ADVERTISEMENT

ಎಂಟರ ಬಾಲೆಯ ಗಿನ್ನಿಸ್‌ ದಾಖಲೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 19:30 IST
Last Updated 7 ಜುಲೈ 2017, 19:30 IST
ಎಂಟರ ಬಾಲೆಯ ಗಿನ್ನಿಸ್‌ ದಾಖಲೆ
ಎಂಟರ ಬಾಲೆಯ ಗಿನ್ನಿಸ್‌ ದಾಖಲೆ   

ಜಾಹೀರಾತು ಕಂಪೆನಿಯೊಂದು ತನ್ನ ಜಾಹೀರಾತಿಗಾಗಿ ಜಿಮ್ನಾಸ್ಟಿಕ್‌ ಆಡುವ ಕ್ರೀಡಾಪಟುಗಾಗಿ ಹುಡುಕಾಡಿ ದೀಕ್ಷಾಳನ್ನು ಆಯ್ಕೆ ಮಾಡಿತ್ತು. ಚಿತ್ರೀಕರಣಕ್ಕೂ ಕರೆದು, ಆಕೆಯ ಚರ್ಮದ ಬಣ್ಣಕ್ಕಾಗಿ ಕೈಬಿಟ್ಟಿತು. ಬಣ್ಣದ ನೆಪದಲ್ಲಿ ತನಗಾದ ಅವಮಾನವನ್ನು ಸವಾಲಾಗಿ ಸ್ವೀಕರಿಸಿದ ದೀಕ್ಷಾ ಮಾಡಿರುವ ಸಾಧನೆಯೊಂದು ಎಲ್ಲರೂ ಆಕೆಯತ್ತ ತಿರುಗಿನೋಡುವಂತೆ ಮಾಡಿದೆ.

ಒಂದು ಗಂಟೆ ಸತತವಾಗಿ 2776 ಬಾರಿ ಪಲ್ಟಿ (ಫಾರ್ವರ್ಡ್ ರೋಲಿಂಗ್) ಹೊಡೆದು 4.5 ಕಿ.ಮೀ ಕ್ರಮಿಸುವ ಮೂಲಕ ದೀಕ್ಷಾ ಗಿನ್ನಿಸ್‌ ದಾಖಲೆ ನಿರ್ಮಿಸಿದ್ದಾಳೆ. ಈ ಹಿಂದೆ ಅಮೆರಿಕಾದ ಅಶ್ರಿತಾ ಫರ್ಮಾನ್ ಅವರು 1330 ಬಾರಿ ಪಲ್ಟಿ ಹೊಡೆದು 3.5ಕಿ.ಮೀ ಕ್ರಮಿಸಿದ್ದು ದಾಖಲೆಯಾಗಿತ್ತು. ದೀಕ್ಷಾ ಈ ದಾಖಲೆಯನ್ನು ಹಿಂದಿಕ್ಕಿದ್ದಾಳೆ.

ದೀಕ್ಷಾ ಸಂಪಂಗಿರಾಮನಗರದವಳು. ತಂದೆ ಗಿರೀಶ್ ಹಾಗೂ ತಾಯಿ ಮಂಜುಳಾ. ಈಕೆ ಕೆಥೆಡ್ರಲ್ ಪ್ರೌಢಶಾಲೆಯಲ್ಲಿ ಎರಡನೇ ತರಗತಿ ವಿದ್ಯಾರ್ಥಿನಿ. ಶಾಲೆಯೂ ಈ ಪ್ರತಿಭಾವಂತೆಗೆ ಸಂಪೂರ್ಣ ಸಹಕಾರ ನೀಡಿದೆ.

ADVERTISEMENT

‘ಎಷ್ಟೋ ಮಂದಿ ನನ್ನನ್ನು ಸಣ್ಣ ಹುಡುಗಿಗೆ ಯಾಕೆ ಒತ್ತಡ ಹಾಕುತ್ತಿದ್ದೀಯ ಎಂದು ಟೀಕಿಸಿದ್ದಾರೆ. ಆದರೆ, ಕಷ್ಟವೇ ಗೆಲುವಿನ ಮೆಟ್ಟಿಲು. ಆಕೆಯ ಪರಿಶ್ರಮವೇ ಅವಳ ಈ ಸಾಧನೆಗೆ ಮುಖ್ಯ ಕಾರಣ. ದೀಕ್ಷಾಳ ಸಾಧನೆಯ ಹಿಂದೆ ಆಕೆಯ ಕೋಚ್ ಬಸವರಾಜ್ ಅವರದ್ದೂ  ಶ್ರಮವಿದೆ’ ಎಂದು ಗಿರೀಶ್‌ ಹೇಳಿದರು. ಗಮನಾರ್ಹ ಅಂಶವೆಂದರೆ ಗಿರೀಶ್ ಅವರೂ ಐದು ಬಾರಿ ಗಿನ್ನಿಸ್‌ ದಾಖಲೆ ನಿರ್ಮಿಸಿದವರು.

‘ದಿನಾ ಬೆಳಗ್ಗೆ ಮತ್ತು ಸಂಜೆ ತಲಾ ನಾಲ್ಕು ಗಂಟೆ ಅಭ್ಯಾಸ ಮಾಡುತ್ತಿದ್ದೆ. ಶಾಲೆಯಲ್ಲೂ ಸಹ ನನಗೆ ಉತ್ತಮ ಪ್ರೋತ್ಸಾಹ ಸಿಕ್ಕಿತು. ಮುಂದೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಬೇಕು ಎಂಬ ಕನಸಿದೆ ಎನ್ನುತ್ತಾಳೆ ಈ ಪುಟಾಣಿ.

**

-ಸುಕೃತ ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.