ADVERTISEMENT

ಆಂತರಿಕ ಫಿಟ್‌ನೆಸ್‌ ಮುಖ್ಯ: ವಿಕ್ರಾಂತ್

ಮಂಜುಶ್ರೀ ಎಂ.ಕಡಕೋಳ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
ಆಂತರಿಕ ಫಿಟ್‌ನೆಸ್‌ ಮುಖ್ಯ: ವಿಕ್ರಾಂತ್
ಆಂತರಿಕ ಫಿಟ್‌ನೆಸ್‌ ಮುಖ್ಯ: ವಿಕ್ರಾಂತ್   

* ನೀವು ಒಳ್ಳೆಯ ಬ್ಯಾಲೆ ಡಾನ್ಸರ್ ಅಂತೆ...
ನಾನು  ಬ್ಯಾಲೆ ಡಾನ್ಸರ್ ಅಲ್ಲ. ಜಾಸ್ ಡಾನ್ಸರ್. ಪಾಪ ಅಂತರ್ಜಾಲದಲ್ಲಿ ನನ್ನ ಬಗ್ಗೆ ತುಂಬಾ ಕಷ್ಟಪಟ್ಟು ಮಾಹಿತಿ ಹಾಕುತ್ತಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. 

* ಕಿರುತೆರೆಯಿಂದ ಬೆಳ್ಳಿತೆರೆಗೆ ಪ್ರವೇಶ ಹೇಗಾಯಿತು?
ಟಿ.ವಿ ಧಾರಾವಾಹಿಗಳಲ್ಲಿ ಹತ್ತು ವರ್ಷ ಕೆಲಸ ಮಾಡಿದ್ದೆ.  ವಿಕ್ರಮಾದಿತ್ಯ ಮೋಟ್ವಾನಿ ಚಿತ್ರದಲ್ಲಿ ಅಭಿನಯಿಸುವ ಕರೆ ಬಂತು. ಅಲ್ಲಿಂದ ನನ್ನ ಸಿನಿ ಪಯಣ ಆರಂಭವಾಯಿತು. ಹಾಗೆ ನೋಡಿದರೆ ನನಗೆ ಸಿನಿಮಾಕ್ಕೆ ಬರುವ ಯೋಚನೆಯೇ ಇರಲಿಲ್ಲ.  ‘ಎ ಡೆತ್‌ ಇನ್‌ ದಿ ಗಂಜ್’ ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎಂದು ಕೂಡಾ ಅಂದುಕೊಂಡಿರಲಿಲ್ಲ.

*‘ಎ ಡೆತ್ ಇನ್‌ ದ ಗಂಜ್’ ಸಿನಿಮಾದಲ್ಲಿನ ನಿಮ್ಮ  ‘ಶುಟು’ ಪಾತ್ರದ ಬಗ್ಗೆ ಹೇಳಿ
ಶ್ಯಾಮಲ್‌ ಚರ್ಟಜಿ ಅನ್ನು ಶುಟು ಎಂದು ಚಿಕ್ಕದಾಗಿ ಕರೆಯುತ್ತಾರೆ. ಶುಟು ಸೂಕ್ಷ್ಮ ಮನಸಿನ ಮನುಷ್ಯ. ಅಮ್ಮನ ಸೆರಗು ಹಿಡಿದುಕೊಂಡು ಬೆಳೆದವನು. ಕೋಲ್ಕತ್ತದ ವಿಶ್ವವಿದ್ಯಾಲಯದಲ್ಲಿ ಓದುತ್ತಿರುತ್ತಾನೆ. ಒಂದು ವಾರದ ರಜೆಗಾಗಿ ಅಣ್ಣನ ಕುಟುಂಬದ ಜತೆ ಬೆರೆಯುವ ಸಂದರ್ಭ ಬಂದಾಗ ಏನಾಗುತ್ತದೆ ಎಂಬುದೇ ಸಿನಿಮಾದ ಕಥೆ.

ADVERTISEMENT

* ನೋಡಲು ತುಂಬಾ ಸ್ಲಿಮ್ ಇದ್ದೀರಿ. ಏನೇನು ತಿನ್ತೀರಿ?
ನಾನು ಬಾಹ್ಯ ಫಿಟ್‌ನೆಸ್‌ಗಿಂತ ಆಂತರಿಕ ಫಿಟ್‌ನೆಸ್‌ಗೆ  ಆದ್ಯತೆ ನೀಡುವವನು. ಹಾಗಾಗಿ, ಆಹಾರದ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. 
ಈ ಭೂಮಿ ಮೇಲೆ ತಿನ್ನಬಹುದಾದ  ಎಲ್ಲವನ್ನೂ ನಾನು ತಿನ್ನುತ್ತೇನೆ. ಮುಖ್ಯವಾಗಿ ಊಟದಲ್ಲಿ ತುಪ್ಪ ಬಳಸುತ್ತೇನೆ. ತುಪ್ಪ ತಿನ್ನುವುದರಿಂದ ದಪ್ಪ ಆಗುವುದಿಲ್ಲ ಬದಲಿಗೆ ಮೂಳೆ ಗಟ್ಟಿಯಾಗುತ್ತವೆ. ಮನೆಯಲ್ಲಿ ಅಜ್ಜ–ಅಜ್ಜಿ ಏನು ಕಲಿಸಿದ್ದಾರೋ ಅದರ ಹಿಂದೆ ವಿಜ್ಞಾನ ಇದ್ದೇ ಇದೆ.

* ಕೊಂಕಣಾಸೇನ್ ಶರ್ಮಾ ಜತೆ ಕೆಲಸ ಮಾಡಿದ ಅನುಭವ ಹೇಗಿತ್ತು?
ಕೊಂಕಣಾ ಸೇನ್ ಜತೆ ಈ ಹಿಂದೆ ಕೆಲಸ ಮಾಡಿದ್ದೆ. ನಟನೆಯ ಜತೆಗೆ ಆಕೆ ಉತ್ತಮ ನಿರ್ದೇಶಕಿಯೂ ಹೌದು. ಕೊಂಕಣಾ ನನಗೆ ಸ್ನೇಹಿತೆ ಕೂಡ. ಹಾಗಾಗಿ ಅವಳ ಜತೆ ಆರಾಮವಾಗಿ ಕೆಲಸ ಮಾಡಲು ಸಾಧ್ಯವಾಯಿತು.

* ವಿವಾದಿತ ಸಿನಿಮಾ ‘ಲಿಪ್‌ಸ್ಟಿಕ್ ಅಂಡರ್  ಮೈ ಬುರ್ಕಾ’ದಲ್ಲಿ ಅಭಿನಯಿಸಿದ್ದೀರಿ...
ಹೌದು. ಈ ಸಿನಿಮಾದಲ್ಲಿ ನನ್ನದು ಸಣ್ಣ ಪಟ್ಟಣವೊಂದರಲ್ಲಿ ವಾಸಿಸುವ ಹರ್ಷದ್ ಎನ್ನುವ ಹುಡುಗನ ಪಾತ್ರ. ಶುಟುಗಿಂತ ತುಂಬಾ ಭಿನ್ನವಾದ ಪಾತ್ರ. 
ಈ ಸಿನಿಮಾ ಜನವರಿಯಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿ ಪ್ರದರ್ಶನಕ್ಕೆ ತಡೆಹಿಡಿದಿತ್ತು. ದೇವರ ದಯೆ ಈಗ ಸಿನಿಮಾ ಪ್ರದರ್ಶನಕ್ಕೆ ಅನುಮತಿ ದೊರೆತಿದೆ.

* ‘...ಬುರ್ಕಾ’ದಲ್ಲಿ ಕೆಲ ಹಸಿಬಿಸಿ ಸನ್ನಿವೇಶಗಳಿವೆಯಲ್ಲ...
ಬಹಳಷ್ಟು  ಜನರು ಇದನ್ನೇ ಪ್ರಶ್ನಿಸಿದ್ದಾರೆ. ಹಸಿಬಿಸಿ (ಇಂಟಿಮೇಟ್‌) ದೃಶ್ಯಗಳ ಕಾರಣಕ್ಕಾಗಿಯೇ ಸಿನಿಮಾ ಪ್ರದರ್ಶನಕ್ಕೆ ತಡೆ ಒಡ್ಡಲಾಗಿದೆ  ಎಂದೂ ಸುದ್ದಿಯಾಗಿದೆ. ಆದರೆ, ವಾಸ್ತವದಲ್ಲಿ ಹಾಗಿಲ್ಲ.

ಭಾರತೀಯರು ಹೇಗೆ ವರ್ತಿಸುತ್ತಾರೆಂದರೆ ಅವರು ಕೇವಲ ಪೂಜೆಯನ್ನಷ್ಟೇ ಮಾಡುತ್ತಾರೆ. ಸೆಕ್ಸ್ ಮಾಡುವುದೇ ಇಲ್ಲವೆಂಬಂತೆ ವರ್ತಿಸುತ್ತಾರೆ. ಯಾವ ದೇಶದಲ್ಲಿ ಸಾವಿರಾರು  ವರ್ಷಗಳ  ಹಿಂದೆಯೇ  ಕಾಮಸೂತ್ರ ಬಂದಿದೆಯೋ, ಯಾವ ದೇಶದಲ್ಲಿ  ಪ್ರತಿ ಸೆಕೆಂಡಿಗೆ ಏಳೆಂಟು ಮಕ್ಕಳು ಹುಟ್ಟುತ್ತಾರೋ ಅಲ್ಲಿ ಲೈಂಗಿಕತೆಯನ್ನು ಅಪರಾಧ ಎಂಬಂತೆ ಯಾಕೆ ಆಲೋಚಿಸುತ್ತಾರೋ ಗೊತ್ತಿಲ್ಲ? ನಮ್ಮಲ್ಲಿ ಮುಖವಾಡ ಧರಿಸಿ ಸಮಾನತೆ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ. ಮತ್ತೊಂದೆಡೆ ಅದೇ ಸಮಾಜದಲ್ಲಿ ಫೇಸ್‌ಬುಕ್‌ನಲ್ಲಿ ಅತ್ಯಾಚಾರ ದೃಶ್ಯಗಳನ್ನು ಅಪ್‌ಲೋಡ್ ಕೂಡ ಮಾಡಲಾಗುತ್ತಿದೆ.  ಇದೆಂಥಾ ವಿಚಿತ್ರ ಅಲ್ವಾ?

* ಸಿನಿಮಾದಲ್ಲಿ ಆಪ್ತ ದೃಶ್ಯಗಳಲ್ಲಿ ಕತ್ತರಿ ಹಾಕಲಾಗಿದೆಯೇ?
ಸೆನ್ಸಾರ್ ಮಂಡಳಿ ಯಾವ ದೃಶ್ಯಗಳಿಗೆ ಕತ್ತರಿ ಹಾಕಿದೆ ಎಂಬುದು ನನಗಿನ್ನೂ ಗೊತ್ತಿಲ್ಲ. ಸಿನಿಮಾ ಬಿಡುಗಡೆಯಾದ ಮೇಲಷ್ಟೇ ತಿಳಿಯಲಿದೆ.

****
ಒಂದಿಷ್ಟು ವಿವರ

ಹಿಂದಿ ಕಿರುತೆರೆಯಲ್ಲಿ ಜನಪ್ರಿಯರಾಗಿರುವ ವಿಕ್ರಾಂತ್, ‘ಬಾಲಿಕಾ ವಧು’, ‘ಧರಂವೀರ್’, ‘ ವಿ–ದಿ ಸೀರಿಸ್‌’, ‘ಕಬೂಲ್ ಹೈ’, ‘ಯೇ ಹೈ ಆಶೀಕಿ’ ಮೊದಲಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

‘ದಿಲ್ ದಡಕನೋ ದೊ’, ‘ಲೂಟೇರಾ’ ‘ಹಾಫ್ ಗರ್ಲ್್ ಫ್ರೆಂಡ್‌’ ಮೂಲಕ  ಬಾಲಿವುಡ್‌ನಲ್ಲಿ ಗುರುತಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.