ADVERTISEMENT

ಉದ್ಯಮ ಯಶಸ್ಸಿಗೆ ಸೂತ್ರ ವಿನಿಮಯ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2016, 19:30 IST
Last Updated 17 ಆಗಸ್ಟ್ 2016, 19:30 IST
‘ಒನ್‌ ಆನ್‌ ಒನ್‌ ಲಿಂಕ್ಸ್‌’ ಕಂಪೆನಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉದ್ಯಮಿಗಳು
‘ಒನ್‌ ಆನ್‌ ಒನ್‌ ಲಿಂಕ್ಸ್‌’ ಕಂಪೆನಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉದ್ಯಮಿಗಳು   

ಒನ್‌ ಆನ್‌ ಒನ್‌ ಲಿಂಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಇತ್ತೀಚೆಗೆ ಜಯನಗರದ ಜೈನ್‌ ಯುನಿವರ್ಸಿಟಿಯಲ್ಲಿ ಬ್ಯುಸಿನೆಸ್‌ ಮಾಲೀಕರು ಹಾಗೂ ಉದ್ಯಮಿಗಳ ಸಭೆ ಆಯೋಜಿಸಿತ್ತು. ವಿವಿಧ ಕ್ಷೇತ್ರಗಳಲ್ಲಿ ಉದ್ಯಮ ಆರಂಭಿಸುವವರಿಗೆ ಅನೇಕ ವಿಷಯಗಳ ಕುರಿತು ತರಬೇತಿಯನ್ನೂ ನೀಡಲಾಯಿತು.

ಡಿಜಿಟಲ್‌ ಮಾರ್ಕೆಟಿಂಗ್‌, ಗುರಿ ನಿರ್ವಹಣೆ, ನಿರ್ಧಾರ ತೆಗೆದುಕೊಳ್ಳುವುದು ಹೇಗೆ? ಕನಸು ಹಿಂಬಾಲಿಸುವುದು ಹೇಗೆ? ಯಶಸ್ಸಿನ ಸೂತ್ರಗಳು ಏನು? ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಯಿತು.

ಒನ್‌ ಆನ್‌ ಒನ್‌ ಲಿಂಕ್ಸ್‌ಪ್ರೈವೇಟ್‌ ಲಿಮಿಟೆಡ್‌ನ ಪ್ರಾಜೆಕ್ಟ್‌ ಆಗಿರುವ YCEEYA (ಯುವರ್‌ ಕನ್ಸಿಸ್ಟೆಂಟ್‌ ಎಫರ್ಟ್‌ ಎಂಪವರ್ಸ್‌ ಯು ಆಲ್‌ವೇಸ್‌)ದ 101ನೇ ಕಾರ್ಯಕ್ರಮ ಇದಾಗಿತ್ತು.

YCEEYAದಲ್ಲಿನ ಸದಸ್ಯರನ್ನೊಳಗೊಂಡ ಈ ತರಬೇತಿ ಕಾರ್ಯಕ್ರಮದಲ್ಲಿ ಸೋಶಿಯಲ್‌ ಕಟ್‌ಲೆಟ್‌ ಕಂಪೆನಿಯ ಆಯುಷ್‌ ಡಿಜಿಟೆಲ್‌ ಮಾರ್ಕೆಟಿಂಗ್‌ ಕುರಿತು ಮಾಹಿತಿ ಹಂಚಿಕೊಂಡರು. ತರಬೇತಿ ತಜ್ಞರಾದ ಆಕಾಂಕ್ಷಾ ಹಾಗೂ ಅನನ್ಯಾ ಅವರು ಉದ್ಯಮಿಗಳು ತಮ್ಮ ಆದ್ಯತೆಗಳನ್ನು ನಿರ್ಧರಿಸುವುದು ಹೇಗೆ ಹಾಗೂ ಗುರಿ ತಲುಪುವ ಸುಲಭ ದಾರಿಗಳು ಏನು ಎಂಬುದರ ಕುರಿತು ಮಾತನಾಡಿದರು.

ಆಲ್ಚ್ಮಿ ಕಂಪೆನಿಯ ವಿನಯ್‌ ಕುಲಕರ್ಣಿ ಅವರು ವಿಶೇಷ ತರಬೇತಿಯನ್ನು ನಡೆಸಿಕೊಟ್ಟರು. ‘ವ್ಯಾಪಾರ ಅಭಿವೃದ್ಧಿಗೆ ನಾಲ್ಕು ರಹಸ್ಯಗಳು ಹಾಗೂ ಹೆಚ್ಚು ಲಾಭ ಗಳಿಸುವುದು ಹೇಗೆ?’ ಎಂಬ ಬಗ್ಗೆ ಅವರು ಸಂವಾದ ನಡೆಸಿದರು.

ಜೈನ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌ನ ಸಂಸ್ಥಾಪಕ ಅಧ್ಯಕ್ಷರಾದ ಚೆನ್‌ರಾಜ್‌ ಅವರು ತಮ್ಮ ಸಾಧನೆಯ ಹಾದಿಯ ಅನುಭವ ಬುತ್ತಿಯನ್ನು ತೆರೆದಿಟ್ಟರು. ‘ಮನುಷ್ಯನ ಮುಖ್ಯ ಉದ್ದೇಶವೇ ಖುಷಿಯಾಗಿರುವುದು, ಹಣ ಮಾಡುವುದಲ್ಲ. ಆದರೆ ಬದುಕಿನ ಸಾರ್ಥಕ್ಯಕ್ಕೆ ಸಾಧನೆಯ ಆವಶ್ಯಕತೆಯಿದೆ. ಆಗಿ ಹೋಗಿದ್ದರೆ ಬಗ್ಗೆ ಕೊರಗುತ್ತಾ, ಭವಿಷ್ಯದ ಬಗ್ಗೆ ಚಿಂತಿಸುತ್ತಾ ಇಂದಿನ ದಿನವನ್ನು ಹಾಳು ಮಾಡಿಕೊಳ್ಳಬೇಡಿ.

ಒಂದು ಪ್ರಾಜೆಕ್ಟ್‌ ಯಶಸ್ವಿಯಾಗಿಲ್ಲ ಎಂದಾದರೆ, ಅದನ್ನು ಬಿಟ್ಟು ಇನ್ನೊಂದನ್ನು ಮಾಡಿ. ಏನೇ ಆದರೂ ಸಾಧನೆಯ ಛಲ ಬಿಡುವುದಿಲ್ಲ ಎನ್ನುವುದು ನಮ್ಮ ಧ್ಯೇಯವಾಗಬೇಕು. ದಿನದ 24 ಗಂಟೆಯನ್ನು 8 ಗಂಟೆಯಂತೆ ವಿಂಗಡಿಸಿಕೊಳ್ಳಿ. ಅದರಲ್ಲಿ ಕೇವಲ 8ಗಂಟೆ ಮಾತ್ರ ನಿಮ್ಮ ವ್ಯಾವಹಾರಿಕ ಬದುಕಿಗೆ ಮೀಸಲಿಡಿ. ಇದನ್ನು ನಿರಂತರವಾಗಿ ಮಾಡಿದರೆ ಎಲ್ಲರಿಗೂ ಯಶಸ್ಸು ಸಿಕ್ಕೇ ಸಿಗುತ್ತದೆ’ ಎಂದರು.

ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್‌ ಅಧಿಕಾರಿ ಡಾ.ಸಲೀಂ ಸಹ ಕಾರ್ಯಕ್ರಮದಲ್ಲಿ ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು. ಒನ್‌ ಆನ್‌ ಒನ್‌ ಲಿಂಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಸಂಸ್ಥಾಪಕ ನಿರ್ದೇಶಕರಾದ ಶ್ರೀನಾರಾಯಣ ಬೂಪೆನ್‌ ‘ವ್ಯಾಪಾರ ಎನ್ನುವುದು ಎಂದಿಗೂ ಸಂಬಂಧಗಳ ಮೇಲೆ ಗಟ್ಟಿಯಾಗುವಂಥದ್ದು ಹಾಗೂ ಬೆಳೆಯುವಂಥದ್ದು. ಸಂಬಂಧ ಸಂವಹನ ಕೌಶಲದ ಮೇಲೆ ನಿಲ್ಲುತ್ತದೆ’ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಉದ್ಯಮ ಕೈಗೊಂಡಿರುವವರು ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿತ್ತು. ಒಬ್ಬರಿಗೊಬ್ಬರು ಮುಗುಳ್ನಗೆ ಸೂಸುತ್ತಾ, ತಮ್ಮ ಬಗ್ಗೆ, ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತಾ, ಕಾರ್ಡ್‌ ವಿನಿಮಯ ಮಾಡಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.