ADVERTISEMENT

ಆರಾಧ್ಯ ಪಾತ್ರ ವೈವಿಧ್ಯ!

ಸತೀಶ ಬೆಳ್ಳಕ್ಕಿ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ಆರಾಧ್ಯ ಪಾತ್ರ ವೈವಿಧ್ಯ!
ಆರಾಧ್ಯ ಪಾತ್ರ ವೈವಿಧ್ಯ!   

‘ಅರ್ಜುನ್ ವೆಡ್ಸ್ ಅಮೃತಾ’ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಕಾಲಿಟ್ಟ ನಟಿ ಆರಾಧ್ಯ ಶೆಟ್ಟಿ ‘ನಿಶ್ಯಬ್ದ 2’ ಚಿತ್ರದಿಂದ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ನೃತ್ಯ, ನಟನೆ ಎರಡರಲ್ಲೂ ಲಾಲಿತ್ಯಪೂರ್ಣವಾಗಿ ತೊಡಗಿಸಿಕೊಳ್ಳುವ ಗುಣ ಹೊಂದಿರುವ ಆರಾಧ್ಯ ಚಿತ್ರರಸಿಕರ ಕಣ್ಮಣಿಯೂ ಹೌದು. ‘ನಿಶ್ಯಬ್ದ 2’ ಸದ್ಯದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ. ಗಾಯಕ ವಿಜಯ್ ಪ್ರಕಾಶ್ ದನಿಯಲ್ಲಿ ಮೂಡಿಬಂದಿರುವ ಈ ಸಿನಿಮಾದ ‘ಒಮ್ಮೆ ನೋಡು’ ಗೀತೆಯನ್ನು ಈಗಾಗಲೇ 50 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ‘ಚಿತ್ರ ಹಾಗೂ ಸಿನಿಮಾದ ಹಾಡುಗಳು ತುಂಬಾ ಚೆನ್ನಾಗಿವೆ’ ಎನ್ನುವ ಆರಾಧ್ಯ ತಮ್ಮ ಹೊಸ ಚಿತ್ರದ ಬಗ್ಗೆ ಸಾಕಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ.

‘ವಿಷ್ಣುವರ್ಧನ್‌ ಅವರು ನಟಿಸಿದ್ದ ನಿಶ್ಯಬ್ದ ಸಿನಿಮಾದ ಮುಂದುವರಿದ ಭಾಗ ನಿಶ್ಯಬ್ದ 2 ಅಲ್ಲ. ಈ ಚಿತ್ರಕ್ಕೂ ಅದಕ್ಕೂ ಸಂಬಂಧವಿಲ್ಲ. ನಮ್ಮ ಸಿನಿಮಾ ಕತೆಗೆ ಆ ಶೀರ್ಷಿಕೆ ಹೆಚ್ಚು ಸೂಕ್ತವಾಗಿ ಹೊಂದುತ್ತಿದ್ದ ಕಾರಣಕ್ಕೆ ನಿಶ್ಯಬ್ದ 2 ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡೆವು. ಈ ಚಿತ್ರದ ಬಗ್ಗೆ ಹೇಳಬೇಕೆಂದರೆ ಇದು ಆ್ಯಕ್ಷನ್‌–ಥ್ರಿಲ್ಲರ್‌ ಸಿನಿಮಾ. ಈ ಸಿನಿಮಾದಲ್ಲಿ ಲವ್ ಕೂಡ ಇದೆ. ಆದರೆ, ಅದು ಚಿತ್ರದ ಒಂದು ಭಾಗ ಅಷ್ಟೇ. ಅದಕ್ಕಿಂತಲೂ ಹೆಚ್ಚಾಗಿ ಆಕ್ಷನ್ ಸನ್ನಿವೇಶಗಳಿವೆ. ರಾಬರಿಯಲ್ಲಿ ತೊಡಗುವಾಗಿನ ಥ್ರಿಲ್ಲಿಂಗ್ ಅಂಶಗಳು ಪ್ರೇಕ್ಷಕರಿಗೆ ಮಜ ಕೊಡುತ್ತವೆ. ಮೂರು ಜನ ಸ್ನೇಹಿತರ ನಡುವೆ ನಡೆಯುವಂತಹ ಕತೆಯನ್ನು ಇಲ್ಲಿ ತೋರಿಸಲಾಗಿದೆ. ಈ ಚಿತ್ರದಲ್ಲಿ ನಾಯಕರಿಗೆ ಸರಿಸಮಾನವಾಗಿ ನಾನೂ ಕೂಡ ಪಾತ್ರ ನಿರ್ವಹಿಸಿದ್ದೇನೆ’ ಎನ್ನುತ್ತಾರೆ ‘ಅರ್ಜುನ್ ವೆಡ್ಸ್ ಅಮೃತಾ’ ಚಿತ್ರದ ಚೆಲುವೆ ಆರಾಧ್ಯ.

ಬೊಗಸೆ ಕಂಗಳ ಹುಡುಗಿ ಆರಾಧ್ಯ ಶೆಟ್ಟಿ ಮಂಗಳೂರಿನವರು. ತುಳು ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಇವರು ಈಗ ಸ್ಯಾಂಡಲ್‌ವುಡ್‌ ಮತ್ತು ಟಾಲಿವುಡ್‌ ಓಣಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸಿ–ಟೌನ್‌ನಿಂದ ಚಂದನವನಕ್ಕೆ ಜಿಗಿದಿರುವ ಅವರನ್ನು ಕನ್ನಡ ಸಿನಿಮಾದಲ್ಲಿ ನಟಿಸಿದ ಅನುಭವ ಭಿನ್ನವಾಗಿತ್ತೇ ಎಂದು ಪ್ರಶ್ನಿಸಿದರೆ ಅವರು ಕೊಟ್ಟ ಉತ್ತರ ಹೀಗಿತ್ತು:

ADVERTISEMENT

‘ತುಳು ನನ್ನ ಮಾತೃಭಾಷೆ. ಹಾಗಾಗಿ, ಕೋಸ್ಟಲ್‌ವುಡ್ ಸಿನಿಮಾಗಳಲ್ಲಿ ಲೀಲಾಜಾಲವಾಗಿ ತೊಡಗಿಸಿಕೊಳ್ಳುತ್ತೇನೆ. ಹಾಗೆಯೇ, ನನಗೆ ಕನ್ನಡ ಭಾಷೆಯೂ ತುಂಬ ಚೆನ್ನಾಗಿ ಬರುತ್ತದೆ. ನಾನು ಮೊದಲ ಬಾರಿ ಕನ್ನಡ ಸಿನಿಮಾದಲ್ಲಿ ನಟಿಸಿದರೂ ಕೂಡ ‘ನಿಶ್ಯಬ್ದ 2’ ಚಿತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡವರೆಲ್ಲರೂ ತುಳುನಾಡಿನವರೇ. ಚಿತ್ರದ ನಾಯಕ ರೂಪೇಶ್ ಶೆಟ್ಟಿ, ನಿರ್ಮಾಪಕ ತಾರನಾಥ ಶೆಟ್ಟಿ, ಕಾರ್ಯನಿರ್ವಾಹಕ ನಿರ್ಮಾಪಕ ನವೀನ್ ಶೆಟ್ಟಿ ಎಲ್ಲರೂ ಮಂಗಳೂರಿನವರೇ. ತುಳು ಭಾಷಿಗರೆಲ್ಲರೂ ಒಂದೆಡೆ ಇದ್ದಿದ್ದರಿಂದ ನನಗೆ ಕನ್ನಡ ಸಿನಿಮಾ ಮಾಡುವಾಗಲೂ ಅಂತಹ ವ್ಯತ್ಯಾಸ ಕಾಣಿಸಲಿಲ್ಲ’.

‘ಅರ್ಜುನ್ ವೆಡ್ಸ್ ಅಮೃತಾ’ ಚಿತ್ರದಲ್ಲಿ ಹೋಮ್ಲಿ ಪಾತ್ರ ನಿರ್ವಹಿಸಿದ್ದ ಆರಾಧ್ಯ ‘ನಿಶ್ಯಬ್ದ 2’ ಚಿತ್ರದಲ್ಲಿ ಅದಕ್ಕೆ ತದ್ವಿರುದ್ಧ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಧೂಮಪಾನ ಮಾಡುವುದನ್ನೂ ಕಲಿಯಬೇಕಾಯಿತಂತೆ. ಹೊಳೆಯುವ ತನ್ನ ತುಟಿಬಟ್ಟಲಿನ ನಡುವೆ ಸಿಗರೇಟು ಇಟ್ಟು ಹೊಗೆ ಬಿಡಬೇಕಾದ ಸನ್ನಿವೇಶವನ್ನು ನಿರ್ವಹಿಸಲು ಅವರು ಸಾಕಷ್ಟು ಟೇಕ್‌ಗಳನ್ನು ತೆಗೆದುಕೊಂಡರಂತೆ. ‘ಈ ಚಿತ್ರದಲ್ಲಿ ನಾನು ಪ್ರಮುಖ ಪಾತ್ರ ನಿರ್ವಹಿಸಿದ್ದು, ಸಾಕಷ್ಟು ಸ್ಕೋಪ್‌ ಕೂಡ ಇದೆ. ಈ ಚಿತ್ರದಲ್ಲಿ ಮಾಡರ್ನ್‌ ಮತ್ತು ತುಂಬ ಬೋಲ್ಡ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ನನ್ನ ಮೊದಲ ಸಿನಿಮಾ ಪಾತ್ರಕ್ಕೂ ಈ ಚಿತ್ರದಲ್ಲಿನ ಪಾತ್ರಕ್ಕೂ ತುಂಬ ವ್ಯತ್ಯಾಸ ಇದೆ. ಈ ಚಿತ್ರದಲ್ಲಿ ನಾನು ಸ್ಮೋಕ್ ಮಾಡುವ ಒಂದು ದೃಶ್ಯ ಇದೆ. ಅದನ್ನು ಮಾಡುವಾಗ ಸ್ವಲ್ಪ ಕಷ್ಟ ಆಯ್ತು. ಏಕೆಂದರೆ, ಎಷ್ಟೇ ಪ್ರಯತ್ನಪಟ್ಟರೂ ರಿಯಲಿಸ್ಟಿಕ್ ಆಗಿ ಮಾಡಲು ಆಗುತ್ತಿರಲಿಲ್ಲ. ನಾನು ಸ್ಮೋಕ್ ಮಾಡುವ ದೃಶ್ಯ ತುಂಬ ಸಹಜವಾಗಿ ಬರಬೇಕು ಎಂದು ನಿರ್ದೇಶಕರು ಬಯಸುತ್ತಿದ್ದ ಕಾರಣಕ್ಕೆ ಸಾಕಷ್ಟು ಟೇಕ್‌ಗಳನ್ನು ತೆಗೆದುಕೊಂಡೆ’ ಎಂದು ನಗು ತುಳುಕಿಸುತ್ತಾರೆ ಆರಾಧ್ಯ.

‘ನಿಶ್ಯಬ್ದ 2’ ಚಿತ್ರದಲ್ಲಿ ಭಿನ್ನ ಪಾತ್ರ ನಿರ್ವಹಿಸಿದ್ದರೂ ಕೂಡ ಆ ಸಿನಿಮಾಕ್ಕೆ ಬೇಕಿರುವ ತಯಾರಿ ಮಾಡಿಕೊಳ್ಳಲು ಆರಾಧ್ಯಗೆ ಸಮಯ ಸಿಗಲಿಲ್ಲವಂತೆ. ಈ ಚಿತ್ರಕ್ಕಾಗಿ ಅವರು ಸೆಟ್‌ನಲ್ಲೇ ತಯಾರಿ ನಡೆಸುತ್ತಿದ್ದರಂತೆ. ಈ ವೇಳೆ ಚಿತ್ರತಂಡದವರು ನೀಡಿದ ಸಹಕಾರ ಅದ್ಭುತ ಎನ್ನುತ್ತಾರೆ ಅವರು.

‘ನಿಶ್ಯಬ್ದ 2’ ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಪ್ರಮೋಷನ್ ಕೂಡ ಶುರುವಾಗಿದೆ. ಅಕ್ಟೋಬರ್ ಕೊನೆ ಅಥವಾ ನವೆಂಬರ್ ಮೊದಲವಾರದಲ್ಲಿ ಸಿನಿಮಾ ತೆರೆಗೆ ಬರಲಿದೆ.

ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಒಂದು ಟೈಟಲ್‌ ಸಾಂಗ್‌. ಮತ್ತೊಂದು ಪಬ್‌ನಲ್ಲಿ ಗೆಳೆಯರೊಂದಿಗೆ ಇರುವ ಸನ್ನಿವೇಶದಲ್ಲಿ ಬರುವ ಎಂಜಾಯ್‌ಮೆಂಟ್‌ ಸಾಂಗ್‌. ಇನ್ನೊಂದು ಡ್ಯುಯೆಟ್‌ ಸಾಂಗ್‌. ವಿಜಯ್‌ ಪ್ರಕಾಶ್‌ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಗೀತೆ ಕೇಳಲು ತುಂಬ ಹಿತವಾಗಿದೆ. ಯೂಟ್ಯೂಬ್‌ಗೆ ಅಪ್‌ಲೋಡ್‌ ಕೆಲವೇ ದಿನಗಳಲ್ಲಿ 50 ಸಾವಿರಕ್ಕೂ ಅಧಿಕ ವ್ಯೂಸ್‌ ಪಡೆದುಕೊಂಡಿದೆ. ವೈಯಕ್ತಿಕವಾಗಿ ಈ ಗೀತೆ ನನಗೆ ತುಂಬ ಇಷ್ಟ’ ಎನ್ನುವ ಆರಾಧ್ಯ ಲವ್‌ ಮತ್ತು ಆ್ಯಕ್ಷನ್‌–ಥ್ರಿಲ್ಲರ್‌ ಕಥಾನಕ ಹೊಂದಿರುವ ‘ನಿಶ್ಯಬ್ದ 2’ ಚಿತ್ರ ಸಿನಿಪ್ರಿಯರಿಗೆ ಭರ್ಜರಿ ರಸದೌತಣ ಉಣಬಡಿಸಲಿದೆ ಎಂಬ ವಿಶ್ವಾಸ ಇದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.