ADVERTISEMENT

ಅಪರೂಪದ ಬಹುಮುಖ ಪ್ರತಿಭೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ವೃತ್ತಿಯಲ್ಲಿ ಪ್ರಾಧ್ಯಾಪಕಿ, ಪ್ರವೃತ್ತಿಯಲ್ಲಿ ಹಿಂದೂಸ್ತಾನಿ ಗಾಯಕಿ, ವಿಮರ್ಶಕಿ, ಲೇಖಕಿ ಹಾಗೂ ಸಾಂಸ್ಕೃತಿಕ ಸೇತುವಾಗಿ ಕೆಲಸ ಮಾಡುತ್ತಿದ್ದಾರೆ ಡಾ. ಕೆ.ಎಸ್. ವೈಶಾಲಿ. ಸಂಗೀತ ದಿಗ್ಗಜ  ಡಾ.ಪುಟ್ಟರಾಜ ಗವಾಯಿ ಅವರ ಶಿಷ್ಯರಾದ ಆರ್.ವಿ. ಶೇಷಾದ್ರಿ ಗವಾಯಿಯವರಲ್ಲಿ ಸಂಗೀತ ಅಭ್ಯಾಸ ಮಾಡಿದ್ದಾರೆ. ವೈಶಾಲಿಯವರ ಸಂಗೀತ ಸಾಧನೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿದೆ ಅವುಗಳಲ್ಲಿ ಕರ್ನಾಟಕ ಸರ್ಕಾರದ `ರಾಜ್ಯೋತ್ಸವ ಪ್ರಶಸ್ತಿ'ಯೂ ಒಂದು.

ಆರ್.ವಿ. ಶೇಷಾದ್ರಿ ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿದ ವೈಶಾಲಿ ಅವರು `ಅತ್ರೋಳಿ-ಜೈಪುರ ಘರಾನಾ ಗಾನಾ'ವನ್ನು ಪಂಡಿತ ಕಿಶೋರಿ ಅಮೋನ್ಕರ್ ಅವರ ಮಾರ್ಗದರ್ಶನದಲ್ಲಿ ಕಲಿತಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ, ಅಂದರೆ 1989ರಲ್ಲಿ ಮೊದಲ ಬಾರಿಗೆ ಹಿಂದೂಸ್ತಾನಿ ಸಂಗೀತ ಸುಧೆಯನ್ನು ಪ್ರಸ್ತುತಪಡಿಸಿದ ಇವರು ಈವರೆಗೆ ಅಸಂಖ್ಯಾತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ವೈಶಾಲಿ ಅವರ ಸಂಗೀತ ಸುಧೆ ದೇಶ ವಿದೇಶಗಳಲ್ಲೂ ಹರಡಿದೆ. ವಿಶ್ವಕನ್ನಡ ಸಾಂಸ್ಕೃತಿಕ ಸಮ್ಮೇಳನದ ಪ್ರತಿನಿಧಿಯಾಗಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ಶಾಸ್ತ್ರೀಯ ಸಂಗೀತ ಸುಧೆಯನ್ನು ಸಂಗೀತ ಪ್ರೇಮಿಗಳ ಮನತಣಿಸಿದ್ದಾರೆ. ಜತೆಗೆ ಸಾಂಸ್ಕೃತಿಕ ರಾಯಭಾರಿಯಾಗಿ ಭಾರತ ಹಾಗೂ ಅಮೆರಿಕಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕುರಿತು ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ.

ಹಿಂದೂಸ್ತಾನಿ ಗಾಯನದ ರಾಗಶ್ರೀ, ಪುರಯಾ ಮತ್ತು ಕೀರ್ವಾನಿ ರಾಗಗಳ ಧ್ವನಿಮುದ್ರಿಕೆಗಳನ್ನು ಮತ್ತು `ಮೂರುತಿಯನೇ ನಿಲ್ಲಿಸೋ' ಮತ್ತು `ನುಡಿದರೆ ಮುತ್ತಿನಹಾರ'ಗಳ ಧ್ವನಿಮುದ್ರಿಕೆಗಳನ್ನು `ಲಹರಿ ರೆಕಾರ್ಡಿಂಗ್ ಕಂಪೆನಿ'ಯ ಮೂಲಕ ಹೊರತಂದಿದ್ದಾರೆ.
ಸಂಗೀತ ಕುರಿತಾದ ಲೇಖನಗಳನ್ನೂ ಅವರು ಬರೆದಿದ್ದು, ಅವು ನಿಯತಕಾಲಿಕೆಗಳು, ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾಗಿವೆ.

ಸಾಹಿತ್ಯದಲ್ಲಿ ಅಪಾರ ಆಸಕ್ತಿವುಳ್ಳ ಇವರ `ಪ್ರಿಸನಿಂಗ್ ರಿದಂಸ್' ಎಂಬ ಪುಸ್ತಕ ಪ್ರಕಟವಾಗಿದೆ. ಜತೆಗೆ ಸುಖಾವತ್ ಹುಸೇನ್ ಅವರ ಕಾದಂಬರಿಯನ್ನು `ಪದ್ಮರಾಗ' ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಇದರೊಂದಿಗೆ ಮಹಿಳಾ ಪ್ರಧಾನವಾದ `ಮೆಟಾಮಾರ್ಫಿಕ್' ಎಂಬ ಕಾದಂಬರಿಯನ್ನು ಬರೆದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.