ADVERTISEMENT

ಅವಿರಾಟೆಫ್ಯಾಷನ್‌ಭರಾಟೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST
ಅವಿರಾಟೆಫ್ಯಾಷನ್‌ಭರಾಟೆ
ಅವಿರಾಟೆಫ್ಯಾಷನ್‌ಭರಾಟೆ   

ಕಪ್ಪು ಮೋಡಗಳಲ್ಲಿ ಚಂದ್ರ ಮರೆಯಾಗುತ್ತಿದ್ದ. ತಣ್ಣನೆ ಗಾಳಿ ಮೈಸೋಕುತ್ತಿತ್ತು. ಅಷ್ಟರಲ್ಲಿ ಚಿರತೆ ಮೈ ಬಣ್ಣದ ವಸ್ತ್ರಗಳನ್ನು ಧರಿಸಿದ ರೂಪದರ್ಶಿಯರು ರ‌್ಯಾಂಪ್ 
ಮೇಲೆ ಕಾಣಿಸಿಕೊಳ್ಳುತ್ತಿದ್ದಂತೆ ಕ್ಯಾಮೆರಾ ಕಣ್ಣುಗಳು ಬೆಳಕು ಚೆಲ್ಲತೊಡಗಿದವು.

ವಿಸ್ಕಿ, ಸ್ಕಾಚ್ ಕುಡಿಯುತ್ತಿದ್ದವರೂ ಕ್ಷಣಕಾಲ ರ‌್ಯಾಂಪ್‌ನತ್ತ ಕಣ್ಣು ಹಾಯಿಸಿದರು.
ಯು.ಬಿ.ಸಿಟಿಯ `ದಿ ಕಲೆಕ್ಷನ್~ನಲ್ಲಿ ಅವಿರಾಟೆ ವಸ್ತ್ರ ಮಳಿಗೆ ಆರಂಭಿಸುವ ಸಂದರ್ಭದಲ್ಲಿ ಆಯೋಜಿಸಿದ್ದ ಫ್ಯಾಷನ್ ಶೋನ ಝಲಕ್‌ಗಳಿವು.

ಪ್ರಿನ್ಸ್ ಸ್ಟೋರಿ ಸಂಗ್ರಹದಲ್ಲಿ ಚಿರತೆ ಮೈ ಬಣ್ಣದ ವಸ್ತ್ರಗಳನ್ನು ಧರಿಸಿದ ನೀಳ ಕಾಯದ ಮಾಡೆಲ್‌ಗಳು ಬಳುಕುತ್ತ ಹೆಜ್ಜೆ ಹಾಕುತ್ತಿದ್ದರೆ, ನೆರೆದವರ ಗುಂಪಿನಿಂದ `ಓ~ ಎಂಬ ಉದ್ಗಾರ. ಕರ್ಕಶವಿದ್ದು, ಅಬ್ಬರಿಸುತ್ತಿದ್ದರೂ ಹಿತವೆಂಬಂತಿದ್ದ ಹಿನ್ನೆಲೆ ಸಂಗೀತ ಫ್ಯಾಷನ್ ಶೋಗೆ ರಂಗು ತಂದಿತ್ತು.

ಹಸಿರು, ನೀಲಿ, ನೇರಳೆ ಸೇರಿದಂತೆ ಗಾಢ ಬಣ್ಣದ ಬಟ್ಟೆಗಳನ್ನು ತೊಟ್ಟ ರೂಪದರ್ಶಿಯರು ಫ್ಯಾಷನ್‌ಪ್ರಿಯರಿಗೆ ರಸದೌತಣ ನೀಡಿದರು. ಕರಿಮಣಿ ಸರ, ಕಪ್ಪು ಚಪ್ಪಲಿ ಹಾಗೂ ಅದೇ ಬಣ್ಣದ ವ್ಯಾನಿಟಿ ಬ್ಯಾಗ್ ಹಿಡಿದು ಬಂದ ರೂಪದರ್ಶಿಯರು ಅವಿರಾಟೆ ಸಂಗ್ರಹಗಳ ಮಾದರಿಗಳನ್ನು ಅನಾವರಣಗೊಳಿಸಿದರು.

ADVERTISEMENT

ಕೆಂಪು ಶೂ, ಬ್ಯಾಗ್ ಹಾಗೂ ವೃತ್ತಾಕಾರದ ಚಿತ್ರಗಳುಳ್ಳ ಫ್ರಾಕ್ ಧರಿಸಿದ್ದ ರೂಪದರ್ಶಿಯೊಬ್ಬರ ಬೆನ್ನು, ಕುತ್ತಿಗೆ ಮೇಲಿನ ಹಚ್ಚೆ ಎದ್ದುಕಾಣುವಂತಿತ್ತು.
`ಸ್ಕಿನ್ ಟೈಟ್~ ಉಡುಗೆಗಳಲ್ಲಿ ಹುಡುಗಿಯರು ಬಿನ್ನಾಣದ ಹೆಜ್ಜೆ ಹಾಕಿದರು. ದೊಗಳೆಯಾದ ಬಟ್ಟೆಗಳನ್ನು ತೊಟ್ಟವರದ್ದು ಬೇರೆಯೇ ನೋಟ.

ಸರ್ವಋತುಗಳಿಗೆ ಹೊಂದುವ ವಸ್ತ್ರಸಂಗ್ರಹವನ್ನು ಧರಿಸಿ ಹೆಜ್ಜೆಹಾಕಿದ ರೂಪದರ್ಶಿಗಳು ಅಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿದ್ದರು.  ಫ್ಯಾಷನ್ ವಿನ್ಯಾಸಕ ಪ್ರಸಾದ್ ಬಿದಪ್ಪ `ಅವಿರಾಟೆ~ ಸಂಗ್ರಹದ ಉಡುಪುಗಳನ್ನು ರೂಪದರ್ಶಿಯರಿಗೆ ವಿನ್ಯಾಸ ಮಾಡಿದ್ದರು.

ಬೆಂಗಳೂರಿನಲ್ಲಿ ತನ್ನ ಮೂರನೇ ಮಳಿಗೆಯನ್ನು ಆರಂಭಿಸುತ್ತಿರುವ `ಅವಿರಾಟೆ~ ಮಹಿಳೆಯರ ಉಡುಪುಗಳಿಗೆ ಹೆಸರಾಗಿದೆ. ಶ್ರೀಲಂಕಾ ಮೂಲದ ಈ ಕಂಪೆನಿ ಚೆನ್ನೈ, ಪುಣೆ, ಗೋವಾ ಹಾಗೂ ದೆಹಲಿಗಳಲ್ಲದೆ ನಗರದಲ್ಲಿ ಮೂರು ಶೋರೂಮ್‌ಗಳನ್ನು ಹೊಂದಿದೆ.

`ಫ್ಯಾಷನ್ 365 ರೀಟೇಲ್ ಪ್ರೈವೇಟ್ ಲಿಮಿಟೆಡ್~ ಮೂಲಕ ಅವಿರಾಟೆ ಮಳಿಗೆಯು ಚಿಲ್ಲರೆ ವ್ಯಾಪಾರ ಮಾಡುತ್ತಿದೆ. ಕ್ರಿಸ್‌ಮಸ್, ಹೊಸ ವರ್ಷದ ಸಂಗ್ರಹಗಳು ಹೆಂಗಳೆಯರನ್ನು ಸೆಳೆಯಲಿವೆ. ಈ ಶ್ರೇಣಿಯ ಉಡುಗೆ ತೊಡುಗೆಗಳು 1800 ರೂಪಾಯಿಯಿಂದ ಆರಂಭವಾಗುತ್ತವೆ.

ಫ್ಯಾಷನ್ 365 ರೀಟೇಲ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಜಾಹೀದ್ ಉಸ್ಮಾನ್, ನಿರ್ದೇಶಕ ಅರ್ಶಾದ್ ಸತ್ತರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.