ADVERTISEMENT

ಆ ಪ್ರೀತಿಯೂ... ಆ ಅಕ್ಕರೆಯೂ!

ಕೆ.ಓಂಕಾರ ಮೂರ್ತಿ
Published 15 ಮೇ 2012, 19:30 IST
Last Updated 15 ಮೇ 2012, 19:30 IST
ಆ ಪ್ರೀತಿಯೂ... ಆ ಅಕ್ಕರೆಯೂ!
ಆ ಪ್ರೀತಿಯೂ... ಆ ಅಕ್ಕರೆಯೂ!   

`ಆ ದಿನವಿನ್ನೂ ನನ್ನ ಮನಸ್ಸಿನಿಂದ ಕದಲಿಲ್ಲ. ಅದು 1994ರ ಸೆಪ್ಟೆಂಬರ್. ಹತ್ತನೇ ತರಗತಿ ಓದುತ್ತಿದ್ದ ನಾನು ಚಾಮರಾಜಪೇಟೆಯಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಅಶ್ರಯ ಪಡೆದಿದ್ದೆ. ಆಗಲೇ ಕ್ರಿಕೆಟ್ ನೋಡೊ ಹುಚ್ಚು ಮೀತಿ ಮೀರಿತ್ತು.

ಕ್ರಿಕೆಟ್ ನೋಡಲು ಗೆಳೆಯನೊಂದಿಗೆ ಸಮೀಪದ ಮನೆಯೊಂದಕ್ಕೆ ಹೋಗಿದ್ದೆ. ಆದರೆ ಅವರು ಮನೆಯೊಳಗೆ ಬಿಡಲಿಲ್ಲ. ಕಿಟಿಕಿಯಿಂದಲೇ ಇಣುಕಿ ಪಂದ್ಯ ವೀಕ್ಷಿಸಿದ್ದೆವು.

ಆಸ್ಟ್ರೇಲಿಯಾ ವಿರುದ್ಧ ಕೊಲಂಬೊದಲ್ಲಿ ನಡೆದ ಆ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಚೊಚ್ಚಲ ಶತಕ ಗಳಿಸಿದ್ದರು. ಅಲ್ಲಿಂದ ಸಚಿನ್ ಅವರ ಪರಮ ಅಭಿಮಾನಿ ಆದೆ. ಅವರನ್ನು ಆರಾಧಿಸುತ್ತಾ ಬಂದೆ~

-ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯ ವೀಕ್ಷಿಸಲು 1650 ರೂಪಾಯಿ ಮೌಲ್ಯದ ಟಿಕೆಟ್‌ಗೆ ಐದು ಸಾವಿರ ನೀಡಿ ಬ್ಲ್ಯಾಕ್‌ನಲ್ಲಿ ಖರೀದಿಸಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಸುಘೋಷ್ ಬ್ಯಾಟಿಂಗ್ ಮಾಂತ್ರಿಕ ಸಚಿನ್ ಆಟದ ಮೇಲೆ ಪ್ರೀತಿ ಶುರುವಾದ ಪರಿಯನ್ನು ವಿವರಿಸುತ್ತಾ ಹೋದರು.

ಸುಘೋಷ್ ಒಬ್ಬರೇ ಅಲ್ಲ, ಸಾವಿರಾರು ಮಂದಿ ಅಭಿಮಾನಿಗಳು ಸಚಿನ್ ಆಟ ನೋಡಲೆಂದೇ ಕ್ರೀಡಾಂಗಣಕ್ಕೆ ಬಂದಿದ್ದರು. ಅದಕ್ಕೆ ಸಾಕ್ಷಿ 40 ಸಾವಿರಕ್ಕೂ ಅಧಿಕ ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣ.

ಉದ್ಯಾನ ನಗರಿಯಲ್ಲಿ ನಡೆದ ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದ ಶ್ರೇಯಕ್ಕೆ ಈ ಪಂದ್ಯ ಸಾಕ್ಷಿಯಾಯಿತು. ಅವರಲ್ಲಿ ಪುಟಾಣಿ ಮಕ್ಕಳು, ಯುವತಿಯರು, ಯುವಕರು, ಅಜ್ಜ ಅಜ್ಜಿಯಂದಿರೂ ಇದ್ದರು.

`ಸಚಿನ್ ಚೆನ್ನಾಗಿ ಆಡಲಿ, ಆರ್‌ಸಿಬಿ ಗೆಲ್ಲಲಿ~ ಎಂದು ಫಲಕ ಹಿಡಿದು ಪ್ರಾರ್ಥಿಸುವವರೂ ಇಲ್ಲಿದ್ದರು! ಮತ್ತೊಬ್ಬನ ಕೈಲಿ `ದೇವರು ಬಂದಿದ್ದಾರೆ, ತೊಂದರೆ ಕೊಡಬೇಡ ಮಳೆಯೇ~ ಎಂಬ ಪೋಸ್ಟರ್ ಇತ್ತು. ಇವರಲ್ಲಿ ಹೆಚ್ಚಿನವರು ಚಾಲೆಂಜರ್ಸ್ ಅಭಿಮಾನಿಗಳು. ಆದರೆ ಸಚಿನ್ ಆಟ ನೋಡಲು ಅವರ ಮನಸ್ಸು ಹಾಗೂ ಹೃದಯ ತುಡಿಯುತ್ತಿತ್ತು.

ಈ ಪಂದ್ಯಕ್ಕೆ ನಾಲ್ಕು ದಿನಗಳ ಮೊದಲೇ ಟಿಕೆಟ್ `ಸೋಲ್ಡ್‌ಔಟ್~ ಎಂಬ ಫಲಕ ಹಾಕಿ ಸಂಘಟಕರು ಕೈ ತೊಳೆದುಕೊಂಡು ಬಿಟ್ಟಿದ್ದರು. ಆದರೆ ಅಭಿಮಾನಿಗಳ ಅಲೆದಾಟ ಮಾತ್ರ ತಪ್ಪಿರಲಿಲ್ಲ. ಬೆಳಗಾವಿ, ಹುಬ್ಬಳ್ಳಿ, ಮಂಗಳೂರಿನಿಂದಲೂ ಈ ಪಂದ್ಯ ವೀಕ್ಷಿಸಲು ಬಂದಿದ್ದರು.

ನಗರದಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳೂ, ಉದ್ಯೋಗದಲ್ಲಿರುವ ಬೇರೆ ಬೇರೆ ರಾಜ್ಯದವರೂ ಟಿಕೆಟ್‌ಗಾಗಿ ಪರದಾಡುತ್ತಿದ್ದರು. 330 ರೂ. ಟಿಕೆಟ್‌ಅನ್ನು ಬ್ಲ್ಯಾಕ್‌ನಲ್ಲಿ ಎರಡು ಸಾವಿರಕ್ಕೆ ಮಾರುತ್ತಿದ್ದದ್ದು ಕಂಡುಬಂತು. ಮಧ್ಯಾಹ್ನದ ವೇಳೆಗೆ ಅದು ಮತ್ತಷ್ಟು ಹೆಚ್ಚಾಗಿತ್ತು.

`ತೆಂಡೂಲ್ಕರ್ ನನ್ನ ಫೇವರಿಟ್ ಹೀರೊ. ಅವರನ್ನು ಪ್ರತ್ಯಕ್ಷವಾಗಿ ನೋಡಬೇಕು ಎಂಬುದು ನನ್ನ ಕನಸಾಗಿತ್ತು. ಅದನ್ನು ಗೆಳತಿಯರ ಬಳಿ ಹೇಳಿಕೊಂಡಿದ್ದೆ. ಚಾಲೆಂಜ್ ಕೂಡ ಮಾಡಿದ್ದೆ. ನೋಡಿ ನನ್ನ ಕನಸು ಎಷ್ಟು ಬೇಗ ನಿಜವಾಯಿತು~ ಎಂದಿದ್ದು ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿರುವ ನೇಹಾ. ಅವರು ತಮ್ಮ ಸಂಬಂಧಿಕರೊಬ್ಬರ ಸಹಾಯದಿಂದ ಪಾಸ್ ಪಡೆದು ಪಂದ್ಯ ವೀಕ್ಷಿಸಲು ಆಗಮಿಸಿದ್ದರು.

ಪಾಸ್‌ಗಳಿಗಾಗಿ ರಾಶಿ ರಾಶಿ ಪತ್ರಗಳು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬಂದಿದ್ದವು. ರಾಜಕಾರಣಿಗಳು, ಐಐಎಸ್ ಅಧಿಕಾರಿಗಳು, ಪೊಲೀಸರು, ಸಿನಿಮಾದವರಿಂದಲೂ ಬೇಡಿಕೆ ಇತ್ತು. ಹಾಗಾಗಿ ಸಂಘಟಕರು ತಮ್ಮ ಮೊಬೈಲ್ `ಸ್ವಿಪ್ ಆಫ್~ ಮಾಡಿಕೊಂಡಿದ್ದರು.

`ಇಲ್ಲಿ ನಡೆದ ಹಿಂದಿನ ಯಾವುದೇ ಪಂದ್ಯಗಳಿಗೆ ಇಷ್ಟೊಂದು ಬೇಡಿಕೆ ಇರಲಿಲ್ಲ. ಆದರೆ ಸಚಿನ್ ಬರುತ್ತಾರೆ ಎಂಬ ಕಾರಣಕ್ಕೆ ಬಾರಿ ಬೇಡಿಕೆ ಬಂದಿದೆ~ ಎಂದು ಹೇಳಿದ್ದು ಸಂಸ್ಥೆಯ ಆಡಳಿತ ಸಮಿತಿ ಸದಸ್ಯ ವಿಜಯ್ ಭಾರದ್ವಾಜ್.

ಆದರೆ ಸಚಿನ್ ಮೊದಲ ಎಸೆತದಲ್ಲಿಯೇ ಔಟ್ ಆಗಿದ್ದು ಅಷ್ಟೂ ಮಂದಿಯ ನಿರಾಸೆಗೆ ಕಾರಣವಾಯಿತು. ನಿಧಾನವಾಗಿ ಮನೆಯತ್ತ ಹೆಜ್ಜೆ ಇಡಲು ಶುರು ಮಾಡಿದರು. ಆರ್‌ಸಿಬಿ ಸೋತಿದ್ದೂ ಅವರಿಗೆ ಅಷ್ಟೊಂದು ಬೇಸರ ಉಂಟು ಮಾಡಿರಲಿಕ್ಕಿಲ್ಲ. ಮುಂಬೈ ಇಂಡಿಯನ್ಸ್ ಗೆಲುವಿನ ಬಗ್ಗೆಯೂ ಅವರು ತಲೆ ಕೆಡಿಸಿಕೊಂಡಿರುವುದಿಲ್ಲ!
ನಿಜ, ತೆಂಡೂಲ್ಕರ್ ಆಟಕ್ಕೆ ಯಾವುದೇ ಗಡಿ ಇಲ್ಲ. ಸಚಿನ್ ಆಟವನ್ನು ಅವರ ಶತ್ರುಗಳೂ ಇಷ್ಟಪಡುತ್ತಾರೆ.

ಪಾಕಿಸ್ತಾನದಲ್ಲಿ ಪಂದ್ಯವಿರಲಿ, ಆಸ್ಟ್ರೇಲಿಯಾದಲ್ಲಿಯೇ ಆಡಲಿ. ಅಭಿಮಾನಿಗಳಿಗೆ ಕೊರತೆ ಇಲ್ಲ. ಕ್ರೀಡಾಂಗಣಗಳು ತುಂಬಿ ತುಳುಕುತ್ತಿರುತ್ತವೆ. ಅವರಾಟದ ಆ ಸೊಬಗು ನೋಡುಗರನ್ನು ಹಿಡಿದಿಡುತ್ತದೆ.

ಸಚಿನ್ ಕ್ರೀಸ್‌ನಲ್ಲಿದ್ದಾಗ ಕ್ರಿಕೆಟ್ ಎಷ್ಟೊಂದು ಸುಂದರ ಆಟ ಎಂಬ ಭಾವನೆಯನ್ನು ಉಕ್ಕಿಸುತ್ತದೆ. ಅದೆಷ್ಟೊ ಅಭಿಮಾನಿಗಳಲ್ಲಿ ಸ್ಫೂರ್ತಿ ತುಂಬುತ್ತದೆ.

ಸಚಿನ್‌ಗೆ ಕೂಡ ಬೆಂಗಳೂರೆಂದರೆ ಇಷ್ಟ. ಕೋರಮಂಗಲದಲ್ಲಿ ರೆಸ್ಟೋರೆಂಟ್‌ವೊಂದರ ಪಾಲುದಾರಿಕೆಯನ್ನು ಸಚಿನ್ ಹೊಂದಿದ್ದಾರೆ ಎಂಬ ಸುದ್ದಿಯೂ ಇದೆ. ಈಗಾಗಲೇ ಮುಂಬೈನಲ್ಲಿ ಅವರು ಎರಡು ರೆಸ್ಟೋರೆಂಟ್ ಹೊಂದಿದ್ದಾರೆ. ಕೋಲಾರದ ಬಳಿ ಇರುವ ಗಾಲ್ಫ್ ರೆಸಾರ್ಟ್‌ನಲ್ಲಿ ಒಂದು ವಿಲ್ಲಾ ಖರೀದಿಸಿದ್ದಾರೆ ಕೂಡ.

`ತೆಂಡೂಲ್ಕರ್ ಹೆಸರು ಕೇಳಿದ್ರೆ ನನಗೆ ಏನೋ ಒಂಥರಾ ಖುಷಿ. ಎಷ್ಟೊಂದು ಪ್ರಸಿದ್ಧಿ ಹೊಂದಿದ್ದಾರೆ. ಆದರೂ ಎಷ್ಟೊಂದು ಸರಳ ಅಲ್ವಾ? ಅವರನ್ನು ನೋಡಿದ್ರೆ ಯಾವತ್ತೂ ಸಿಟ್ಟೇ ಮಾಡ್ಕೊಬಾರದು ಅನಿಸುತ್ತೆ. ಪ್ರತಿ ಟೀಕೆಗಳಿಗೆ ಏನಾದರೂ ಸಾಧನೆ ಮಾಡಿಯೇ ಉತ್ತರ ಕೊಡಬೇಕು ಎಂಬ ಸ್ಫೂರ್ತಿ ಬರುತ್ತೆ~ ಎಂದಿದ್ದು ಕಿರುತೆರೆಯ ನಟಿ ಮೈತ್ರಿ.
ಸಚಿನ್ ಮೇಲಿನ ಅವರ ಪ್ರೀತಿ, ಅವರ ಈ ಅಕ್ಕರೆಗೆ ಏನೆಂದು ಹೆಸರಿಡಬಹುದು ಹೇಳಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.