ADVERTISEMENT

ಅಮರತ್ವ, ಅಧ್ಯಾತ್ಮಕ್ಕೆ ಕಲಾ ಕನ್ನಡಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 19:59 IST
Last Updated 18 ಜೂನ್ 2013, 19:59 IST
ಸ್ವಾತಿ ಪಸರಿ ಅವರ ಕುಂಚದಲ್ಲಿ ಅರಳಿದ `ಎಕ್ಸ್‌ಪೀರಿಯೆನ್ಸಿಂಗ್ ಇನ್ಫಿನಿಟಿ' ಕಲಾಕೃತಿ
ಸ್ವಾತಿ ಪಸರಿ ಅವರ ಕುಂಚದಲ್ಲಿ ಅರಳಿದ `ಎಕ್ಸ್‌ಪೀರಿಯೆನ್ಸಿಂಗ್ ಇನ್ಫಿನಿಟಿ' ಕಲಾಕೃತಿ   

ಶಿಲ್ಪಕಲಾವಿದನಿಗೆ ಸ್ಫೂರ್ತಿ ತುಂಬುವಂತಿರುವ ಕೋಲ್ಕತ್ತಾದ ಉದಯೋನ್ಮುಖ ಕಲಾವಿದೆಯ ಕುಂಚಕ್ಕೆ ಕಲಾರಸಿಕರನ್ನು ರೋಮಾಂಚನಗೊಳಿಸುವ ಶಕ್ತಿಯಿದೆ. ಜೀವನೋತ್ಸಾಹ, ಅಮರತ್ವ, ಕಾಲಾತೀತ ಸಂಗತಿ, ಅಧ್ಯಾತ್ಮವನ್ನು ತಮ್ಮದೇ ಆಯಾಮದಲ್ಲಿ ಬಿಂಬಿಸುವ ಈ ಕಲಾವಿದೆಯ ಹೆಸರು ಸ್ವಾತಿ ಪಸರಿ. ಈಕೆಯ ವಿಭಿನ್ನ ಚಿಂತನೆಯ ಮೂಸೆಯೊಳಗೆ ಮೂಡಿದ ಕಲಾಕೃತಿಗಳ ಪ್ರದರ್ಶನ ಯುಬಿ ಸಿಟಿಯಲ್ಲಿರುವ `ಸಬ್‌ಲೈಮ್ ಆರ್ಟ್ ಗ್ಯಾಲರಿ'ಯಲ್ಲಿ ನಡೆಯಲಿದೆ. ಪ್ರದರ್ಶನದ ಹೆಸರು `ಸೋಲ್‌ಇಂಕ್'.

`ತುಂಬಿರುವ ಬಾಳು ತುಂಬಿರುವ ತನಕ ತುಂಬ್‌ತುಂಬಿ ಕುಡಿಯಬೇಕು' ಎನ್ನುವ ಕವಿವಾಣಿಯನ್ನು ನೆನಪಿಸುವಂತಿವೆ ಸ್ವಾತಿ ಅವರ ಕಲಾಕೃತಿಗಳು. `ಜೀವನ ಅಂದರೆ ಖುಷಿಯಿಂದ ಅನುಭವಿಸುವುದು. ಆದರೆ, ಈ ಸಂಗತಿ ಹಲವರಿಗೆ ತಿಳಿದಿಲ್ಲ. ಖುಷಿ ಕಳೆದುಕೊಂಡು ನರಳುತ್ತಿರುವ ಜನರನ್ನು ಜಾಗೃತಗೊಳಿಸುವುದೇ ನನ್ನ ಕಲಾಕೃತಿಗಳ ಮೂಲ ಉದ್ದೇಶ' ಎನ್ನುವ ಸ್ವಾತಿ ಚೈತನ್ಯದ ಚಿಲುಮೆಯಂತೆ ಕಾಣಿಸುತ್ತಾರೆ.

ಈ ಸಂಗತಿಯನ್ನು ಸ್ಪಷ್ಟಪಡಿಸಲು ಸ್ವಾತಿ ಕೆಂಪು ಮತ್ತು ತಿಳಿ ಗುಲಾಬಿ ಬಣ್ಣ ಬಳಸಿ ರಚಿಸಿರುವ `ಎ ಸೌಂಡ್ ಆಫ್ ಮ್ಯೂಸಿಕ್' ಎಂಬ ತಮ್ಮದೇ ಕಲಾಕೃತಿಯನ್ನು ಉದಾಹರಿಸುತ್ತಾರೆ. `ಬಣ್ಣಗಳಲ್ಲಿ ಸಕಾರಾತ್ಮಕತೆ ಮತ್ತು ಸ್ಪಂದನೆಯ ಅಂಶಗಳು ಹೇರಳವಾಗಿವೆ. ಈ ಕಲಾಕೃತಿಯಲ್ಲಿ ಸಂಗೀತದ ಮೂಲಕ ದೇವರನ್ನು ಸಂಧಿಸುವ ಬಗೆ ಹೇಗೆ ಎಂಬುದನ್ನು ಚಿತ್ರಿಸಿದ್ದೇನೆ' ಎನ್ನುತ್ತಾರೆ ಅವರು.

ಬಹುತೇಕ ಕಲಾವಿದರು ನೆಮ್ಮದಿಯ ಹುಡುಕಾಟದಲ್ಲಿರುತ್ತಾರೆ. ಎಂತಹುದೇ ಪರಿಸ್ಥಿತಿಯಲ್ಲೂ ಪರಿಪೂರ್ಣ ನೆಮ್ಮದಿಯನ್ನು ದಕ್ಕಿಸಿಕೊಳ್ಳುವ ಕಲೆ ಸಿದ್ಧಿಸಿರುವುದು ಕಲಾವಿದನಿಗೆ ಮಾತ್ರ. ಮನುಷ್ಯರು ತಮ್ಮ ಒತ್ತಡದ ಬದುಕಿನಲ್ಲಿ ಕಳೆದುಕೊಂಡ ನೆಮ್ಮದಿಯನ್ನು ಹುಡುಕುವಲ್ಲಿ ನಿರತರಾಗಿರುತ್ತಾರೆ. ಸ್ವಾತಿ ಅವರ ಕಲಾಕೃತಿಗಳಿಗೆ ನೆಮ್ಮದಿಯನ್ನು ಮರಳಿ ಕೊಡುವ ಶಕ್ತಿಇದೆ.

ಎಲ್ಲ ಕಲಾವಿದರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸಾಧ್ಯವಿಲ್ಲ. ಸ್ವಾತಿ ಒಬ್ಬ ಕಲಾವಿದೆಯಾಗಿ ತಮ್ಮ ಅಭಿವ್ಯಕ್ತಿಯನ್ನು ಎಲ್ಲ ಮಾರ್ಗದಲ್ಲೂ ಹರಿಬಿಟ್ಟಿದ್ದಾರೆ. ಹಾಗಾಗಿ ಆಕೆಗೆ ತಾನು ಒಂದು ಚೌಕಟ್ಟು ಹಾಕಿಕೊಂಡು ಅದರೊಳಗೆ ಇರಬೇಕು ಎಂಬ ಬಯಕೆ ಇಲ್ಲವಂತೆ. ಆಕೆಯ ಕಲಾಕೃತಿಗಳೇ ಅವರ ಹಿಗ್ಗಿದ ವ್ಯಕ್ತಿತ್ವಕ್ಕೆ ಜೀವಂತ ಉದಾಹರಣೆಯಂತಿವೆ.

ಸ್ವಾತಿ ಅವರ ಕೆಲವು ಕಲಾಕೃತಿಗಳು ಅಮರತ್ವವನ್ನು ಸಂಕೇತಿಸುತ್ತವೆ. ಇನ್ನು ಕೆಲವು ಶಾಶ್ವತತೆ, ಆಂತರಿಕ ಸ್ಥಿತಿ ಹಾಗೂ ಶಾಂತಿಯ ಅನುಸಂಧಾನ ನಡೆಸುತ್ತವೆ. ಕಲಾವಿದೆ ಸ್ವಾತಿ ಅವರ ಜೀವನದ ಗುರಿಗಳೂ ಇವೇ. ಕಲೆಯನ್ನೇ ಉಸಿರಾಗಿಸಿಕೊಂಡಿರುವ ಅವರು ಇದುವರೆಗೂ ಅನೇಕ ಕಲಾಕೃತಿಗಳನ್ನು ವಿಶ್ವದ ಉದ್ದಗಲಕ್ಕೂ ಪ್ರದರ್ಶಿಸಿದ್ದಾರೆ.

`ಮನಸ್ಸಿನಲ್ಲಿ ಒಂದು ವಿಭಿನ್ನ ಆಯಾಮವನ್ನಿರಿಸಿಕೊಂಡೇ ನಾನು ಕುಂಚವನ್ನು ಕೈಗೆತ್ತಿಕೊಳ್ಳುವುದು. ಹಾಗಾಗಿ ನಾನು ರಚಿಸುವ ಕಲಾಕೃತಿ ಹೇಗೆ ಪೂರ್ಣಗೊಳ್ಳುತ್ತದೆ ಎಂಬುದು ಮೊದಲಿಗೆ ನಿರ್ಧಾರವಾಗಿರುವುದಿಲ್ಲ. ಅದು ಸಾಕಾರವಾದ ಮೇಲಷ್ಟೆ ಕಲಾಕೃತಿಯ ಪೂರ್ಣಚಿತ್ರಣ ನನಗೆ ದಕ್ಕುವುದು' ಎನ್ನುತ್ತಾರೆ ಅವರು.

ನಿಮ್ಮ ಚಿತ್ರಕಲಾಕೃತಿ ಪೂರ್ಣಗೊಂಡಿದೆ ಎಂಬುದು ನಿಮಗೆ ಯಾವಾಗ ತಿಳಿಯುತ್ತದೆ ಎಂಬ ಪ್ರಶ್ನೆಗೆ ಸ್ವಾತಿ ಉತ್ತರಿಸುವುದು ಹೀಗೆ: `ಅದನ್ನು ವಿವರಿಸುವುದು ಕಷ್ಟ. ಆದರೆ, ನಾನು ಆ ಕಲಾಕೃತಿಯನ್ನು ವೀಕ್ಷಿಸಿದಾಗ ಅದರೊಳಗೆ ನನ್ನ ಭಾವದ ತುಣುಕುಗಳು ಹಾಗೂ ಚಿಂತನೆಗಳ ಸಂಪೂರ್ಣ ರೂಪದ ಬಿಂಬಗಳು ಕಾಣಿಸಿಕೊಂಡರೆ ಮಾತ್ರ ಅದು ಪೂರ್ಣಗೊಂಡಿದೆ ಎಂಬ ನಿರ್ಣಯಕ್ಕೆ ಬರುತ್ತೇನೆ. ಆನಂತರ, ಕಲಾಕೃತಿಯ ರಚನೆಗೆ ತೊಡಗಿದಾಗಿನಿಂದ ಕೊನೆಯವರೆಗಿನ ಎಲ್ಲ ಕ್ಷಣಗಳನ್ನು ಅವಲೋಕಿಸುತ್ತೇನೆ. ಆನಂತರಷ್ಟೇ ಆ ವರ್ಣಚಿತ್ರದ ಕೆಲಸ ಸಂಪೂರ್ಣಗೊಂಡಿದೆ ಎಂದು ಭಾವಿಸುತ್ತೇನೆ'.

ಸ್ವಾತಿಗೆ ತಾವು ರಚಿಸಿದ ಪ್ರತಿ ಕಲಾಕೃತಿಯೂ ಕನ್ನಡಿಯಿದ್ದಂತೆ ಎಂದು ಅನಿಸಿದೆ. ಕಲೆಯ ಕನ್ನಡಿಯಲ್ಲಿ ಆಕೆಯ ಅಂತರಂಗದ ವಿಚಾರಗಳು ಬಹಿರಂಗಗೊಂಡಿರುತ್ತದೆ. ಅಧ್ಯಾತ್ಮವನ್ನು ಬಹುವಾಗಿ ನಂಬುವ, ಪ್ರತಿಪಾದಿಸುವ ಸ್ವಾತಿ ಅವರ ಅನೇಕ ಕಲಾಕೃತಿಗಳ ಮೂಲ ಉದ್ದೇಶ ಜನರಲ್ಲಿ ಸಕಾರಾತ್ಮಕ ಚಿಂತನೆಯನ್ನು ಪಸರಿಸುವುದು.

`ಪ್ರತಿಯೊಬ್ಬರ ಜೀವನದಲ್ಲೂ ಕಳೆದುಕೊಳ್ಳುವ ಹಾಗೂ ಪಡೆದುಕೊಳ್ಳುವ ಕ್ರಿಯೆ  ಕ್ರಮವಾಗಿ ನಡೆಯುತ್ತಲೇ ಇರುತ್ತದೆ. ಆದರೆ, ಇದು ನಿರಂತರವಲ್ಲ...' ಎಂಬ ಸಂದೇಶವನ್ನು ಸಾರುತ್ತವೆ ಅವರ ಕಲಾಕೃತಿಗಳು.
ಜೂನ್ 21ರಿಂದ ಜುಲೈ 12ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಸ್ವಾತಿ ಪಸರಿ ಅವರ 26 ಚಿತ್ರಕಲಾಕೃತಿಗಳು ಹಾಗೂ 5 ಶಿಲ್ಪಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.
ಸ್ಥಳ: ಸಬ್‌ಲೈಮ್ ಗ್ಯಾಲರಿ, ಯುಬಿ ಸಿಟಿ. ಬೆಳಿಗ್ಗೆ 11ರಿಂದ ಸಂಜೆ 6.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.