ADVERTISEMENT

ಕಬಾಡಿ ಕನವರಿಕೆ

ಸತೀಶ ಬೆಳ್ಳಕ್ಕಿ
Published 18 ಜನವರಿ 2016, 19:30 IST
Last Updated 18 ಜನವರಿ 2016, 19:30 IST
ರೂಪದರ್ಶಿ ಗೋಮ್‌ಜಿ ಕಬಾಡಿ
ರೂಪದರ್ಶಿ ಗೋಮ್‌ಜಿ ಕಬಾಡಿ   

ಕಡು ಬಡತನದಲ್ಲಿ ಹುಟ್ಟಿ ಬೆಳೆದ ಹುಡುಗ ಗೋಮ್‌ಜಿ ಕಬಾಡಿ ಫ್ಯಾಷನ್‌ ಕ್ಷೇತ್ರದಲ್ಲಿ ಬೆಳೆದ ರೀತಿ ನೋಡಿ ಹಲವರು ಅಚ್ಚರಿಪಟ್ಟಿದ್ದಿದೆ. ದೆಹಲಿ ಮೂಲದ ಈ ಹುಡುಗ ಈಗ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಓದಿದ್ದು ಐದನೇ ತರಗತಿವರೆಗಾದರೂ ಇಂಗ್ಲಿಷ್‌ ಅನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಕನ್ನಡ, ಹಿಂದಿ, ತಮಿಳು ಭಾಷೆಗಳ ಮೇಲೂ ಅವರಿಗೆ ಹಿಡಿತವಿದೆ. ತಿಂಗಳಲ್ಲಿ ಹದಿನೈದು–ಇಪ್ಪತ್ತು ದಿನ ಫ್ಯಾಷನ್‌ ಷೋಗಳಲ್ಲಿ ಬ್ಯುಸಿಯಾಗಿರುವ ಕಬಾಡಿ, ಈಗ ಹಲವು ಡಿಸೈನರ್‌ಗಳ ನೆಚ್ಚಿನ ರೂಪದರ್ಶಿ.

ಕೆಲವು ವರ್ಷಗಳ ಹಿಂದೆ ಫ್ಯಾಷನ್‌ ಉದ್ಯಮದಲ್ಲಿ ನಟ ಅರ್ಜುನ್‌ ರಾಮ್‌ಪಾಲ್‌ ಹವಾ ಜೋರಾಗಿತ್ತು. ಫ್ಯಾಷನ್‌ ಮೋಹ ಬೆಳೆಸಿಕೊಂಡ ಲಕ್ಷಾಂತರ ಯುವಕರಿಗೆ ಅರ್ಜುನ್‌ ಮಾದರಿ ಆಗಿದ್ದರು. ಅರ್ಜುನ್‌ ಜನಪ್ರಿಯತೆ ನೋಡಿ ಅದರಿಂದ ಸ್ಫೂರ್ತಿ ಪಡೆದ ಕಬಾಡಿ, ತಾನೂ ರೂಪದರ್ಶಿ ಆಗಬೇಕು ಅಂದುಕೊಂಡರು. ಇದರ ನಡುವೆ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು.

ಫ್ಯಾಷನ್‌ ಕ್ಷೇತ್ರಕ್ಕೆ ಅಡಿಯಿಡುವ ಪ್ರಯತ್ನದಲ್ಲಿದ್ದ ಕಬಾಡಿ ಅವರಿಗೆ 2009ರಲ್ಲಿ ಮುಂಬೈನಲ್ಲಿ ನಡೆದ ‘ಮಿ.ಗ್ರಾಸಿಂ’ ಷೋನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಮೊದಲ ಪ್ರಯತ್ನದಲ್ಲೇ  ರನ್ನರ್‌ಅಪ್‌ ಆದರು. 5 ಅಡಿ 11 ಇಂಚು ಎತ್ತರ, ಆಕರ್ಷಕ ಮೈಕಟ್ಟು ಹೊಂದಿದ್ದ ಕಬಾಡಿ ಅವರಿಗೆ ತಾನೂ ಫ್ಯಾಷನ್‌ ಇಂಡಸ್ಟ್ರಿಗೆ ಹೊಂದಬಲ್ಲೆ ಎಂಬ ವಿಶ್ವಾಸ ಮೂಡಿಸಿದ್ದು ಆಗಲೇ. ಅಲ್ಲಿಂದ ಸಂಪೂರ್ಣವಾಗಿ ತಮ್ಮನ್ನು ಫ್ಯಾಷನ್‌ ಕ್ಷೇತ್ರದಲ್ಲಿಯೇ ತೊಡಗಿಸಿಕೊಂಡರು.

ರ‍್ಯಾಂಪ್‌ ಮೇಲೆ ಹೆಜ್ಜೆ ಗುರುತು
ಸಾಮಾನ್ಯವಾಗಿ ಒಂದು ಫ್ಯಾಷನ್‌ ಷೋನಲ್ಲಿ ಒಬ್ಬ ವಸ್ತ್ರವಿನ್ಯಾಸಕ ಮೂರು ಸುತ್ತುಗಳಲ್ಲಿ ತನ್ನ ವಸ್ತ್ರಗಳನ್ನು ಪ್ರದರ್ಶಿಸುತ್ತಾನೆ. ವಿನ್ಯಾಸಕರ ವಸ್ತ್ರಗಳನ್ನು ಪ್ರದರ್ಶಿಸಲು ರ‍್ಯಾಂಪ್‌ ಏರುವ ರೂಪದರ್ಶಿಗಳು ಕ್ಯಾಶುವಲ್‌, ಫಾರ್ಮಲ್‌ ಮತ್ತು ಬೇರ್‌ಬಾಡಿ (ಒಳಉಡುಪುಗಳು) ರೌಂಡ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ದೊಡ್ಡಮಟ್ಟದ ಷೋಗಳಾದರೆ ಒಂದೇ ದಿನ ಒಬ್ಬ ರೂಪದರ್ಶಿ ಮೂರು–ನಾಲ್ಕು ಷೋಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಪ್ರತಿ ಷೋಗೂ ಅವರ ಜನಪ್ರಿಯತೆಯ ಮೇಲೆ ಸಂಭಾವನೆ ನಿಗದಿಯಾಗುತ್ತದೆ.

ಸ್ವಪರಿಶ್ರಮದಿಂದಲೇ ಇಂಡಸ್ಟ್ರಿಯಲ್ಲಿ ನೆಲೆಕಂಡುಕೊಂಡ ಕಬಾಡಿ, ಈಗ ಒಂದು ಷೋಗೆ ₹7 ಸಾವಿರ ಹಣ ಸಂಪಾದಿಸುತ್ತಾರೆ.  ‘ಮನೆಯಲ್ಲಿ ತುಂಬ ಬಡತನವಿತ್ತು. ಹಾಗಾಗಿ ನನ್ನ ಓದು ಐದನೇ ತರಗತಿಗೆ ನಿಂತು ಹೋಯ್ತು. ಅದೇ ಸಮಯಕ್ಕೆ ದೆಹಲಿಯಲ್ಲಿದ್ದ ನಮ್ಮ ಸಂಸಾರ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಇಲ್ಲಿಗೆ ಬಂದ ನಂತರ ಅಣ್ಣ ಮತ್ತು ನಾನು ದುಡಿಮೆಗೆ ಸೇರಿಕೊಂಡೆವು. ಓದು ನಿಲ್ಲಿಸಿದ ಮೇಲೆ ನಾನು ನಾಲ್ಕೈದು ವರ್ಷ ಫ್ಯಾಕ್ಟರಿಯಲ್ಲಿ ದುಡಿದೆ. ಆಗ ನನ್ನ ದಿನದ ಸಂಬಳ ₹100.

ಅರ್ಜುನ್‌ ರಾಮ್‌ಪಾಲ್‌ ಅವರಂತೆ ನಾನೂ ಜನಪ್ರಿಯ ಮಾಡೆಲ್‌ ಆಗಬೇಕು ಎಂಬ ಆಸೆಯಿತ್ತು. ಅದೇ ಉತ್ಸಾಹದಲ್ಲಿ ಸಾಕಷ್ಟು ಸೈಕಲ್‌ ಹೊಡೆದೆ. ನಿಧಾನವಾಗಿಯಾದರೂ ನನಗೂ ಈ ಕ್ಷೇತ್ರದೊಂದಿಗೆ ನಂಟು ಬೆಳೆಯಿತು. ಅದೇವೇಳೆ ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡೆ. ಮಿಸ್ಟರ್‌ ಗ್ರಾಸಿಂ ಸ್ಪರ್ಧೆ ನಾನು ಫ್ಯಾಷನ್‌ ಕ್ಷೇತ್ರಕ್ಕೆ ಅಡಿಯಿಡಲು ಚಿಮ್ಮುಹಲಗೆಯಾಯ್ತು.

ಇಲ್ಲಿಯವರೆಗೆ 250ಕ್ಕೂ ಅಧಿಕ ಷೋಗಳಲ್ಲಿ ಕಾಣಿಸಿಕೊಂಡಿದ್ದೇನೆ.  ಫ್ಯಾಷನ್‌ ಕ್ಷೇತ್ರದ ಒಡನಾಟದಿಂದ ನನ್ನ ಇಂಗ್ಲಿಷ್‌ ಉತ್ತಮವಾಯಿತು. 2014ರಲ್ಲಿ ನಡೆದ ಮಿಸ್ಟರ್‌ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್‌ಅಪ್‌ ಆದೆ. ಈಗ ತಿಂಗಳಲ್ಲಿ 15–20 ದಿನ ಷೋಗಳಲ್ಲಿ ಬ್ಯುಸಿಯಾಗಿರುತ್ತೇನೆ. ಸಂಪಾದನೆಯೂ ಚೆನ್ನಾಗಿದೆ’ ಎಂದು ತಮ್ಮ ಫ್ಯಾಷನ್‌ ಜರ್ನಿ ಬಗ್ಗೆ ವಿವರಿಸುತ್ತಾರೆ ಕಬಾಡಿ.

ಸಿನಿಮಾ ಕನಸು, ಫಿಟ್‌ನೆಸ್‌ ಗುಟ್ಟು
ಯಾವುದೇ ಕ್ಷೇತ್ರದಲ್ಲಾದರೂ ಸರಿ ಗಾಡ್‌ಫಾದರ್‌ಗಳಿಲ್ಲದೆ ಬೇಗ ಬೆಳೆಯಲು ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಕಬಾಡಿ ಅವರಿಗೆ ಮುಂದೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಹಂಬಲವಿದೆ. ‘ನನ್ನ ಬಳಿ ಹಣವಾಗಲೀ ಅಥವಾ ನನ್ನನ್ನು ಬೆಳೆಸುವ ಗಾಡ್‌ಫಾದರ್‌ಗಳಾಗಲೀ ಇಲ್ಲ. ಆದರೆ, ಸಿನಿಮಾದಲ್ಲಿ ನಟಿಸುವ ಆಸೆ ತುಂಬ ಇದೆ. ಹೀರೊ ಆಗಿಯೇ ಎಂಟ್ರಿ ಕೊಡಬೇಕು ಎಂಬ ದೊಡ್ಡ ಆಸೆಯೇನೂ ಇಲ್ಲ. ಮೊದಲು ಸಣ್ಣಪುಟ್ಟ ರೋಲ್‌ಗಳಲ್ಲಿ ಕಾಣಿಸಿಕೊಂಡು ಆನಂತರ ನಾಯಕನ ಸ್ನೇಹಿತ/ತಮ್ಮನ ಪಾತ್ರಗಳಲ್ಲಿ ನಟಿಸಬೇಕು ಎಂದುಕೊಂಡಿದ್ದೇನೆ.

ನನ್ನ ಪ್ರತಿಭೆಯನ್ನು ಗುರ್ತಿಸಿ ಯಾರಾದರೂ ನಾಯಕನ ಪಾತ್ರಕೊಟ್ಟರೆ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ 27 ವರ್ಷದ ಕಬಾಡಿ. ಫ್ಯಾಷನ್‌, ಸಿನಿಮಾ ಕ್ಷೇತ್ರದಲ್ಲಿ ಮಿಂಚಬೇಕು ಎನ್ನುವ ಆಸೆ ಇರಿಸಿಕೊಂಡಿರುವ ಅವರು ತಮ್ಮ ಗ್ಲ್ಯಾಮರ್‌ ಕಾಯ್ದುಕೊಳ್ಳಲು ಉತ್ತಮ ಡಯೆಟ್‌ ಅನುಸರಿಸುತ್ತಾರೆ. ‘ನಿಯಮಿತವಾಗಿ ಜಿಮ್‌ಗೆ ಹೋಗಲು ಆಗುವುದಿಲ್ಲ. ಹಾಗಾಗಿ, ಸಮಯ ಸಿಕ್ಕಾಗೆಲ್ಲ ಪುಷ್‌ಅಪ್ಸ್‌ ಮಾಡುತ್ತೇನೆ.

ಅದಷ್ಟೇ ನನ್ನ ವರ್ಕೌಟ್‌. ಉಳಿದಂತೆ ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿವಹಿಸುತ್ತೇನೆ. ದಿನಕ್ಕೆ ನಾಲ್ಕೈದು ಲೀಟರ್‌ ನೀರು ಕುಡಿಯುತ್ತೇನೆ. ಪರಂಗಿ, ಚಿಕ್ಕು ಮತ್ತು ಬಾಳೆಹಣ್ಣನ್ನು ಹೆಚ್ಚು ತಿನ್ನುತ್ತೇನೆ. ಅನ್ನ ಮತ್ತು ಎಣ್ಣೆ ಪದಾರ್ಥಗಳಿರುವ ಆಹಾರಗಳಿಂದ ನಾನು ಸದಾ ದೂರ. ಚಪಾತಿ, ಬೇಯಿಸಿದ ಮೊಟ್ಟೆ ಮತ್ತು ಚಿಕನ್‌ ನನ್ನ ದಿನದ ಮೆನುವಿನಲ್ಲಿ ಇರುತ್ತವೆ’ ಎನ್ನುತ್ತಾರೆ ಕಬಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.