ADVERTISEMENT

ಇಂದಿನಿಂದ ಬೆಂಗಳೂರು ವಿಜ್ಞಾನೋತ್ಸವ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST
ಬೆಂಗಳೂರು ವಿಜ್ಞಾನ ಉತ್ಸವದಲ್ಲಿ ಸಿ.ಎನ್‌.ಆರ್‌. ರಾವ್‌ ಅವರೊಂದಿಗೆ ಎಚ್‌. ನರಸಿಂಹಯ್ಯ
ಬೆಂಗಳೂರು ವಿಜ್ಞಾನ ಉತ್ಸವದಲ್ಲಿ ಸಿ.ಎನ್‌.ಆರ್‌. ರಾವ್‌ ಅವರೊಂದಿಗೆ ಎಚ್‌. ನರಸಿಂಹಯ್ಯ   

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಜ್ಞಾನ ಒಂದು ಬಾಹ್ಯಾಕಾಶದ್ದು ಮತ್ತೊಂದು ವೈದ್ಯಕೀಯದ್ದು. ಬಾಹ್ಯಾಕಾಶ ವಿಜ್ಞಾನ ಅಭಿವೃದ್ಧಿ ಹೊಂದುತ್ತ ಹೋದಂತೆ ಮನುಕುಲದ ಅಭಿವೃದ್ಧಿಯೂ ಸಾಗಿರುವುದನ್ನು ವಿಶ್ವ ನೋಡುತ್ತಿದೆ.

ಆದರೆ ಇದೇ ಮಾತನ್ನು ವೈದ್ಯಕೀಯ ವಿಜ್ಞಾನದ ವಿಚಾರದಲ್ಲಿ ಆತ್ಮವಿಶ್ವಾಸದಿಂದ ಹೇಳಲು ಬೇಕಾದ ಧೈರ್ಯ ಇಲ್ಲ. ವೈದ್ಯಕೀಯ ವಿಜ್ಞಾನ ಬೆಳೆಯುತ್ತ ಹೋದಂತೆ ರೋಗ-ರುಜಿನದ ಮಜಲುಗಳೂ ಬೆಳೆಯುತ್ತಿವೆ. ಹಾಗೆಂದೇ ಆಧುನಿಕ ವೈದ್ಯಕೀಯ ವರವೇ ಅಥವಾ ಶಾಪವೇ ಎಂದು ಕೇಳಬೇಕಾದ ಪರಿಸ್ಥಿತಿ ಎದುರಾಗಿದೆ.

ಹೌದು, ಆಧುನಿಕ ವೈದ್ಯಕೀಯ ವರವೇ ಶಾಪವೇ ಎಂಬ ಕುರಿತಾದ ಉಪನ್ಯಾಸವೂ ಸೇರಿದಂತೆ ಹತ್ತಾರು ಬಗೆಯ ವಿಜ್ಞಾನ ಮತ್ತು ವೈಜ್ಞಾನಿಕ ವಿಷಯ ಕುರಿತಂತೆ ತಿಳಿವಳಿಕೆ ನೀಡುವ ಬೆಂಗಳೂರು ವಿಜ್ಞಾನೋತ್ಸವ ಇಂದಿನಿಂದ (ಜಲೈ 1ರಿಂದ) ಬರೋಬ್ಬರಿ ಒಂದು ತಿಂಗಳ ಕಾಲ ನಡೆಯಲಿದೆ.

ವಿಜ್ಞಾನದ ವಿವಿಧ ಶಾಖೆಗಳನ್ನು ಕುರಿತ ಉಪನ್ಯಾಸ, ಪ್ರಾತ್ಯಕ್ಷಿಕೆ, ವಿಜ್ಞಾನ ಸಂಬಂಧಿ ಚಲನಚಿತ್ರ ಪ್ರದರ್ಶನ ಮುಂತಾದವು ಈ ಉತ್ಸವದಲ್ಲಿ ಜನರ ಅರಿವಿನ ವಿಸ್ತಾರಕ್ಕೆಂದೇ ಪ್ರಸ್ತುತಗೊಳ್ಳಲಿವೆ.

‘ಯಾವುದನ್ನೂ ಪ್ರಶ್ನಿಸದೆ ನಂಬಬೇಡ’ ಎನ್ನುವುದು ವಿಜ್ಞಾನದ ಸೂತ್ರ. ವಿಜ್ಞಾನ ಶುರುವಾಗುವುದು ಪ್ರಶ್ನೆಯಿಂದ. ವಿಜ್ಞಾನದಲ್ಲಿ ಈ ಉತ್ತರವೇ ಅಂತಿಮ ಎಂದಿಲ್ಲ. ಹಾಗಾಗಿ, ಯಾವುದೇ ಸಂಶೋಧನೆ ಪ್ರಶ್ನೆಯನ್ನು ಮುಂದಿಟ್ಟು ತತ್ಕಾಲಕ್ಕೆ ಕೊನೆಗೊಳ್ಳುತ್ತದೆ.

ತಮ್ಮ ಬದುಕನ್ನೇ ವೈಜ್ಞಾನಿಕ ಪರಿಶೋಧಗಳಿಗೆ ಒಡ್ಡಿಕೊಂಡ ಡಾ. ಎಚ್. ನರಸಿಂಹಯ್ಯ 1962ರಲ್ಲಿ ಸ್ಥಾಪಿಸಿ 54 ವರ್ಷದ ಬಳಿಕ ಇಂದಿಗೂ ಕ್ರಿಯಾಶೀಲವಾಗಿರುವ ಬೆಂಗಳೂರು ವಿಜ್ಞಾನ ವೇದಿಕೆ ಆಶ್ರಯದಲ್ಲಿ 39ನೇ ವಿಜ್ಞಾನೋತ್ಸವ ಬಸವನಗುಡಿ ನ್ಯಾಷನಲ್ ಕಾಲೇಜಿನ ಆವರಣದಲ್ಲಿ ಪ್ರತಿ ದಿನ ಸಂಜೆ 6ಕ್ಕೆ ನಡೆಯಲಿದೆ.

ಜುಲೈ 31ರಂದು ಸಮಾಪನಗೊಳ್ಳಲಿರುವ ಈ ಬಾರಿಯ ಉತ್ಸವದಲ್ಲಿ ‘ಮುಪ್ಪು, ಮರಣವನ್ನು ಮುಂದೂಡಬಹುದೇ?’ ಎಂಬ ಸ್ವಾರಸ್ಯಕರ ವಿಷಯದ ಮೇಲೂ ಉಪನ್ಯಾಸವಿದೆ. ದಿನವೂ ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ಬರುವ ಜಾಹೀರಾತನ್ನು ನಂಬಬಹುದಾದರೆ ಮುಪ್ಪನ್ನೂ ಮುಂದೂಡಬಹುದು, ಮರಣವನ್ನೂ ಜೈಸಬಹುದು! ಆದರೆ ವಾಸ್ತವ ಬೇರೆಯೇ ಇದೆ. ಇದನ್ನು ಸಾಮಾನ್ಯರಿಗೂ ಸರಳವಾಗಿ ಅರ್ಥ ಮಾಡಿಸುವ ರೀತಿಯಲ್ಲಿ ವಿಜ್ಞಾನ ಹೇಳುತ್ತದೆ.
 

ಡಾ.ಎಚ್ಚೆನ್ ಕಾಲಾನಂತರದಲ್ಲಿ ವಿಜ್ಞಾನ ವೇದಿಕೆಯ ಅಧ್ಯಕ್ಷರಾಗಿರುವ ಡಾ.ಎ.ಎಚ್. ರಾಮರಾವ್ ಹೇಳುವಂತೆ ದೇಶದೇಶಾಂತರದ ಖ್ಯಾತಿವೆತ್ತ ವಿಜ್ಞಾನಿಗಳು ಇಲ್ಲಿಗೆ ಬಂದು ತಮ್ಮ ಜ್ಞಾನವನ್ನು ಸ್ಥಳೀಯರ ಮುಂದೆ ಹಂಚಿಕೊಂಡಿದ್ದಾರೆ.

ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಡಾ.ಸಿ.ವಿ. ರಾಮನ್ ಮತ್ತು ಡಾ.ನಿಗೇಶಿ, ಭಾರತರತ್ನ ಡಾ.ಸಿ.ಎನ್.ಆರ್. ರಾವ್, ಇಸ್ರೋ ಅಧ್ಯಕ್ಷ ಡಾ.ಕಿರಣ್ ಕುಮಾರ್ (ಇವರು ಇದೇ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯೂ ಹೌದು),

ADVERTISEMENT

ಬಾಹ್ಯಾಕಾಶ ವಿಜ್ಞಾನಿಗಳಾದ ಪ್ರೊ.ಯು.ಆರ್.ರಾವ್, ಡಾ. ಕಸ್ತೂರಿರಂಗನ್, ಅಣು ವಿಜ್ಞಾನಿ ಡಾ. ರಾಜಾರಾಮಣ್ಣ, ಡಾ.ಸತ್ಯಜಿತ್ ಮೇಯರ್, ಡಾ.ಜಿ. ಪದ್ಮನಾಭನ್ ಮುಂತಾದ ನೂರಾರು ವಿಜ್ಞಾನಿಗಳು ತಮ್ಮ ವಿಚಾರಧಾರೆಯನ್ನು ಹಂಚಿಕೊಂಡಿರುವ ಮಹಿಮರು.   

ಆ ವಿಜ್ಞಾನಿಗಳೆಲ್ಲರ ಜ್ಞಾನ ದಾಸೋಹಕ್ಕೆ ವೇದಿಕೆಯಾಗಿ ಬೆಂಗಳೂರು ವಿಜ್ಞಾನ ವೇದಿಕೆ ಕೆಲಸ ಮಾಡಿದೆ. ಕಳೆದ 38 ವರ್ಷಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಬಂದು ಈ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಈ ಬಾರಿಯೂ ಜನ ಅದೇ ಉತ್ಸಾಹದಲ್ಲಿ ಉತ್ಸವದಲ್ಲಿ ಭಾಗವಹಿಸುತ್ತಾರೆಂಬ ವಿಶ್ವಾಸ ರಾಮರಾಯರದು.

ಬೆಂಗಳೂರು ವಿಜ್ಞಾನ ಉತ್ಸವದಲ್ಲಿ ಇಂದು: ಉಪನ್ಯಾಸ–ಡಾ.ಎಸ್‌. ಸೀತಾರಾಮ ಅಯ್ಯಂಗಾರ್. ವಿಷಯ– ‘ಡಾಟಾ ಸೆಂಟರ್ಸ್‌ ಆ್ಯಂಡ್‌ ಕ್ಲೌಡ್‌’ ಸ್ಥಳ–ಡಾ.ಎಚ್.ಎನ್‌. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ. ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.