ADVERTISEMENT

ಅವನೊಳಗಿನ ಅವಳು...

ಮಂಜುಶ್ರೀ ಎಂ.ಕಡಕೋಳ
Published 7 ಡಿಸೆಂಬರ್ 2017, 19:30 IST
Last Updated 7 ಡಿಸೆಂಬರ್ 2017, 19:30 IST
ಪವನ್‌ಕುಮಾರ್
ಪವನ್‌ಕುಮಾರ್   

‘ಲೂಸಿಯಾ’, ‘ಯೂಟರ್ನ್’ ಖ್ಯಾತಿಯ ನಿರ್ದೇಶಕ ಪವನ್‌ಕುಮಾರ್ ಈಗೇನು ಮಾಡುತ್ತಿದ್ದಾರೆ ಅನ್ನುವ ಕುತೂಹಲ ಸಿನಿಪ್ರಿಯರದ್ದು. ಪವನ್ ಸುಮ್ಮನೆ ಕೂತಿಲ್ಲ. ಹಲವು ಸಿನಿಮಾ ಪ್ರಾಜೆಕ್ಟ್‌ಗಳ ನಡುವೆಯೇ ತಮ್ಮ ಮೊದಲ ಪ್ರೇಮದ ಬಳಿಗೆ ಹಿಂತಿರುಗಿದ್ದಾರೆ. ಪವನ್‌ಗೆ ಮದುವೆ ಆಗಿದೆಯೆಲ್ಲಾ. ಇದ್ಯಾವುದು ಮೊದಲ ಪ್ರೇಮ ಅಂತೀರಾ? ಇದು ಅಂತಿಂಥ ಪ್ರೇಮವಲ್ಲ. ಶುದ್ಧ ರಂಗಪ್ರೇಮ. –ಹೌದು. 

ನಿರ್ದೇಶಕ ಪವನ್‌ಕುಮಾರ್ ಮತ್ತೆ ರಂಗಭೂಮಿಗೆ ಮರಳಿದ್ದಾರೆ. ‘ಡೆಕ್ಕನ್ ಹೆರಾಲ್ಡ್‌’ ನಾಟಕೋತ್ಸವ ನೆಪದಲ್ಲಿ ಅವರು ಹತ್ತು ವರ್ಷಗಳ ಹಿಂದೆ ತಾವೇ ರಚಿಸಿ, ನಿರ್ದೇಶಿಸಿದ್ದ ‘ದ ವುಮನ್ ಇನ್ ಮಿ’ ಎಂಬ ನಾಟಕ ಪ್ರದರ್ಶಿಸಲು ಅಣಿಯಾಗಿದ್ದಾರೆ.

ತಮ್ಮ ಜೀವನಾನುಭವಕ್ಕೆ ದಕ್ಕಿದ ಹೆಣ್ಣಿನ ಅನುಭೂತಿ, ಸಾಂಗತ್ಯ, ಪ್ರೇಮ, ಸಂಬಂಧಗಳ ಸಂಕೀರ್ಣತೆಗಳನ್ನು ಪವನ್ ಈ ನಾಟಕದ ಮೂಲಕ ಅನಾವರಣಗೊಳಿಸಿದ್ದಾರೆ. ಆ ಅನುಭವಗಳು ವ್ಯಕ್ತಿಗತವಲ್ಲ. ಸಮಾಜದ ಪ್ರಾತಿನಿಧ್ಯವನ್ನು ಒಳಗೊಂಡಿರುವಂಥದ್ದು. ಪ್ರತಿ ಗಂಡಿನೊಳಗಿರುವ ಹೆಣ್ಣು, ಪ್ರತಿ ಹೆಣ್ಣಿನೊಳಗಿರುವ ಗಂಡಿನ ಮನಸ್ಥಿತಿಯನ್ನು ‘ದ ವುಮನ್ ಇನ್‌ ಮಿ’ ನಾಟಕದ ಮೂಲಕ ಪವನ್ ಹೇಳಹೊರಟಿದ್ದಾರೆ. ನಾಟಕದ ಕುರಿತು ಪವನ್‌ ಆಡಿರುವ ಮಾತುಗಳು ಇಲ್ಲಿವೆ...

ADVERTISEMENT

ಓವರ್ ಟು ಪವನ್‌...
ಈ ನಾಟಕವನ್ನು (ದ ವುವನ್ ಇನ್ ಮಿ) ಮೊದಲ ಬಾರಿಗೆ ಪ್ರದರ್ಶಿಸಿದಾಗ ನನಗೆ ಕೇವಲ ಇಪ್ಪತ್ತೈದು ವರ್ಷ. ಈಗ ನನ್ನ ವಯಸ್ಸು 35. ಬರೋಬ್ಬರಿ ಹತ್ತು ವರ್ಷಗಳ ನಂತರ ನಾಟಕ ಆಡಿಸುತ್ತಿದ್ದೇನೆ. ಅಂದು ಆ ನಾಟಕವನ್ನು ನೋಡಿದವರು ಮತ್ತೆ ಪ್ರದರ್ಶಿಸಬೇಕೆಂದು ಹೇಳುತ್ತಲೇ ಇದ್ದರು. ಸಿನಿಮಾ, ವೈಯಕ್ತಿಕ ಬದುಕಿನ ನಡುವೆ ನಾಟಕ ಮಾಡಲು ಪುರುಸೊತ್ತೇ ಆಗಿರಲಿಲ್ಲ. ಆದರೆ, ಈಗ ‘ಡೆಕ್ಕನ್ ಹೆರಾಲ್ಡ್‌’ ನಾಟಕೋತ್ಸವದ ಮೂಲಕ ‘ದ ವುಮನ್ ಇನ್ ಮಿ’ಗೆ ತೆರೆದುಕೊಂಡಿದ್ದೇನೆ.

ಈ ನಾಟಕವನ್ನು ನಾನು ಸ್ತ್ರೀಪರ, ಪುರುಷಪರ ಅಂತ ವರ್ಗೀಕರಿಸುವುದಕ್ಕೆ ಹೋಗುವುದಿಲ್ಲ. ಸಮಾಜವು ಹೆಣ್ಣನ್ನು ನಡೆಸಿಕೊಂಡಿರುವ, ನಡೆಸಿಕೊಳ್ಳುತ್ತಿರುವ ರೀತಿಯನ್ನಷ್ಟೇ ಈ ನಾಟಕ ಹೇಳುತ್ತದೆಯಷ್ಟೇ. ಹತ್ತು ವರ್ಷಗಳ ಹಿಂದೆ ಈ ನಾಟಕವನ್ನು ಮಾಡಿದಾಗ ಹೆಣ್ಣಿನ ಬಗ್ಗೆ ಏನು ಪ್ರಶ್ನೆಗಳು ಇದ್ದವೋ, ಈಗಲೂ ಅವು ಇವೆ ಎಂಬುದೇ ವಿಷಾದನೀಯ. ಆದರೆ, ಹೆಣ್ಣನ್ನು ಪರಿಭಾವಿಸುವ, ಅರ್ಥೈಸಿಕೊಳ್ಳುವ ನನ್ನ ರೀತಿಯಲ್ಲಿ ನಟನಾಗಿ, ನಿರ್ದೇಶಕನಾಗಿ ಖಂಡಿತಾ ಬದಲಾಗಿದೆ.

ಈ ನಾಟಕದಲ್ಲಿರುವುದು ಎರಡೇ ಪಾತ್ರಗಳು. ಒಂದು ಪಾತ್ರವನ್ನು ನಾನು (ಹೆಣ್ಣಾಗಿ), ಮತ್ತೊಂದು ಪಾತ್ರವನ್ನು ಸ್ಯಾಲ್ಮನ್ (ಗಂಡು) ಮಾಡುತ್ತಿದ್ದಾರೆ. ಇಬ್ಬರೂ ಈ ಹತ್ತು ವರ್ಷಗಳಲ್ಲಿ ಸಾಕಷ್ಟು ಬದಲಾಗಿದ್ದೇವೆ. ಆ ಬದಲಾವಣೆ ನಾಟಕವನ್ನು ಅರ್ಥ ಮಾಡಿಕೊಳ್ಳುವ ರೀತಿಯಲ್ಲೂ ಆಗಿದೆ. ನನಗೀಗ ಮದುವೆಯಾಗಿದೆ. ನಾನೀಗ ಬರೀ ಪವನ್‌ ಕುಮಾರ್ ಮಾತ್ರವಲ್ಲ. ಗಂಡ ಮತ್ತು ಅಪ್ಪನೂ ಆಗಿದ್ದೇನೆ. ಹಾಗೆ ನೋಡಿದರೆ ಈ ನಾಟಕ ಅಂದಿಗಿಂತ ಇಂದೇ ಹೆಚ್ಚು ಪ್ರಸ್ತುತವಾಗುತ್ತದೆ. ಇದರಲ್ಲಿ ಪ್ರಬುದ್ಧತೆಯ (ಅಡಲ್ಟ್‌) ಸಂಗತಿಗಳಿರುವುದರಿಂದ 18 ವರ್ಷಕ್ಕೆ ಮೇಲ್ಪಟ್ಟವರು ಮಾತ್ರ ಈ ನಾಟಕ ನೋಡಬಹುದು. ಇಡೀ ನಾಟಕ ಬಾತ್‌ರೂಮ್‌ನಲ್ಲಿ ನಡೆಯುತ್ತದೆ. ನೆರಳು–ಬೆಳಕಿನಾಟದ ತಂತ್ರವೂ ಇಲ್ಲಿದೆ.

ಸಾಮಾನ್ಯವಾಗಿ ನನ್ನ ನಾಟಕಗಳಲ್ಲಿ ಹೆಚ್ಚು ರಂಗಪರಿಕರಗಳನ್ನು ಬಳಸುವುದಿಲ್ಲ. ಆದರೆ, ಈ ನಾಟಕಕ್ಕೆ ಮಾತ್ರ ವಾಸ್ತವವನ್ನು ಬಿಂಬಿಸುವ ಪರಿಕರಗಳನ್ನು ಹೊಂದಿಸಿದ್ದೇನೆ (ರಿಯಲಿಸ್ಟಿಕ್ ಸೆಟ್). ನಾಟಕದ ತಾಲೀಮಿನ ಸಂದರ್ಭ ನಾನು ಒಂದು ರೀತಿಯ ತುಮುಲ ಅನುಭವಿಸಿದೆ. ನಾನಷ್ಟೇ ಅಲ್ಲ ನಮ್ಮ ಇಡೀ ತಂಡಕ್ಕೂ ಇಂಥದ್ದೇ ಅನುಭವಾಗಿದೆ. ಪ್ರೇಕ್ಷಕರಿಗೆ ಈ ನಾಟಕ ಇಷ್ಟವಾಗುತ್ತದೆ ಎಂಬ ನಂಬಿಕೆ ನನ್ನದು.

ಈ ಹಿಂದೆ ನಾಲ್ಕು ಬಾರಿ ಪ್ರದರ್ಶನ ಕಂಡಿದ್ದ ಈ ನಾಟಕವನ್ನು ನೋಡಿದವರು, ನಾಟಕ ಮುಗಿದ ಬಳಿಕ ಅರ್ಧಗಂಟೆ ಮೌನಕ್ಕೆ ಜಾರಿದ್ದರು. ಅಷ್ಟೊಂದು ಡಿಸ್ಟರ್ಬ್ ಮಾಡಿತ್ತು. ಈ ಬಾರಿಯೂ ಅಂತೆಯೇ ಆಗಬಹುದು. ಅದುವೇ ಈ ನಾಟಕದ ನಿಜವಾದ ಯಶಸ್ಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.