ADVERTISEMENT

ಓದುವ ಹುಡುಗರ ವೆಬ್‌ಸೈಟ್

ಸತೀಶ ಬೆಳ್ಳಕ್ಕಿ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಕ್ಯಾಂಟೀನ್ ಮೂಲೆಯಲ್ಲಿ ನಿಂತು ಹರಟೆ ಹೊಡೆವ, ಕಾಲೇಜಿಗೆ ಹೊಸದಾಗಿ ಸೇರಿದ ಹುಡುಗಿಯರನ್ನು ಚುಡಾಯಿಸುತ್ತಾ ಕಾಲ ಕಳೆವ ವಿದ್ಯಾರ್ಥಿಗಳ ನಡುವೆ ಈ ಹುಡುಗರು ತುಸು ಭಿನ್ನವಾಗಿ ಕಾಣಿಸುತ್ತಾರೆ. ಓದಿನ ಜತೆ ಜತೆಗೆ ತಮ್ಮದೇ ಒಂದು ವೆಬ್‌ಸೈಟ್‌ನ್ನು ರೂಪಿಸುವ ಮೂಲಕ ಓರಿಗೆಯ ವಿದ್ಯಾರ್ಥಿಗಳಲ್ಲಿ ಪುಟ್ಟದೊಂದು ಬೆರಗು ಹುಟ್ಟುಹಾಕಿದ್ದಾರೆ. ಮಲ್ಟಿ ನೆಟ್‌ವರ್ಕಿಂಗ್ ಎಂದು ಹೇಳಿಕೊಳ್ಳುವ ‘binox.me’ ಮಾಹಿತಿ ಮತ್ತು ಮನರಂಜನೆಯ ಆಗರ.

ಬಸವನಗುಡಿಯ ನ್ಯಾಷನಲ್ ಪದವಿ ಕಾಲೇಜಿನಲ್ಲಿ ತೃತೀಯ ವರ್ಷದ ಬಿಸಿಎ ಕಲಿಯುತ್ತಿರುವ ಅಮಿತ್ ಚಂದ್ರಹಾಸ, ಅನೂಪ್ ಸಂತಾನಂ, ಚಂದ್ರಮೌಳಿ ವಿ. ಜಮದಗ್ನಿ, ಗುರುಮೂರ್ತಿ ಎನ್, ಬಿ.ಎಸ್. ನರೇಂದ್ರ, ಸಚಿನ್ ಎಂ. ಕುಮಾರ್, ಸಂಕರ್ಷಣ ಎಸ್. ಮತ್ತು ಎಂ.ಎಸ್. ಶ್ರೇಯಸ್ ‘binox.me’ ವೆಬ್‌ಸೈಟ್‌ನ ರೂವಾರಿಗಳು.

ಅಂದಹಾಗೆ, ‘binox.me’ ವೆಬ್‌ಸೈಟ್ ಈ ಎಂಟು ವಿದ್ಯಾರ್ಥಿಗಳ ಕಲ್ಪನೆಯ ಕೂಸು. ಈ ಕೂಸಿಗೆ ರಕ್ತ ಮಾಂಸ ತುಂಬಿ ಸುಂದರವಾಗಿ ರೂಪಿಸಿ ಮಾಹಿತಿ ಕಣಜವಾಗಿಸುವುದರ ಹಿಂದೆ ಇವರೆಲ್ಲರ ಒಂದು ವರ್ಷದ ಶ್ರಮವಿದೆ.

ಅಪ್ಪ ಕೊಡುತ್ತಿದ್ದ ಪಾಕೆಟ್ ಮನಿಯಲ್ಲಿ ತಿಂಗಳಿಗೆ ಇಷ್ಟು ಅಂತ ಉಳಿಸಿ, ಹಣ ಕೂಡಿಟ್ಟು ಈ ವೆಬ್‌ಸೈಟ್ ರೂಪಿಸಲು ಹಣ ಹೊಂದಿಸಿದ್ದಾರೆ. ಸೃಜನಶೀಲರೆಲ್ಲರೂ ತಮ್ಮ ವಿಭಿನ್ನತೆಯಿಂದ ಇಷ್ಟವಾಗುತ್ತಾರೆ.

ಆದರೆ, ಕೆಲವರು ಮಾತ್ರ ಹೊಸತನ್ನು ಹುಟ್ಟುಹಾಕುತ್ತಾರೆ ಅನ್ನೋ ಮಾತು ಈ ಹುಡುಗರಿಗೆ ಸೂಕ್ತವಾಗಿ ಹೊಂದುತ್ತದೆ. ಪ್ರತಿಯೊಬ್ಬರೂ ಸುಲಭವಾಗಿ ಉಪಯೋಗಿಸುವಷ್ಟು ಸರಳವಾಗಿರುವ ‘binox.me’ ವೆಬ್‌ಸೈಟ್ ರೂಪಿಸಿರುವುದು ಇವರ ಅಗ್ಗಳಿಕೆ.

ಈ ವೆಬ್‌ಸೈಟ್‌ನಲ್ಲಿ ಹಲವು ವೈಶಿಷ್ಟ್ಯಗಳಿವೆ. ಬೈನಾಕ್ಸ್ ಸರ್ಚ್ ಎಂಜಿನ್, ಆನ್‌ಲೈನ್ ನ್ಯೂಸ್‌ಪೇಪರ್, ಫೀಡ್‌ಬ್ಯಾಕ್ ಝೋನ್, ರಿಲೇಷನ್ ರಿಕ್ವೆಸ್ಟ್, ಮೀಡಿಯಾ, ಮೈ ಪೇಜ್, ಮೈ ಹೋಮ್ ಎಂಬ ಶಾರ್ಟ್ ಲಿಂಕ್‌ಗಳಿವೆ. ಈ ಒಂದೊಂದು ಲಿಂಕ್‌ನಲ್ಲೂ ಸಾಕಷ್ಟು ಮಾಹಿತಿ ಮನರಂಜನೆಗಳು ಅಡಗಿವೆ. ಇಲ್ಲಿ ಸಂಗೀತ ಕೇಳುವ, ಸ್ನೇಹಿತರೊಂದಿಗೆ ಚಾಟ್ ಮಾಡುವ ಅವಕಾಶವಿದೆ. ಇವುಗಳ ಜತೆಗೆ ಬೈನಾಕ್ಸ್ ಬ್ಲಾಗ್, ಮೀಡಿಯಾ ಶೇರಿಂಗ್, ಗಾಸಿಪ್ ತಿಳಿಯವ ಅವಕಾಶ ಲಭ್ಯ.

ಬೈನಾಕ್ಸ್ ಆನ್‌ಲೈನ್ ನ್ಯೂಸ್‌ಪೇಪರ್‌ನಲ್ಲಿ ದಿನದ ಟಾಪ್ ನ್ಯೂಸ್, ಕ್ಷಣ ಕ್ಷಣದ ರಾಷ್ಟ್ರೀಯ, ಅಂತರರಾಷ್ಟ್ರೀಯ, ವ್ಯಾಪಾರ, ಕ್ರೀಡೆ, ಸಂಗೀತ, ಕಲೆ ಹಾಗೂ ಪ್ರವಾಸಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಬಹುದು. ನಿಮ್ಮದೇ ಆಲ್ಬಂ ರೂಪಿಸಿ ಅಪ್‌ಲೋಡ್ ಮಾಡಬಹುದು. ರಿಲೇಷನ್ಸ್ ವಿಭಾಗದಲ್ಲಿ ಹೊಸ ಸ್ನೇಹಿತರನ್ನು ಪರಿಚಯ ಮಾಡಿಕೊಳ್ಳಬಹುದು, ಫ್ರೆಂಡ್ ರಿಕ್ವೆಸ್ಟ್‌ಗಳನ್ನು ಕಳುಹಿಸಬಹುದು.
 
ಜತೆಗೆ ಇಲ್ಲಿ ಕಂಪ್ಯೂಟರ್ ಗೇಮ್‌ಗಳನ್ನು ಆಡುವ ಅವಕಾಶ ಲಭ್ಯ. ಇನ್ನುಳಿದಂತೆ ಸ್ನೇಹಿತರೊಂದಿಗೆ ಚಾಟ್ ಮಾಡಬಹುದು, ಮೆಸೇಜ್ ಓದಬಹುದು, ರಿಪ್ಲೈ ಮಾಡಬಹುದು.

ಬೈನಾಕ್ಸ್ ಬಳಕೆದಾರರು ಒಂದು ಕೆಲಸ ಮಾಡುತ್ತಲೇ ಅನೇಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಇಲ್ಲಿ ಹೊಸ ಟ್ಯಾಬ್‌ಗಳನ್ನು ತೆರೆಯುವ ಕಿರಿಕಿರಿ ಇಲ್ಲ. ಬೈನಾಕ್ಸ್ ಬಳಕೆದಾರ ಸಂಗೀತ ಆಲಿಸುತ್ತಲೇ ತನಗಿಷ್ಟವಾದ ಗೀತೆಗಳನ್ನು ಅಪ್‌ಲೋಡ್ ಮಾಡಬಹುದು, ವಿಡಿಯೊ ನೋಡಬಹುದು. ಮೆಸೇಜ್‌ಗಳನ್ನು ಓದಬಹುದು. ಅದಕ್ಕೆ ಉತ್ತರ/ಪ್ರತಿಕ್ರಿಯೆ ಕೂಡ ನೀಡಬಹುದು. ಬ್ಲಾಗ್ ಕೂಡ ರೂಪಿಸಬಹುದು. ಇವೆಲ್ಲಕ್ಕೂ ಯಾವುದೇ ಶುಲ್ಕವಿಲ್ಲ.

`ಬೈನಾಕ್ಸ್~ ಎಂಬುದು ಬೈನಾಕ್ಯುಲರ್‌ನ ಶಾರ್ಟ್‌ಫಾರ್ಮ್. `ಮಿ~ ಎಂದರೇ ನಾವು ಎಂಟು ಜನ ವಿದ್ಯಾರ್ಥಿಗಳು. ಇವೆರಡು ಪದಗಳನ್ನು ಸೇರಿಸಿ ನಮ್ಮ ವೆಬ್‌ಸೈಟ್‌ಗೆ ‘binox.me’ ಎಂದು ಹೆಸರಿಟ್ಟಿದ್ದೇವೆ~ ಎನ್ನುತ್ತಾರೆ ಅನೂಪ್.

`ಈ ವೆಬ್‌ಸೈಟ್ ರೂಪಿಸಲು ಸಾಕಷ್ಟು ತೊಡಕುಗಳನ್ನು ಎದುರಿಸಿದ್ದೇವೆ. ಒತ್ತಡವನ್ನೂ ಅನುಭವಿಸಿದ್ದೇವೆ. ಈಗ ನಮ್ಮ ಶ್ರಮಕ್ಕೆ ಫಲ ಸಿಕ್ಕಿದೆ. ಈಗಿರುವ ವೆಬ್‌ಸೈಟನ್ನು ಇನ್ನೂ ಅಪ್‌ಡೇಟ್ ಮಾಡುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ~ ಎನ್ನುತ್ತಾರೆ ಚಂದ್ರಮೌಳಿ.

ಈಗಾಗಲೇ ಎರಡೂ ಸಾವಿರಕ್ಕೂ ಹೆಚ್ಚು ಜನ ಬೈನಾಕ್ಸ್ ಬಳೆಕೆದಾರರಿದ್ದಾರೆ. ಮುಂದೆ ಇನ್ನೂ ಹೆಚ್ಚುವ ನಿರೀಕ್ಷೆ ಇರಿಸಿಕೊಂಡಿದೆ ಈ ತಂಡ. ವೆಬ್‌ಸೈಟ್ ಜನಪ್ರಿಯಗೊಳಿಸುವ ಸಲುವಾಗಿ ಅನೇಕ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಹುಮ್ಮಸ್ಸಿನಲ್ಲೂ ಇದ್ದಾರೆ ಈ ಹುಡುಗರು.

ಹಾಗೆಯೇ ವೆಬ್‌ಸೈಟ್‌ನಲ್ಲಿ ಆ್ಯಡ್‌ಸ್ಪೇಸ್ ಕೊಟ್ಟು ಹಣ ಸಂಗ್ರಹಿಸುವ ಲೆಕ್ಕಾಚಾರದಲ್ಲೂ ತೊಡಗಿದೆ. ಮುಂದಿನ ದಿನಗಳಲ್ಲಿ ಇ-ಕಾಮರ್ಸ್ ಅಥವಾ ಆನ್‌ಲೈನ್ ಶಾಪಿಂಗ್ ರೂಪಿಸುವ ಯೋಚನೆ ಕೂಡ ಇದೆ ಎನ್ನುತ್ತಾರೆ ಅವರು.

ಪದವಿ ವ್ಯಾಸಂಗ ಮಾಡುತ್ತಿರುವ ಹುಡುಗರೆಲ್ಲಾ ಸೇರಿಕೊಂಡು ಕುತೂಹಲಕ್ಕೆಂದು ರೂಪಿಸಿದ ವೆಬ್‌ಸೈಟನ್ನು ಇನ್ನೂ ಅಭಿವೃದ್ಧಿಪಡಿಸುವ ಯೋಚನೆ ಇದೆ. ವೆಬ್‌ಸೈಟ್ ಕುರಿತು ಪ್ರಚಾರ ಮಾಡುವ ಸಲುವಾಗಿ ಈ ವಿದ್ಯಾರ್ಥಿಗಳೆಲ್ಲಾ ಸೇರಿ ಈ ತಿಂಗಳ ಅಂತ್ಯದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸುವ ಹುರುಪಿನಲ್ಲಿದ್ದಾರೆ.

ಹುಡುಗರ ಹುಮ್ಮಸ್ಸಿಗೆ ಸ್ಫೂರ್ತಿ ತುಂಬಿ ಪ್ರೋತ್ಸಾಹಿಸಿದ್ದು ಇವರ ಇತರೆ ಸ್ನೇಹಿತರು ಹಾಗೂ ಪೋಷಕರು. ಜತೆಗೆ ಶಿಕ್ಷಕಿ ಪಿ.ವಿ. ಅಂಜನಾ ಕೊಟ್ಟ ಬೆಂಬಲವನ್ನು ಮನಸಾರೆ ನೆನಪಿಸಿಕೊಳ್ಳುತ್ತಾರೆ ಈ ಹುಡುಗರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.