ADVERTISEMENT

ಓದು ಬಂಡವಾಳ ಮಾತು ನಿರರ್ಗಳ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ಸಿಹಿಕಹಿ~ ಧಾರಾವಾಹಿಯಿಂದ ಇತ್ತೀಚಿನ `ಬೊಂಬಾಟ್ ಭೋಜನ~ದವರೆಗೂ ಚಟ್‌ಪಟ್ ಮಾತಾಡುತ್ತಾ, ಎಲ್ಲಾ ವಯೋಮಾನದ ಜನರನ್ನು ರಂಜಿಸಿ ಮನೆಮಾತಾಗಿರುವ ಸಿಹಿಕಹಿ ಚಂದ್ರು ಅವರು ಇಲ್ಲಿ ಮಾತಿನ ತೋರಣ ಕಟ್ಟಿದ್ದಾರೆ. “

ಮಾತು ಯಾವಾಗ ನನ್ನ ಕೈಹಿಡೀತು ಅಂತ ಹೇಳಿದ್ರೆ ಗಾಬರಿಯಾಗ್ತೀರಿ. ಬುದ್ಧಿ ಬಂದಾಗಿನಿಂದ ಮಾತಾಡ್ತಲೇ ಇದ್ದೇನೆ. ಮುಂದೊಂದು ದಿನ ನನ್ನ ಕೆರಿಯರ್‌ಗೆ ಅದು ಅಡಿಪಾಯವಾದೀತು ಅನ್ನೋ ಕಲ್ಪನೆಯೂ ಇರಲಿಲ್ಲ.

ವಿದ್ಯಾರ್ಥಿಯಾಗಿದ್ದಾಗ...
ಬರೀ ತರ‌್ಲೆ, ಚೇಷ್ಟೆ ಮಾಡಿಕೊಂಡು ಇದ್ದವ ನಾನು. ಅವರಿವರ ಗಮನ ಸೆಳೆಯಲು, ಅಂದ್ರೆ `ಇಂಪ್ರೆಸ್~ ಮಾಡಲೆಂದೇ ಮಾತಾಡ್ತಿದ್ದೆ. ಹುಡುಗಿಯರನ್ನು ಇಂಪ್ರೆಸ್ ಮಾಡೋದೇ ಉದ್ದೇಶವಾಗಿತ್ತು ಅಂದ್ಕೊಳ್ಳಿ.

ADVERTISEMENT

ಮಾತು ಅಂದ್ರೆ...
ಸಕಲವೂ! ಎಲ್ಲದಕ್ಕೂ ಮೂಲ ಮಾತು. ಬದುಕಿನ ಎಲ್ಲಾ ಆಯಾಮಗಳಲ್ಲೂ ಮಾತು ಪ್ರಮುಖ ಪಾತ್ರ ವಹಿಸುತ್ತದೆ. ನಾವಾಡುವ ಮಾತು ನಮ್ಮನ್ನು ನಾವು ಪ್ರಸ್ತುತಪಡಿಸಿಕೊಳ್ಳುವ ಮಾಧ್ಯಮವಲ್ವೇ?

ಅದ್ರಲ್ಲೂ ನಮ್ಮ ಫೀಲ್ಡ್‌ನಲ್ಲಿ ಮಾತು ಬಹಳ ಮುಖ್ಯ. ಆದರೆ ಎಲ್ಲಾ ಸಂದರ್ಭಗಳಲ್ಲೂ ಮೌನಕ್ಕೆ ಮಾತನ್ನು ಮೀರಿದ ಅರ್ಥ, ಮೌಲ್ಯವಿದೆ ಅನ್ನೋದನ್ನೂ ಮರೆಯಬಾರದು. ಹಾಗಾಗಿ, ಅಗತ್ಯವಿದ್ದಲ್ಲಿ ಅವಶ್ಯವಿರುವಷ್ಟು, ತೂಕದ ಮಾತು ಆಡಿದರೆ ನಮಗೂ ಶೋಭೆ, ಕಾರ್ಯಕ್ರಮಕ್ಕೂ ಶೋಭೆ. ಇದು ನಿತ್ಯಜೀವನಕ್ಕೂ ಅನ್ವಯ.

ಕರಿಯರ್...
ಟಿ.ವಿ.ಯಲ್ಲಿ ನಿರೂಪಕನಾಗಿ ನನ್ನ ಕೆರಿಯರ್ ಶುರುವಾಯ್ತು. ಆನಂತರ ಅಭಿನಯ. ಆಮೇಲೆ ನಿರ್ದೇಶಕ... `ಬೊಂಬಾಟ್ ಭೋಜನ~ ಸರಣಿಯಲ್ಲಿ ಊಟದ ಜತೆ ಸವಿಯಾದ ಮಾತೂ ಸೇರ‌್ಕೊಂಡಿತು.

ಗೀತಾ ಜತೆ...
`ಸಿಹಿಕಹಿ~ ಧಾರಾವಾಹಿಯಲ್ಲಿ ಗಂಡ ಹೆಂಡತಿಯಾಗಿ ನಟಿಸುತ್ತಾ, ಅದೇ ಮಾತಿನ ಸೋನೆ ಮಳೆ ಸುರಿಸಿ ಅವಳ ಮನಸ್ಸನ್ನು ಗೆದ್ದೆ. ನಿಜಜೀವನದಲ್ಲೂ ಗಂಡ ಹೆಂಡತಿಯಾಗಿರೋಣ ಅಂತ ನಿರ್ಧರಿಸಿ ಮದುವೆಯೂ ಆದ್ವಿ. ತಮಾಷೆ ಗೊತ್ತಾ? ಮದುವೆ ಆಗೋವರೆಗೂ ನಾನು ಮಾತಾಡಿದ್ದೇ ಮಾತಾಡಿದ್ದು.

ಆಮೇಲೂ ಕೆಲವು ವರ್ಷ ಮಾತಾಡಿದೆ ಅನ್ನಿ. ನಂತರ ಅವಳು `ಮಾತಾಡಲು~ ಶುರು ಮಾಡಿದಳು. ನಾನು ಕೇಳಿಸಿಕೊಳ್ಳಲು ಶುರುಮಾಡಿದೆ. ಈಗ ಮನೇಲಿ ಅವಳೇ ಮಾತಾಡ್ತಾಳೆ. ನಾನು ಕೇಳ್ತಿರ‌್ತೀನಿ. ಆದರೆ ಹೊರಗೆ ನಾನು ಮಾತಾಡ್ತೀನಿ. ಪ್ರಪಂಚವೆಲ್ಲ ಕೇಳುತ್ತೆ... ಹ್ಹಹ್ಹಹ್ಹ...

ಒಂದು ಮಾತು ಹೇಳ್ಲಾ? ಮದುವೆ ಆದ್ಮೇಲೆ ಪುರುಷರು `ವೈಫ್ ಈಸ್ ಆಲ್ವೇಸ್ ರೈಟ್~ ಅನ್ನೋದನ್ನು ಅರ್ಥಮಾಡ್ಕೋಬೇಕು, ತಿಳ್ಕೋಬೇಕಪ್ಪ. (ನಾನು ತಿಳ್ಕೊಂಡಿದ್ದೀನಿ). ಯಾಕಂದ್ರೆ ಅವ್ರ ಸರಿಯಾದದ್ದನ್ನೇ ಮಾತಾಡ್ತಾರೆ ಕಣ್ರೀ...

ಮಾತಿಗೆ ಬಂಡವಾಳ...
ಮಾತನ್ನೇ ಬಂಡವಾಳವಾಗಿ ಬಯಸುವಕ್ಷೇತ್ರದಲ್ಲಿ ಜನ ಮೆಚ್ಚುವ ಮಾತು ಹೊರಬರಬೇಕಾದರೆ ನಮ್ಮಲ್ಲಿ ಬಂಡವಾಳವಿರಲೇಬೇಕು. ಅದು ಕಾಂಚಾಣವಲ್ಲ. ನಮ್ಮ ತಲೆಯಲ್ಲಿ ಏನು ಸರಕು ಇದೆ ಅನ್ನೋದು.

ಲೋಕಜ್ಞಾನ, ಸಾಮಾನ್ಯಜ್ಞಾನ ಇದ್ದಷ್ಟೂ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಅದಕ್ಕಾಗಿ ನಾವು ಪ್ರತಿದಿನ ಓದಬೇಕು. ದಿನಪತ್ರಿಕೆ ಓದುವುದಾದರೆ ಪತ್ರಿಕೆಯ ಹೆಸರಿನಿಂದ ಹಿಡಿದು ಕೊನೆಯ ಪುಟದ ತಳಭಾಗದಲ್ಲಿ ಪ್ರಿಂಟ್‌ಲೈನ್ ಇರುತ್ತಲ್ಲ ಅದನ್ನೂ ಬಿಡದೆ ಓದಬೇಕು;

ಜಾಹೀರಾತನ್ನೂ ಬಿಡಬಾರದು! ಫುಟ್‌ಪಾತ್‌ನಲ್ಲಿ ಯಾರೋ ಕರಪತ್ರ ಕೊಟ್ರೆ ಅದನ್ನೂ ಓದಬೇಕು. ಜತೆಗೆ ಬೇರೆ ಬೇರೆ ಬಗೆಯ ಪುಸ್ತಕಗಳ ಓದು. ಆರಂಭದಲ್ಲಿ ತೊಡಗಿಸಿಕೊಂಡು, ಅನುಭವಿಸಿಕೊಂಡು ಓದುವುದು ಕಷ್ಟವಾದೀತು. ಬರಬರುತ್ತಾ ಓದುವ ಪ್ರಕ್ರಿಯೆ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ. ಆಗ ಮಾತು ನಮಗೆ ಸಿದ್ಧಿಸುತ್ತದೆ. ಇದು ನನ್ನ ಅನುಭವ.

ರೇಡಿಯೊ ಜಾಕಿಗಳೇ ಇರಲಿ, ಕಾರ್ಯಕ್ರಮ ನಿರೂಪಕರೇ ಇರಲಿ ಓದಿನ ಬಂಡವಾಳವಿಲ್ಲದಿದ್ದರೆ `ಈಗ ಇಂತಿಂಥವರು ಹಾಡ್ತಾರೆ, ಮಾತಾಡ್ತಾರೆ~ ಅಂತಷ್ಟೇ ಹೇಳಲು ಸಾಧ್ಯವಾದೀತು.

ಅಕಸ್ಮಾತ್ ಏನಾದರೂ ಮಾತಾಡಲು ಹೊರಟರೂ ಬ್ಬೆಬ್ಬೆಬ್ಬೆ... ಅಂತ ಬಾಯಿಗೆ ಬಂದದ್ದನ್ನು  ಹೇಳಿ ನಗೆಪಾಟಲಿಗೀಡಾಗಬೇಕಾದೀತು. ಹೀಗೆ, ಸಂದರ್ಭಕ್ಕೆ ಅನುಗುಣವಾಗಿ ಮಾತನಾಡುವುದು ಒಂದು ಕಲೆ. ಪರಿಣಾಮಕಾರಿ ಮಾತು ನಿರೂಪಕನ ತಯಾರಿ, ಜ್ಞಾನ, ತಿಳಿವಳಿಕೆ, ಅನುಭವ, ಪರಿಶ್ರಮ ಎಲ್ಲದರ ಮಿಶ್ರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.