ADVERTISEMENT

ಕಥಕ್ಕಳಿಯಲ್ಲಿ ಕರ್ಣನ ಚರಿತೆ

​ಪ್ರಜಾವಾಣಿ ವಾರ್ತೆ
Published 18 ಮೇ 2018, 19:30 IST
Last Updated 18 ಮೇ 2018, 19:30 IST
ಕರ್ಣಚರಿತಂ ಕಥಕ್ಕಳಿ ನೃತ್ಯ ನಾಟಕ
ಕರ್ಣಚರಿತಂ ಕಥಕ್ಕಳಿ ನೃತ್ಯ ನಾಟಕ   

ಕ್ಷತ್ರಿಯನಾಗಿದ್ದರೂ ಸೂತಪುತ್ರ ಎಂಬ ಹೀಯಾಳಿಕೆಗೆ ಗುರಿಯಾದ ನತದೃಷ್ಟ, ಮಹಾಭಾರತದ ದುರಂತ ನಾಯಕ ಕರ್ಣ. ಕುಂತಿಯ ಮಗನಾದರೂ, ಬೆಸ್ತ ದಂಪತಿಯ ಮಗನಾಗಿ ಬೆಳೆಯುತ್ತಾನೆ. ಸೂತಪುತ್ರ ಎಂದು ಬೆಳೆಯುವ ಕರ್ಣ ಬಿಲ್ವಿದ್ಯೆ ಕಲಿಯಲು ಹೋಗಿ ಪರಶುರಾಮರ ಬಳಿ ಶಾಪಕ್ಕೆ ಗುರಿಯಾಗುತ್ತಾನೆ.

ಕರ್ಣನನ್ನು ಆಪ್ತ ಗೆಳೆಯನೆಂದು ಸ್ವೀಕರಿಸುವವನು ದುರ್ಯೋಧನ. ಮಹಾಭಾರತದ ಕರ್ಣ ದಾನಿ, ಪರಾಕ್ರಮಿ, ಸುಂದರಾಂಗ. ಧೀರನಾದರೂ ಎಲ್ಲೂ ಮುಖ್ಯ ವೇದಿಕೆ ಸಿಗದೇ ಎಲೆಮರೆ ಕಾಯಿಯಾಗುತ್ತಾನೆ. ಪಾಂಡವರಿಗೆ ಸಿಕ್ಕಷ್ಟು ಮರ್ಯಾದೆ, ಗೌರವ ಅವರ ಹಿರಿಯಣ್ಣನಾದ ಕರ್ಣನಿಗೆ ಸಿಗುವುದೇ ಇಲ್ಲ. ಮಾತಿಗೆ ತಪ್ಪದೆ ಅಮರನಾಗುವ ಕರ್ಣನ ಚರಿತೆಯನ್ನು ಕಥಕ್ಕಳಿ ನೃತ್ಯ ನಾಟಕದ ರೂಪದಲ್ಲಿ ಪ್ರಸ್ತುತ ಪಡಿಸಲಿದ್ದಾರೆ ಕೇರಳದ ಕಥಕ್ಕಳಿ ಕಲಾವಿದರಾದ ಸಾಧನಾ ಕೃಷ್ಣನ್‌ ಕುಟ್ಟಿ ಮತ್ತು ಮಥೂರ್ ಗೋವಿಂದನ್‌ ಕುಟ್ಟಿ ಅವರು.

ಬೆಂಗಳೂರು ಕ್ಲಬ್‌ ಫಾರ್‌ ಕಥಕ್ಕಳಿ ಅ್ಯಂಡ್‌ ಆರ್ಟ್ಸ್‌ ಹಾಗೂ ಕೈರಳಿ ಕಲಾ ಸಮಿತಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮೇ 19ರಂದು ಎಚ್‌ಎಎಲ್‌ನ ವಿಮಾನಪುರದ ಕೈರಳಿ ಕಲಾಸಮಿತಿ ಅಡಿಟೋರಿಯಂನಲ್ಲಿ  ‘ಕರ್ಣ ಚರಿತಂ’ ಕಥಕ್ಕಳಿ ನೃತ್ಯನಾಟಕ ನಡೆಯಲಿದೆ.

ADVERTISEMENT

ಎರಡೂವರೆ ತಾಸಿನ ಕಾರ್ಯಕ್ರಮ ಇದಾಗಿದ್ದು, ಕೇರಳದ ಪ್ರಸಿದ್ಧ ಕಥಕ್ಕಳಿ ನೃತ್ಯಗಾರರಾದ ಸಾಧನಾ ಕೃಷ್ಣನ್‌ ಕುಟ್ಟಿ ಮತ್ತು ಮಥೂರ್ ಗೋವಿಂದನ್‌ ಕುಟ್ಟಿ ಅವರಿಗೆ ಇದು 50ನೇ ಕಾರ್ಯಕ್ರಮ. ‘ಕರ್ಣಂ ಚರಿತಂ’ ಕಥಕ್ಕಳಿ ನಾಟಕವನ್ನು ದೇಶದ ವಿವಿಧ ಭಾಗಗಳಲ್ಲಿ ಪ್ರದರ್ಶನ ಮಾಡಿದ ಹೆಮ್ಮೆ ಇವರದು. ಇದೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಪ್ರದರ್ಶನವಾಗುತ್ತಿದೆ.

ಕರ್ಣನ ಬಾಲ್ಯಜೀವನ, ಪರಶುರಾಮನಿಂದ ಶಿಕ್ಷಗೆ ಗುರಿಯಾಗುವುದು, ದುರ್ಯೋಧನ– ಕರ್ಣನ ಸ್ನೇಹ, ಕರ್ಣನ ವೈವಾಹಿಕ ಜೀವನ, ಕರ್ಣ– ಕೃಷ್ಣ...ಹೀಗೆ ಐದು ಭಾಗಗಳಲ್ಲಿ ಕರ್ಣನ ಜೀವನದ ಪ್ರಮುಖ ಘಟನೆಗಳನ್ನು ಇಲ್ಲಿ ನೃತ್ಯ ನಾಟಕದಲ್ಲಿ ಪ್ರಸ್ತುತಪಡಿಸಲಿದ್ದಾರೆ ಎನ್ನುತ್ತಾರೆ ಬೆಂಗಳೂರು ಕ್ಲಬ್‌ ಫಾರ್‌ ಕಥಕ್ಕಳಿ ಆ್ಯಂಡ್‌ ಆರ್ಟ್ಸ್‌ ಅಧ್ಯಕ್ಷೆ ಲಲಿತಾ ದಾಸ್‌.

ಕರ್ಣನ ಮನಸಿನ ತಳಮಳ, ಒಡಹುಟ್ಟಿದ ಪಾಂಡವರನ್ನು ಕಂಡಾಗ ಅವನ ಮನಸಿಗೆ ಆಗುವ ಸಂತೋಷ, ದುರ್ಯೋಧನನ ಪ್ರೀತಿಗೆ ಕರಗುವ ಅವನ ಮನಸು, ತಾನು ಕುಂತಿ ಮಗನೆಂಬ ಸತ್ಯ ಗೊತ್ತಾದಾಗ ಅವನ ಮನಸಿನ ಗೊಂದಲಗಳು, ಯುದ್ಧಭೂಮಿಯಲ್ಲಿ ಮಾತಿಗೆ ತಪ್ಪದ ಕರ್ಣನ ನಿರ್ಧಾರ... ಇದೆಲ್ಲವುಗಳನ್ನೂ ಕಥಕ್ಕಳಿ ನೃತ್ಯದಲ್ಲಿ ಪ್ರೇಕ್ಷಕರ ಮನ ಸೆಳೆಯುತ್ತವೆ ಎಂದು ಹೇಳುತ್ತಾರೆ ಅವರು. ನೃತ್ಯ ರೂಪಕಕ್ಕೆ ಕತೆ ಬರೆದವರು ಕೆ.ಎಸ್‌.ವಿಶ್ವನಾಥನ್‌ ನಾಯರ್‌, ಸಂಗೀತ ಸಂಯೋಜನೆ ಮಾಡಿದವರು ಹೈದರಾಲಿ. ಹಿನ್ನೆಲೆಯಲ್ಲಿ ಕಲಾಮಂಡಲ ಬಾಬು ನಂಬೂದಿರಿ ಅವರ ಗಾಯನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.