ADVERTISEMENT

ಆಹಾ... ಭೂತಾನ್

ಕ್ಯಾಂಪಸ್ ಕಲರವ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ಚಳಿಗಾಲವೆಂದು ಗೊತ್ತಿದ್ದರೂ ಸಿಕ್ಕಿಮ್‌, ಭೂತಾನ್‌ ಮುಂತಾದೆಡೆ ಅಧ್ಯಯನ ಪ್ರವಾಸಕ್ಕೆಂದು ಹೋಗಿದ್ದೆವು.
ಎಲ್ಲ ವಿಭಾಗದ ವಿದ್ಯಾರ್ಥಿನಿಯರೂ ಇದ್ದುದರಿಂದ ಪ್ರಯಾಣದ ಪ್ರಯಾಸ ಗೊತ್ತೇ ಆಗಿರಲಿಲ್ಲ. ಆದರೆ ಚಳಿಗಾಲದಲ್ಲಿ ಮೈ ಮುದುರುತ್ತಿದ್ದರೂ ಮನಸು ಅರಳುತ್ತಿತ್ತು. ಮಧ್ಯಾಹ್ನ ಮೂರುವರೆಗೆಲ್ಲ ಸಂಜೆಗತ್ತಲು. ಮೈ ಕೊರೆಯುವ ಚಳಿ. ಗರಿಷ್ಠ 9ಡಿ.ಸೆ. ಇದ್ದರೆ ಕನಿಷ್ಠ –9 ಡಿ.ಸೆ. 

ಭೂತಾನ್‌ಗೆ ಕಾಲಿಟ್ಟಾಗ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಏನೆಂಬುದು ಅರ್ಥವಾಗಿದ್ದೇ ಅಲ್ಲಿ.
ಒಬ್ಬರೇ ಒಬ್ಬ ವ್ಯಕ್ತಿ ಜೀನ್ಸ್‌ ಧರಿಸಿದ್ದನ್ನು ಕಾಣಲಿಲ್ಲ. ಹುಡುಗಿಯರೂ ಅಷ್ಟೆ, ಸಾಂಪ್ರದಾಯಿಕ ಉಡುಪುಗಳಲ್ಲಿ ಕಂಗೊಳಿಸುತ್ತಿದ್ದರು.
ಸ್ವಚ್ಛ, ಶುದ್ಧ ಪರಿಶುದ್ಧ ಎಂಬಂಥ ನಗರ ಅದು. ಒಂದೇ ಒಂದು ಕಡೆ ಪ್ಲಾಸ್ಟಿಕ್‌ ಕಾಣಿಸುತ್ತಿರಲಿಲ್ಲ. ಬಳಸುವುದೇ ಇಲ್ಲ.

ಉದ್ದ ಕೂದಲಿನ ಯಾಕ್‌ ಸವಾರಿ ಕೈ ಬೀಸಿ ಕರೆಯುತ್ತಿತ್ತು. ಆದರೆ ಪ್ರವಾಸಿಗರ ಆಸೆ ಅರಿತಂತೆ ಯಾಕ್‌ ಮಾಲೀಕ ‘ಚಿತ್ರಕ್ಕೆ 150’, ‘ಕೂರಲು ಬೇರೆ’, ‘ಸವಾರಿಗೆ ಬೇರೆ’ ಎಂದೆಲ್ಲ ಹೇಳಿದಾಗ, ನಮ್ಮೂರಿನ ಎಮ್ಮೆ, ಎಮ್ಮೆ ಮೇಲಿನ ಅಣ್ಣಾವ್ರ ಹಾಡು ಎಲ್ಲವೂ ನೆನಪಾಗಿ ಸುಮ್ಮನಾದೆವು.

ನಮ್ಮಲ್ಲಿಯೇ ಚಳಿ ತಡೆಯುವ ಶಕ್ತಿ ಇದ್ದವರು ಚೀನಾ ಗಡಿವರೆಗೂ ಹೋಗಿ, ಕಾಂಚನಗಂಗಾ ನೋಡಿ ಬಂದೆವು. ಚಳಿ ತಡೆಯಲಾಗದವರು, ಭೂತಾನ್‌ನಲ್ಲಿಯೇ ಉಳಿದು, ಹಿಮದುಂಡೆ ಮಾಡಿ ಆಟವಾಡಿದರು.

ಹಿಮ ಹಾಸಿನ ಮೇಲೆ ನಡೆಯುವ ಸಂಭ್ರಮಕ್ಕಿಂತಲೂ ನಮ್ಮ ಕಿವಿಗಳನ್ನು ಕಾಪಾಡಿಕೊಳ್ಳುವ ಸಾಹಸವೇ ಹೆಚ್ಚಾಗಿತ್ತು.
ಹೇಳಲೇಬೇಕಾದ ಇನ್ನೊಂದು ಅಂಶವೆಂದರೆ, ಬೆಂಗಳೂರಿನಲ್ಲಿ ಯಾವುದೇ ಬಡಾವಣೆಗೆ ಹೋದರೂ ನಮ್ಮ ದೇಶದ ವೈವಿಧ್ಯಮಯ ಆಹಾರ ರುಚಿಗಳು ದೊರೆಯುತ್ತವೆ. ಆಂಧ್ರ, ಪಂಜಾಬಿ, ಕರ್ನಾಟಕ ಮುಂತಾದ ಎಲ್ಲ ರುಚಿಗಳೂ ದೊರೆಯುತ್ತವೆ. ಭೂತಾನ್‌ನಲ್ಲಿ ಹಾಗಲ್ಲ. ಅಲ್ಲಿ ಊಟಕ್ಕೆ ಮುಖ್ಯ ಖಾದ್ಯವೆಂದರೆ ಎಮಾದಾಶಿ. ಎಮಾ ಎಂದರೆ ಅನ್ನ. ದಾಶಿ ಎಂದರೆ ಹಸಿಮೆಣಸಿನ ಕಾಯಿ.

ಹಸಿಮೆಣಸಿನಕಾಯಿ ಮತ್ತು ಚೀಸ್‌ನಿಂದ ತಯಾರಿಸಿದ ಖಾದ್ಯ ಅದು.

ದಕ್ಷಿಣ ಭಾರತೀಯರಿಗೆ ಅನ್ನ ಇರುವುದರಿಂದ ಸಮಾಧಾನವಾಗಿತ್ತು. ಆದರೆ ಎಮಾದಾಶಿಯ ಹಸಿಮೆಣಸಿನ ಖಾರ, ಚೀಸ್‌ನ ವಿಶೇಷ ರುಚಿ ಎರಡೂ ಹೊಸ ರುಚಿಯನ್ನು ಸ್ವೀಕರಿಸಲು ತಡವೇನಾಗಲಿಲ್ಲ.

ಊಟ, ಉಡುಗೆ, ಶಿಸ್ತು, ಸ್ವಚ್ಛತೆ ಎಲ್ಲದರಲ್ಲಿಯೂ ತಮ್ಮತನವನ್ನು ಒಂದಿನಿತೂ ಕದಡದಂತೆ ಕಾಪಾಡುತ್ತಿರುವ ಈ ಜನರನ್ನು ಕಂಡಾಗ ಅಚ್ಚರಿಯಾಯಿತು. ಕೊನೆಯ ಪಕ್ಷ ಸಾಧ್ಯವಿದ್ದಲ್ಲೆಲ್ಲ ಪರಿಸರವನ್ನು ಪ್ಲಾಸ್ಟಿಕ್‌ ರಹಿತ ಮಾಡುವ ಎಂಬ ಪ್ರೇರಣೆಯನ್ನಂತೂ ಅಲ್ಲಿಂದ ಹೊತ್ತು ತಂದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.