ADVERTISEMENT

ಐಸ್ ಕ್ರೀಂ ಒಲವು... ವ್ಯಾಪಾರ ಗೆಲುವು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

ಮನಸ್ಸು ಸದಾ ಹೊಸತನಕ್ಕೆ ತುಡಿಯುತ್ತಿರಬೇಕು ಎನ್ನುವ ನತಾಶಾ ಮಾತಿನಲ್ಲಿ ಆತ್ಮವಿಶ್ವಾಸವಿತ್ತು. ಮಮ್ಮಾ ಮೀಯಾ ನನ್ನ ಕನಸಿನ ಕೂಸು, ಇದು ಈಗ ಇಷ್ಟು ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಅಚ್ಚರಿ ತರುತ್ತದೆ ಎನ್ನುವಾಗ ಆಕೆಯ ಕಣ್ಣಲ್ಲಿ ಗೆದ್ದ ಸಂಭ್ರಮ.

ಮೊದಲ ನೋಟಕ್ಕೆ ಸಾಮಾನ್ಯ ಹುಡುಗಿಯಂತೆ ಭಾಸವಾಗುವ ನತಾಶಾಳೊಂದಿಗೆ ಮಾತಿಗಿಳಿದರೆ ಆಕೆಯ ಕನಸುಗಳು ಚಕಿತಗೊಳಿಸುತ್ತವೆ. 26ರ ಹರೆಯದ ನತಾಶಾ ಅಗರ್‌ವಾಲ್ ಅತಿ ಎಳೆಯ ವಯಸ್ಸಿಗೇ ಮಮ್ಮಾ ಮೀಯಾದ ಕಾರ್ಯ ನಿರ್ವಾಹಕ ಅಧಿಕಾರಿಯಾದಾಕೆ.

ಗುಣಮಟ್ಟದ, ವಿಭಿನ್ನ ರುಚಿಗಳ ಗೆಲಾಟೊಗಳ ತಯಾರಿಕೆಯಲ್ಲಿ ಮುಂದಿರುವ ಮಮ್ಮಾ ಮೀಯಾ ಈಗ ಎಲ್ಲೆಡೆ ತನ್ನ ಕೇಂದ್ರಗಳನ್ನು ತೆರೆಯುವ ಕನಸು ಹೊಂದಿದೆ. ಕೇವಲ ವಿಧ ವಿಧ ಫ್ಲೇವರ್ ಮಾತ್ರವಲ್ಲ, ಈ ಗೆಲಾಟೊಗಳು ಫ್ಯಾಟ್ ಫ್ರೀ ಆಗಿರುವುದು ಇಲ್ಲಿನ ವಿಶೇಷತೆ.

ನತಾಶಾಳಾ ತಂದೆ ಕೂಡ ರಾಲಿಕ್ ಐಸ್ ಕ್ರೀಂ ವ್ಯಾಪಾರದಲ್ಲಿ ತೊಡಗಿದ್ದವರು. ತಂದೆಯ ಐಸ್ ಕ್ರೀಂ ವ್ಯಾಪಾರವೇ ಸ್ಫೂರ್ತಿ ಎನ್ನುವ ನತಾಶಾ  ಅಪ್ಪನೊಂದಿಗೆ ಐಸ್ ಕ್ರೀಂ ತಯಾರಿಕೆಯಲ್ಲಿ ಸಹಕರಿಸುತ್ತಿದ್ದಾಗ ನನಗೂ ಪ್ರಸಿದ್ಧ ಐಸ್ ಕ್ರೀಂ ತಯಾರಕಿ ಆಗಬೇಕೆಂಬ ಆಸೆ ಹುಟ್ಟಿಕೊಂಡಿತು ಎನ್ನುತ್ತಾರೆ.

ವಾರ್ವಿಕ್ ವಿವಿಯಲ್ಲಿ ಬಿಸಿನೆಸ್ ಮ್ಯಾನೇಜ್‌ಮೆಂಟ್ ಪದವಿ ಪಡೆದು ಕೊಂಡೆ. ಹುಟ್ಟಿ ಬೆಳೆದಿದ್ದು ಇರುವ ವಾತಾವರಣದಲ್ಲಿಯೇ ಆದ್ದರಿಂದ ಈ ಐಸ್ ಕ್ರೀಂ ತಯಾರಿಕೆಯಲ್ಲಿಯೇ ವಿಭಿನ್ನತೆ ಯನ್ನು ಹುಡುಕುತ್ತಾ ಹೊರಟೆ ಎಂದು ಹುರುಪಿನಿಂದ ಹೇಳಿದರು ನತಾಶಾ.

ಭಾರತದಲ್ಲಿ ಐಸ್‌ಕ್ರೀಂ ತಯಾರಿಕಾ ಕ್ಷೇತ್ರದಲ್ಲಿ ಹೊಸತನವೇನೂ ಇಲ್ಲದಿದ್ದರಿಂದ ಇಟಲಿಯ ಗೆಲಾಟೊ ತಯಾರಿಕೆ ಒಂದು ಅದ್ಬುತ ಯೋಜನೆ ಎನಿಸಿತು. ಅದಕ್ಕಾಗಿ ಗೆಲಾಟೊ ತಯಾರಿಕೆಗೆಂದು ಪ್ರಸಿದ್ಧ ಗೆಲಾಟೊ ತಯಾರಕ ಡೇನಿಯಲ್ ಗಿಸಾಲ್ಬರ್ಟಿ  ಬಳಿ ತರಬೇತಿ ಪಡೆದುಕೊಂಡೆ. 

2005ರಲ್ಲಿ ಕೊಲ್ಲತ್ತಾದಲ್ಲಿ ಮೊದಲ ಗೆಲಾಟೊ ಕೇಂದ್ರ ತೆರೆದೆ, ಅತಿ ಸಣ್ಣ ಮಟ್ಟದಲ್ಲಿ ಕೇಂದ್ರ ಆರಂಭಿಸಿದ್ದರಿಂದ ಇದರ ಮಾಲೀಕ, ಶೆಫ್, ಸೇಲ್ಸ್ ಎಲ್ಲವೂ ನಾನೇ ಆಗಿದ್ದೆ. ಬೆಳಿಗ್ಗೆ ಇಂದ ಸಂಜೆವರೆಗೆ ಗೆಲಾಟೊ ತಯಾರಿಕೆಯಲ್ಲಿ ಇನ್ನೂ ಏನನ್ನಾದರೂ ಹೊಸತನ್ನು ತಯಾರಿಸುವ ಕುರಿತು ಯೋಚಿಸುತ್ತಲೇ ಇದ್ದೆ ಎನ್ನುತ್ತಾರೆ ನತಾಶಾ.

ಮಮ್ಮಾ ಮೀಯಾ ಇದೀಗ ಕೊಲ್ಕತ್ತಾದಲ್ಲಿ 10 ಕಡೆಗಳಲ್ಲಿದ್ದು, ಬೆಂಗಳೂರಿನಲ್ಲಿ ಇಂದಿರಾನಗರ ಮತ್ತು ಯುಬಿಸಿಟಿಯಲ್ಲೂ ತೆರೆದುಕೊಂಡಿದೆ.ಮಮ್ಮಾ ಮಿಯಾ ಗೆಲಟೇರಿಯಾದಲ್ಲಿ ಹಲವು ಬಗೆಯ ಐಸ್‌ಕ್ರೀಂ ಹಾಗೂ ಹಣ್ಣುಗಳ ಗೆಲೆಟೊ ಲಭ್ಯವಿದೆ.
 
ಮೊದಲೇ ಹೇಳಿದಂತೆ ಇದು ಫ್ಯಾಟ್ ಫ್ರೀ ಗೆಲಾಟೊ ಆದ್ದರಿಂದ ಕೊಬ್ಬಿನಂಶ ಇರುವ ಹಾಲು ಅಥವಾ ಕ್ರೀಂ ಒಳಗೊಂಡಿರುವುದಿಲ್ಲ. ಕೆನೆ ತೆಗೆದ ಹಾಲನ್ನು ಬಳಸಿಕೊಳ್ಳಲಾಗುತ್ತದೆ. ಕೆಲವು ಐಸ್‌ಕ್ರೀಂಗಳು ಶೇ 70ರಷ್ಟು ನೈಸರ್ಗಿಕ ಹಣ್ಣುಗಳನ್ನು ಒಳಗೊಂಡಿರು ತ್ತದೆ.

ಬೇಕೆಂದರೆ ಸಕ್ಕರೆ ರಹಿತ ಗೆಲಾಟೊ ಕೂಡ ಲಭ್ಯವಿದೆ. ಗೆಲಾಟೊದಲ್ಲಿ ಇದುವರೆಗೂ 150 ಬಗೆಯ ಫ್ಲೇವರ್‌ಗಳನ್ನು ಕಂಡು ಹಿಡಿಯಲಾಗಿದ್ದು, ಪ್ರತಿ ವಾರವೂ 2 ಹೊಸ ಬಗೆಯ ಪ್ಲೇವರ್‌ಗಳನ್ನು ಕಂಡುಹಿಡಿಯಬೇಕೆಂಬುದು ನನ್ನ ಆಸೆ ಎನ್ನುತ್ತಾರೆ ನತಾಶಾ.
 ಗ್ರಾಹಕರು ಮತ್ತೆ ಮತ್ತೆ ಬರುತ್ತಿರಬೇಕೆಂದರೆ ಹೊಸ ಹೊಸದನ್ನು ಕಂಡುಹಿಡಿಯುತ್ತಿರಬೇಕು. ಹೊಸ ರುಚಿಯನ್ನು ಕಂಡುಹಿಡಿಯುತ್ತಿದ್ದಷ್ಟು ದಿನ ಗ್ರಾಹಕರು ಬರುತ್ತಲೇ ಇರುತ್ತಾರೆ ಎನ್ನುವ ನತಾಶಾ ದೇಶ ವಿದೇಶಗಳಲ್ಲಿಯೂ ಮಮ್ಮಾ ಮೀಯಾ ತೆರೆಯುವ ಕನಸು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.