ADVERTISEMENT

ಅವೇಕ್ಷಣ್ ಯುವೋತ್ಸವ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2011, 19:30 IST
Last Updated 31 ಆಗಸ್ಟ್ 2011, 19:30 IST
ಅವೇಕ್ಷಣ್ ಯುವೋತ್ಸವ
ಅವೇಕ್ಷಣ್ ಯುವೋತ್ಸವ   

ಕಾಲೇಜು ಉತ್ಸವ ಎಂದರೆ ಕಣ್ಣಿಗೆ ಕಟ್ಟುವುದು ಮೋಜು, ಮಸ್ತಿ, ನೃತ್ಯ, ಸಂಗೀತ. ಬಹುತೇಕ ಅಂತರ್‌ಕಾಲೇಜು ಉತ್ಸವಗಳೂ ಹಾಗೆಯೇ ಇರುತ್ತವೆ. ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆ ಪ್ರದರ್ಶನಕ್ಕೆ ಇದು ಅವಕಾಶ ಮಾಡಿಕೊಟ್ಟರೂ ಬಹುತೇಕ ವಿದ್ಯಾರ್ಥಿಗಳು ಬೋರ್ ಹೊಡೆಯವ ಉಪನ್ಯಾಸಗಳಿಂದ ತಪ್ಪಿಸಿಕೊಳ್ಳಲು ಇದೊಂದು ದಾರಿ ಎಂದುಕೊಳ್ಳುತ್ತಾರೆ.

100ಕ್ಕೂ ಹೆಚ್ಚು ಯುವ ಉತ್ಸಾಹಿಗಳು ಕಟ್ಟಿರುವ `ಆ್ಯಶಸ್ ಇವೆಂಟ್ಸ್~ ಕಂಪೆನಿ ಈಗ ಕಾಲೇಜು ಉತ್ಸವಗಳ ಪರಿಕಲ್ಪನೆ, ಮಾದರಿಯನ್ನೇ ಬದಲಾಯಿಸಲು ಹೊರಟಿದೆ. ದೇಶಾದ್ಯಂತ ಅಂತರ್‌ಕಾಲೇಜು ಸ್ಪರ್ಧೆ ನಡೆಸಲು `ಅವೇಕ್ಷಣ್~ ಎಂಬ ಸಂಸ್ಥೆ ಕಟ್ಟಿದ್ದು, ವಿಶಿಷ್ಟ ಉತ್ಸವ ಏರ್ಪಡಿಸುತ್ತಿದೆ.

`ಅವೇಕ್ಷಣ್~ ಅಂತರ್‌ಕಾಲೇಜು ಉತ್ಸವ ಬೆಂಗಳೂರು ಸೇರಿದಂತೆ ಆರು ಮಹಾನಗರಗಳು (ಮೆಟ್ರೊ) ಮತ್ತು ಏಳು ನಗರಗಳಲ್ಲಿ ಅಕ್ಟೋಬರ್‌ನಿಂದ ಆರಂಭವಾಗಿ ಡಿಸೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ. ದೇಶದ 3,200 ಕಾಲೇಜುಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, 85 ವಿಭಿನ್ನ ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.
 
ಸ್ಪರ್ಧೆಯ ಅಂತಿಮ ಸುತ್ತು ಸಿಂಗಪುರದಲ್ಲಿ ನಡೆಯಲಿದೆ. ಯುವಜನರಿಗಾಗಿ ಯುವಜನರೇ ನಡೆಸುವ ಈ ಕಾಲೇಜು ಉತ್ಸವ, ದೇಶದ ಈ ಬಗೆಯ ಉತ್ಸವಗಳಲ್ಲೇ ಅತ್ಯಂತ ದೊಡ್ಡದಾಗಲಿದೆ ಎಂದು ಹೇಳುತ್ತಾರೆ `ಅವೇಕ್ಷಣ್~ ವ್ಯವಸ್ಥಾಪಕ ನಿರ್ದೇಶಕಿ ಸುನೈನಾ ಗುಪ್ತಾ.

ಜೈನ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಮೊದಲ ವರ್ಷದ ಪದವಿ ಓದುತ್ತಿರುವ ಸುನೈನಾ ಸಾಹಸ ಮನೋಭಾವದಿಂದ ಸ್ನೇಹಿತರು, ಸಹಪಾಠಿಗಳ ಜತೆಗೂಡಿ ಓದುತ್ತಿರುವಾಗಲೇ ದೊಡ್ಡ ಹೆಜ್ಜೆ ಇಟ್ಟಿದ್ದಾರೆ.

ಮಾಮೂಲಿ ಕಾಲೇಜು ಉತ್ಸವಗಳಂತೆ ವೈಯಕ್ತಿಕ ಮತ್ತು ಸಮೂಹ ಸ್ಪರ್ಧೆಗಳು ಇರುತ್ತವೆ. ಇದರ ಹೊರತಾಗಿ ಅಂತರ್‌ರಾಷ್ಟ್ರೀಯ ಆಹಾರ ಮೇಳ, ಉದ್ಯೋಗ ಮೇಳ ಮತ್ತು ಶಿಕ್ಷಣ ಮೇಳ ನಡೆಯಲಿದೆ.
 
`ಸಂಡೆ ಮಾರ್ಕೆಟ್~ ಎಂಬ ವಿನೂತನ ಕಲ್ಪನೆ ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ತಾವು ಸಿದ್ಧಪಡಿಸಿದ ಕರಕುಶಲ ವಸ್ತು, ಆಹಾರ ಉತ್ಪನ್ನ, ಉಡುಪು ಇತ್ಯಾದಿಗಳನ್ನು ಉತ್ಸವ ನಡೆಯುವ ಕಾಲೇಜು ಆವರಣದಲ್ಲಿ ಮಾರಾಟ ಮಾಡಬಹುದಾಗಿದೆ. ವಿಜ್ಞಾನ, ವಾಣಿಜ್ಯ, ಕಾನೂನು, ಕಲೆ, ಹಾಸ್ಪಿಟಾಲಿಟಿ ಇತ್ಯಾದಿ ಎಲ್ಲ ವಿಭಾಗಗಳ ವಿದ್ಯಾರ್ಥಿಗಳೂ ಈ ಉತ್ಸವದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಮೊದಲೇ ಹೆಸರು ನೋಂದಾಯಿಸಿದವರಿಗೆ ಮತ್ತು ಮುಕ್ತವಾಗಿ ಸ್ಪರ್ಧಿಸುವವರಿಗೆ `ಅವೇಕ್ಷಣ್~ನಲ್ಲಿ ಪ್ರತ್ಯೇಕ ವಿಭಾಗಗಳು ಇರುತ್ತವೆ. ಸ್ಪರ್ಧೆಯ ಹೊರತಾಗಿ ವೇದಿಕೆಯ ಮೇಲೆ ಪ್ರತಿಭೆ ಪ್ರದರ್ಶಿಸಲು ಇಚ್ಛಿಸುವವರಿಗೆ ವಾಕ್-ಇನ್ ವಿಭಾಗದಲ್ಲಿ ಅವಕಾಶ ಕಲ್ಪಿಸಲಾಗಿದೆ.

 `ಅವೇಕ್ಷಣ್~ ಸಾಮಾಜಿಕ ಬದ್ಧತೆ ಹೊಂದಿದ್ದು, ಬಹುತೇಕ ಎಲ್ಲ ಸ್ಪರ್ಧೆಗಳಲ್ಲೂ ಯುವಕರಲ್ಲಿ ಸಾಮಾಜಿಕ ಹೊಣೆಗಾರಿಕೆ, ಅರಿವು ಮೂಡಿಸುವ ಸುತ್ತುಗಳನ್ನು ಇಡಲಾಗಿದೆ. ಸ್ಪರ್ಧಾಳುಗಳು ಹೆಣ್ಣು ಮಕ್ಕಳ ಸಬಲೀಕರಣ, ಎಚ್‌ಐವಿ, ಏಡ್ಸ್ ಬಾಧಿತ ಮಕ್ಕಳು, ಮಕ್ಕಳ ಶಿಕ್ಷಣ, ಕಾನ್ಸರ್ ಜಾಗೃತಿ ಕುರಿತು ತಮ್ಮದೇ ಆದ ವಿಚಾರಧಾರೆ ಮಂಡಿಸಬೇಕಾಗುತ್ತದೆ.

ಈ ಯುವಕರು ಪ್ರತಿಪಾದಿಸಿರುವ ವಿಚಾರಗಳನ್ನು ಆಯಾ ವಿಚಾರಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ಮುಟ್ಟಿಸಲಾಗುತ್ತದೆ
ಉತ್ಸವದಲ್ಲಿ ಪಾಲ್ಗೊಳ್ಳಬಯಸುವ ಕಾಲೇಜು ತಂಡಗಳು  avekshan.com ನಲ್ಲಿ ನೋಂದಾಯಿಸಬಹುದು. ಮಾಹಿತಿಗೆ  95381 19997. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.