ADVERTISEMENT

ಆಡುವ ಕಾಯಕದಲ್ಲಿ ಹಸನಾಯ್ತು ಜೀವನ

ಗಿರೀಶದೊಡ್ಡಮನಿ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST
ಆಡುವ ಕಾಯಕದಲ್ಲಿ  ಹಸನಾಯ್ತು ಜೀವನ
ಆಡುವ ಕಾಯಕದಲ್ಲಿ ಹಸನಾಯ್ತು ಜೀವನ   

ಫುಟ್‌ಬಾಲ್‌ಪ್ರಿಯರ ರಾಜಧಾನಿ ಬೆಂಗಳೂರು ನನ್ನ ಮನೆ ಭಾಷೆ ತಮಿಳು. ಅದರೆ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಇದೇ ನನ್ನ ಊರು ಮತ್ತು ಉಸಿರು. ನನ್ನ ಕನ್ನಡ ಅಸ್ಪಷ್ಟವಾಗಿರಬಹುದು. ಆದರೆ ಈ ನಾಡು ನನಗೆ ನೀಡಿದ ಅವಕಾಶ, ಗೌರವಕ್ಕೆ ಸದಾ ಋಣಿ.

ನನ್ನ ತಂದೆ ಐಸಯ್ಯ, ಚೆನ್ನೈನವರು. ಇಲ್ಲಿಯ ಎಚ್‌ಎಎಲ್‌ನಲ್ಲಿ ಉದ್ಯೋಗಿಯಾಗಿದ್ದರು. ನಾವು ಇದ್ದದ್ದು ಆಗ ‘ಗನ್ ಟ್ರೂಪ್’ ಎಂದು ಕರೆಯಲಾಗುತ್ತಿದ್ದ ಈಗಿನ ಗೌತಮಪುರದಲ್ಲಿ (ಹಲಸೂರು). ಊಟ, ನಿದ್ದೆ, ಉಸಿರು ಎಲ್ಲವೂ ಫುಟ್‌ಬಾಲ್ ಆಗಿತ್ತು.
ಕುಟುಂಬದಲ್ಲಿ ಯಾರೂ ಕ್ರೀಡಾಪಟುವಾಗಿರಲಿಲ್ಲ. ಫುಟ್‌ಬಾಲ್ ಆಟ ಯಾರಿಗೂ ಗೊತ್ತಿರಲಿಲ್ಲ. ಆದರೆ, ಗೌತಮಪುರದ ವಾತಾವರಣ ನನ್ನನ್ನು ಆವರಿಸಿಕೊಂಡಿತು. ಅದುವೇ ನನ್ನ ಗುರುವಾಯಿತು. 1948ರಲ್ಲಿ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಭಾರತ ತಂಡದ ಎಸ್‌.ಎ. ಬಶೀರ್ ಮತ್ತು ಧನರಾಜ್ ಕೂಡ ಇದೇ ಪ್ರದೇಶದವರು. ಅವರ ಪ್ರಭಾವವೂ ಬಹಳಷ್ಟಿತ್ತು.

ನಾನು ಓದುತ್ತಿದ್ದ ಆಸ್ಟಿನ್ ಟೌನ್ ಪ್ರೌಢಶಾಲೆಯ ತಂಡದಲ್ಲಿ ನಾನೇ ಪ್ರಮುಖ ಆಟಗಾರನಾಗಿದ್ದೆ. 1958ರಲ್ಲಿ ಪ್ರಥಮ ಡಿವಿಷನ್‌ನಲ್ಲಿ ಆಡಿದೆ. ಆಗೆಲ್ಲ ಬೆಂಗಳೂರಿನ ಜನರು ಇಷ್ಟು ಒತ್ತಡದಲ್ಲಿರಲಿಲ್ಲ. ಹಲಸೂರು ಕೆರೆ ಬಹಳ ಸುಂದರವಾಗಿತ್ತು. ಅಲ್ಲಿ ವಿಹಾರ ಮಾಡುವುದು ಮನಸಿಗೆ ಮುದ ನೀಡುತ್ತಿತ್ತು. ಈಗ ಸ್ವಲ್ಪ ಜನ, ವಾಹನ ದಟ್ಟಣೆ ಹೆಚ್ಚಿದೆ. ಆ ಪ್ರದೇಶದಲ್ಲಿ ಪಂದ್ಯ ಆಡಲು ಹೋಗುತ್ತಿದ್ದೆ. ಸ್ಥಳೀಯ ಕ್ಲಬ್‌ಗಳಲ್ಲಿ ಆಡುತ್ತ ಬೆಳೆದೆ. ವೇಗ ಮತ್ತು ಚುರುಕುತನ, ನನ್ನ ಆಟದ ಪ್ರಮುಖ ಅಸ್ತ್ರಗಳಾಗಿದ್ದವು. ಅದರಿಂದ ಜನರು ಬಹಳ ಬೇಗ ಗುರುತಿಸಿದರು. ಮಾಡಿದ್ದ ಸಾಧನೆಗೆ ಬಿನ್ನಿ ಮಿಲ್ಸ್‌ ತಂಡದ ಆಹ್ವಾನ ಸಿಕ್ಕಿತು. ಜೊತೆಗೆ ಬಿನ್ನಿ ಮಿಲ್ಸ್‌ನಲ್ಲಿ ನೌಕರಿಯೂ ಸಿಕ್ಕಿತು.

ADVERTISEMENT

ಗೌತಮಪುರದಿಂದ ಮಿಲ್ಸ್‌ಗೆ 15 ಕಿಲೋಮೀಟರ್. ನಿತ್ಯ ಸೈಕಲ್ ಮೇಲೆ ಕೆಲಸಕ್ಕೆ ಹೋಗುವುದು, ಫುಟ್‌ಬಾಲ್ ಆಡುವುದು ಕಾಯಕವಾಯಿತು. ಎರಡು ವರ್ಷದ ನಂತರ ಎಚ್‌ಎಎಲ್‌ನಲ್ಲಿ ನೌಕರಿ ಲಭಿಸಿತು. ಕಲ್ಲಿಕೋಟೆಯಲ್ಲಿ ನಡೆದ ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಆಗಿನ ಮೈಸೂರು ರಾಜ್ಯ (ಈಗ ಕರ್ನಾಟಕ) ತಂಡವನ್ನು ಪ್ರತಿನಿಧಿಸಿದ್ದೆ. ಎಚ್ಎಎಲ್ ತಂಡಕ್ಕೆ ಆಡುವಾಗಲೇ ಕೋಲ್ಕತ್ತದ ಮೋಹನ್ ಬಾಗನ್ ತಂಡದ ಅವಕಾಶ ಕೈಬೀಸಿ ಕರೆಯಿತು.

ಆಗ ಬಾಗನ್ ತಂಡಕ್ಕೆ ಆಟಗಾರರ ಹುಡುಕಾಟ ನಡೆದಿತ್ತು. ಬೆಂಗಳೂರಿನ ಪಂದ್ಯ ಮುಗಿದ ನಂತರ ತಂಡದ ಅಧಿಕಾರಿಯೊಬ್ಬರು ನನ್ನನ್ನು ಕರೆಸಿ ‘ನಮ್ಮ ತಂಡಕ್ಕೆ ಆಡ್ತೀರಾ. ಕೋಲ್ಕತ್ತಕ್ಕೆ ಬರ್ತಿರಾ’ ಎಂದಾಗ, ಹಿಂದುಮುಂದೆ ಯೋಚಿಸದೇ ಒಪ್ಪಿದೆ. ಒಂದಷ್ಟು ಒಪ್ಪಂದ ಪತ್ರಗಳಿಗೆ ಸಹಿ ಹಾಕಿದೆ. ಅದಾಗಿ ಕೆಲವು ವಾರಗಳವರೆಗೆ ಬೆಂಗಳೂರಿನಲ್ಲಿಯೇ ಇದ್ದೆ.

ಅದೊಂದು ದಿನ ಕೋಲ್ಕತ್ತದಲ್ಲಿ ಆಡುತ್ತಿದ್ದ ಕೆಂಪಯ್ಯ ನಮ್ಮ ಮನೆಗೆ ಬಂದರು. ‘ನಿನ್ನ ಬ್ಯಾಗ್ ರೆಡಿ ಮಾಡಿಕೊಂಡು ನನ್ನ ಜತೆ ಹೊರಡು’ ಎಂದರು. ಅವರೊಂದಿಗೆ ಹೊರಟೆ. ಮೋಹನ್ ಬಾಗನ್ ತಂಡ ವಾಸ್ತವ್ಯ ಮಾಡಿದ್ದ ಹೋಟೆಲ್‌ಗೆ ಕರೆದುಕೊಂಡು ಹೋದರು. ಫುಟ್‌ಬಾಲ್ ಕಿಟ್ ನೀಡಲಾಯಿತು. ಅಲ್ಲಿಂದ ತಂಡವು ಸೀದಾ ಪ್ರಯಾಣಿಸಿದ್ದು ಪೂರ್ವ ಆಫ್ರಿಕಾ ದೇಶಗಳಿಗೆ. ಮೋಹನ್ ಬಾಗನ್ ಅಲ್ಲಿ 25 ಪಂದ್ಯಗಳನ್ನು ಆಡಿತ್ತು. ಎಲ್ಲ ಪಂದ್ಯಗಳಲ್ಲಿಯೂ ನನಗೆ ಅವಕಾಶ ಸಿಕ್ಕಿತ್ತು.

ಅಲ್ಲಿಂದ ಮರಳಿದ ನಂತರ ಬಾಗನ್ ತಂಡದ ಕಾಯಂ ಆಟಗಾರನಾದೆ. ಪ್ರತಿವರ್ಷ ಮೂರು ಸಾವಿರ ರೂಪಾಯಿ ಗೌರವಧನ, ಊಟ ವಸತಿ ಸೌಲಭ್ಯಗಳು ಸಿಗುತ್ತಿದ್ದವು. ವರ್ಷದಲ್ಲಿ ಆರೇಳು ತಿಂಗಳು ಕೋಲ್ಕತ್ತದಲ್ಲಿಯೇ ಇರುತ್ತಿದ್ದೆ. ನನ್ನ ಶ್ರಮಕ್ಕೆ 1962ರಲ್ಲಿ ಫಲ ಸಿಕ್ಕಿತು. ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು. ಪಿ.ಕೆ. ಬ್ಯಾನರ್ಜಿ ಅವರಂತಹ ದಿಗ್ಗಜರೊಂದಿಗೆ ಆಡಿದೆ.

ಭಾರತ ತಂಡವು ಜಕಾರ್ತಾ ಏಷ್ಯನ್ ಗೇಮ್ಸ್‌ಗೆ ಹೊರಡಲು ಸಿದ್ಧವಾಗಿತ್ತು. ಆದರೆ, ಭಾರತ ಸರ್ಕಾರ ಮಾತ್ರ ಹಸಿರು ನಿಶಾನೆ ತೋರಿಸಿರಲಿಲ್ಲ. ‘ಅವರು (ಫುಟ್‌ಬಾಲ್ ತಂಡ) ಹೋಗಿ ಸೋತು ಬರಲು ಸರ್ಕಾರ ಹಣ ಕೊಡಬೇಕೆ? ದುಡ್ಡು ದಂಡ’ ಎಂದು ಸಚಿವರು, ಅಧಿಕಾರಿಗಳು ವ್ಯಂಗ್ಯವಾಡಿದ್ದರು.

ಅಖಿಲ ಭಾರತ ಫುಟ್‌ಬಾಲ್ ಸಂಸ್ಥೆ ಮತ್ತು ಸರ್ಕಾರದ ನಡುವೆ ವಾಗ್ವಾದ ನಡೆಯಿತು. ಕಡೆಗೆ ಸರ್ಕಾರವೇ ಶರಣಾಯಿತು. ತಂಡ ಜಕಾರ್ತಾಕ್ಕೆ ಹೊರಟಿತು. ಟೂರ್ನಿಯ ಎ ಗುಂಪಿನ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡದ ಎದುರು ಭಾರತ 0–2 ಗೋಲುಗಳಿಂದ ಸೋಲನುಭವಿಸಿತು. ಇದು ಸರ್ಕಾರದ ಕಣ್ಣುಗಳನ್ನು ಮತ್ತಷ್ಟು ಕೆಂಪಗಾಗಿಸಿತ್ತು. ತಂಡದ ಮೇಲೆ ಟೀಕೆಗಳ ಸುರಿಮಳೆಯೇ ಆಯಿತು. ಆದರೆ, ನಂತರ ನಡೆದಿದ್ದು ಇತಿಹಾಸ.

ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆದ್ದ ತಂಡ ಟೀಕಾಕಾರರ ಬಾಯಿ ಮುಚ್ಚಿಸಿತು. ಫೈನಲ್‌ ತಲುಪಿ ಭುಜ ತಟ್ಟಿಕೊಂಡಿತು. ಚುನ್ನಿ ಗೋಸ್ವಾಮಿ ನಾಯಕತ್ವದಲ್ಲಿ ಭಾರತ ತಂಡವು ಫೈನಲ್‌ನಲ್ಲಿ 2–1 ರಿಂದ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿತು. ಚಿನ್ನದ ಪದಕದೊಂದಿಗೆ ತಾಯ್ನೆಲಕ್ಕೆ ಮರಳಿ ಅಭಿಮಾನಿಗಳ ಮೆಚ್ಚುಗೆ ಗಳಿಸಿತ್ತು.

1966ರಲ್ಲಿ ನಡೆದ ಏಷ್ಯಾ ಕಪ್ ಫುಟ್‌ಬಾಲ್‌ನಲ್ಲಿ ನಮ್ಮ ತಂಡವು ರನ್ನರ್ಸ್ ಅಪ್ ಆಯಿತು. ಅದೇ ವರ್ಷ ಬ್ಯಾಂಕಾಕ್ ಏಷ್ಯನ್ ಗೇಮ್ಸ್‌ನಲ್ಲಿಯೂ ತಂಡವನ್ನು ಪ್ರತಿನಿಧಿಸಿದ್ದೆ.

***
ಪರಿಚಯ

ಭಾರತ ಫುಟ್‌ಬಾಲ್ ಕ್ಷೇತ್ರದ ಪ್ರಮುಖ ಆಟಗಾರರಲ್ಲಿ ಅರುಮೈನಾಯಗಮ್ ಅವರೂ ಒಬ್ಬರು. 75 ವರ್ಷದ ಅವರು ಬೆಂಗಳೂರಿನ ಹಲಸೂರಿನ ಗುಪ್ತಾ ಬಡಾವಣೆಯಲ್ಲಿ ನೆಲೆಸಿದ್ದಾರೆ. ಅವರ ಮನೆಯ ಗೋಡೆಗೆ ನೇತು ಹಾಕಿರುವ ಕಪ್ಪು ಬಿಳುಪು ಚಿತ್ರಗಳು, ಗಾಜಿನ ಕಪಾಟುಗಳಲ್ಲಿ ಅಲಂಕರಿಸಿಟ್ಟಿರುವ ನೂರಕ್ಕೂ ಹೆಚ್ಚು ಪದಕಗಳು, ಕಪ್‌ಗಳು, ಟ್ರೋಫಿಗಳು ಅವರ ಯಶೋಗಾಥೆಯನ್ನು ಹೇಳುತ್ತವೆ. 1962ರಲ್ಲಿ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ಫುಟ್‌ಬಾಲ್ ತಂಡದ ಫಾರ್ವರ್ಡ್ ಆಟಗಾರರಾಗಿದ್ದವರು. 1966ರ ಏಷ್ಯನ್ ಗೇಮ್ಸ್‌ನಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.