ADVERTISEMENT

‘ಆಟವನ್ನು ಆಟದಂತೆ ಆಡಬೇಕಿತ್ತು’

ಸುಮನಾ ಕೆ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST
‘ಆಟವನ್ನು ಆಟದಂತೆ ಆಡಬೇಕಿತ್ತು’
‘ಆಟವನ್ನು ಆಟದಂತೆ ಆಡಬೇಕಿತ್ತು’   

* ಬಿಗ್‌ಬಾಸ್‌ಗೆ ಹೋಗುವಾಗ ನಿರೀಕ್ಷೆ ಏನಿತ್ತು?
ಸುಮಾ: ನಾನು ಕಲಾವಿದೆಯಾಗಿದ್ದರಿಂದ ಬಿಗ್‌ಬಾಸ್‌ಗೆ ಹೋದಲ್ಲಿ ನನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬಹುದು. ಇಡಿ ಕರ್ನಾಟಕದ ಜನರ ಕಣ್ಣಲ್ಲಿ ಗುರುತಿಸಿಕೊಳ್ಳಬಹುದು ಎಂಬುದು ನನ್ನ ನಿರೀಕ್ಷೆಯಾಗಿತ್ತು. ಚಾನೆಲ್‌ನವರು ಕೂಡ ‘ಹಣಕ್ಕಾಗಿ ಬರುತ್ತಿದ್ದೀರಾ?’ ಎಂದು ಕೇಳಿದ್ದರು. ಆಗ ನಾನು ‘ದುಡ್ಡಿಗಿಂತ ಅವಕಾಶ ಮುಖ್ಯ’ ಎಂದೇ ಹೇಳಿದ್ದೆ.

ಮೇಘಾ: ನನಗೆ ನಟನಾ ಕ್ಷೇತ್ರಕ್ಕೆ ಬರಬೇಕೆಂಬ ಆಸೆ ಇದೆ. ಬಿಗ್‌ಬಾಸ್‌ ಎಲ್ಲಾ ಸೀಸನ್‌ ನೋಡಿದ್ದೆ. ಬಿಗ್‌ಬಾಸ್‌ ಮನೆಗೆ ಹೋದಲ್ಲಿ ಎಲ್ಲಾ ಕಡೆ ಗುರುತಿಸಿಕೊಳ್ಳುತ್ತೇವೆ. ಇದಿಷ್ಟೇ ನಿರೀಕ್ಷೆಯಾಗಿತ್ತು.

* ಬಿಗ್‌ಬಾಸ್‌ಗೆ ಆಯ್ಕೆಯಾಗಿದ್ದೀರಿ ಅಂದಾಗ ನಿಮ್ಮ ಪ್ರತಿಕ್ರಿಯೆ?
ಸುಮಾ: ಬಿಗ್‌ಬಾಸ್‌ ಮನೆಗೆ ಹೋಗುವ ಅಪರೂಪದ ಅವಕಾಶ ಸಿಕ್ಕಿದಾಗ ತುಂಬ ಖುಷಿ ಪಟ್ಟೆ. ನನ್ನ ಸ್ವಂತ ಅರ್ಹತೆಯಿಂದ ಆಯ್ಕೆಯಾಗಿ ಹೋಗಿದ್ದೇ ಖುಷಿ.

ADVERTISEMENT

ಮೇಘಾ: ನಾನು ಸ್ವಲ್ಪ ಟಫ್‌ ಅಂಡ್‌ ರಫ್‌ ಹುಡುಗಿ. ಬಿಗ್‌ಬಾಸ್‌ನಿಂದ ಕರೆ ಬಂದಾಗ ನಾನು ಅಲ್ಲಿ ಚೆನ್ನಾಗಿ ಆಡಬೇಕು. ನಾನೇನು ಎಂಬುದನ್ನು ಸಾಬೀತು ಮಾಡಲು ಇದು ಉತ್ತಮ ಅವಕಾಶ ಎಂದುಕೊಂಡೆ. ನಾನು ನಾನಾಗಿರಬೇಕು ಎಂದು ಅಂದುಕೊಂಡೇ ಮನೆಯೊಳಗೆ ಹೋಗಿದ್ದೆ.

* ಬಿಗ್‌ಬಾಸ್‌ ಮನೆಯೊಳಗಿನ ಅನುಭವ
ಸುಮಾ: ಅಲ್ಲಿ ಸಮಯ ಸರಿಯುತ್ತಿದ್ದೇ ಗೊತ್ತಾಗುತ್ತಿರಲಿಲ್ಲ. ಮನೆಯೊಳಗೆ ಇದ್ದರೆ ಹಗಲು, ಇರುಳು ಒಂದೂ ಗೊತ್ತಾಗಲ್ಲ. ಗಾರ್ಡನ್‌ ಏರಿಯಾಗೆ ಬಂದಾಗ ಮಾತ್ರ ಗೊತ್ತಾಗುತ್ತಿತ್ತು. ಗಂಟೆ ತಿಳಿಯುತ್ತಿರಲಿಲ್ಲ. ಎಷ್ಟು ಗಂಟೆಗೆ ಬೆಳಗ್ಗಿನ ತಿಂಡಿ ಮಾಡುತಿದ್ದೆವೊ, ಊಟ ಯಾವಾಗ ಮಾಡುತ್ತಿದ್ದೆವೋ? ನಾನಿದ್ದ ಒಂದು ವಾರದಲ್ಲಿ ಅಡುಗೆ ಕೆಲಸ ನನ್ನದಾಗಿದ್ದರಿಂದ ಟಾಸ್ಕ್‌ ಮುಗಿಸಿ, ಅಡುಗೆ ಕೆಲಸ ಮಾಡುತ್ತಿದ್ದೆ. ಹೀಗಾಗಿ ಟೈಮ್‌ ಹೋಗಿದ್ದೆ ಗೊತ್ತಾಗಲಿಲ್ಲ.

ಮೇಘಾ: ನಾನು ತುಂಬ ಧೈರ್ಯವಂತೆ. ಆದರೆ ಅಲ್ಲಿ ಹೋದ ಮೇಲೆ ನಾನು ಮೃದುವಾದೆ. ಅಲ್ಲಿಯವರ ಜತೆ ಹೇಗೆ ನಡೆದುಕೊಳ್ಳಬೇಕು. ಜನರ ಸ್ವಭಾವ ಹೇಗಿರುತ್ತೆ ಎಂಬುದು ಎರಡೇ ವಾರದಲ್ಲಿ ಗೊತ್ತಾಯಿತು. ಒಬ್ಬ ವ್ಯಕ್ತಿಯನ್ನು ಹತ್ತಿರದಿಂದ ನೋಡುವಾಗ ಅವರ ಪಾಸಿಟಿವ್‌, ನೆಗೆಟಿವ್‌ ಎರಡೂ ಗೊತ್ತಾಗುತ್ತದೆ.

* ಆ ಮನೆಯಲ್ಲಿ ಸೆಲೆಬ್ರಿಟಿ, ಜನಸಾಮಾನ್ಯರು ಅಂತ ಭೇದ ಇದೆಯಾ?
ಸುಮಾ: ಸೆಲೆಬ್ರಿಟಿ, ಜನಸಾಮಾನ್ಯರು ಎಂಬುದು ನನಗೆ ತುಂಬ ಅನುಭವಕ್ಕೆ ಬರಲಿಲ್ಲ. ಅವರು ಹೇಗೆ ಅಭ್ಯರ್ಥಿಗಳೋ ನಾವು ಸಹಾ ಅಭ್ಯರ್ಥಿಗಳು. ನಾನು ಸ್ವಭಾವತಃ ತುಂಬ ಮಾತನಾಡುತ್ತೇನೆ. ಯಾರೇ ಆಗಲಿ ಅವರೇ ಮೊದಲು ಮಾತನಾಡಲಿ ಎಂದು ನಾನು ಬಯಸದೇ ನಾನೇ ಮೊದಲು ಹೋಗಿ ಮಾತನಾಡುತ್ತೇನೆ. ಅದು ಅಲ್ಲಿ ನನ್ನ ಸಹಾಯಕ್ಕೆ ಬಂತು.

ಮೇಘಾ: ಸೆಲೆಬ್ರಿಟಿಗಳು ಒಬ್ಬರಿಗೊಬ್ಬರು ಪರಿಚಯದವರು. ಹೀಗಾಗಿ ಅವರೆಲ್ಲಾ ಒಂದು ಗುಂಪು. ನಮ್ಮದೇ ಒಂದು ಗುಂಪು ಅಂತ ಆಗಿತ್ತು. ನಾನು ಆ ಕುಟುಂಬದಲ್ಲಿ ಒಂದಾಗಬೇಕು ಎಂದೇ ಅಕ್ಕ, ಅಣ್ಣ, ಅಂಕಲ್‌ ಅಂತ ಕರೆದೆ. ಆದರೆ ಅವರು ಸ್ವೀಕರಿಸಲಿಲ್ಲ ಎಂಬುದು ನನ್ನ ಅನುಭವ. ಯಾರಿಗೆ ಯಾರು ಇಷ್ಟವೋ ಅವರ ಜೊತೆ ಇದ್ದು ಬಿಡುತ್ತಾರೆ. ಅವರ ಗುಂಪು ಇದ್ದಲ್ಲಿ ನಾವು ಹೋದಾಗ ಲೆಕ್ಕಕ್ಕೆ ತಗೊಳ್ಳಲ್ಲ. ಸಮೀರಣ್ಣ, ರಿಯಾಜಣ್ಣ ನನಗೆ ತುಂಬ ಸಪೋರ್ಟ್‌ ಮಾಡಿದರು. 

* ನಿಮ್ಮ ಇಷ್ಟದ ಟಾಸ್ಕ್‌?
ಸುಮಾ: ನಮ್ಮ ಜೀವನಕ್ಕೆ ಹತ್ತಿರವಾದ ಘಟನೆ ಆಯ್ಕೆ ಮಾಡಿಕೊಂಡು ವಿವರಿಸಬೇಕಾಗಿತ್ತು. ಅಲ್ಲಿದ್ದ ಮಹಿಳೆಯರಲ್ಲಿ ನಾನು ಹಿರಿಯವಳು. ಹೀಗಾಗಿ ಮಧ್ಯಮ ವರ್ಗದ ಮಹಿಳೆಯರಿಗೆ ನಾನು ಸಂದೇಶ ನೀಡಬೇಕು ಎಂದು ‘ಮಹಾತ್ವಾಕಾಂಕ್ಷೆ’ ವಿಷಯ ಆಯ್ಕೆ ಮಾಡಿಕೊಂಡಿದ್ದೆ. ಆದರೆ ಆ ದೃಶ್ಯ ಪ್ರಸಾರವಾಗಲಿಲ್ಲ.

ಮೇಘಾ: ಒಂದು ಮೊಟ್ಟೆಯ ಕತೆ ಟಾಸ್ಕ್‌. ಗೆದ್ದಾಗ ಬೀಗಬಾರದು, ಸೋತಾಗ ಬೇರೆಯವರನ್ನು ಆಡ್ಕೋಬಾರದು ಎಂಬುದು ಅನುಭವಕ್ಕೆ ಬಂತು.

* ನೀವು ಜನಸಾಮಾನ್ಯರಾಗಿ ಹೋಗಿದ್ದಕ್ಕೆ ಮನೆಯಿಂದ ಹೊರಗೆ ಬಂದಿರಬಹುದಾ?
ಸುಮಾ: ಹಾಗೆ ಅನಿಸ್ತಿಲ್ಲ. ನಾನು ಒಬ್ಬಳು ತಾಯಿಯಾಗಿ ಮನೆಯೊಳಗೆ ಹೋಗಿದ್ದು. ಒಬ್ಬ ತಾಯಿಯಾಗಿ  ನಾನು ಸಣ್ಣಪುಟ್ಟದ್ದಕ್ಕೆ ಹೇಗೆ ನನಗಿಂತ ಚಿಕ್ಕವರ ಹತ್ತಿರ ಜಗಳ ಮಾಡಲಿ? ಆಟವನ್ನು ಆಟವಾಗಿ ತೆಗೆದುಕೊಳ್ಳಬೇಕಾಗಿತ್ತು. ಅಲ್ಲಿ ತಾಯಿಯಾಗಿ ನಡೆದುಕೊಂಡಿದ್ದೇ ಹೊರಗೆ ಬರಲು ಕಾರಣ ಆಗಿರಬಹುದು.

ಮೇಘಾ: ನಾನು ಮೌನವಾಗಿದ್ದಕ್ಕೆ ಹೊರಗೆ ಬಂದೆ. ನಾನು ರಫ್‌ ಆಗಿ ಇರುವವಳು. ಮನೆಯೊಳಗೆ ಎಲ್ಲರೂ ಹೇಳಿದ್ದಕ್ಕೆ ತಲೆಯಾಡಿಕೊಂಡು ಇದ್ಬಿಟ್ಟೆ. ಅವರು ಹೇಳಿದ್ದಕ್ಕೆ ನಾನು ಪ್ರತ್ಯುತ್ತರ ಕೊಡಬೇಕಾಗಿತ್ತು ಎಂದು ಈಗ ಅನಿಸ್ತಿದೆ.

* ನಿಮ್ಮ ಪ್ರಕಾರ ಯಾರು ಎಲಿಮಿನೆಟ್‌ ಆಗಬೇಕಾಗಿತ್ತು?
ಮೇಘಾ: ನನಗಿಂತಲೂ ಕಡಿಮೆ ಅರ್ಹತೆಯ ಸ್ಪರ್ಧಿಗಳು ಅಲ್ಲಿದ್ದಾರೆ. ಸ್ವಿಮ್ಮಿಂಗ್‌ ಪೂಲ್‌ಗೆ ಹಾರುವ ಟಾಸ್ಕ್‌ನಲ್ಲಿ ನನಗಿಂತ ಸಣ್ಣ ವಯಸ್ಸಿನವರು ಸ್ಟೈಲಾಗಿ ಮೆಟ್ಟಿಲು ಇಳಿಯುತ್ತ ಧುಮುಕಿದ್ದರೆ, ನಾನು ಬಿಗ್‌ಬಾಸ್‌ ಅಪ್ಪಣೆಯಂತೆ ಸೀರೆ ಉಟ್ಟಿದ್ದರೂ, ದಡದಿಂದಲೇ ನೀರಿಗೆ ಹಾರಿದ್ದೆ. ಹೀಗಾಗಿ ಯಾರಿಗೂ ನಾನು ಕಡಿಮೆ ಆಗಿರಲಿಲ್ಲ.

ಮೇಘಾ: ದಯಾಳ್‌ ಪದ್ಮನಾಭನ್‌ ಅವರು.

* ಏನು ಬದಲಾವಣೆ ಆಗಿದೆ?
ಮೇಘಾ: ಗೊಂಬೆ ಸುಮಾ ಈಗ ಬಿಗ್‌ಬಾಸ್‌ ಸುಮಾ ಆಗಿದ್ದೀನಿ. ನಿರೀಕ್ಷೆ ಸಿಗದಷ್ಟು ಜನರ ಪ್ರೀತಿ ಸಿಕ್ಕಿದೆ. ನಾನು ಬಿಗ್‌ಬಾಸ್‌ ಮನೆ ಕದ ತಟ್ಟಿ ಬಂದಿದ್ದೀನಿ ಎಂಬುದೇ ಹೆಮ್ಮೆ.ಈಗಷ್ಟೇ ಮನೆಗೆ ಬಂದಿದ್ದೀನಿ. ಇವತ್ತು ಪರೀಕ್ಷೆ(ಸೋಮವಾರ ಮಧ್ಯಾಹ್ನ) ಇದೆ. ಬರೆಯಬೇಕು. ಸ್ನೇಹಿತರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಅರಿಯಲು ಕಾಯ್ತಿದ್ದೀನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.