ADVERTISEMENT

ಒಳಾಂಗಣದ ಅಂದ ಹೆಚ್ಚಿಸುವ ಅಕ್ವೇರಿಯಂ

ಜೆಸ್ಸಿ ಪಿ.ವಿ.
Published 15 ಮೇ 2018, 19:30 IST
Last Updated 15 ಮೇ 2018, 19:30 IST
ಒಳಾಂಗಣದ ಅಂದ ಹೆಚ್ಚಿಸುವ ಅಕ್ವೇರಿಯಂ
ಒಳಾಂಗಣದ ಅಂದ ಹೆಚ್ಚಿಸುವ ಅಕ್ವೇರಿಯಂ   

ಸುಲಭದಲ್ಲಿ, ಕಡಿಮೆ ಖರ್ಚಿನಲ್ಲಿ ಮನೆಯ ಒಳಾಂಗಣದ ಆಕರ್ಷಣೆ ಹೆಚ್ಚಿಸುವ ವಿಷಯಗಳತ್ತ ಅವರು ಗಮನ ಹರಿಸಬಹುದು. ಅಂಥದ್ದರಲ್ಲೊಂದು ಉಪಾಯವೇ ಅಕ್ವೇರಿಯಂ ಅಥವಾ ಫಿಶ್ ಟ್ಯಾಂಕ್.

ಅಕ್ವೇರಿಯಂ ಎಂದರೆ ಕನಿಷ್ಠ ಒಂದು ಪಾರದರ್ಶಕ ಬದಿಯಿರುವ, ಜಲಸಸ್ಯಗಳು ಹಾಗೂ ಜಲಜೀವಿಗಳ ಸಾಕಣೆಗಾಗಿ ತಯಾರಾದ ಟ್ಯಾಂಕ್. ಆಂಗ್ಲ ಪರಿಸರ ತಜ್ಞ ಫಿಲಿಪ್ ಹೆನ್ರಿ ಫಿಶ್ ಟ್ಯಾಂಕಿಗೆ ಅಕ್ವೇರಿಯಂ ಎಂಬ ಹೆಸರು ನೀಡಿದ. 1853ರಲ್ಲಿ ಲಂಡನ್ ಮೃಗಾಲಯದಲ್ಲಿ ದೊಡ್ಡ ಸಾರ್ವಜನಿಕ ಅಕ್ವೇರಿಯಂ ಅನ್ನು ಸ್ಥಾಪಿಸಲಾಯಿತು. ಆದರೆ ರೋಮನ್ ಚಕ್ರಾಧಿಪತ್ಯದ ಕಾಲದಿಂದಲೇ ಅಕ್ವೇರಿಯಂ ಜನರಿಗೆ ಪರಿಚಿತವಾಗಿತ್ತು. ಆಗ ಅಮೃತಶಿಲೆಯ ತೊಟ್ಟಿಗಳಲ್ಲಿ ಮೀನುಗಳನ್ನು ಸಾಕುತ್ತಿದ್ದರು. ಈಗ ಗಾಜಿನಿಂದ ಮತ್ತು ಆ್ಯಕ್ರಿಲಿಕ್‌ನಿಂದ ಅಕ್ವೇರಿಯಂ ತಯಾರಿಸುತ್ತಾರೆ. ಆ್ಯಕ್ರಿಲಿಕ್, ಗಾಜಿಗಿಂತ ಹಗುರ ಆದರೆ ಗಟ್ಟಿ. ಗಾಜಿನಲ್ಲಿ ಬೇಗನೇ ಗೀರು ಬೀಳುವುದಿಲ್ಲ. ಆ್ಯಕ್ರಿಲಿಕ್‌ನಲ್ಲಿ ಗೀರುಗಳು ಬೀಳುತ್ತವಾದರೂ ಅವನ್ನು ಪಾಲಿಶ್ ಮಾಡಿ ಸರಿಪಡಿಸಬಹುದು. ಎರಡಲ್ಲೂ ಉತ್ತಮ ಅಂಶಗಳಿರುವ ಕಾರಣ ನಿಮ್ಮ ಆಯ್ಕೆ ಯಾವುದೆಂದು ಆಲೋಚಿಸಿ ತೀರ್ಮಾನಿಸಿ.

ಅಕ್ವೇರಿಯಂಗಳಲ್ಲಿ ವಿವಿಧ ಗಾತ್ರ ಹಾಗೂ ಆಕಾರಗಳಿವೆ. ಒಂದು ಲೀಟರ್ ನೀರು ಹಿಡಿಯುವ ಪುಟ್ಟ ಅಕ್ವೇರಿಯಂನಿಂದ ಒಂದು ಸಣ್ಣ ಪ್ರದೇಶವನ್ನೇ ವ್ಯಾಪಿಸಿರುವ ಅಕ್ವೇರಿಯಂಗಳಿವೆ. ಬಾರ್ಸಿಲೋನಾದಲ್ಲಿರುವ, ನೀರೊಳಗೆ ಗಾಜಿನ ಸುರಂಗದ ಮಾದರಿಯಲ್ಲಿ ನಿರ್ಮಿತವಾದ ‘ಅಕ್ವೇರಿಯಂ ಬಾರ್ಸಿಲೋನಾ’ವು 80 ಮೀಟರ್‌ ವಿಸ್ತಾರವಾಗಿದೆ. ಗೋಳಾಕಾರ, ಅಂಡಾಕಾರ, ಆರುಭುಜ, ಅಷ್ಟಭುಜ, ಎಲ್ ಆಕೃತಿ, ಆಯತ, ಚೌಕ ಹೀಗೆ ವಿವಿಧ ಆಕೃತಿಗಳ ಅಕ್ವೇರಿಯಂಗಳಿವೆ. ಘನಾಕೃತಿಯ ಅಕ್ವೇರಿಯಂಗೆ ‘ಫಿಶ್ ಟ್ಯಾಂಕ್’ ಎಂದೂ ಗೋಳಾಕೃತಿಯ/ಬೋಗುಣಿಯಾಕಾರದ ಅಕ್ವೇರಿಯಂಗೆ ಫಿಶ್ ಬೌಲ್ ಎನ್ನುತ್ತಾರೆ. ಫಿಶ್ ಬೌಲ್ ಗಾತ್ರದಲ್ಲಿ ಸಣ್ಣದಿರುವ ಕಾರಣ ಅದರಲ್ಲಿ ಒಂದೆರಡು ಮೀನುಗಳನ್ನಷ್ಟೇ ಸಾಕಬಹುದು. ಫಿಶ್ ಟ್ಯಾಂಕ್‌ಗಳಲ್ಲಿ ಹೆಚ್ಚು ಮೀನುಗಳನ್ನು ಸಾಕಬಹುದು.

ADVERTISEMENT

ಅಕ್ವೇರಿಯಂಗೆ ಸೂಕ್ತ ನಿರ್ವಹಣೆಯ ಅಗತ್ಯವಿದೆ. ಅಕ್ವೇರಿಯಂನ ನೀರನ್ನು ನಿಯಮಿತವಾಗಿ ಗಮನಿಸುತ್ತಿರಬೇಕು. ಅದರಲ್ಲಿ ನೊರೆ ಕಂಡುಬಂದರೆ, ನೀರಿನ ಬಣ್ಣ ಬದಲಾದಂತೆ ಅಂದರೆ ಕಲುಷಿತವಾದಂತೆ ಕಂಡರೆ ತಕ್ಷಣ ನೀರನ್ನು ಬದಲಿಸಬೇಕು. ತಿಂಗಳಿಗೊಮ್ಮೆಯಾದರೂ ಈ ನೀರನ್ನು ಸಂಪೂರ್ಣವಾಗಿ ಬದಲಿಸಿ ಟ್ಯಾಂಕ್ ಸ್ವಚ್ಛಗೊಳಿಸಿ ರೀಸೆಟ್ ಮಾಡುವುದು ಒಳ್ಳೆಯದು. ಮೀನಿನ ಆಹಾರದ ಉಳಿಕೆ, ಮೀನಿನ ವಿಸರ್ಜಿತ ತ್ಯಾಜ್ಯಗಳು ನೀರಿಗೆ ಸೇರುವುದರಿಂದ ನೀರು ಕೆಲವು ದಿವಸಗಳ ನಂತರ ಬಣ್ಣ ಕಳೆದುಕೊಳ್ಳುತ್ತದೆ. ಅಕ್ವೇರಿಯಂನ ಮೀನುಗಳಿಗೆ ಆಮ್ಲಜನಕ ಪೂರೈಸುವ ಸಣ್ಣ ಮೋಟರುಗಳಿವೆ. ಅದು ಆಮ್ಲಜನಕ ಪೂರೈಸುವಾಗ ಗುಳ್ಳೆಗಳು ಮೇಲೇಳುತ್ತವೆ. ಆ ಗುಳ್ಳೆಗಳು ಕಲಾತ್ಮಕವಾಗಿ ಹೊರಬರಲು ಕೆಲವು ಉಪಕರಣಗಳು ಲಭ್ಯವಿವೆ. ಇವುಗಳಿಂದ ಅಕ್ವೇರಿಯಂನ ಸೌಂದರ್ಯ ಇಮ್ಮಡಿಸುತ್ತದೆ. ಫಿಶ್ ಟ್ಯಾಂಕಿಗಾಗಿ ಲೈಟುಗಳು ಲಭ್ಯವಿವೆ. ಥರ್ಮೋಸ್ಟಾಟ್ ಹೀಟರ್/ಕೂಲರ್‌ಗಳು ಅದರ ನೀರಿನ ಉಷ್ಣತೆಯನ್ನು ಸ್ಥಿರವಾಗಿಡುತ್ತದೆ. ಅತಿ ಉಷ್ಣದ ಪ್ರದೇಶಗಳಲ್ಲಿ ಅದರ ಉಷ್ಣತೆ ಸುಮಾರು 25° ಸೆ. ಇರುವಂತೆ ನೋಡಿಕೊಳ್ಳಬೇಕು. ಉಷ್ಣತೆ ತೀರಾ ಹೆಚ್ಚು ಅಥವಾ ಕಡಿಮೆಯಾದರೆ ಮೀನುಗಳ ಜೀವಕ್ಕೆ ಅಪಾಯ. ಅಲಂಕಾರಿಕ ಮೀನುಗಳಿಗಾಗಿ ವಿಶೇಷ ಆಹಾರವು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅಕ್ವೇರಿಯಂನ ಮೀನುಗಳಿಗೆ ಅದನ್ನೇ ಕೊಡಬೇಕು.

ಮನೆಯಲ್ಲಿ ಅಕ್ವೇರಿಯಂ ಇಡುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ಅಧ್ಯಯನಗಳು ದೃಢಪಡಿಸಿವೆ. ಸಣ್ಣ ಮಕ್ಕಳು ಅಕ್ವೇರಿಯಂನಲ್ಲಿ ಬಣ್ಣದ ಮೀನುಗಳ ಚಲನವಲನ ನೋಡಲು ಬಹಳ ಇಷ್ಟಪಡುತ್ತಾರೆ. ಅಳುವ ಪುಟ್ಟ ಮಕ್ಕಳನ್ನು ಅಕ್ವೇರಿಯಂ ತೋರಿಸಿ ಸುಮ್ಮನಿರಿಸಬಹುದು. ಅಕ್ವೇರಿಯಂನ ವೀಕ್ಷಣೆಯಿಂದ ಮಕ್ಕಳ ಕಲ್ಪನಾಶಕ್ತಿ ವಿಸ್ತಾರವಾಗುತ್ತದೆ. ಹಿರಿಯ-ಕಿರಿಯರೆಲ್ಲರ ಮಾನಸಿಕ ಒತ್ತಡವನ್ನು ದೂರವಿಡುತ್ತದೆ. ಅಧಿಕ ರಕ್ತದೊತ್ತಡ ಹಾಗೂ ತೀವ್ರ ಎದೆ ಬಡಿತಗಳನ್ನು ಹತೋಟಿಯಲ್ಲಿಡುತ್ತದೆ. ಅಲ್ಜೀಮರ್ಸ್ ಎಂಬ ಮರೆವಿನ ಕಾಯಿಲೆಯವರ ಮೇಲೂ ಅಕ್ವೇರಿಯಂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಖಿನ್ನತೆ, ಆತಂಕಗಳಿಗೆ ಅಕ್ವೇರಿಯಂ ಸ್ವಾಭಾವಿಕ ಔಷಧಿ. ಚೀನೀ ವಾಸ್ತು ಶಾಸ್ತ್ರವಾದ ಫೆಂಗ್ ಶುಯಿ ಪ್ರಕಾರ ಅಕ್ವೇರಿಯಂ ಅದೃಷ್ಟ ಹಾಗೂ ಐಶ್ವರ್ಯವನ್ನು ತರುತ್ತದೆ. ಮುಂಬಾಗಿಲಿಗೆ ಸಮೀಪದಲ್ಲಿ ಅಕ್ವೇರಿಯಂ ಇಟ್ಟರೆ ಅದೃಷ್ಟವನ್ನು ಒಳಗೆ ಆಹ್ವಾನಿಸಿದಂತೆ ಎಂದು ಚೀನೀಯರು ನಂಬುತ್ತಾರೆ. ಬ್ಯಾಂಕ್, ವ್ಯಾಪಾರ ಮಳಿಗೆಗಳು ಹಾಗೂ ರೆಸ್ಟೋರೆಂಟ್‌ಗಳ ಬಾಗಿಲ ಬಳಿ ಅಕ್ವೇರಿಯಂ ಇಟ್ಟಿರುವುದರ ರಹಸ್ಯ ಇದುವೇ. ಫೆಂಗ್ ಶುಯಿ ಪ್ರಕಾರ ಮಲಗುವ ಕೊಠಡಿ ಹಾಗೂ ಅಡುಗೆ ಕೋಣೆಗಳಲ್ಲಿ ಅಕ್ವೇರಿಯಂ ಇರಬಾರದು.

ಅಕ್ವೇರಿಯಂ ಹಿಂದಿನ ನಂಬಿಕೆಗಳೇನೇ ಇರಲಿ. ಅದು ಮನೆಯ ಅಂದ ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಒಳಾಂಗಣಕ್ಕೆ ಮೆರುಗು ಕೊಡುತ್ತದೆ. ಜನರು ತಮ್ಮ ಆರ್ಥಿಕ ಸ್ಥಿತಿಗತಿಗನುಸಾರ ಅಕ್ವೇರಿಯಂನ ಗಾತ್ರ, ಅದರಲ್ಲಿರಬೇಕಾದ ಮೀನುಗಳ ಜಾತಿ ಹಾಗೂ ಸಂಖ್ಯೆಗಳನ್ನು ನಿರ್ಧರಿಸಬಹುದು. ಮೀನುಗಳ ಸ್ವತಂತ್ರ ಈಜುವಿಕೆಗೆ ಅನುವಾಗುವಂತೆ ಸಾಕಷ್ಟು ಜಾಗ ಸಿಗುವಂತೆ ಮೀನುಗಳ ಸಂಖ್ಯೆ ನಿರ್ಧರಿಸಬೇಕು. ರೀಡ್ ಫಿಶ್, ಕ್ಯಾಟ್ ಫಿಶ್, ಗಪ್ಪೀಸ್, ನಿಯಾನ್ ಟೆಟ್ರಾ, ಚೆರ್ರಿ ಬಾರ್ಬ್, ಗೌರಮಿ, ಟೈಗರ್ ಪ್ಲೆಕೋ, ಗೋಲ್ಡ್ ಫಿಶ್, ವೈಟ್ ಕ್ಲೌಡ್, ಬ್ಲಾಕ್ ಮೋಲಿ ಇತ್ಯಾದಿಗಳು ನಿರ್ವಹಣೆ ಸುಲಭವಿರುವ, ಅತಿ ಸಾಮಾನ್ಯವಾಗಿ ಎಲ್ಲರೂ ಸಾಕುವ ಅಲಂಕಾರಿಕ ಮೀನುಗಳು. ಆಸಕ್ತರು ಅಕ್ವೇರಿಯಂ ತಂದು ಇಷ್ಟದ ಮೀನುಗಳನ್ನು ಅದರಲ್ಲಿ ಸಾಕಿ ಆನಂದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.