ADVERTISEMENT

ಕನ್ನಡದ ಕಂಪು ಸಾರುವ ಸ್ಥಳಗಳು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 19:30 IST
Last Updated 5 ನವೆಂಬರ್ 2017, 19:30 IST
ಕನ್ನಡದ ಕಂಪು ಸಾರುವ ಸ್ಥಳಗಳು
ಕನ್ನಡದ ಕಂಪು ಸಾರುವ ಸ್ಥಳಗಳು   

–ಲತಾ

**

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವಗಳಿಸಿಕೊಂಡರೆ ಸಾಲದೆ

ADVERTISEMENT

ಕನ್ನಡದ ಬಗ್ಗೆ ಕವಿ ಮಹಲಿಂಗರಂಗ ಹೇಳಿರುವ ಮಾತಿದು. ಕನ್ನಡವೆಂದರೆ ಅಷ್ಟು ಸುಲಭ, ಸೊಗಸು. ಕನ್ನಡದ ಕಂಪಿನ ಪರಿಯೂ ಅಂತೆಯೇ, ಇಂತಿಪ್ಪ ಕನ್ನಡದ ಕಂಪಿನ ಘಮಲು ನಗರಡೆಲ್ಲೆಡೆ ಹರಡಿದೆ. ಕನ್ನಡ ಎಂದಾಕ್ಷಣ ನಗರದಲ್ಲಿ ಕೆಲವು ಸ್ಥಳಗಳು ತಟ್ಟನೆ ಕಣ್ಣಿನ ಮುಂದೆ ಕುಣಿದಾಡುತ್ತವೆ. ಅಂತಹ ಸ್ಥಳಗಳು ಕನ್ನಡ ಪ್ರೇಮವನ್ನು ಕನ್ನಡಿಗರ ಮನಸ್ಸಿನಲ್ಲಿ ಹೆಚ್ಚಿಸುವುದು ಸುಳ್ಳಲ್ಲ. ಕಹಳೆ ಬಂಡೆ, ಗಾಂಧಿನಗರ, ರವೀಂದ್ರ ಕಲಾಕ್ಷೇತ್ರ ಇವೆಲ್ಲವೂ ಕನ್ನಡ ಕಂಪು ಸಾರನ್ನು ತಾಣಗಳು. ಅಂತಹ ಕೆಲವು ಕನ್ನಡದ ಸ್ಥಳಗಳ ಪರಿಚಯ ಇಲ್ಲಿದೆ.

ಕಹಳೆ ಬಂಡೆ

ಈ ಹೆಸರನ್ನು ಕೇಳಿದಾಕ್ಷಣ ಅದೆಷ್ಟೋ ಹಳೇ ಬೆಂಗಳೂರಿನ ಮನಸುಗಳಲ್ಲಿ ಸಂತಸದ ಅಲೆ ಏಳುತ್ತದೆ. ಬ್ಯೂಗಲ್ ರಾಕ್‌ ಎಂತಲೂ ಕರೆಯಲಾಗುವ ಈ ಬೃಹತ್‌ ಬಂಡೆಯ ನೋಟವೇ ಅಪ್ಯಾಯಮಾನ. ಇಂದಿಗೂ ಬ್ಯೂಗಲ್ ರಾಕ್ ನಗರದಲ್ಲಿ ಕನ್ನಡ ಇಂಪನ್ನು ಸಾರುವ ಸ್ಥಳವಾಗಿ ಗುರುತಿಸಿಕೊಂಡಿದೆ. ಈ ಬ್ಯೂಗಲ್ ರಾಕ್‌ ಉದ್ಯಾನಕ್ಕೆ ಶತಮಾನಗಳ ಇತಿಹಾಸವಿದೆ. ಕೆಂಪೇಗೌಡರ ಆಡಳಿತ ಅವಧಿಯಲ್ಲಿ ಇಲ್ಲೊಂದು ವಿಶಾಲವಾದ ಉದ್ಯಾನ ನಿರ್ಮಿಸಿ, ಇಲ್ಲಿನ ಬೃಹತ್ ಬಂಡೆಯೊಂದರ ಮೇಲೆ ಗೋಪುರವನ್ನು ಕಟ್ಟಿಸಿದರು. ಕಾಲಕ್ರಮೇಣ ಇದೊಂದು ಉದ್ಯಾನವಾಗಿ ಉಳಿದುಕೊಂಡಿತಷ್ಟೆ. ಆದರೆ ಇತ್ತೀಚೆಗೆ ಮತ್ತೆ ಹೊಸ ನೋಟ ಹೊತ್ತ ಬ್ಯೂಗಲ್‌ ರಾಕ್‌, ಪ್ರವಾಸಿಗರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.

ಒಂದು ಕಾಲದಲ್ಲಿ ಡಿವಿಜಿಯವರಂತಹ ಮಹಾನ್ ದಿಗ್ಗಜರಿಗೆ ಸ್ಫೂರ್ತಿಯ ಸೆಲೆಯಾಗಿದ್ದ ಈ ಪ್ರದೇಶ ಬಹುಕಾಲ ನಿರ್ವಹಣೆ ಇಲ್ಲದೇ ಸೊರಗಿತ್ತು. ನಂತರ ಸುತ್ತಲಿನ ನಾಗರಿಕರು ಎಚ್ಚೆತ್ತುಕೊಂಡು ಸ್ಥಳೀಯ ಶಾಸಕರು–ಸಚಿವರ ನೆರವು ಪಡೆದು ಈ ಉದ್ಯಾನಕ್ಕೆ ಒಂದು ಹೊಸ ಆಯಾಮ ನೀಡಿದ್ದರು. ಅಷ್ಟೇ ಅಲ್ಲದೇ ಬಸವನಗುಡಿ, ಎನ್.ಆರ್. ಕಾಲೋನಿ ಹಾಗೂ ಬಿಎಂಎಸ್ ಮಹಿಳಾ ಕಾಲೇಜು ಮತ್ತು ಡಿ.ವಿ.ಜಿ. ರಸ್ತೆಗೆ ಹೊಂದಿಕೊಂಡ ಸುತ್ತಲಿನ ಜನರ ಮೆಚ್ಚಿನ ವಾಯುವಿಹಾರ ತಾಣವಾಗಿದೆ. ಸುತ್ತಲೂ ಹಸಿರು, ಕಲ್ಲುಬಂಡೆಯಿಂದ ಕೂಡಿರುವ ಈ ಉದ್ಯಾನ ಕಣ್ಮನ ತಣಿಸುತ್ತದೆ. ಮುಸ್ಸಂಜೆಯ ವಾಯುವಿಹಾರಕ್ಕೆ ಪ್ರಶಸ್ತ ಜಾಗ. ವಾರಾಂತ್ಯಗಳಲ್ಲಿ ಸಂಗೀತ ಕಾರಂಜಿಯ ವ್ಯವಸ್ಥೆಯೂ ಇದೆ. ವಿಶಾಲವಾದ ರಂಗಮಂದಿರ ಮತ್ತು ಗ್ಯಾಲರಿ ಇರುವುದರಿಂದ ಬಸವನಗುಡಿ ಹಾಗೂ ಹನುಮಂತನಗರದ ಸಾಂಸ್ಕೃತಿಕ ಸಂಘಟನಾ ಕೂಟಗಳು ಆಗಾಗ್ಗೆ ಇಲ್ಲಿ ವಾದ್ಯಗೋಷ್ಠಿಗಳನ್ನು ನಡೆಸುತ್ತವೆ.

ಈ ಪ್ರದೇಶದಲ್ಲಿ ಇದೊಂದು ಆಕರ್ಷಣೆ ಎಂದರೆ ಡಿವಿಜಿಯವರ ಪ್ರತಿಮೆ. ಡಿವಿಜಿಯವರ ನೆನಪಿನಲ್ಲಿ ಸ್ಥಾಪಿಸಲಾದ ಈ ಪ್ರತಿಮೆ ಬ್ಯೂಗಲ್ ರಾಕ್‌ಗೆ ವಿಶಿಷ್ಟ ಮೆರುಗು ನೀಡುವುದು ಮಾತ್ರ ಸುಳ್ಳಲ್ಲ. ಉದ್ಯಾನದ ಒಳಭಾಗದಲ್ಲಿ ಸುಮಾರು 9 ದಶಕಗಳಷ್ಟು ಹಳೆಯದಾದ ನೀರಿನ ಟ್ಯಾಂಕ್‌ ಇದೆ. ಅದಕ್ಕೂ ಈಗ ಹೊಸ ನೋಟದ ಭಾಗ್ಯ. ಟ್ಯಾಂಕ್‌ನ ಹೊರಗೋಡೆಯ ಸುತ್ತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳನ್ನು ರಚಿಸಲಾಗಿದೆ. ಹೀಗೆ ಬ್ಯೂಗಲ್‌ ರಾಕ್‌ ಒಂದೆಡೆ ಹಲವಾರು ದಶಕಗಳ ಇತಿಹಾಸ ಸಾರುವ ಕುರುಹಾಗಿಯೂ, ಇನ್ನೊಂದೆಡೆ ವಾಯುವಿಹಾರಕ್ಕೆ ಯೋಗ್ಯ ಸ್ಥಳವಾಗಿಯೂ, ಮತ್ತೊಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿಯೂ ಇದೆ.

ಗಾಂಧಿನಗರ

ಸ್ಯಾಂಡಲ್‌ವುಡ್ ಅಥವಾ ಚಂದನವನ ಎಂದರೆ ತಟ್ಟನೆ ನೆನಪಾಗುವುದು ಗಾಂಧಿನಗರ. ಬೆಂಗಳೂರಿನ ಹೃದಯಭಾಗವಾದ ಮೆಜಿಸ್ಟಿಕ್‌ನಿಂದ ಕೇವಲ 1ಕೀಮಿ ದೂರ ಇರುವ ಗಾಂಧಿನಗರ ಸಿನಿಮಾ ಮಂದಿಗೆಂದೇ ಮೀಸಲಿರಿಸಿದ ಜಾಗ ಎಂಬಷ್ಟು ಖ್ಯಾತಿ ಹೊಂದಿದೆ. ಸಾಗರ್, ಕಲ್ಪನಾ, ಮೆಜಿಸ್ಟಿಕ್‌, ಅಲಂಕಾರ್, ಹಿಮಾಲಯ ಹೀಗೆ ಹತ್ತಾರು ಥಿಯೇಟರ್‌ಗಳು, ಸಿನಿಮಾ ಆಫೀಸ್‌ಗಳು, ಕಲಾವಿದರ ದಂಡೇ ಇಲ್ಲಿ ನೆರೆದಿರುತ್ತಿತ್ತು, ಅದೆಷ್ಟೋ ಕನ್ನಡದ ಕಲಾವಿದರನ್ನು ಗುರುತಿಸಿ, ಬೆಳೆಸಿದ್ದು ಇದೇ ಗಾಂಧಿನಗರ ಎಂಬುದು ಹೆಮ್ಮೆಯ ವಿಷಯ. ಇಂದಿಗೂ ಗಾಂಧಿನಗರ ಸಿನಿಪ್ರಿಯ ಅಡ್ಡಾ ಆಗಿದ್ದರೂ ಮುಂಚಿನ ವರ್ಚಸ್ಸು ಈಗ ಇಲ್ಲ ಎನ್ನುತ್ತಾರೆ ಕೆಲ ಹಿರಿಯರು. ಇಲ್ಲಿನ ಥಿಯೇಟರ್‌ಗಳು ಪ್ರತಿದಿನ 4 ಸಿನಿಮಾ ಶೋಗಳನ್ನು ಪ್ರದರ್ಶಿಸುವ ಮೂಲಕ ಚಿತ್ರರಂಗದ ಉಳಿವಿಗೆ ಬೆಂಬಲ ಸೂಚಿಸುತ್ತಿದ್ದವು. ರಾಜ್‌ಕುಮಾರ್ ಮತ್ತು ಕಲ್ಪನಾ ಅವರ ಅಭಿನಯದಲ್ಲಿ ಗಾಂಧಿನಗರ ಎಂಬ ಚಿತ್ರ ಕೂಡ ಬಂದಿತ್ತು. ಆದರೆ ಸಮಯ ಸರಿದಂತೆ ಗಾಂಧಿನಗರ ಕೂಡ ಬದಲಾಗಿದೆ. ಕೆಲ ಥಿಯೇಟರ್‌ಗಳನ್ನು ಕೆಡವಿ ಮಾಲ್‌ಗಳಾಗಿ ಪರಿವರ್ತನೆ ಮಾಡಲಾಗಿದೆ. ಈ ಸಾಲಿಗೆ ಇತ್ತೀಚೆಗೆ ಕಪಾಲಿ ಚಿತ್ರಮಂದಿರ ಕೂಡ ಸೇರಿದೆ.

ಕನ್ನಡ ಸಾಹಿತ್ಯ ಪರಿಷತ್ತು

ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆ ಮಾಡಲು 1915 ಮೇ 5 ರಂದು ಕರ್ನಾಟಕ ಸಾಹಿತ್ಯ ಪರಿಷತ್ತು ಆರಂಭವಾಯಿತು. ಆಗ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದ್ದರು. 1938ರಲ್ಲಿ ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಿಸಲಾಯಿತು. ಕನ್ನಡ ಪುಸ್ತಕ ಪ್ರಕಟಣೆ, ನಾಡು –ನುಡಿಯ ಸಂರಕ್ಷಣೆ, ಕನ್ನಡ ಭಾಷೆಯ ಅಳಿವಿಗಾಗಿ ನಿರ್ಮಿಸಲಾದ ಈ ಸಂಸ್ಥೆ ರಾಜ್ಯದಾದ್ಯಂತ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿದೆ. ಶಂಕರಪುರ ಬಡಾವಣೆಯ ಚಿಕ್ಕ ಕೊಠಡಿಯೊಂದರಲ್ಲಿ ಆರಂಭವಾಗಿ ಇಂದು ಹೆಮ್ಮರವಾಗಿ ಬೆಳೆದಿದೆ. ರಾಜ್ಯದಲ್ಲಷ್ಟೇ ಅಲ್ಲದೇ ಹೊರರಾಜ್ಯದಲ್ಲೂ ತನ್ನ ಕಂಪನ್ನ ಸಾರಿದೆ ಕಸಾಪ.

ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ ಇರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣ, ಬಿ.ಎಂ.ಶ್ರೀ ಅಚ್ಚುಕೂಟ, ಸುವರ್ಣ ಮಹೋತ್ಸವ ಕಟ್ಟಡ ಹಾಗೂ ವಜ್ರ ಮಹೋತ್ಸವ ಕಟ್ಟಡಗಳಿವೆ. 1940ರಲ್ಲಿ ರಜತ ಮಹೋತ್ಸವ, 1973ರಲ್ಲಿ ಸುವರ್ಣ ಮಹೋತ್ಸವ, 1977ರಲ್ಲಿ ವಜ್ರ ಮಹೋತ್ಸವ, 1991ರಲ್ಲಿ ಅಮೃತ ಮಹೋತ್ಸವ. 2015ರಲ್ಲಿ ಶತಮಾನೋತ್ಸವನ್ನು ಪರಿಷತ್ತು ಆಚರಿಸಿದೆ.

ರವೀಂದ್ರ ಕಲಾಕ್ಷೇತ್ರ

ರವೀಂದ್ರನಾಥ್ ಠ್ಯಾಗೋರ್ ಅವರ ನೆನಪಿನಲ್ಲಿ ನಗರದ ಜೆಸಿ ರಸ್ತೆಯಲ್ಲಿ ರವೀಂದ್ರ ಕಲಾಕ್ಷೇತ್ರವನ್ನು ಸ್ಥಾಪಿಸಲಾಯಿತು. 1960 ಸೆಪ್ಟೆಂಬರ್ 16ರಂದು ರವೀಂದ್ರ ಕಲಾಕ್ಷೇತ್ರದ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು. ಕಲೆ ಹಾಗೂ ಸಾಹಿತ್ಯ ಕ್ಷೇತ್ರವನ್ನು ಪ್ರೋತ್ಸಾಹಿಸುವ ಸಲುವಾಗಿ ಈ ವೇದಿಕೆ ರೂಪುಗೊಂಡಿದೆ, ನಾಟಕ, ನೃತ್ಯ ಮತ್ತು ಸಂಗೀತ ಸೇರಿದಂತೆ ಇನ್ನೂ ಅನೇಕ ಕಲಾ ಪ್ರಕಾರಗಳ ಪ್ರದರ್ಶನಗಳಿಗೆ ಇದು ವೇದಿಕೆಯಾಗಿದೆ. ರಾಜ್ಯ, ದೇಶ ಹಾಗೂ ವಿದೇಶಗಳ ಅನೇಕ ಕಲಾವಿದರು ಈ ವೇದಿಕೆಯ ಮೇಲೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಹಲವು ಚಳುವಳಿ, ಪ್ರತಿಭಟನೆ, ಸಂವಾದಗಳಿಗೂ ಇದು ಸಾಕ್ಷಿಯಾಗಿದೆ. ನಗರದ ಸಾಂಸ್ಕೃತಿಕ ಲೋಕಕ್ಕೆ ರವೀಂದ್ರ ಕಲಾಕ್ಷೇತ್ರದ ಕೊಡುಗೆ ಅಪಾರ. ಅದೆಷ್ಟೋ ಹವ್ಯಾಸಿ ರಂಗಭೂಮಿಯ ಹಲವು ಪ್ರಯೋಗಗಳಿಗೂ ಇದು ವೇದಿಕೆ ಆಗಿದೆ.

ಕಲಾಗ್ರಾಮ

ಕನ್ನಡ ನಾಡಿನ ಇತಿಹಾಸ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಆರಂಭವಾಗಿದ್ದೇ ಕಲಾಗ್ರಾಮ. ಇತಿಹಾಸ, ಸಾಹಿತ್ಯ, ಸಂಗೀತ, ಚಿತ್ರಕಲೆ, ಶಿಲ್ಪಕಲೆ, ರಂಗಭೂಮಿ ಮತ್ತು ಚಲನಚಿತ್ರ ಸೇರಿದಂತೆ ಪ್ರಾದೇಶಿಕ ಕಲಾ ವೈಶಿಷ್ಟವನ್ನು ಬಿಂಬಿಸುವ ದರ್ಶನಾಲಯಗಳು ಇಲ್ಲಿವೆ. ಬೆಂಗಳೂರು ವಿಶ್ವವಿದ್ಯಾಲಯದ ಸಮೀಪದ ಮಲ್ಲತ್ತಹಳ್ಳಿಯಲ್ಲಿ ಸುಮಾರು 13 ಎಕರೆ ಪ್ರದೇಶದಲ್ಲಿ ಈ ಕಲಾಗ್ರಾಮವನ್ನು ನಿರ್ಮಿಸಿಲಾಗಿದೆ.

ಈ ಕಲಾಗ್ರಾಮದಲ್ಲಿ ವಿಶೇಷ ಆರ್ಕಷಣೆ ಎಂದರೆ ಬಯಲು ಮಂದಿರ. ಅದೆಷ್ಟೋ ನಾಟಕಗಳಿಗೆ ಈ ಬಯಲು ರಂಗಮಂದಿರ ವೇದಿಕೆಯಾಗಿದೆ. ಮೊದಲು ಆಪರೂಪಕ್ಕೆ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದ ಕಲಾಗ್ರಾಮದಲ್ಲಿ ಇತ್ತೀಚೆಗೆ ವ್ಯಾಪಕವಾಗಿ ರಂಗ ಪ್ರಯೋಗಗಳು ನಡೆಯುತ್ತಿವೆ.

ಇವೆಲ್ಲವೂ ನಗರದಲ್ಲಿ ಕನ್ನಡ ಕಂಪನ್ನು ಪಸರಿಸುವ ಆಯ್ದ ಕೆಲವು ಪ್ರದೇಶಗಳು. ಕನ್ನಡ ನಂಟನ್ನು ಹೊಂದಿರುವ ಇನ್ನು ಅದೆಷ್ಟೂ ಸ್ಥಳ, ರಸ್ತೆಗಳು ನಗರದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.