ADVERTISEMENT

ಆ ಕ್ಯಾಲೆಂಡರ್‌ಗಿದು ಕಾಲವಲ್ಲ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST
ಆ ಕ್ಯಾಲೆಂಡರ್‌ಗಿದು ಕಾಲವಲ್ಲ
ಆ ಕ್ಯಾಲೆಂಡರ್‌ಗಿದು ಕಾಲವಲ್ಲ   

ಡಿಸೆಂಬರ್ ತಿಂಗಳ ಕೊನೆ ವಾರದಲ್ಲಿ ಮನೆಗೆ ಬರುವ `ವಿಶೇಷ ಅತಿಥಿ~ಯ ಆತಿಥ್ಯಕ್ಕೆ ಮನೆಮಂದಿಯೆಲ್ಲಾ ಸಿದ್ಧರಾಗಿ ಕುಳಿತಿರುವ ಕಾಲವೊಂದಿತ್ತು. ಅದರಲ್ಲೂ ಮಕ್ಕಳು ಕಪ್ಪು ಅಂಕಿಗಳ ನಡುವೆ ಕಾಣಿಸುವ ಕೆಂಪು ಬಣ್ಣಗಳಿಗಾಗಿ ಹುಡುಕಾಡುತ್ತಿದ್ದರು. ಈ ವರ್ಷ ಎಷ್ಟು ರಜೆ, ಯಾವ ಸರ್ಕಾರಿ ರಜೆ ಭಾನುವಾರ ಬಂದು ಮತ್ತೊಂದು ರಜೆ ಕೈತಪ್ಪಿತು ಎಂದು ಪರಿತಪಿಸುವ, ಎಲ್ಲಿ ಶನಿವಾರದಿಂದ ಸೋಮವಾರದವರೆಗೆ ರಜೆ ಸಿಗುತ್ತದೆ ಎಂದು ಲೆಕ್ಕಾಚಾರ ಮುಗಿಯುತ್ತಲೇ ಹೊಸ ವರ್ಷ ಕಳ್ಳಬೆಕ್ಕಿನಂತೆ ಕಾಲಿಡುತ್ತಿತ್ತು.

ಆ `ವಿಶೇಷ ಅತಿಥಿ~ಗೆ ಇಂದು ಬಹಳಷ್ಟು ಮನೆಗಳಿಗೆ ಪ್ರವೇಶವಿಲ್ಲ, ಇದ್ದರೂ ಸ್ಟಾಕ್‌ರೂಮ್ ಇಲ್ಲವೇ, ರೀಡಿಂಗ್ ರೂಮ್‌ಗಷ್ಟೇ ಸೀಮಿತ. ಸದಾ ಕೈಯಲ್ಲಿ ಮೊಬೈಲು ಹಿಡಿದು ಓಡಾಡುವ ಮಂದಿಗೆ ಒಂದು ಬಟನ್‌ನಲ್ಲಿ, ಲ್ಯಾಪ್‌ಟಾಪ್, ಐಪಾಡುಗಳ ಸ್ಕ್ರೀನ್ ಸೇವರ್‌ನಲ್ಲೇ ಸಿಗುವ ಕ್ಯಾಲೆಂಡರ್‌ಗಳೇ ಪ್ರಿಯ. ಯಾವುದೇ ಕೋಣೆಯ ಗೋಡೆಗೆ ತೂಗುಹಾಕಿರುವ ಪಟ್ಟಿಯಲ್ಲಿ ದಿನ ಹುಡುಕುವ ವ್ಯವಧಾನವಾದರೂ ಎಲ್ಲಿ?

`ಸಾಮಾನ್ಯವಾಗಿ ಡಿ.15ರಿಂದ ಜ.15ರವರೆಗೆ ಕ್ಯಾಲೆಂಡರ್ ವ್ಯಾಪಾರ ಬಿರುಸು ಪಡೆದುಕೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕ್ಯಾಲೆಂಡರ್ ಕೊಳ್ಳುಗರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಪ್ರತಿನಿತ್ಯ ಐದರಿಂದ ಆರು ಸಾವಿರದವರೆಗೆ ನಡೆಯುತ್ತಿದ್ದ ವ್ಯಾಪಾರ ಇಂದು ಎರಡು ಸಾವಿರಕ್ಕೆ ಬಂದು ನಿಂತಿದೆ. ಅದನ್ನೇ ನಂಬಿಕೊಂಡು ವ್ಯಾಪಾರ ನಡೆಸಲು ಇಂದು ಸಾಧ್ಯವೇ ಇಲ್ಲ. ದಿನಭವಿಷ್ಯ, ರಾಶಿ, ನಕ್ಷತ್ರ ಮೊದಲಾದ ಜಾತಕ ಸಂಬಂಧಿ ಮಾಹಿತಿಗಳುಳ್ಳ ಕ್ಯಾಲೆಂಡರ್‌ಗಳು ಮಾತ್ರ ಸಣ್ಣ ಮಾರುಕಟ್ಟೆಯಲ್ಲಿ ಒಂದಷ್ಟು ಬೇಡಿಕೆ ಉಳಿಸಕೊಂಡಿವೆ~ ಎನ್ನುತ್ತಾರೆ ಕೋರಮಂಗಲದ ವ್ಯಾಪಾರಿ ದಿನೇಶ್.

ಗ್ರಾಹಕರನ್ನು ಆಕರ್ಷಿಸಲು ಪ್ರತಿ ತಿಂಗಳ ಪುಟದಲ್ಲೂ ದೇವರ ಚಿತ್ರ ಪ್ರಕಟಿಸಲು ಆರಂಭಿಸಿತು. ಕ್ರಮೇಣ ಆ ಸ್ಥಳವನ್ನು ಚಿತ್ರಕಲೆ, ಉತ್ತಮ ಫೊಟೋಗ್ರಫಿ, ಪರಿಸರ, ಹಕ್ಕಿಯ ಚಿತ್ರಗಳು, ಜಾಹಿರಾತುಗಳು ಆಕ್ರಮಿಸಿಕೊಂಡವು. ಇತರ ಪ್ರಕಾರಗಳಿಗೆ ಹೋಲಿಸಿದರೆ ದೇವರ ಚಿತ್ರವಿರುವ ಕಾಲೆಂಡರ್‌ಗಳು ಇಂದಿಗೂ ಬೇಡಿಕೆ ಉಳಿಸಿಕೊಂಡಿದೆ ಎಂಬುದು ಮಧ್ಯಮ ವರ್ಗದ ವ್ಯಾಪಾರಿಗಳ ಅಭಿಮತ.

 ಇನ್ನು ಕೆಲವು ಕಾರ್ಪೊರೇಟ್ ಕಂಪೆನಿಗಳು ಪ್ರಚಾರದ ಉದ್ದೇಶದಿಂದ ಉಚಿತವಾಗಿ ಕಾಲೆಂಡರ್‌ಗಳನ್ನು ಹಂಚಲು ಆರಂಭಿಸಿದ್ದು ಖರೀದಿಸುವವರ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗಲು ಕಾರಣವಾಯಿತು. ಬ್ಯಾಂಕ್‌ಗಳೂ ತಮ್ಮ ಗ್ರಾಹಕರಿಗೆ ಉಚಿತವಾಗಿ ಕ್ಯಾಲೆಂಡರ್ ಹಂಚಲಾರಂಭಿಸಿದವು. ಡಿಜಿಟಲ್ ಕ್ಯಾಲೆಂಡರ್‌ಗಳು ದಿನಾಂಕ, ವಾರ, ಸಮಯ, ಹವಾಮಾನದ ಮಾಹಿತಿಯನ್ನು ಒಂದೇ ಪಟ್ಟಿಯಲ್ಲಿ ತೋರಿಸುವ ಮುಖಾಂತರ ಭಿತ್ತಿದರ್ಶಿಕೆಯ ಅನಿವಾರ್ಯತೆಯನ್ನು ಕಡಿಮೆಗೊಳಿಸಿದವು. ಅದರೊಂದಿಗೆ ಟೇಬಲ್ ಕ್ಯಾಲೆಂಡರ್‌ಗಳು ಟೇಬಲ್‌ನ ಮೂಲೆಯೊಂದರಲ್ಲಿ ಸ್ಥಾನ ಪಡೆದು ಗೋಡೆಯ ಅನಿವಾರ್ಯವನ್ನು ದೂರತಳ್ಳಿದವು.

ಪೇಪರ್ ಪ್ಯಾಶನ್ ಉತ್ಪಾದಿಸುವ ಕಾಲೆಂಡರ್‌ಗಳು ಇಂದಿಗೂ ಮಾರುಕಟ್ಟೆಯಲ್ಲಿ ಮೊದಲ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. `ಮೋಟಿವೇಶನಲ್ ರಿಫ್ಲೆಕ್ಷನ್~ ಹೆಸರಿನಲ್ಲಿ ನೀಡುವ ಪ್ರೇರಣಾ ವಾಕ್ಯಗಳು ಇಂದಿಗೂ ಕೊಳ್ಳುಗನಿಗೆ ಪ್ರಿಯವಾಗಿಯೇ ಉಳಿದಿದೆ. ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಕುಂಬ್ಳೆ ಸಹೋದರರ `ಕೆಆರ್‌ಒಬಿ~ ಕ್ಯಾಲೆಂಡರ್‌ಗಳು ಪ್ರಾಣಿ -ಪಕ್ಷಿಗಳ ಆಕರ್ಷಕ ಚಿತ್ರ ಪ್ರಕಟಿಸಿ ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾಗಿವೆ ಎನ್ನುತ್ತಾರೆ ಉದ್ಯಮಿ ಆತ್ಮರಾಮ್.

ಗೋಡೆ ಕಾಲೆಂಡರ್‌ಗಿಂತ ಟೇಬಲ್ ಬಳಿಯೇ ಇಟ್ಟುಕೊಳ್ಳುವುದನ್ನು ಗ್ರಾಹಕರು ಹೆಚ್ಚು ಇಷ್ಟ ಪಡುತ್ತಾರೆ ಎಂಬುದನ್ನು ಒಪ್ಪಿಕೊಳ್ಳುವ ಅವರು ಕಳೆದ ವರ್ಷಕ್ಕಿಂತ ಈ ವರ್ಷದ ವ್ಯಾಪಾರದಲ್ಲಿ ತುಸು ಚೇತರಿಕೆ ಇದೆ. ಕೆಲವಷ್ಟು ಪ್ರಾಣಿ ಪ್ರೀತಿ ತೋರುವ ಎನ್‌ಜಿಒಗಳು ನಾಯಿ-ಬೆಕ್ಕು ಮೊದಲಾದ ಸಾಕು ಪ್ರಾಣಿಗಳ ಚಿತ್ರ ಬಳಸಿ ತಯಾರಿಸುವ ಕ್ಯಾಲೆಂಡರ್‌ಗಳಿಗೂ ಒಂದಷ್ಟು ಬೇಡಿಕೆ. ಇನ್ನು ನಗರದಲ್ಲಿ ಉತ್ತಮ ಎನ್ನಬಹುದಾದ ಯಾವುದೇ ಕ್ಯಾಲೆಂಡರ್ ತಯಾರಿಸುವ ಕಂಪೆನಿಗಳಿಲ್ಲ, ವಿದೇಶಗಳಲ್ಲಿ ಒಬ್ಬ ಉದ್ಯಮಿ ನೂರಾರು ವಿನ್ಯಾಸಗಳಲ್ಲಿ ಪ್ರಯೋಗ ನಡೆಸಿದರೆ ಇಲ್ಲಿನವರು ಎರಡಕ್ಕೇ ಸೀಮಿತಗೊಳಿಸಿದ್ದಾರೆ ಎನ್ನುತ್ತಾರೆ.

ತಂತ್ರಜ್ಞಾನದ ಪೈಪೋಟಿಯ ಮಧ್ಯೆ ಬೇಡಿಕೆ ಕಳೆದುಕೊಳ್ಳುತ್ತಿರುವ ಉದ್ಯಮಗಳಲ್ಲಿ ಇದೂ ಒಂದು. ಮಧ್ಯಮ ವರ್ಗ ಅಸ್ತಿತ್ವದಲ್ಲಿರುವ ತನಕ ಉದ್ಯಮಕ್ಕೆ ಮುಚ್ಚುವ ಅನಿವಾರ್ಯ ಉಂಟಾಗದು ಎಂಬ ಭರವಸೆ ಅನೇಕ ಉದ್ಯಮಿಗಳದ್ದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.