ಜನರು ಬೇಸಿಗೆ ದಾಹ ನೀಗಿಸಿಕೊಳ್ಳಲು ಐಸ್‌ಕ್ರೀಂ ಪಾರ್ಲರ್‌ಗಳಿಗೋ, ಜ್ಯೂಸ್ ಸೆಂಟರ್‌ಗಳಿಗೋ ಮುಗಿಬೀಳುತ್ತಿರುವ ಹೊತ್ತಿದು. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿಯ `ನಂದಿನಿ~ ಕೂಡ ಈಗ ನಾಲಗೆಯನ್ನು ತಣ್ಣಗಾಗಿಸಲು ಸಿದ್ಧಗೊಂಡಿದೆ. `ನಂದಿನಿ ಕೂಲ್ ಜಾಯಿಂಟ್~ ಹೆಸರಿನ ಐಸ್‌ಕ್ರೀಂ ಪಾರ್ಲರ್ ಸೋಮವಾರ ನಗರಕ್ಕೆ ಸೇರ್ಪಡೆಯಾಗಿದೆ.
ಬೆಂಗಳೂರು ನಂದಿನಿ ಡೇರಿಯು ರಾಜ್ಯದಲ್ಲೇ ತೆರೆದಿರುವ ಮೊದಲ ಹೈಟೆಕ್ ಐಸ್‌ಕ್ರೀಂ ಪಾರ್ಲರ್ ಇದು. ನಾಲ್ಕು ಗುಣಮಟ್ಟದ ಹಾಲು, ತುಪ್ಪ, ಐಸ್‌ಕ್ರೀಂ ಅಷ್ಟೇ ಅಲ್ಲದೇ ಪಿಜ್ಜಾ, ದೋಸೆಯೂ ಲಭ್ಯ. ಎಣ್ಣೆ ಬಳಸದೆ ಶುದ್ಧ ನಂದಿನಿ ಬೆಣ್ಣೆ ಹಾಗೂ ತುಪ್ಪದಿಂದ ತಯಾರಿಸಿದ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ.
`ಉದ್ಯಾನ ನಗರಿಯಲ್ಲಿ 158 ನಂದಿನಿ ಬೂತ್‌ಗಳಿದ್ದವು. ಅವುಗಳನ್ನು `ನಂದಿನಿ ಶಾಪಿ~ಯಾಗಿ ಬದಲಾಯಿಸಲಾಯಿತು. ಮೊದಲ ಬಾರಿ ಈ ಐಷಾರಾಮಿ ಐಸ್‌ಕ್ರೀಂ ಪಾರ್ಲರ್ ಪ್ರಾರಂಭಿಸಿದ್ದು, ಹವಾ ನಿಯಂತ್ರಿತ ಕೊಠಡಿಯೊಳಗೆ ಕೂತು ತಮಗಿಷ್ಟದ ಐಸ್‌ಕ್ರೀಂ ಸವಿಯಬಹುದು~ ಎನ್ನುತ್ತಾರೆ ಕರ್ನಾಟಕ ಹಾಲು ಒಕ್ಕೂಟದ ಮಾರುಕಟ್ಟೆ ನಿರ್ದೇಶಕ ಡಿ. ಶ್ರೀನಾಥ್.
ಕುಲ್ಫಿ, ಚಾಕೋಬಾರ್, ಗಡ್‌ಬಡ್, ಕಪ್ ಐಸ್ ಸೇರಿದಂತೆ 40 ಬಗೆಯ ಐಸ್‌ಕ್ರೀಂಗಳು ದೊರೆಯುತ್ತವೆ. ವಿಶೇಷವೆಂದರೆ ಮಳಿಗೆಯಲ್ಲೇ ಸ್ಕೂಪಿಂಗ್ ಮಾಡಿಕೊಡಲಾಗುತ್ತದೆ. ಐಸ್‌ಕ್ರೀಂಗಳಷ್ಟೇ ಅಲ್ಲದೇ ಹಾಲು, ಮೊಸರು, ಮಜ್ಜಿಗೆ, ಪನ್ನೀರು, ಬಾದಾಮಿ ಹಾಲಿನಪುಡಿ, ತುಪ್ಪ ಹಾಗೂ ಪೇಡಾ, ಜಾಮೂನು ರುಚಿಯೂ ಗ್ರಾಹಕರನ್ನು ಸೆಳೆಯುತ್ತದೆ.
`ಇದುವರೆಗೆ ರಾಜ್ಯದಲ್ಲಿ ಎಲ್ಲಿಯೂ ಈ ರೀತಿಯ ಸರ್ವಿಸಿಂಗ್ ಹಾಲ್ ಹೊಂದಿದ ಪಾರ್ಲರ್ ಇರಲಿಲ್ಲ. ಗ್ರಾಹಕರ ಒತ್ತಾಯದ ಮೇರೆಗೆ ಪಾರ್ಲರ್ ಆರಂಭಿಸಿದ್ದೇವೆ~ ಎನ್ನುತ್ತಾರೆ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸಿ. ಮಂಜುನಾಥ್.
ಗ್ರಾಹಕರಿಗೆ ಅನುಕೂಲವಾಗಲೆಂದು ಐಸ್‌ಕ್ರೀಂ ಫ್ಯಾಮಿಲಿ ಪ್ಯಾಕ್ ಸೌಲಭ್ಯವೂ ಇದೆ. ಈ ರೀತಿಯ ಐಷಾರಾಮಿ ಐಸ್‌ಕ್ರೀಂ ಪಾರ್ಲರನ್ನು ಡೇರಿ ಸರ್ಕಲ್ ಹಾಗೂ ಮೈಸೂರು ರಸ್ತೆಯಲ್ಲಿ ಆರಂಭ ಮಾಡುವ ಯೋಜನೆ ಇದೆ ಎನ್ನುತ್ತಾರೆ ಅವರು.
`ಇಲ್ಲಿ ಸುತ್ತಮುತ್ತ ಐಸ್‌ಕ್ರೀಂ ಪಾರ್ಲರ್ ಇರಲಿಲ್ಲ. ನಂದಿನಿ ಪಾರ್ಲರ್ ಆರಂಭವಾಗಿರೋದು ಖುಷಿ ಆಗಿದೆ. ಪ್ರತಿದಿನ ಬರ‌್ತಿನಿ, ನನಗಿಷ್ಟದ ಕೋನ್ ಐಸ್‌ಕ್ರೀಂ ತಿನ್ನುತ್ತೇನೆ~ ಎನ್ನುತ್ತಾರೆ ಎಚ್‌ಎಸ್‌ಆರ್ ಬಡಾವಣೆಯ ವಾಣಿ.
ಸ್ಥಳ: 19ನೇ ಮುಖ್ಯರಸ್ತೆ, 3ನೇ ಸೆಕ್ಟರ್, ಜ್ಞಾನಸೃಷ್ಟಿ ಶಾಲೆ ಸಮೀಪ, ಎಚ್‌ಎಸ್‌ಆರ್ ಬಡಾವಣೆ. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಪಾರ್ಲರ್ ತೆರೆದಿರುತ್ತದೆ.
ಚಿತ್ರಗಳು: ಸತೀಶ್ ಬಡಿಗೇರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.