ADVERTISEMENT

ಓದಿಗಾಗಿ ಆಟ-ಗಲಾಟಾ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 19:30 IST
Last Updated 19 ಜೂನ್ 2012, 19:30 IST
ಓದಿಗಾಗಿ ಆಟ-ಗಲಾಟಾ
ಓದಿಗಾಗಿ ಆಟ-ಗಲಾಟಾ   

`ನನಗೆ ಓದುವ ಹವ್ಯಾಸ ಇತ್ತು. ನನ್ನ ಮಾತೃಭಾಷೆ ತಮಿಳು. ಓದುತ್ತಿರುವಂತೆ ಚಿತ್ರಗಳು ದೃಶ್ಯ ಕಾವ್ಯದಂತೆ ಮನದ ಮುಂದೆ ಮೂಡುತ್ತಿತ್ತು. ನಗರದ ಮಕ್ಕಳನ್ನು ನೋಡಿದಾಗಲೆಲ್ಲ, ಇವರು ಮಾತೃಭಾಷೆಯಲ್ಲಿ ಓದುವ ಆನಂದವನ್ನು ಕಳೆದುಕೊಳ್ಳುತ್ತಿದ್ದಾರಲ್ಲ.. ಎಂದು ಅನಿಸುತ್ತಿತ್ತು. ಆಗಲೇ ಆಟ-ಗಲಾಟದ ಪರಿಕಲ್ಪನೆ ಮೂಡಿದ್ದು~

ಹೀಗೆ ಲಲಿತಾಲಕ್ಷ್ಮಿ ತಮ್ಮ ಸಂಸ್ಥೆ ಆಟಾ ಗಲಾಟದ ಆರಂಭದ ಬಗ್ಗೆ ತಿಳಿಸುತ್ತಿದ್ದರು.
ತಮ್ಮ ಮನೆಯನ್ನೇ ಆಟಾ ಗಲಾಟಕ್ಕಾಗಿ ವಿನ್ಯಾಸಗೊಳಿಸಿರುವ ಸುಬೋಧ್ ಶಂಕರ್ ಹಾಗೂ ಲಲಿತಾ ಲಕ್ಷ್ಮಿ ದಂಪತಿಯ ಕನಸಿನ ಕೂಸು ಇದು.

ಇದು ಬರೀ ಪುಸ್ತಕದ ಅಂಗಡಿಯಲ್ಲ. ಕೇವಲ ಪುಸ್ತಕವನ್ನು ಮಾರುವುದು ಈ ಮಳಿಗೆಯ ಕೆಲಸವಲ್ಲ. ಓದುವ ಅಭಿರುಚಿ ಹುಟ್ಟಿಸುವುದು, ಪುಸ್ತಕಗಳ ಆನಂದಿಸುವುದನ್ನು ಕಲಿಸುವುದು ಇವರ ಉದ್ದೇಶವಂತೆ.

ADVERTISEMENT

ಇಟ್ಟಿಗೆಯ ಮನೆಯಂತೆ ಕಾಣುವ ಈ ಕಟ್ಟಡದಲ್ಲಿ ಒಂದು ಹಜಾರವಿದೆ. ಅಲ್ಲಿ ಸೀಮಿತ ಜನರು ಅಜ್ಜನ ಕಾಲದ ಕುರ್ಚಿಗಳ ಮೇಲೆ ಆಸೀನರಾಗಿ ಪುಸ್ತಕದ ಓದನ್ನು ಕೇಳಬಹುದಾಗಿದೆ. ವಾರದ ದಿನಗಳಲ್ಲಿ ಬಂದರೆ ತಮಗಿಷ್ಟವಾದ ಪುಸ್ತಕವನ್ನು ಪಡೆದು, ಅಲ್ಲಿಯೇ ಪಡಸಾಲೆಯಲ್ಲಿ ಅಥವಾ ಬಾಲ್ಕನಿಯಲ್ಲಿ ಕುಳಿತು ಓದಬಹುದು.

ಬಿಡುವಿನ ಸಮಯದಲ್ಲಿ ಓದುವಾಗ ಕಾಫಿ ಬೇಕು ಎನಿಸಿದರೆ ಅಪ್ಪಟ ಫಿಲ್ಟರ್ ಕಾಫಿ ಮಾತ್ರ ಇಲ್ಲಿ ದೊರೆಯುತ್ತದೆ. ಕಾಫಿಯೊಂದಿಗೆ ಕೈಯಿಂದಲೇ ಮಾಡಿದ ಬಿಸ್ಕತ್ತು, ಬ್ರೆಡ್ ಸಹ ದೊರೆಯುತ್ತದೆ.

`ಒಟ್ಟಾರೆ ಓದುವುದನ್ನು ಆನಂದಿಸುವಂತೆ ಮಾಡುವುದು ನಮ್ಮ ಆಶಯವಾಗಿತ್ತು. ಆನಂದಿಸಿದಾಗಲೇ ಹುಚ್ಚು ಹುಟ್ಟುವುದು. ನಂತರ ಅಭಿರುಚಿ ನಿರ್ಮಾಣವಾಗುವುದು ಕಷ್ಟವೇನಲ್ಲ~ ಎನ್ನುವುದು ಲಕ್ಷ್ಮಿ ಅಭಿಪ್ರಾಯ. ಇದೇ ಕಾರಣಕ್ಕೆ ಆಟಾ ಗಲಾಟಾದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಪುಸ್ತಕಗಳು ಲಭ್ಯ. ಭಾರತೀಯ ಇಂಗ್ಲಿಷ್ ಬರಹಗಾರರ ಪುಸ್ತಕ ಸಂಗ್ರಹವೂ ಲಭ್ಯ.

`ಪುಸ್ತಕ ಕೊಳ್ಳುವವರು ಕಾಲಾಡಿಸಿಕೊಂಡು ಬಂದು, ಕಣ್ಣಾಡಿಸಿ ಕೊಳ್ಳುವುದಲ್ಲ. ಒಂದರೆ ಗಂಟೆ ಕೂತು, ಪುಟಗಳನ್ನು ಓದಿ, ಅದನ್ನು ಬಿಡಲಾಗದಿದ್ದರೆ ಕೊಂಡೊಯ್ಯಬೇಕು. ಇದು ಪುಸ್ತಕ ಕೊಳ್ಳುವ ರೀತಿಯಾಗಬೇಕು~ ಎಂಬುದು ಲಲಿತಾ ಲಕ್ಷ್ಮಿ ಅಭಿಪ್ರಾಯವಾಗಿದೆ.
ತಮಿಳುನಾಡು ಮೂಲದ ಲಲಿತಾ ಲಕ್ಷ್ಮಿ ಹಾಗೂ ಸುಬೋಧ್ ಶಂಕರ್ ಬೆಂಗಳೂರಿಗೆ ಬಂದು ಒಂದು ದಶಕ ಕಳೆದಿದೆ. ಕೋರಮಂಗಲದಲ್ಲಿದ್ದ ತಮ್ಮ ಮನೆಯನ್ನೇ ಆಟಾ ಗಲಾಟಾಕ್ಕಾಗಿ ಮರುವಿನ್ಯಾಸಗೊಳಿಸಿದರು.

ಇಲ್ಲೆಗ ಪ್ರತಿ ವಾರಾಂತ್ಯವೂ ಓದಿಗಾಗಿ ಒಂದು ಗಂಟೆಯನ್ನು ಮೀಸಲಿರಿಸಲಾಗಿದೆ. ಕನ್ನಡ, ಹಿಂದಿ ಭಾಷೆಯ ಓದುವ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ. ಅಷ್ಟೇ ಅಲ್ಲ, ಈ ದಿನಗಳಲ್ಲಿ ನೇಪಥ್ಯಕ್ಕೆ ಸರಿಯುತ್ತಿರುವ ಒರಿಗಾಮಿ ಕಲೆ, ನಟನೆ, ನಾಟಕದ ಓದು, ಕಥನ, ಕತೆ ಹೇಳುವ ಶಿಬಿರ ಮುಂತಾದವುಗಳನ್ನು ಏರ್ಪಡಿಸಲಾಗುತ್ತಿದೆ.

ಕೆಲವೊಂದು ಉಚಿತ ಶಿಬಿರಗಳಾಗಿದ್ದರೆ, ಕೆಲವೊಂದಕ್ಕೆ ಕಡಿಮೆ ಮೊತ್ತದ ಶುಲ್ಕ ವಿಧಿಸಲಾಗುತ್ತಿದೆ. ಆದರೆ ನೋಂದಣಿ ಮಾಡಿಸಿಕೊಳ್ಳಬೇಕಾದದ್ದು ಕಡ್ಡಾಯ. ಸೀಮಿತ ಸ್ಥಳಾವಕಾಶ ಇರುವುದೇ ಇದಕ್ಕೆ ಕಾರಣ.

ಸಹಜ ಗಾಳಿ ಬೆಳಕಿಗೆ ಕೊರತೆ ಇರದ ಕಟ್ಟಡ ಇದಾಗಿದೆ. ವಾರಾಂತ್ಯದಲ್ಲಿ ಅಥವಾ ಬಿಡುವಿದ್ದಾಗ ಒಮ್ಮೆ ಭೇಟಿ ನೀಡಬಹುದಾದ ತಾಣ ಆಟಾ-ಗಲಾಟಾ.

ಹೆಚ್ಚಿನ ಮಾಹಿತಿಗೆ ಆಟ-ಗಲಾಟಾ: ವಿಳಾಸ: ಆಟ್ಟಾ ಗಲಾಟಾ, 75, 2ನೇ ಮೇನ್, 1ನೇ ಬ್ಲಾಕ್, ಕೋರಮಂಗಲ, ಬೆಂಗಳೂರು.
ನೋಂದಣಿಗೆ: 3018 1626, 96325 10126.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.