ADVERTISEMENT

ಓಎಂಜಿಯಲ್ಲೆಗ ನಿಖಿತಾ ಆನಂದ್

ಪ್ರಜಾವಾಣಿ ವಿಶೇಷ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ಓಹ್ ಮೈ ಗೋಲ್ಡ್ ಕಾರ್ಯಕ್ರಮದ ತಯಾರಿ ಹೇಗಿತ್ತು?
ಪ್ರವಾಸ ಆಧರಿತ ಕಾರ್ಯಕ್ರಮ ಇದು. ಮೊದಲ ಸರಣಿ ನೋಡಿದ್ದರಿಂದ ಕಾರ್ಯಕ್ರಮದ ಬಗ್ಗೆ ಯಾವ ಹಿಂಜರಿಕೆಯೂ ಇರಲಿಲ್ಲ. ಕುಶಲಕರ್ಮಿಗಳೊಂದಿಗೆ  ಮಾತನಾಡಲು ಸಿದ್ಧಳಾಗಿದ್ದೆ. ಟಿಎಲ್‌ಸಿ ವಾಹಿನಿಯ ಸಂಶೋಧನಾ ತಂಡವೂ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿತ್ತು.

ಈ ಪ್ರವಾಸದ ಅನುಭವ ಹೇಗಿತ್ತು?
ಅದ್ಭುತವಾಗಿತ್ತು. ಪ್ರವಾಸದ ದೃಷ್ಟಿಯಿಂದ ನೋಡುವುದೇ ಬೇರೆ. ಆದರೆ ಮಾಹಿತಿಯನ್ನು ಹೆಕ್ಕಲು, ಜ್ಞಾನವನ್ನು ಪಡೆಯಲು ಹೋದಾಗ ಎದುರಿಸುವ ಸವಾಲುಗಳೇ ಬೇರೆ. ಹಲವು ಅಚ್ಚರಿಯ ಸತ್ಯಗಳನ್ನು ಕಂಡುಕೊಂಡೆ.

ಈ ಸರಣಿಯಲ್ಲಿ ಯಾವ ಆಭರಣಗಳ ಬಗ್ಗೆ ಬೆಳಕು ಚೆಲ್ಲಲಿದ್ದೀರಿ?
ಕೋಲ್ಕತ್ತ, ಚೆನ್ನೈ, ಮಹಾರಾಷ್ಟ್ರ, ತಿರುವನಂತಪುರಂ ಆಭರಣಗಳ ಬಗ್ಗೆ ಮಾಹಿತಿಯನ್ನು ಹೆಕ್ಕಲಾಯಿತು. ಇದಕ್ಕೆ ಎಲ್ಲಿಯೂ ಲಿಪಿ ಇರುವ ರಚಿತ ಮಾಹಿತಿ ಇಲ್ಲ. ಎಲ್ಲವನ್ನೂ ಮೌಖಿಕವಾಗಿಯೇ ಸಂಗ್ರಹಿಸಬೇಕಾಗಿತ್ತು.

ನಿಮಗಿಷ್ಟವಾದ ಸಂಗ್ರಹ ಯಾವುದು?
ಚೈನ್ನೈ ಸಂಗ್ರಹ ನನಗಿಷ್ಟವಾಯಿತು. ದಕ್ಷಿಣದವರ ಸುವರ್ಣ ಮೋಹ ಕಂಡು ಸೋಜಿಗವೆನಿಸಿತು. ಸೀರೆಗಳಲ್ಲೂ ಚಿನ್ನ, ಬೆಳ್ಳಿಯ ಕಸೂತಿ, ಜರಿ, ತಂಜಾವೂರ್ ಪೇಂಟಿಂಗ್‌ನಲ್ಲೂ ಚಿನ್ನ ಬಳಸಿರುವುದು... ಹೀಗೆ ಬದುಕಿನಲ್ಲಿ ಚಿನ್ನ ಒಂದಾಗಿರುವುದು ಕಂಡು ಅಚ್ಚರಿಯೆನಿಸಿತು. ಖುಷಿಯೂ ಆಯಿತು. ಉತ್ತರ ಭಾರತದಲ್ಲಿ ದಕ್ಷಿಣದವರ ಬಗ್ಗೆ ಒಂದು ಬಗೆಯ ಅಸಡ್ಡೆ ಇದೆ. ಆದರೆ ಈ ವೈಭವವನ್ನು ಕಂಡ ನಂತರ ನಾನಂತೂ ಪ್ರಭಾವಿತಳಾಗಿದ್ದೇನೆ. ಕಲಾಸಿರಿವಂತಿಕೆಯನ್ನು ಇದರಿಂದಲೇ ಅಳೆಯಬಹುದು.

ಕಳೆದ ಸಲವೂ ಚೆನ್ನೈ ಆಭರಣಗಳ ಬಗ್ಗೆ ಒಂದೆರಡು ಸಂಚಿಕೆಗಳನ್ನು ಮೀಸಲಾಗಿರಿಸಲಾಗಿತ್ತು. ಈ ಸಲ ಇದು ಹೇಗೆ ಭಿನ್ನ?
ಕಳೆದ ಸಲ `ಟೆಂಪಲ್~ ಸಂಗ್ರಹದ ಮೇಲೆ ಹೆಚ್ಚು ಬೆಳಕು ಚೆಲ್ಲಲಾಗಿತ್ತು. ಆದರೆ ಈ ಸಲ ಸಮಕಾಲೀನ ಹಾಗೂ ದಿನನಿತ್ಯದ ಆಭರಣಗಳ ಬಗ್ಗೆ ಚರ್ಚಿಸಲಾಯಿತು. ಚೆನ್ನೈ  ಹಾಗೂ ಕೇರಳದ ಬಗ್ಗೆ ಕಳೆದ ಸರಣಿಯಲ್ಲಿಯೂ ಮಾಹಿತಿ ನೀಡಲಾಗಿತ್ತು. ಆದರೆ ಇಲ್ಲಿಯ ಸಂಪ್ರದಾಯ ಮತ್ತು ಇತಿಹಾಸ, ಪರಂಪರೆಯ ಸಿರಿಯನ್ನು ಒಂದೆರಡು ಸಂಚಿಕೆಗಳಲ್ಲಿ ಹಿಡಿದಿಡಲಾಗುವುದು ಅಸಾಧ್ಯ. ಇನ್ನೊಂದು ಸರಣಿಯನ್ನು ಮುಗಿಸಿದ ಮೇಲೆಯೂ ಇನ್ನೂ ಹೇಳಲಿಕ್ಕಿದೆ ಎನ್ನುವಷ್ಟು ಮಾಹಿತಿಯ ಕಣಜ ಇಲ್ಲಿದೆ.

ಮಹಾರಾಷ್ಟ್ರ ಆಭರಣಕ್ಕೂ ದಕ್ಷಿಣದ ಆಭರಣಗಳಿಗೂ ಇರುವ ವ್ಯತ್ಯಾಸಗಳೇನು?
ಮಹಾರಾಷ್ಟ್ರದ ಆಭರಣಗಳಲ್ಲಿ ಸಾಕಷ್ಟು ಅರಗನ್ನು ಚಿನ್ನದೊಳಗೆ ತುಂಬಲಾಗುತ್ತದೆ. ಧರಿಸಲು ಹಗುರವಾಗಿದ್ದರೂ ನೋಡಲಂತೂ ವೈಭವಪೂರ್ಣ ಎನಿಸುತ್ತವೆ. ನತ್ತು, ಭೋರಮಾಳಗಳು ಗಮನ ಸೆಳೆಯುತ್ತವೆ. ಚೆನ್ನೈ ಮೂಲದ ಆಭರಣಗಳನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಮಾತ್ರ ತೊಡಬಹುದು. ಮರಾಠಿಗರ ಆಭರಣಗಳನ್ನು ಸಮಕಾಲೀನ ಟ್ರೆಂಡ್ ಜೊತೆಗೂ ಥಳಕು ಹಾಕಬಹುದು. ಇದೇ ಪ್ರಮುಖ ವ್ಯತ್ಯಾಸ.

ಇಡೀ ಪ್ರವಾಸದ ನಂತರ ನಿಮ್ಮಲ್ಲಿ ಆದ ಬದಲಾವಣೆ ಏನು?
ಪ್ರವಾಸಕ್ಕೆ ಮುನ್ನ ಕೇವಲ ಚಿನ್ನದಾಭರಣಗಳ ಮಾಹಿತಿ ಎಂದುಕೊಂಡಿದ್ದೆ. ಆದರೆ ಜೊತೆಜೊತೆಗೆ ಬಂಗಾರದ ಬದುಕು ಏನೆಂದು ಅರ್ಥ ಮಾಡಿಕೊಂಡೆ. ಭಾರತೀಯರಲ್ಲಿರುವ ಸೌಹಾರ್ದ ಮತ್ತವರ ಬೆಚ್ಚನೆಯ ಪ್ರೀತಿ ಕಂಡು ಆರ್ದ್ರಳಾದೆ.

ಇದೊಂದು ಪ್ರವಾಸ ಅನ್ನುವುದಕ್ಕಿಂತ ಪಾಠ ಅನ್ನಬಹುದು. ಈ ಭಾಗದ ಆಹಾರ ಸಂಸ್ಕೃತಿಯಂತೂ ವಿಶಿಷ್ಟ ಮತ್ತು ವಿಶೇಷವಾಗಿದೆ. ಇಡ್ಲಿ, ದೋಸೆಗಳನ್ನಂತೂ ಮರೆಯುವುದು ಅಸಾಧ್ಯ. ಮೀನಿನ ಖಾದ್ಯವೂ ಬೆರಳು ನೆಕ್ಕುವಂತಿದ್ದವು.

ಮುಂದಿನ ಪ್ರಾಜೆಕ್ಟ್‌ಗಳು ಯಾವವು?
ಸದ್ಯಕ್ಕೆ ಓಎಂಜಿ ಸರಣಿ ಅ.22ರಿಂದ ಪ್ರತಿ ಸೋಮವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಜಿಮ್ಮಿ ಶೇರ್ಗಿಲ್ ಜೊತೆಗೆ 4-2ಕಾ ಒನ್ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.