ಇಂಗ್ಲಿಷ್ ಭಾಷೆಯ ಕ್ರಿಯೇಟೀವ್ ಪದಕ್ಕೆ ಸಂಸ್ಕೃತದ ಕ್ರಿಯೆ ಎಂಬ ಪದವನ್ನು ಸೇರಿಸಿ ‘ಕ್ರಿಯೇಟಿವ್ (kriyative) ಥಿಯೇಟರ್’ ಎಂಬ ಹೆಸರಲ್ಲಿ ಪ್ರಾರಂಭವಾದ ಸಂಸ್ಥೆ, ರಂಗಭೂಮಿ ಮೂಲಕ ಸಾಮಾಜಿಕ ಬದಲಾವಣೆ ತರುವ ನಾಟಕಗಳನ್ನು ಲೋಕಕ್ಕೆ ಸಮರ್ಪಿಸುತ್ತಾ ಬಂದಿದೆ.
ನಾಟಕಗಳು ಕೇವಲ ಮನರಂಜನೆಯ ಸಾಧನವಾಗದೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮಾಧ್ಯಮವಾಗಬೇಕು. ಅಶ್ಲೀಲ ಸಂಭಾಷಣೆ ಹಾಗೂ ಕೆಳಮಟ್ಟದ ಹಾಸ್ಯ ಇಲ್ಲದಂತೆ ಕುಟುಂಬ ಸಮೇತರಾಗಿ ಬಂದು ವೀಕ್ಷಿಸುವ ನಾಟಕಗಳನ್ನು ಮಾತ್ರ ನಿರ್ಮಿಸುವ ಉದ್ದೇಶದಿಂದ ಪ್ರಾರಂಭವಾದ ಕ್ರಿಯೇಟಿವ್ ಥಿಯೇಟರ್ 16ನೇ ವಾರ್ಷಿಕೋತ್ಸವ ಆಚರಿಸುತ್ತಿದೆ.
ಉತ್ತಮ ಸಂದೇಶಗಳನ್ನು ನೀಡುವ ನಾಟಕಗಳನ್ನು ನಿರ್ಮಿಸಿ, ದೇಶ ವಿದೇಶಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿ, ಜನಪ್ರಿಯವಾಗಿರುವ ಬೆಂಗಳೂರಿನ ಕ್ರಿಯೇಟಿವ್ ಥಿಯೇಟರ್, 16ನೇ ವಾರ್ಷಿಕೋತ್ಸವದ ಅಂಗವಾಗಿ ಇದೇ 11ರಿಂದ 16ರವರೆಗೆ ನಗರದ ರಂಗಶಂಕರದಲ್ಲಿ 6 ದಿನಗಳ ‘ಷೋಡಶಿ’ ನಾಟಕೋತ್ಸವವನ್ನು ಏರ್ಪಡಿಸಿದೆ.
ಹದಿನಾರು ವರ್ಷಗಳಲ್ಲಿ ಸಂಸ್ಥೆ ನಿರ್ಮಿಸಿರುವ 16 ನಾಟಕಗಳು 600 ಯಶಸ್ವಿ ಪ್ರದರ್ಶನ ಕಂಡಿವೆ. ಅವುಗಳಲ್ಲಿ ಅತ್ಯುತ್ತಮವಾದ ಆರು ನಾಟಕಗಳನ್ನು ಈ ‘ಷೋಡಶಿ’ ನಾಟಕೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ. ಉತ್ತಮ ಸಂದೇಶಗಳಿರುವ ನಾಟಕಗಳನ್ನು ವೀಕ್ಷಿಸುವ ಸುವರ್ಣಾವಕಾಶವನ್ನು ಬೆಂಗಳೂರಿಗರಿಗೆ ಕಲ್ಪಿಸಲಾಗಿದೆ.
ರಂಗಭೂಮಿ ಕಲಾವಿದೆ ಲಕ್ಷ್ಮೀ ಚಂದ್ರಶೇಖರ್ ಅವರ ಕನಸಿನ ಕೂಸಾದ ಕ್ರಿಯೇಟಿವ್ ಥಿಯೇಟರ್ 1998ರಲ್ಲಿ ಪ್ರಾರಂಭವಾಯಿತು. ನಗರದ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯ ಪ್ರಾಧ್ಯಾಪಕಿಯಾಗಿದ್ದ ಅವರು, ಸಮ್ಮೇಳನವೊಂದಕ್ಕಾಗಿ 1998ರಲ್ಲಿ ಅಮೆರಿಕೆಗೆ ಹೋಗಬೇಕಾಯಿತು. ಆಗ ಅಲ್ಲಿ ‘ಹೆಣ್ಣಲ್ಲವೇ’ ಎಂಬ ರೂಪಕವನ್ನು ಪ್ರದರ್ಶಿಸಲಾಯಿತು. ಪರಿಪೂರ್ಣವಲ್ಲದ ಮೊದಲ ಏಕರೂಪ ರಂಗ ಪ್ರದರ್ಶನಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು.
ಅಂದು ಅಮೆರಿಕದಲ್ಲಿ ನಾಟಕ ಪ್ರದರ್ಶನಕ್ಕೆ ಅಲ್ಲಿನ ವೀಕ್ಷಕರು 10 ನಿಮಿಷಗಳವರೆಗೆ ಚಪ್ಪಾಳೆಯ ಮಳೆಗರೆದರು. ಇದರಿಂದ ಪ್ರೇರಿತರಾದ ಲಕ್ಷ್ಮೀ ನಂತರ ತಮ್ಮದೇ ಆದ ರಂಗಭೂಮಿ ತಂಡವನ್ನು ಕಟ್ಟಲು ನಿರ್ಧರಿಸಿದರು. ಅದಕ್ಕೆ ತಕ್ಕಂತೆ ಬೆಳಕು ವಿನ್ಯಾಸಗಾರರಾಗಿ ಮುದ್ದಣ್ಣ ರಟ್ಟೆಹಳ್ಳಿ, ಸಂಗೀತ ನಿರ್ದೇಶಕರಾಗಿ ಗಜಾನನ ಟಿ. ನಾಯ್ಕ ಹಾಗೂ ಮೇಕಪ್ ಕಲಾವಿದರಾಗಿ ರಾಮಕೃಷ್ಣ ಕನ್ನರಪಾಡಿ ಜತೆಗೂಡಿದರು.
ನಾಲ್ಕು ಮಂದಿಯ ತಂಡ 16 ವರ್ಷಗಳಲ್ಲಿ ಇಂಗ್ಲಿಷ್ ಹಾಗೂ ಕನ್ನಡದ ನಾಟಕಗಳನ್ನು ನಿರ್ಮಿಸಿ ಪ್ರದರ್ಶಿಸಿದರು. ‘ಹೆಣ್ಣಲ್ಲವೇ’, ‘ಸಿಂಗಾರೆವ್ವ ಮತ್ತು ಅರಮನೆ’, ‘ಆದದ್ದೆಲ್ಲ ಒಳಿತೇ’, ‘ಕಿತ್ತಳೆಮನೆ ಕಾವೇರಿ’ ನಾಟಕಗಳನ್ನು ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಿಸಿ, ಪ್ರದರ್ಶಿಸಲಾಯಿತು. ನಂತರ ಕನ್ನಡದಲ್ಲಿ ‘ಗುಂಡಾಯಣ’, ‘ದುಸ್ಥಿನ್ ಬಾಯಿ’, ‘ರತ್ನನ್ ಪರ್ಪಂಚ’, ‘ಸಾಹೇಬರ ಸರ್ಕೀಟು’ ನಾಟಕಗಳನ್ನು ನಿರ್ಮಿಸಿದ್ದಾರೆ.
‘ಮೊದಲು ಹೆಣ್ಣಿನ ಮೇಲಿನ ದೌರ್ಜನ್ಯಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಾಟಕಗಳನ್ನು ನಿರ್ಮಿಸಿದ ನಮ್ಮ ತಂಡ ಈಗ ಪರಿಸರ ಮಾಲಿನ್ಯ ಹಾಗೂ ಜಾಗತೀಕರಣದ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಾಟಕಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದೆ. ಕಳೆದ ಎರಡು ವರ್ಷಗಳಿಂದ ಈ ವಿಷಯ ಕುರಿತಂತೆ ನಾಟಕ ರಚಿಸಲು ತಯಾರಿ ನಡೆದಿದ್ದು, ಆದಷ್ಟು ಬೇಗ ಅದನ್ನು ಲೋಕಕ್ಕೆ ಸಮರ್ಪಿಸಲಾಗುವುದು’ ಎಂದು ಲಕ್ಷ್ಮೀ ಚಂದ್ರಶೇಖರ್ ಸಂತೋಷದಿಂದ ಹೇಳುತ್ತಾರೆ.
‘ಶಾಲೆಯಲ್ಲಿ ಓದುವಾಗಲೇ ರಂಗಭೂಮಿ ಬಗ್ಗೆ ಅಪಾರ ಒಲವು ಹೊಂದಿದ್ದ ನನಗೆ ವಿವಾಹವಾದ ನಂತರವೂ ಅದನ್ನು ಮುಂದುವರಿಸಲು ಕುಟುಂಬದಿಂದ ಬೆಂಬಲ ದೊರೆತಿದೆ. ಇದರಿಂದಾಗಿಯೇ ಇಂದು ನನ್ನ ಕನಸಿನ ಕೂಸು 16 ನೇ ವರ್ಷಕ್ಕೆ ಕಾಲಿಟ್ಟಿದೆ’ ಎಂದು ಸಂತಸ ವ್ಯಕ್ತಪಡಿಸಿದ ಲಕ್ಷ್ಮೀ ಅವರು ನಾಟಕ ನೋಡಲು ಬರುವಂತೆ ಆಹ್ವಾನವಿತ್ತರು.
ನಿತ್ಯ ಸಂಜೆ 5ರಿಂದ 7ರವರೆಗೆ ರಂಗಭೂಮಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿಚಾರ ಸಂಕಿರಣ ಹಾಗೂ ರಂಗಭೂಮಿಗೆ ಸಂಬಂಧಪಟ್ಟ ವಸ್ತುಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಈ ನಾಟಕೋತ್ಸವದಲ್ಲಿ ನಾಟಕ ವೀಕ್ಷಿಸಲು ಬರುವ ವೀಕ್ಷಕರು ಮಂಗಳವಾರದಿಂದ ಶುಕ್ರವಾರದ ಮಧ್ಯಾಹ್ನದ ಪ್ರದರ್ಶನಗಳಿಗೆ 50 ರೂಪಾಯಿ ಹಾಗೂ ಉಳಿದ ಪ್ರದರ್ಶನಗಳಿಗೆ 100 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದ್ದು, ವಿಚಾರಸಂಕಿರಣಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಪ್ರದರ್ಶನ ವೇಳೆ ಮಧ್ಯಾಹ್ನ 3.30, ಸಂಜೆ 7.30
ಫೆ.11: ಗುಂಡಾಯಣ
ಫೆ.12 : ಸಿಂಗಾರೆವ್ವ ಮತ್ತು ಅರಮನೆ
ಫೆ.13 : ರತ್ನನ್ ಪರ್ಪಂಚ
ಫೆ.14: ಕಿತ್ತಳೆಮನೆ ಕಾವೇರಿ
ಫೆ.15: ಆದದ್ದೆಲ್ಲಾ ಒಳಿತೇ
ಫೆ.16: ಸಾಹೇಬರ ಸರ್ಕೀಟು
ಟಿಕೆಟ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
kriyativetheatre@gmail.com <mailto:kriyativetheatre@gmail.com>, www.kriyativetheatre.wordpress.com <http://www.kriyativetheatre.wordpress.com/>, www.indianstage.in <http://www.indianstage.in/>
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.