ADVERTISEMENT

‘ಅಮ್ಮ’ನ ಲೋಕದ ಸುತ್ತ

​ಪ್ರಜಾವಾಣಿ ವಾರ್ತೆ
Published 14 ಜೂನ್ 2018, 14:04 IST
Last Updated 14 ಜೂನ್ 2018, 14:04 IST
ನಿಶ್ವಿಕಾ, ಚಿರಂಜೀವಿ ಸರ್ಜಾ
ನಿಶ್ವಿಕಾ, ಚಿರಂಜೀವಿ ಸರ್ಜಾ   

‘ಆ ದಿನಗಳು’ ಚಿತ್ರದಿಂದ ಹಿಡಿದು, ‘ಆಕೆ’ಯವರೆಗೆ ವಿಭಿನ್ನ ಕಥೆಯ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿರುವ ಯಶಸ್ವಿ ನಿರ್ದೇಶಕ ಕೆ.ಎಂ. ಚೈತನ್ಯ. ಭೂಗತ ಲೋಕದ ಕಥೆಯಿಂದ ಹಿಡಿದು ಹಾರರ್ ಚಿತ್ರಗಳವರೆಗೆ ತಮ್ಮ ಛಾಪು ಮೂಡಿಸಿರುವ ಅವರ ‘ಅಮ್ಮ ಐ ಲವ್‌ ಯೂ’ ಚಿತ್ರ ಇದೀಗ ತೆರೆಗೆ ಬರಲು ಸಿದ್ಧವಾಗಿದೆ.

ಇದು ಚೈತನ್ಯ ಮತ್ತು ನಟ ಚಿರಂಜೀವಿ ಸರ್ಜಾ ಕಾಂಬಿನೇಷನ್‌ನ ಮೂರನೇ ಚಿತ್ರ. ಥ್ರಿಲ್ಲರ್ ‘ಆಟಗಾರ’ ಮತ್ತು ಹಾರರ್ ‘ಆಕೆ’ಯ ಸಿನಿಮಾದಲ್ಲಿ ಒಂದಾಗಿದ್ದ ಈ ಜೋಡಿ, ಸೆಂಟಿಮೆಂಟ್ ಎಳೆಯ ‘ಅಮ್ಮ...‘ಕ್ಕೆ ಮತ್ತೆ ಒಂದಾಗಿದೆ. ಇಬ್ಬರೂ ಹ್ಯಾಟ್ರಿಕ್ ಹಿಟ್‌ನ ನಿರೀಕ್ಷೆಯಲ್ಲಿದ್ದಾರೆ. ಅಂದಹಾಗೆ ಈ ಚಿತ್ರ ತಮಿಳಿನ ವಿಜಯ್ ಆ್ಯಂಟನಿ ನಟನೆಯ ‘ಪಿಚ್ಚೈಕಾರನ್’ ಚಿತ್ರದ ರಿಮೇಕ್.

ಅಮ್ಮನ ಸುತ್ತ...
‘ತಮಿಳುನಾಡಿನ ನಗರವೊಂದರಲ್ಲಿ ನಡೆದ ನೈಜ ಘಟನೆಯನ್ನ ಆಧರಿಸಿದ ಚಿತ್ರ ಇದಾಗಿದೆ. ತಮಿಳು ಚಿತ್ರದ ರಿಮೇಕ್ ಆಗಿದ್ದರೂ, ಕನ್ನಡದ ನೆಲಕ್ಕೆ ಒಗ್ಗುವಂತೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ತಾಯಿಯೊಬ್ಬಳು ತನ್ನ ಮಗನಿಗಾಗಿ ಮಾಡುವ ತ್ಯಾಗದ ಬಗ್ಗೆ ಸಾಮಾನ್ಯವಾಗಿ ದೊಡ್ಡ ಕಥೆಗಳಿವೆ. ಅದೇ ಮಗನೊಬ್ಬ ತಾಯಿಗಾಗಿ ಏನೆಲ್ಲಾ ಮಾಡುತ್ತಾನೆ ಎಂಬುದೇ ಕಥೆಯ ತಿರುಳು’ ಎಂದು ನಿರ್ದೇಶಕ ಕೆ.ಎಂ. ಚೈತನ್ಯ ಚಿತ್ರದ ಎಳೆಯನ್ನು ಹಂಚಿಕೊಂಡರು.

ADVERTISEMENT

‘ಸೆಂಟಿಮೆಂಟ್‌ನ ಹಲವು ವೇರಿಯೇಷನ್‌ಗಳನ್ನು ಬಯಸುವ ನಾಯಕನ ಪಾತ್ರಕ್ಕೆ ಚಿರಂಜೀವಿ ಸರ್ಜಾ ಜೀವ ತುಂಬಿದ್ದಾರೆ. ಮನ ಮುಟ್ಟುವಂತಹ ಪಾತ್ರ ಅವರದು. ನಾಯಕಿಯಾಗಿ ನಿಶ್ವಿಕಾ ನಾಯ್ಡು ಅವರಿಗೆ ಇದು ಪ್ರಥಮ ಚಿತ್ರ. ತಾಯಿ ಪಾತ್ರದಲ್ಲಿ ನಟಿ ಸಿತಾರಾ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪ್ರಕಾಶ್‍ ಬೆಳವಾಡಿ, ಗಿರಿ ದ್ವಾರಕೀಶ್, ಚಿಕ್ಕಣ್ಣ, ಬಿರಾದಾರ, ರವಿಕಾಳೆ ತಾರಾಗಣದಲ್ಲಿದ್ದಾರೆ’ ಎಂದು ಪಾತ್ರವರ್ಗದ ಬಗ್ಗೆ ಬಣ್ಣಿಸಿದರು.

‘ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಟೈಟಲ್ ಹಾಡನ್ನು ಯೂ ಟ್ಯೂಬ್‌ನಲ್ಲಿ ಮೂರು ಲಕ್ಷ ಮಂದಿ ವೀಕ್ಷಿಸಿದ್ದಾರೆ. ಶೇಖರ್ ಚಂದ್ರ ಅವರು ಕ್ಯಾಮೆರಾ ಹಿಡಿದಿದ್ದು, ಪ್ರತಿ ದೃಶ್ಯವನ್ನು ಅಚ್ಚೊತ್ತುವಂತೆ ಸೆರೆ ಹಿಡಿದಿದ್ದಾರೆ’ ಎಂದರು.

ಪ್ರಯೋಗಕ್ಕೆ ಒಗ್ಗಿಕೊಳ್ಳುತ್ತಾ..
ಆ್ಯಕ್ಷನ್ ಹೀರೊ ಆಗಬೇಕು ಅಂದುಕೊಂಡು ಚಂದನವನಕ್ಕೆ ಕಾಲಿಟ್ಟವರು ಚಿರಂಜೀವಿ ಸರ್ಜಾ. ‘ವಾಯುಪುತ್ರ’ ಚಿತ್ರದ ಮೂಲಕ ಬಣ್ಣ ಹಚ್ಚಿದ ಅವರು, ನಂತರವೂ ಆ್ಯಕ್ಷನ್ ಪ್ರಧಾನ ಸ್ಕ್ರಿಫ್ಟ್‌ಗಳಿಗೆ ಆದ್ಯತೆ ನೀಡುತ್ತಾ ಬಂದವರು. ಬಳಿಕ, ಪ್ರಯೋಗಗಳಿಗೆ ತೆರೆದುಕೊಂಡರು.

‘ನಾನೊಬ್ಬ ಆ್ಯಕ್ಷನ್ ಹೀರೊ ಆಗಬೇಕು ಅಂದುಕೊಂಡೇ ಚಿತ್ರರಂಗಕ್ಕೆ ಬಂದೆ. ನಾಲ್ಕೈದು ಚಿತ್ರಗಳನ್ನು ಮಾಡಿದ ಬಳಿಕ ಒಂದೇ ರೀತಿಯ ಶೇಡ್ ಇರುವ ಪಾತ್ರಗಳಿಗೆ ಅಂಟಿಕೊಳ್ಳಬಾರದು ಎಂಬುದು ಮನವರಿಕೆಯಾಯಿತು. ಅಂದಿನಿಂದ ನಾನು ಕಥೆಗಳ ಆಯ್ಕೆಯಲ್ಲಿ ಸೆಲೆಕ್ಟಿವ್ ಆದೆ. ಆ್ಯಕ್ಷನ್ ಇಮೇಜ್ ಆಚೆಗಿನ ಪಾತ್ರಗಳನ್ನು ಆಯ್ದುಕೊಳ್ಳತೊಡಗಿದೆ’ ಎಂದು ಚಿರಂಜೀವಿ ತಮ್ಮ ಪಾತ್ರ ಪ್ರಯೋಗದ ಗುಟ್ಟನ್ನು ಬಿಚ್ಚಿಟ್ಟರು.

‘ಭಿನ್ನ ಕಥೆಗಳಾದ ’ವರದನಾಯಕ’, ‘ವಿಜಲ್’, ‘ಚಂದ್ರಲೇಖ’, ‘ಆಟಗಾರ’, ‘ರಾಮಲೀಲಾ’, ‘ಆಕೆ’ ಸೇರಿದಂತೆ ಎಲ್ಲಾ ಚಿತ್ರಗಳಲ್ಲಿ ಮಾಡಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಕಲಾವಿದನಾದವನು ಸೀಮಿತ ಪಾತ್ರಗಳಿಗಷ್ಟೇ ರೇಖೆ ಹಾಕಿಕೊಳ್ಳಬಾರದು. ಬದಲಿಗೆ, ಭಿನ್ನ ಪಾತ್ರಗಳ ಕನವರಿಕೆಯಲ್ಲಿರಬೇಕು. ಆಗ ಆತನಲ್ಲಿರುವ ಪ್ರತಿಭೆ ಹೊರಕ್ಕೆ ಬರುತ್ತದೆ. ಮುಂದೆಯೂ ಕಥೆಗಳ ಆಯ್ಕೆಯಲ್ಲಿ ಇದೇ ಸೂತ್ರವನ್ನು ಅನುಸರಿಸುತ್ತೇನೆ’ ಎನ್ನುತ್ತಾರೆ ಅವರು.

ಸವಾಲಿನ ಪಾತ್ರ
‘ಅಮ್ಮ ಐ ಲವ್‌ ಯು’ ಚಿತ್ರದ ಕಥೆಯನ್ನು ಕೇಳಿದಾಗ, ಆರಂಭದಲ್ಲಿ ಪಾತ್ರದ ಗಾಂಭೀರ್ಯ ಅಷ್ಟಾಗಿ ಗೊತ್ತಾಗಿರಲಿಲ್ಲ. ಆದರೆ, ಶೂಟಿಂಗ್ ಆರಂಭವಾದಾಗ ಆ ಪಾತ್ರದ ತೂಕ ಅರಿವಾಗುತ್ತಾ ಹೋಯ್ತು. ಸೆಂಟಿಮೆಂಟ್‌ನಲ್ಲಿ ಹಲವು ಬಗೆಯ ವೇರಿಯೇಷನ್‌ಗಳನ್ನು ಬಯಸುವ ಪಾತ್ರ ಇದು. ಕೋಟ್ಯಧೀಶನಾಗಿದ್ದವನು ಭಿಕ್ಷುಕನಾದಾಗ ಆತನ ಎಮೋಷನ್ ಹೇಗಿರುತ್ತದೆ ಎಂಬುದನ್ನು ನೈಜ ಮುಖಭಾವವಷ್ಟೇ ಅಲ್ಲದೆ, ಆಂಗಿಕವಾಗಿಯೂ ಸವಾಲಿನದಾಗಿತ್ತು. ಒಟ್ಟಿನಲ್ಲಿ ಇದೊಂದು ಉತ್ತಮ ಅನುಭವ ನೀಡಿದ ಚಿತ್ರ’ ಎಂದು ಅನುಭವವನ್ನು ಚಿರು ಹಂಚಿಕೊಂಡರು.

‘ಚೈತನ್ಯ ಮತ್ತು ನನ್ನ ನಡುವೆ ವಿಶೇಷವಾದ ಬಾಂಡಿಂಗ್ ಇದೆ. ಈ ಚಿತ್ರವೂ ಸೇರಿದಂತೆ, ಇಬ್ಬರೂ ಒಟ್ಟು ಮೂರು ಚಿತ್ರಗಳನ್ನು ಒಟ್ಟಾಗಿ ಮಾಡಿದ್ದೇವೆ. ‘ಆಟಗಾರ’, ‘ಆಕೆ’ ಹಾಗೂ ಈಗ ’ಅಮ್ಮ ಐ ಲವ್‌ ಯೂ’. ಮೂರೂ ಕಥೆಗಳು ಒಂದಕ್ಕಿಂತ ಮತ್ತೊಂದು ಭಿನ್ನವಾಗಿವೆ. ಹಿಂದಿನ ಎರಡು ಚಿತ್ರಗಳು ಯಶಸ್ವಿ ಕಂಡಂತೆ, ಮೂರನೇ ಚಿತ್ರವೂ ಪ್ರೇಕ್ಷಕರ ಮನಗೆದ್ದು, ಹ್ಯಾಟ್ರಿಕ್ ಗೆಲುವು ಸಾಧಿಸಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಯಸದೆ ಬಂದ ಭಾಗ್ಯ
ಮುಂಬೈನಲ್ಲಿ ನಟನೆ ತರಬೇತಿ ಪಡೆದು ಬಂದಿರುವ ಸಂಪಿಗೆ ಮೂಗಿನ, ನೀಳಕಾಯದ ಚೆಲುವೆ ನಿಶ್ವಿಕಾ ನಾಯ್ಡು ಅವರಿಗಿದು ಮೊದಲ ಚಿತ್ರ.

‘ಅಮ್ಮ ಐ ಲವ್‌ ಯೂ’ ಚಿತ್ರ ನನಗೆ ಬಯಸದೆ ಬಂದ ಭಾಗ್ಯ. ಮೊದಲ ಚಿತ್ರದಲ್ಲೇ ಚೈತನ್ಯ ಹಾಗೂ ಚಿರು ಸರ್ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಮುಗ್ಧ ಹಾಗೂ ಅಷ್ಟೇನೂ ಗ್ಲ್ಯಾಮರ್ ಸ್ಪರ್ಶ ಇಲ್ಲದ ಪಾತ್ರ ನನ್ನದು. ಮೊದಲ ಸಲ ಬಣ್ಣ ಹಚ್ಚಿರುವ ನನಗೆ, ಚೈತನ್ಯ ಸರ್ ಸೆಟ್‌ನಲ್ಲಿ ಅಭಿನಯದ ಕೆಲ ಪಟ್ಟುಗಳನ್ನು ಕಲಿಸಿದರು’ ಎಂದು ತಮ್ಮ ನಟನೆಯ ಕ್ರೆಡಿಟ್ ಅನ್ನು ನಿರ್ದೇಶಕರಿಗೆ ಕೊಟ್ಟರು.

ಅವರ ಮಾತಿಗೆ ಪ್ರತಿಕ್ರಿಯಿಸಿದ ಚೈತನ್ಯ, ‘ನಿಶ್ವಿಕಾ ಅವರಿಗಿದು ಮೊದಲ ಚಿತ್ರವಾದರೂ, ಆರೇಳು ಚಿತ್ರಗಳಲ್ಲಿ ನಾಯಕಿ ನಟಿಯಾಗಿ ಕೆಲಸ ಮಾಡಿದ ಅನುಭವ ಇರುವವಂತೆ ನಟಿಸಿದ್ದಾರೆ. ಮುಂದೆ ಅವರಿಗೆ ಒಳ್ಳೆಯ ಭವಿಷ್ಯ ಇದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ನಾಲ್ಕನೇ ಚಿತ್ರ ‘ಆದ್ಯ’ ರೆಡಿ
‘ಚೈತನ್ಯ ಮತ್ತು ನನ್ನ ಕಾಂಬಿನೇಷನ್‌ನ ನಾಲ್ಕನೇ ಚಿತ್ರ ‘ಆದ್ಯ’ ಕೂಡ ಬಹುತೇಕ ಪೂರ್ಣಗೊಂಡಿದೆ. ಕೇವಲ ಒಂದು ವಾರದ ಶೂಟಿಂಗ್ ಬಾಕಿ ಇದೆ. ‘ಅಮ್ಮ ಐ ಲವ್‌ ಯೂ’ ಚಿತ್ರದ ಪ್ರಚಾರದ ಸಲುವಾಗಿ ರಾಜ್ಯದಾದ್ಯಂತ ಓಡಾಡುತ್ತಿದ್ದೇವೆ. ಜೂನ್ 15ರಂದು ಈ ಸಿನಿಮಾ ಬಿಡುಗಡೆಯಾದ ಬಳಿಕ, ‘ಆದ್ಯ’ದ ಅಂತಿಮ ಶೂಟಿಂಗ್ ಮುಗಿಸಲಿದ್ದೇವೆ’ ಎಂದ ಚಿರಂಜೀವಿ ಸರ್ಜಾ ಚಿತ್ರದ ಕಥೆಯ ಗುಟ್ಟು ಬಿಟ್ಟು ಕೊಡಲಿಲ್ಲ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.