲ್ಲಿ ಕಾರ್ನಾಡರೊಂದಿಗೆ ನಟಿಸಲು ಅವಕಾಶ ದೊರೆತಿರುವುದರಿಂದ ಆಗಿರುವ ಸಂತೋಷ ಅವರ್ಣನೀಯ ಎನ್ನುತ್ತಾರೆ. ಚಿತ್ರೀಕರಣ ನಡೆಯುತ್ತಿರುವ ಕುದುರೆಮುಖದ ಪ್ರಕೃತಿ ಸೊಬಗು ಅವರನ್ನು ಮೋಡಿಮಾಡಿದೆ. ಮಲೆಕುಡಿಯ ಜನಾಂಗದ ವಿದ್ಯಾವಂತ ಯುವತಿಯಾಗಿ ಕಾಣಿಸಿಕೊಳ್ಳುತ್ತಿರುವ ಅಂಜಲಿ, ಚಿತ್ರಕ್ಕೆ ಪೂರಕವಾಗಿ ಈ ಜನಾಂಗ ಹಾಗೂ ಇಲ್ಲಿನ ಜನಜೀವನ ಕ್ರಮದ ಅಧ್ಯಯನದಲ್ಲಿ ತೊಡಗಿಕೊಳ್ಳುತ್ತಿದ್ದಾರಂತೆ.

`ಕಲಾತ್ಮಕ, ಕಮರ್ಷಿಯಲ್ ಅಥವಾ ರಂಗಭೂಮಿಗೆ ಸೀಮಿತಗೊಳ್ಳುವ ಮನಸ್ಸು ನನ್ನದಲ್ಲ. ಎಲ್ಲಾ ಬಗೆಯ ಪಾತ್ರಗಳಿಗೂ ಸಿದ್ಧ. ಕಲಾತ್ಮಕ ಪಾತ್ರಕ್ಕಾಗಿ ಬಣ್ಣಹಚ್ಚಿಕೊಳ್ಳದೆಯೂ ನಟಿಸುತ್ತೇನೆ, ಕಮರ್ಷಿಯಲ್ ಪಾತ್ರಕ್ಕಾಗಿ ಗ್ಲಾಮರಸ್ ಆಗಿಯೂ ಕಾಣಿಸಿಕೊಳ್ಳಲೂ ಸಿದ್ಧ' ಎನ್ನುತ್ತಾರೆ ಅಂಜಲಿ. ಮಾಡೆಲಿಂಗ್ ಲೋಕವೂ ಅವರನ್ನು ಕೈಬೀಸಿ ಕರೆದಿದೆ. ಅದರ ಒಲವಿದ್ದರೂ ನಟನೆಗೇ ಅವರ ಆದ್ಯತೆ. ವಿಶಾಲ್ ಭಾರದ್ವಾಜ್ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕೆಂಬುದು ಅಂಜಲಿ ಮಹದಾಸೆ. ಗಿರೀಶ್ ಕಾಸರವಳ್ಳಿಯವರ ಕಲಾತ್ಮಕ ಚಿತ್ರದಲ್ಲೂ ಒಂದು ಪಾತ್ರ ಸಿಕ್ಕರೆ ಅದಕ್ಕಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ ಎನ್ನುತ್ತಾರೆ ಅವರು.

ಖಾನ್ ತ್ರಯರೊಂದಿಗೆ ನಟಿಸಬೇಕೆಂಬ ಬಯಕೆಯೂ ಅಂಜಲಿಗಿದೆ. ಕೆಲವರು ಹೀರೋಗಳಿದ್ದಾರೆ, ಇನ್ನು ಕೆಲವರು ನಟರಿದ್ದಾರೆ. ಹೀರೋ ಮತ್ತು ನಟನೆ ಎರಡನ್ನೂ ಬಲ್ಲವರೊಂದಿಗೆ ನಟಿಸಬೇಕು ಎನ್ನುವ ಅಂಜಲಿ ಮಾತನ್ನು ತಕ್ಕಡಿಯಲ್ಲಿಟ್ಟು ತೂಗುತ್ತಾರೆ. ಅಮೀರ್ ಖಾನ್ ನಿಜವಾದ ಸ್ಟಾರ್‌ನಟ ಎನ್ನುವ ಅವರು, ಶಾರುಖ್ ವಿಚಾರಕ್ಕೆ ಬಂದಾಗ ಅವರೊಬ್ಬ `ಹೀರೋ' ಎಂದಷ್ಟೇ ಹೇಳಿದರೆ, ಸಲ್ಮಾನ್ ಖಾನ್ ಇನ್ನೊಂದು ಬಗೆಯ ನಟ ಎಂದು ನಸುನಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.