ADVERTISEMENT

‘ಆ ಭ್ರಾತೃತ್ವ ಈಗ ಕಾಣೆ’

ರೋಹಿಣಿ ಮುಂಡಾಜೆ
Published 14 ಜೂನ್ 2017, 5:04 IST
Last Updated 14 ಜೂನ್ 2017, 5:04 IST
ಮಿಲ್ಲರ್ಸ್‌ ರಸ್ತೆಯ ಮಸ್ಜಿದ್‌ – ಇ– ಖಾದ್ರಿಯಾ ಮಸೀದಿ ಮುಂಭಾಗದಲ್ಲಿ ಮೊಹಮ್ಮದ್‌ ಅತಾರುಲ್ಲಾ ಷರೀಫ್‌                                                        ಚಿತ್ರಗಳು ಮತ್ತು ವಿಡಿಯೊ: ಸತೀಶ್‌ ಬಡಿಗೇರ
ಮಿಲ್ಲರ್ಸ್‌ ರಸ್ತೆಯ ಮಸ್ಜಿದ್‌ – ಇ– ಖಾದ್ರಿಯಾ ಮಸೀದಿ ಮುಂಭಾಗದಲ್ಲಿ ಮೊಹಮ್ಮದ್‌ ಅತಾರುಲ್ಲಾ ಷರೀಫ್‌ ಚಿತ್ರಗಳು ಮತ್ತು ವಿಡಿಯೊ: ಸತೀಶ್‌ ಬಡಿಗೇರ   

ಕೋಲಾರದಿಂದ 1979ರಲ್ಲಿ ಬೆಂಗಳೂರಿಗೆ ಬಂದಾಗ ಈ ಮಹಾನಗರದ ಬಗ್ಗೆ ನನಗೆ ಅಷ್ಟೇನೂ ಗೊತ್ತಿರಲಿಲ್ಲ. ಅಷ್ಟು ದಿನ ನಮ್ಮೂರಿನಲ್ಲಿ ಶಾಲೆ, ಕಾಲೇಜು ಅಂತ ಕಳೆದಿದ್ದೆ. ನಾನು ಬೆಂಗಳೂರಿಗೆ ಬಂದದ್ದು ಕಾನೂನು ಪದವಿ ಪಡೆಯುವ ಉದ್ದೇಶದಿಂದ.   ಕೆಎಎಸ್‌ ಪರೀಕ್ಷೆಯನ್ನೂ ಬರೆದೆ. ಅದರೊಂದಿಗೆ ವಿದೇಶಾಂಗ ವ್ಯವಹಾರ, ಆರ್ಥಿಕತೆ, ರಾಜಕೀಯ ಶಾಸ್ತ್ರ ಹೀಗೆ ಹಲವು ಆಯಾಮಗಳಲ್ಲಿ ನನ್ನ ಓದುವ ಹವ್ಯಾಸ ವಿಸ್ತರಿಸಿಕೊಂಡಿತು. ನನ್ನೊಳಗಿನ ಪುಸ್ತಕ ಪ್ರಜ್ಞೆಗೆ ಬೆಂಗಳೂರು ಸಾಣೆ ಹಿಡಿಯಿತು.

ಕಬ್ಬನ್‌ ಪಾರ್ಕ್‌ನಲ್ಲಿರುವ ಸೆಂಟ್ರಲ್‌ ಲೈಬ್ರರಿಯಲ್ಲಿ ನಾನು ನೂರಾರು ಪುಸ್ತಕಗಳನ್ನು ಓದಲು ಸಾಧ್ಯವಾಯಿತು. ಹೀಗೆ ಜ್ಞಾನದ ಬೆಳಕು ಕೊಟ್ಟ ಈ ನಗರಕ್ಕೆ ನಾನು ಆಭಾರಿ.

ಕೋಲಾರದಿಂದ ಬಂದಾಗ ನಾನು ಕಂಡ ಬೆಂಗಳೂರು ಮತ್ತು ಈಗಿನ ಬೆಂಗಳೂರಿಗೆ ಅಜಗಜಾಂತರ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಗಣನೀಯವಾಗಿ ಬದಲಾಗಿದ್ದನ್ನು ಗಮನಿಸಿದ್ದೇನೆ. ಈಗಿನಂತೆ ಜಾತಿ, ಧರ್ಮದ ದೃಷ್ಟಿಕೋನದಿಂದ ಯಾರೂ  ಯಾರನ್ನೂ ಆಗ ಕಾಣುತ್ತಿರಲಿಲ್ಲ. ಯಾವುದೇ ಕೋಮಿನವರೇ ಆಗಿದ್ದರೂ ಮಾತುಕತೆಯಲ್ಲಿ ಭ್ರಾತೃತ್ವದ ಭಾವ ಇರುತ್ತಿತ್ತು. ಈಗ ಅದನ್ನು ಕಾಣೆ. ಮಾನವೀಯ ಸಂಬಂಧಗಳಿಗೆ ಕೊಡುತ್ತಿದ್ದ ಮೌಲ್ಯವಂತೂ ಸಂಪೂರ್ಣ ಮರೆಯಾಗಿದೆಯೇನೋ ಅನಿಸುತ್ತಿದೆ.

ADVERTISEMENT

ಬೆಂಗಳೂರಿನಲ್ಲಿ ಆಗ ಹಳ್ಳಿಯ ಕಳೆ ಇತ್ತು. ಅಲ್ಲೊಂದು ಇಲ್ಲೊಂದು ಮನೆಗಳಿದ್ದವು. ನಡೆದಾಡಲು ಬೇಕಾದಷ್ಟು ಜಾಗ ಎಲ್ಲೆಂದರಲ್ಲಿ ಇರುತ್ತಿತ್ತು. ನನಗಂತೂ ನಡೆದುಕೊಂಡು ಹೋಗುವುದೆಂದರೆ ನನ್ನೂರಿನಲ್ಲಿ ಅಡ್ಡಾಡಿದಷ್ಟೇ ಆನಂದ. ಒಂದೊಂದು ಬೀದಿಯಲ್ಲೂ ಅಡ್ಡಾಡುತ್ತಾ   ಪರಿಸರವನ್ನು, ಪ್ರದೇಶವನ್ನು ಅರ್ಥ ಮಾಡಿಕೊಂಡು ಎಷ್ಟೋ ದೂರ ನಡೆದು ಹೋಗುತ್ತಿದ್ದೆ.  ಕೋಲಾರದಿಂದ ಬಂದವನೇ ಕಲಾಸಿಪಾಳ್ಯ ಬಳಿಯ ಗೋಡೌನ್‌ ಸ್ಟ್ರೀಟ್‌ನಲ್ಲಿ ಒಂದು ಕೊಠಡಿಯಲ್ಲಿ ವಾಸವಾಗಿದ್ದೆ. ಮದುವೆಯಾದ ಬಳಿಕ ಆರ್.ಟಿ. ನಗರದಲ್ಲಿ ಮನೆ ಮಾಡಿದೆ. ಆಗಲೂ ಸಿಟಿ ಮಾರ್ಕೆಟ್‌ವರೆಗೂ ನಡೆದೇ ಹೋಗುತ್ತಿದ್ದೆ. ರಸ್ತೆಗಳು ಅಷ್ಟು ನಿರಾಳವಾಗಿರುತ್ತಿದ್ದವು.

ಚಾಮರಾಜಪೇಟೆ, ಗೋರಿಪಾಳ್ಯ, ಹನುಮಂತನಗರ, ಶಿವಾಜಿನಗರ, ಕಲಾಸಿಪಾಳ್ಯ, ಆರ್‌.ಟಿ.ನಗರ, ಜಯನಗರ, ಸಂಜಯನಗರದಲ್ಲೆಲ್ಲಾ ಎಷ್ಟೋ ದಿನ ಕಾಲ್ನಡಿಗೆಯಲ್ಲೇ ಸುತ್ತಾಡಿದ್ದೆ. ಯಾವಾಗ ಜನಪ್ರವಾಹ ಹೊರಗಿನ ರಾಜ್ಯಗಳಿಂದ ಬೆಂಗಳೂರಿನತ್ತ ಪ್ರವಹಿಸಲು ಶುರುವಾಯಿತೋ ಜನವಸತಿ ಪ್ರದೇಶ ಬೆಳೆಯುತ್ತಾ ಬಂತು. ನನಗಿನ್ನೂ ನೆನಪಿದೆ, ಬೆಂಗಳೂರಿನಲ್ಲಿ ಕಾಣಸಿಗುತ್ತಿದ್ದ ಕೂಲಿ ಕಾರ್ಮಿಕರಲ್ಲಿ  ಬಹುತೇಕರು ತಮಿಳುನಾಡಿನವರಾಗಿರುತ್ತಿದ್ದರು. ಸ್ವಲ್ಪ ಮಟ್ಟಿಗೆ ಆಂಧ್ರದವರೂ ಇರುತ್ತಿದ್ದರು. ಆದರೆ ಕನ್ನಡಿಗರ ಪ್ರಾಬಲ್ಯ  ಕಡಿಮೆಯಾಗಿರಲಿಲ್ಲ. ಈಗ ಕನ್ನಡಿಗರಿಗಿಂತ ಹೊರ ರಾಜ್ಯದವರನ್ನೇ ಕಾಣುತ್ತೇವೆ.

ಮಾನವೀಯ ಮೌಲ್ಯಗಳು ಕಡಿಮೆಯಾಗಿರುವುದಕ್ಕೆ ನಾನು ಕಂಡುಕೊಂಡ ಕಾರಣ ಅಪಾರ್ಟ್‌ಮೆಂಟ್‌ ಸಂಸ್ಕೃತಿ.ಮತ್ತೊಂದು ಮುಖ್ಯ ಅಂಶ ಈ ನಗರದಲ್ಲಿ 80ರ ದಶಕದಿಂದೀಚೆ ನಾನು ಗಮನಿಸಿದಂತೆ ಧಾರ್ಮಿಕತೆಯಲ್ಲಿನ ಪಲ್ಲಟ. ಮಸೀದಿಗಳು, ಮಂದಿರಗಳು, ಚರ್ಚ್‌ಗಳು ಈಗ ತುಂಬಾ ತುಂಬಾ ಜಾಸ್ತಿಯಾಗ್ತಿವೆ. ಮೂರೂ ಪ್ರಾರ್ಥನಾ ಮಂದಿರಗಳಿಗೆ ಭೇಟಿ ಕೊಡುವವರ ಸಂಖ್ಯೆ ಬಹಳ ಹೆಚ್ಚಾಗಿದೆ. ಈಗ ಯುವಜನರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ಪಾಲ್ಗೊಳ್ಳುತ್ತಿದ್ದಾರೆ. ಹಾಗಂತ ತಮ್ಮ ಧರ್ಮದ ಸೂಕ್ಷ್ಮಗಳನ್ನು ಅವರು ಅರಿತುಕೊಂಡಿದ್ದಾರೆ ಅಂತಲ್ಲ!

ನನಗಿನ್ನೂ ನೆನಪಿದೆ. ಇದೇ ಆರ್.ಟಿ.ನಗರದ ಖಾದ್ರಿಯಾ ಮಸೀದಿಗೆ ಬೆಳಗಿನ ಜಾವದ ನಮಾಜ್‌ಗೆ ವಯಸ್ಸಾದವರು  ಮಾತ್ರ ಬರುತ್ತಿದ್ದರು. ಈಗ ಮಕ್ಕಳು ಮತ್ತು  ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹಾಗಂತ ‘ಯುವಜನರಲ್ಲಿ ಧರ್ಮದ ಬಗ್ಗೆ ನಂಬಿಕೆ ಹೆಚ್ಚಾಗುತ್ತಿದೆ, ಧಾರ್ಮಿಕ ಕಟ್ಟುಪಾಡುಗಳನ್ನು ಹೆಚ್ಚು ಪಾಲಿಸುತ್ತಿದ್ದಾರೆ’ ಎಂದಲ್ಲ. ಧಾರ್ಮಿಕ ನಂಟಿಗಿಂತ (ಅಟ್ಯಾಚ್‌ಮೆಂಟ್‌) ಆಕರ್ಷಣೆ (ಅಟ್ರ್ಯಾಕ್ಷನ್‌) ಹೆಚ್ಚುತ್ತಿದೆ. ಇದಕ್ಕೊಂದು ಉದಾಹರಣೆ ಕೊಡುತ್ತೇನೆ.

ನಾವು ತೀರಾ ಇತ್ತೀಚಿನ ವರ್ಷಗಳವರೆಗೂ ಹಬ್ಬಗಳಂದು ದೊಡ್ಡ ಮೈದಾನಗಳಲ್ಲಿ ಸಮಾವೇಶಗೊಂಡು ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದೆವು. ರಂಜಾನ್‌ ಇರಲಿ, ಮಿಲಾದ್‌ ಇರಲಿ. ಮೆರವಣಿಗೆಗಳಲ್ಲಿ ಮೈಕ್‌ ಕಟ್ಟುವ, ನೃತ್ಯ ಮಾಡುವ ಕ್ರಮ ಇರಲಿಲ್ಲ. ಯಾಕೆಂದರೆ ಇದು ಇಸ್ಲಾಂ ಪ್ರಕಾರ ನಿಷಿದ್ಧ.

ಆದರೆ ‘ಹಿಂದೂ ಯುವಕರು ಗಣೇಶ ಹಬ್ಬಕ್ಕೆ  ದೊಡ್ಡದಾಗಿ ಮೆರವಣಿಗೆ ಮಾಡುತ್ತಾರೆ. ಅದಕ್ಕೆ ನಾವೂ ಮಾಡಬೇಕು, ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು’ ಎಂಬ ಧೋರಣೆ ಹೆಚ್ಚಾಗುತ್ತಿದೆ. ಇದು ಇಸ್ಲಾಂ ಅಥವಾ ಪ್ರವಾದಿ ಮಹಮ್ಮದರು ಹೇಳಿರುವ ಧರ್ಮಪರಿಪಾಲನೆಯ ಮಾರ್ಗ ಅಲ್ಲ.

80ರ ದಶಕದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವಾತಾವರಣವನ್ನು ಕಾಣಲು ಖುಷಿಯಾಗುತ್ತಿತ್ತು. ಇನ್ನು, ನಾನು ಆಗ ಕಂಡ ಹಳೆ ಬೆಂಗಳೂರಿನ ಹವಾಮಾನ ಇನ್ನೆಂದೂ ಕಾಣಲು ಸಾಧ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ಪರಿಶುದ್ಧವಾದ ಗಾಳಿ ಹಳ್ಳಿಯನ್ನು ನೆನಪಿಸುತ್ತಿತ್ತು. ವಾಯುಮಾಲಿನ್ಯ ಅಂದರೆ ಏನೆಂದೇ  ಜನರಿಗೆ ಗೊತ್ತಿರಲಿಲ್ಲ. ಈಗ ನಮಗೆ ಪ್ರತಿ ಉಸಿರಾಟದಲ್ಲೂ ಕಲುಷಿತ ಗಾಳಿಯೇ ಸಿಗುತ್ತಿದೆ. ಇದರ ಪರಿಣಾಮ ಕಾಯಿಲೆಗಳು ಜಾಸ್ತಿಯಾಗುತ್ತಿವೆ. ಕಾಯಿಲೆಗಳೆಂದ ಮೇಲೆ ಆಸ್ಪತ್ರೆಗಳೂ ಹೆಚ್ಚಲೇಬೇಕಲ್ಲ? ಅಂದರೆ ಬೆಂಗಳೂರು ಎಲ್ಲಾ ರೀತಿಯಿಂದಲೂ ಕಮರ್ಷಿಯಲ್‌ ಆಗುತ್ತಾ ಬಂದಿರುವುದನ್ನು ನಾನು ಇಷ್ಟೆಲ್ಲಾ ನಿದರ್ಶನಗಳ ಮೂಲಕ ವಿವರಿಸಿದೆ.*

***

ಜಮಾತೆ ಅಂದರೆ...
ಮುಸಲ್ಮಾನರು ಇತರ ಸಮುದಾಯಗಳೊಂದಿಗೆ ಸಾಮರಸ್ಯದಿಂದ ಬಾಳ್ವೆ ಮಾಡಲು ಪೂರಕವಾದ ಸಾಮಾಜಿಕ ವಾತಾವರಣ ಕಟ್ಟಿಕೊಡುವ ಹೊಣೆಗಾರಿಕೆ ಜಮಾತೆ ಇಸ್ಲಾಮಿ ಹಿಂದ್‌ ಸಂಘಟನೆಯದ್ದು. ಹಾಗೆಯೇ ಇತರ ಸಮುದಾಯದವರಿಗೆ ಇಸ್ಲಾಂ ಬಗ್ಗೆ, ಕುರ್ಆನ್ ಬಗ್ಗೆ, ಮುಸಲ್ಮಾನರ ಬಗ್ಗೆ ಸದ್ಭಾವನೆ ಮೂಡಿಸುವುದೂ ಜಮಾತೆ ಜವಾಬ್ದಾರಿ.

ನಾನು ಬೆಂಗಳೂರಿಗೆ ಬಂದ ಮೇಲೆ ಜಮಾತೆ ಇಸ್ಲಾಮಿ ಹಿಂದ್‌ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ. ಆ ವೇಳೆ ನನಗೆ ಹಲವಾರು ಸಮಾನ ಮನಸ್ಕ ಸಂಘಟನೆಗಳು ಮತ್ತು ವ್ಯಕ್ತಿಗಳ ಪರಿಚಯವಾಯಿತು. ಕ್ರಮೇಣ ಜಮಾತೆಯ ಮುಖ್ಯವಾಹಿನಿಗೆ ಪ್ರವೇಶ ಪಡೆದೆ. ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ ಬಳಿಕ ಈಗ ನಾನು ಜಮಾತೆಯ ಕರ್ನಾಟಕ ವಲಯದ ಅಧ್ಯಕ್ಷನಾಗಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.