ADVERTISEMENT

ಕನ್ನಡಕ್ಕೆ ಬರ‌್ತಾರಂತೆ ಸೋನಂ

ಅಮಿತ್ ಎಂ.ಎಸ್.
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಬಾಲಿವುಡ್ ಬೆಡಗಿ ಸೋನಂ ಕಪೂರ್ ಕನ್ನಡದಲ್ಲಿ ನಟಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. ಕನ್ನಡದ ನಟಿಯರೆಲ್ಲಾ ಬಾಲಿವುಡ್ ಕದ ತಟ್ಟಲು ಹೊರಟಿರುವಾಗ ಇದ್ದಕ್ಕಿದ್ದಂತೆ ಸೋನಂಗ್ಯಾಕೆ ಈ ಬಯಕೆ ಎಂಬ ಪ್ರಶ್ನೆ ಬರಬಹುದು.

ತಮ್ಮ ತಂದೆ ಅನಿಲ್ ಕಪೂರ್ ಅವರನ್ನು ಬಣ್ಣದ ಬದುಕಿಗೆ ಪರಿಚಯಿಸಿದ ಕನ್ನಡ ಚಿತ್ರರಂಗದ ಬಗ್ಗೆ ಸೋನಂಗೆ ಅಪಾರ ಪ್ರೀತಿಯಂತೆ. ಹೀಗಾಗಿ ಕನ್ನಡದಲ್ಲಿ ಒಮ್ಮೆ ನಟಿಸಬೇಕು ಎಂದು ಆಪ್ತರ ಬಳಿ ಆಸೆ ಹಂಚಿಕೊಂಡಿದ್ದಾರಂತೆ.

ಈ ಸುದ್ದಿ ಕಿವಿಗೆ ಬಿದ್ದ ಬಳಿಕ ಸೋನಮ್ ಅವರನ್ನು ಕನ್ನಡಕ್ಕೆ ತರಲು ನಿರ್ದೇಶಕ-ನಿರ್ಮಾಪಕ ಮಹೇಶ್ ಸುಖಧರೆ ಶತಾಯಗತಾಯ ಪ್ರಯತ್ನದಲ್ಲಿದ್ದಾರೆ. ಸೋನಂ ಕೇಳುವ ಸಂಭಾವನೆ ನೀಡಿ ಕನ್ನಡಕ್ಕೆ ತರಲು ಸಿದ್ಧನಾಗಿದ್ದೇನೆ ಎನ್ನುತ್ತಾರೆ ಸುಖಧರೆ.

ಸುಖಧರೆ ಸೋನಂರನ್ನು ಕನ್ನಡಕ್ಕೆ ತರುವ ಚಿಂತನೆ ನಡೆಸಿರುವುದು ತಮ್ಮದೇ ನಿರ್ಮಾಣದಲ್ಲಿ ಸಿದ್ಧವಾಗಲಿರುವ ದರ್ಶನ್ ನಾಯಕರಾಗಿರುವ ಚಿತ್ರಕ್ಕೆ. ತೆಲುಗಿನ `ಅರುಂಧತಿ~ ಖ್ಯಾತಿಯ ಅನುಷ್ಕಾ ಶೆಟ್ಟಿಯವರನ್ನೂ ಇಲ್ಲಿಗೆ ಕರೆತರಲು ಚಿಂತನೆ ನಡೆಸಿದ್ದಾರೆ.

`ಮಳೆಬಿಲ್ಲೆ~ ಬಳಿಕ ಮೂರು ವರ್ಷದ ನಂತರ ಸೆಟ್ಟೇರಲಿರುವ ಅವರ ಚಿತ್ರವಿದು. ಕನ್ನಡದ ಮಣ್ಣಿಗೆ ಒಪ್ಪುವಂತಹ ಮುಖ ಸೋನಂ ಅವರದ್ದು. ಇಲ್ಲಿ ನಟಿಸುವ ಬಯಕೆ ಅವರಿಗೂ ಇದೆ. ಅವರಿಗೆ ಎಲ್ಲಾ ರೀತಿಯಲ್ಲೂ ಸೂಕ್ತವಾಗುವ ಪಾತ್ರ ಚಿತ್ರದಲ್ಲಿದೆ. ಹೀಗಾಗಿ ಸಮಯ ಹೊಂದಾಣಿಕೆ ಮಾಡಿಸಿ ಕನ್ನಡಕ್ಕೆ ಕರೆತರುತ್ತೇನೆ ಎನ್ನುತ್ತಾರೆ ಅವರು.

ಇದು 1998ರಲ್ಲಿ ತಾವು ನಿರ್ದೇಶಿಸಿದ `ಸಂಭ್ರಮ~ ಮಾದರಿಯ ಚಿತ್ರ. ಪ್ರೇಕ್ಷಕರಿಗೆ ಇಷ್ಟವಾಗುವ ನವಿರು ಪ್ರೇಮಕಥೆಯನ್ನು ಚಿತ್ರ ನೀಡಲಿದೆ. ಒಂದೂವರೆ ವರ್ಷ ಕಥೆ ಬಗ್ಗೆ ದರ್ಶನ್ ಜೊತೆ ಚರ್ಚೆ ನಡೆಸಿದ್ದೇನೆ. ನಿರ್ದೇಶಕರಿಗೆ ಆಪ್ತವಾಗುವ ನಟ ಅವರು. ದರ್ಶನ್ ನಟನೆಗೂ ಇದು ಸವಾಲೊಡ್ಡುತ್ತದೆ ಎಂದು ಖಚಿತ ದನಿಯಲ್ಲಿ ಹೇಳುತ್ತಾರೆ ಸುಖಧರೆ.
 
`ಸೈನಿಕ~ ದೊಡ್ಡ ಹೆಸರು ತಂದುಕೊಟ್ಟ ಚಿತ್ರ. ನಿರ್ದೇಶಕನಾಗಿ ಒಂದು ಬಗೆಯ ಚಿತ್ರಗಳಿಗೆ ಸೀಮಿತವಾಗಬಾರದು. ಚೌಕಟ್ಟುಗಳನ್ನು ಮೀರಿದ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಬೇಕೆನ್ನುವುದು ನನ್ನ ಬಯಕೆ. ಆದರೆ ಎಲ್ಲದರ ಅಂತ್ಯವೂ ಧನಾತ್ಮಕವಾಗಿರಬೇಕು ಎನ್ನುತ್ತಾರೆ.

ಕನ್ನಡಿಗರಲ್ಲಿ ಇರುವ ಪ್ರತಿಭೆಗಳು ಬೇರೆಲ್ಲೂ ಇಲ್ಲ. ಆದರೆ ನಮ್ಮಲ್ಲಿ ಹೋಮ್‌ವರ್ಕ್ ಸಾಲದು. ಚಿತ್ರರಂಗಕ್ಕೆ ರಾಜಕೀಯದ ಒತ್ತಡಗಳು ಬರುತ್ತಿವೆ. ಹಿತಶತ್ರುಗಳು ಹೆಚ್ಚುತ್ತಿದ್ದಾರೆ. ಹೀಗಾಗಿ ಚಿತ್ರರಂಗ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಅವರದು.

ಈಗ ಮಾಡಹೊರಟಿರುವುದು ದೊಡ್ಡ ಬಜೆಟ್ ಸಿನಿಮಾ. ಕಥೆ ದೊಡ್ಡ ಕಲಾವಿದರನ್ನು ಬಯಸುತ್ತದೆ ಎನ್ನುವ ಸುಖಧರೆ ಮಾತಿಗೆ ಸೋನಂ ಓಗೊಡುವರೋ ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.