ADVERTISEMENT

ಒಂಟಿ ಮಲ್ಲಿಕಾ ಜಂಟಿಯಾಗಬೇಕಂತೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2012, 19:30 IST
Last Updated 5 ಆಗಸ್ಟ್ 2012, 19:30 IST
ಒಂಟಿ ಮಲ್ಲಿಕಾ ಜಂಟಿಯಾಗಬೇಕಂತೆ
ಒಂಟಿ ಮಲ್ಲಿಕಾ ಜಂಟಿಯಾಗಬೇಕಂತೆ   

ಮಲ್ಲಿಕಾ ಶೆರಾವತ್‌ಗೆ ಈಗೀಗ ಒಂಟಿತನ ಗಾಢವಾಗಿ ಕಾಡುತ್ತದಂತೆ. ಯಾಕೆಂದರೆ ಆಕೆ ಈಗಲೂ ಒಂಟಿ. ಮಲ್ಲಿಕಾ ಮನಸ್ಸಿನಲ್ಲಿ ಆಗಾಗ ಪುಟಿದೇಳುವ ಇಂತಹ `ಕಾಡುವಿಕೆ~ ಅತಿ ಎನಿಸಿದಾಗ ಆಕೆಯ ಮನಸ್ಸಿನಲ್ಲಿ ನನಗೂ ಒಬ್ಬ ಒಳ್ಳೆಯ ಗೆಳೆಯ ಇರಬೇಕಿತ್ತು ಅಂತ ಅನಿಸುತ್ತದಂತೆ.

ಒಂಟಿತನದ ನರಳಾಟವನ್ನು ಬಡಿದೋಡಿಸಿ, ತನ್ನನ್ನು ತೆಕ್ಕೆಗೆ ತೆಗೆದುಕೊಂಡು ಮುದ್ದಿಸುವ, ಬೊಗಸೆ ತುಂಬಾ ಹಿಡಿ ಪ್ರೀತಿ ನೀಡುವ ಒಬ್ಬ ಸಂಗಾತಿ ಬೇಕು ಅಂತ ಅವರು ಪರಿತಪಿಸುತ್ತಿದ್ದಾರೆ. ಹೌದು, ಮಲ್ಲಿಕಾ ಈಗ ನಿಜ ಪ್ರೀತಿಯ ಹುಡುಕಾಟದಲ್ಲಿದ್ದಾರಂತೆ. ಈ ವಿಚಾರ ಗೊತ್ತಾಗಿದ್ದು `ಕಿಸ್ಮತ್ ಲವ್ ಪೈಸಾ ದಿಲ್ಲಿ~ ಚಿತ್ರದ ಪ್ರಚಾರ ಸಂದರ್ಭದಲ್ಲಿ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

`ನನ್ನ ಜೀವನದಲ್ಲಿ ನಾನು ಪ್ರೀತಿಗೆ ತುಂಬಾ ಮಹತ್ವ ನೀಡುತ್ತೇನೆ. ಒಳ್ಳೆಯ ಗೆಳೆಯ ಸಿಗಬೇಕೆಂದರೆ ಅದೃಷ್ಟ ಮಾಡಿರಬೇಕು. ಅಂತಹ ಹುಡುಗನಿಗಾಗಿ ನಾನೀಗ ತೀವ್ರ ಹುಡುಕಾಟ ನಡೆಸುತ್ತಿದ್ದೇನೆ. ಸಿಕ್ಕ ನಂತರವಷ್ಟೆ ನನ್ನ ಮದುವೆ~ ಎನ್ನುತ್ತಿದ್ದಾರೆ ಅವರು.

ಅಂದಹಾಗೆ, ವಿವೇಕ್ ಒಬೆರಾಯ್ ಕೂಡ ಮಲ್ಲಿಕಾಳಂತೆ ಪ್ರೀತಿಗೆ ತುಂಬಾ ಬೆಲೆ ಕೊಡುತ್ತಾರಂತೆ. 2010ರಲ್ಲಿ ಬೆಂಗಳೂರಿನ ಹುಡುಗಿ ಪ್ರಿಯಾಂಕಾ ಆಳ್ವಾ ಅವರನ್ನು ಮದುವೆ ಆದ ವಿವೇಕ್‌ಗೆ ಈಗ 35 ವರ್ಷ ತುಂಬಿದೆ.

ವಯಸ್ಸು ಮಾಗಿದಂತೆ ಅವರು ಪ್ರೀತಿಯನ್ನು ಅರ್ಥೈಸುವ ಪರಿ ಕೂಡ ಬದಲಾಗಿದೆ. ವಿವೇಕ್ ಕೂಡ `ಕಿಸ್ಮತ್ ಲವ್ ಪೈಸಾ ದಿಲ್ಲಿ~ (ಕೆಎಲ್‌ಪಿಡಿ) ಚಿತ್ರ ಪ್ರಚಾರದ ವೇಳೆ ಪ್ರೀತಿ ಹಾಗೂ ಹೊಸ ಚಿತ್ರದ ಬಗ್ಗೆ ಮಾತು ಹರಿಬಿಟ್ಟಿದ್ದು ಹೀಗೆ...

`ಹಣ ಬರುತ್ತೆ, ಹೋಗುತ್ತೆ. ಹಣವೇ ಜೀವನ ಅಲ್ಲ. ನೂರರಲ್ಲಿ ಒಬ್ಬ ಅದೃಷ್ಟವಂತ ಮಾತ್ರ ನಿಜಪ್ರೀತಿಯ ವಾರಸುದಾರನಾಗುತ್ತಾನೆ. ನಾನು ಅಂಥವರಲ್ಲಿ ಒಬ್ಬ.

ಕೆಎಲ್‌ಪಿಡಿ ಚಿತ್ರದ ಕಥೆ ದಿಲ್ಲಿಯಲ್ಲಿ ಒಂದು ರಾತ್ರಿ ನಡೆವ ಘಟನೆಗಳ ಸುತ್ತ ಸುತ್ತುತ್ತದೆ. ನಾಯಕ ಲಕ್ಕಿ ದುಗ್ಗಲ್ ಅದೃಷ್ಟ, ಪ್ರೀತಿ ಹಾಗೂ ಹಣದ ಬೆನ್ನು ಹತ್ತಿದ ಯುವಕ. ಅಂತೂ ಇಂತೂ ಒಂದು ದಿನ ನಾಯಕ ಈ ಮೂರನ್ನು ದಿಲ್ಲಿಯಲ್ಲಿ ಪಡೆದುಕೊಳ್ಳುತ್ತಾನೆ.

ಪಡೆದುಕೊಂಡಂತೆ ಅದನ್ನು ಕಳೆದುಕೊಳ್ಳುತ್ತಾನೆ. ನಾಯಕ ಈ ಮೂರನ್ನು ಹೇಗೆ ಮತ್ತೆ ಪಡೆದುಕೊಳ್ಳುತ್ತಾನೆ ಎಂಬುದೇ ಕಥಾಹಂದರ. ರೋಚಕ ತಿರುವುಗಳಿರುವ ಈ ಚಿತ್ರವನ್ನು ಎಲ್ಲರೂ ತೆರೆಮೇಲೆ ನೋಡಿಯೇ ಆನಂದಿಸಬೇಕು~ ಎನ್ನುತ್ತಾರೆ ವಿವೇಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.