ADVERTISEMENT

ಈ ನಗರಿಗಿದು ಎರಡನೇ ಭೇಟಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಜುಲೈ 2012, 19:30 IST
Last Updated 13 ಜುಲೈ 2012, 19:30 IST

“ಅಪ್ಪ ಹೇಳಿದ್ದರು- `ನಿನ್ನೊಳಗಿನಿಂದ ಯಾವ ಪ್ರೇರಣೆ ಬರುತ್ತದೆಯೋ ಹಾಗೇ ನಡೆದುಕೊ~. ಆ ಮಾರ್ಗದರ್ಶನದಂತೆಯೇ ಬದುಕು, ವೃತ್ತಿ ಮತ್ತು ಬದುಕು ಎರಡರಲ್ಲಿಯೂ ನಡೆದುಕೊಳ್ಳುತ್ತಿದ್ದೇನೆ” ಎಂದು ಹೇಳಿದ ಒರಟು ಮುಖದ ಆ ಸುಂದರಾಂಗನ ಕಣ್ಣುಗಳಲ್ಲಿ ಯಾವ ಭಾವವಿತ್ತೆಂದು ಕಾಣಲಿಲ್ಲ. ಅದಕ್ಕೆ ಕಪ್ಪು ಕನ್ನಡಕ ಅಡ್ಡಿಪಡಿಸಿತ್ತು.

ಮುಖದ ಚಹರೆ ಥೇಟ್ ಅಮ್ಮನದೇ. ನಿಲುವು, ಮೈಕಟ್ಟಿನಲ್ಲಿ ಮಾತ್ರ ಅಪ್ಪನ ಹೋಲಿಕೆ.  `ದೋಬಿ ಘಾಟ್~ ಚಿತ್ರದ ಮೂಲಕ  `ಸ್ಮಿತಾ ಪಾಟೀಲ್ ಛಾಯೆ~ ಎಂಬಂತೆ  ಗುರುತಿಸಿಕೊಂಡ ಈ ನಟ ಪ್ರತೀಕ್ ಬಬ್ಬರ್. ಸ್ಮಿತಾ ಪಾಟೀಲ್- ರಾಜ್ ಬಬ್ಬರ್ ದಂಪತಿಯ ಪುತ್ರ.

ಅಪರೂಪಕ್ಕೆ ಉದ್ಯಾನ ನಗರಿಗೆ ಬಂದ ಅವರ ಕೈಗಳಲ್ಲಿ ವಾಹನ ಶುಚಿಗೊಳಿಸುವ ದೊಡ್ಡ ಯಂತ್ರದ ನೀರಿನ ಕೊಳವೆ. ಮೂರ‌್ನಾಲ್ಕು ಅಶ್ವಶಕ್ತಿ ವೇಗದಲ್ಲಿ ಚಿಮ್ಮುತ್ತಿದ್ದ ನೀರಿನ ರಭಸಕ್ಕೆ ಅಲ್ಲಿದ್ದ ವಾಹನಗಳ ಮೇಲಿನ ಕೆಮ್ಮಣ್ಣು (ಕೃತಕವಾಗಿ ಮೆತ್ತಿದ್ದು) ಕೊಚ್ಚಿಕೊಂಡು ಹೋಗುತ್ತಿತ್ತು.

`ದೋಬಿಘಾಟ್~ ಎಂಬ `ಶುಚಿ~ಗೆ ಸಂಬಂಧಿಸಿದ ಸಿನಿಮಾದಲ್ಲಿ ಮುಖ ತೋರಿಸಿದವರಿಗೆ ಈಗ ಸಿಕ್ಕಿದ್ದೂ `ಶುಚಿ~ಗೆ ಸಂಬಂಧಿಸಿದ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗುವ ಅವಕಾಶ.

`ಬಾಷ್~ ಬ್ರಿಟನ್‌ನಲ್ಲಿ ಸಂಶೋಧನೆ-ಅಭಿವೃದ್ಧಿ ಕೈಗೊಂಡದ್ದು, ಯೂರೋಪ್‌ನಲ್ಲಿ ತಯಾರಿಸಿದ ಕೈಗಾರಿಕೆ ಮತ್ತು ವಾಹನ ಶುಚಿಗೊಳಿಸುವ ನಾಲ್ಕು ಯಂತ್ರಗಳನ್ನು ಭಾರತದಲ್ಲಿ- ಮೊದಲಿಗೆ ಬೆಂಗಳೂರಿನಲ್ಲಿ- ಬಿಡುಗಡೆ ಮಾಡಲು ಮುಂದಾಯಿತು. ಅದು ಪ್ರಚಾರ ರಾಯಭಾರಿಯಾಗಿ ಆರಿಸಿಕೊಂಡದ್ದು ಪ್ರತೀಕ್ ಅವರನ್ನು.

ಉದ್ಯಾನ ನಗರಿಯಲ್ಲಿ ಶುಕ್ರವಾರ ಮಾತಿಗೆ ಸಿಕ್ಕ ಪ್ರತೀಕ್, 2008ರಲ್ಲಿ `ಜಾನೆ ತು ಯಾ ಜಾನೆ ನಾ~, 2011ರಲ್ಲಿ ಅಮೀರ್‌ಖಾನ್ ಪತ್ನಿ ಕಿರಣ್ ರಾವ್ ಚೊಚ್ಚಲ ನಿರ್ದೇಶನದ ಚಿತ್ರ `ದೋಬಿಘಾಟ್~ ಸೇರಿದಂತೆ ಐದಾರು ಸಿನಿಮಾಗಳಲ್ಲಿ ಪ್ರತಿಭೆ ತೋರಿದ್ದರು.
`ಯೂ ನೋ... ನಾನೀಗ ಕಿರುತೆರೆಗೂ ಪ್ರವೇಶಿಸಿದ್ದೇನೆ. ನಾನು ನಡೆಸಿಕೊಡುವ ಕಾರ್ಯಕ್ರಮವೊಂದು ಎಂಟಿವಿಯಲ್ಲಿ ಜುಲೈ 15ರಿಂದ ಪ್ರಸಾರಗೊಳ್ಳಲಿದೆ~.

ಅದು ಯಾವ ಬಗೆ ಕಾರ್ಯಕ್ರಮ? ಮನರಂಜನೆಯೋ, ಸಾಹಸ ಕ್ರೀಡೆಯದೋ ಎಂಬ ಪ್ರಶ್ನೆಗೆ, `ಇನ್ನೆರೆಡು ದಿನ ಕಾಯ್ದು ನೋಡಿ~.. ಎಂಬುದು ಅವರ ಉತ್ತರವಾಗಿತ್ತು.
`ಹಾ... ಐಸಾಕ್- ಪ್ಯಾರ್ ಕಿ  ನಿಶಾನಿ ನನ್ನ ಬರಲಿರುವ ಚಿತ್ರ. ಈಗ ನೋಡಿ, ಬಾಷ್ ಉತ್ಪನ್ನದ ಜತೆ ಮರ್ದಾಂಗಿ ಕಿ ನಿಶಾನಿ.. ಆಗಿದೆ~ ಎಂದವರೇ ಹಹ್ಹಹ್ಹಾ ಎಂದು ಥೇಟ್ ಅಪ್ಪನದೇ ಶೈಲಿಯಲ್ಲಿ ಮುಖ ಮೇಲೆತ್ತಿ ನಕ್ಕರು.

`ಬೆಂಗಳೂರಿಗೆ ಇದು ನನ್ನ ಎರಡನೇ ಭೇಟಿ. ಮೊದಲೊಮ್ಮೆ ಅಮ್ಮನ ಜತೆ ಬಂದಿದ್ದೆ. ಅಮ್ಮನ ಸ್ನೇಹಿತರ ಮನೆ ಕಾರ್ಯಕ್ರಮವಿತ್ತು. ಆಗ ನಾನಿನ್ನೂ ಪುಟ್ಟ ಬಾಲಕ. ಈ ನಗರಿ ಬಗ್ಗೆ ಏನೂ ಗೊತ್ತಿರದ ವಯಸ್ಸು. ಈಗ ಬಾಷ್ ಕಂಪೆನಿ ಕರೆತಂದಿದೆ. ಬೆಂಗಳೂರು ಹೇಗಿದೆ ನೋಡೋಣ ಎಂದರೆ ಸಮಯವೇ ಇಲ್ಲ~ ಎಂದು ಲೊಚಗುಟ್ಟಿದರು. ಅಷ್ಟರಲ್ಲೇ ಆತನ ಮ್ಯಾನೇಜರ್, `ಸರ್ ಫ್ಲೈಟ್‌ಗೆ ಟೈಮಾಯ್ತು~ ಎಂದರು.

ಛಾಯಾಗ್ರಾಹಕರ ಬಲವಂತಕ್ಕೆ ಕೆಲವು ಫೋಟೊಗಳಿಗೆ ಪೋಸ್ ನೀಡಿದರಷ್ಟೆ. ಎಡಗೈಯಲ್ಲಿ ದಟ್ಟವಾಗಿ ಹರಡಿದ್ದ ಹಚ್ಚೆಯೂ ಕ್ಯಾಮೆರಾದಲ್ಲಿ ಸೆರೆಯಾಯಿತು.
ಸೂರ್ಯನ ಮಗ್ಗಲಲ್ಲೇ ಪುಟ್ಟ ಪಕ್ಷಿ ಹಾರುತ್ತಿರುವ ಚಿತ್ರ ಹಸಿರು-ಕೆಂಪು ಬಣ್ಣದಲ್ಲಿ ಮರಿ ಬಬ್ಬರ್ ಕೈಯಲ್ಲಿ ಹಚ್ಚೆಯಾಗಿತ್ತು.
 
ಕ್ಯಾಮೆರಾಗಳ ಕ್ಲಿಕ್.. ಕ್ಲಿಕ್... ಸದ್ದು ಅಡಗುವ ಮುನ್ನವೇ ತರಾತುರಿಯಲ್ಲಿ ಎಲ್ಲರಿಗೂ ಬೈ ಹೇಳಿದ. ಇನ್ನೂ ಹೆಚ್ಚಿನ ಸಂದರ್ಶನ ಬಯಸಿದ್ದ ಚಾನೆಲ್ ವರದಿಗಾರ್ತಿಯರು ಪ್ರತೀಕ್ ಮ್ಯಾನೇಜರ್‌ಗೆ ಶಾಪ ಹಾಕುತ್ತಾ ಗೊಣಗಿಕೊಂಡೇ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.