ADVERTISEMENT

ಕರಗದ ಕೊನೆಪುಟ `ವಸಂತೋತ್ಸವ'

ಚೆಲ್ಲಿದರು ಮಲ್ಲಿಗೆಯ ಭಾಗ-11

ಜೆ.ಪಿ.
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST
ಕರಗದ ಕೊನೆಪುಟ `ವಸಂತೋತ್ಸವ'
ಕರಗದ ಕೊನೆಪುಟ `ವಸಂತೋತ್ಸವ'   

ಶ್ರೀ ದ್ರೌಪದಿ ಕರಗ ಮಹೋತ್ಸವವು ಯಶಸ್ವಿಯಾಗಿ ನಡೆದ ಪ್ರತೀಕವಾಗಿ ಸಂತೋಷದಿಂದ ಕುಲಸ್ಥರೆಲ್ಲ ಒಂದೆಡೆ ಸೇರಿ ಸಂತಸ ಹಂಚಿಕೊಳ್ಳುವ ಕಾರ್ಯಕ್ರಮವೇ ವಸಂತೋತ್ಸವ. ಕರಗ ಉತ್ಸವದ ಹನ್ನೊಂದನೆಯ ದಿನ ಸಂಜೆ ದೇವಾಲಯದ ಆವರಣದಲ್ಲಿ ನಡೆಯುವ ವಸಂತೋತ್ಸವದಲ್ಲಿ ಉತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕಾರ್ಯಕರ್ತರು ವಿವಿಧ ಕುಟುಂಬಗಳ ಪ್ರತಿನಿಧಿಗಳು ಹಾಗೂ ವಹ್ನಿ ಕುಲಸ್ಥರು ಭಾಗವಹಿಸುತ್ತಾರೆ.

ಹೆಣ್ಣು ಮಕ್ಕಳು ಕಲೆಸಿದ ಅರಿಶಿಣದ ನೀರನ್ನು ತಂದು ದೇವಾಲಯದ ಆವರಣದಲ್ಲಿಟ್ಟಿರುವ ದೊಡ್ಡ ಕೊಳಗಗಳಲ್ಲಿ ತುಂಬಿಸುತ್ತಾರೆ. ಆವರಣದಲ್ಲಿ ಎರಡು ಕಂಬಗಳನ್ನು ನೆಟ್ಟು ಕಮಾನನ್ನು ತಯಾರು ಮಾಡಿ ಅದಕ್ಕೆ ಹಗ್ಗವನ್ನು ಕಟ್ಟಿ ಅದರ ತುದಿಯಲ್ಲಿ ತೆಂಗಿನ ಕಾಯನ್ನು ಕಟ್ಟಿಟ್ಟು ಇನ್ನೊಂದು ತುದಿಯ ಹಗ್ಗವನ್ನು ಎಳೆಯುವ ಏರ್ಪಾಡು ಮಾಡಲಾಗಿರುತ್ತದೆ. ಕುಲಸ್ಥರು ಯುವಕರನ್ನು ಉತ್ತೇಜಿಸಿ ಮರದ ದಂಡಗಳನ್ನು ಹಿಡಿದು ತೆಂಗಿನಕಾಯಿ ಬಡಿಯುವಂತೆ ಮಾಡುತ್ತಾರೆ. ಯುವಕರು ತೆಂಗಿನಕಾಯಿ ಒಡೆಯಲು ಪ್ರಯತ್ನಿಸುತ್ತಿದ್ದರೆ ಆ ಗುರಿಯನ್ನು ತಪ್ಪಿಸಲು ಅರಿಶಿಣದ ನೀರನ್ನು ಯುವಕರ ಮೇಲೆ ಎರಚುವ ಕೆಲಸ ತಿಗಳ ಕುಲದ ಯುವತಿಯರದು. 

ಇದೊಂದು ಮೋಜಿನ ಕಾರ್ಯಕ್ರಮ. ಯುವಕ ಯುವತಿಯರು ಉತ್ಸಾಹದಿಂದ ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ ಹರ್ಷ, ನಗೆ, ಕೂಗಾಟ, ಚಪ್ಪಾಳೆ ಸಾಮಾನ್ಯ. 

ಗ್ರಾಮಾಂತರ ಭಾಗದಲ್ಲಿ ಉಟ್ಲು ಸೇವೆ ಎಂದು ಕರೆಯಲಾಗುವ ಈ ತೆಂಗಿನಕಾಯಿ ಬಡಿಯುವ ಆಟವನ್ನು ಕರಗ ಧಾರ್ಮಿಕ ಕಾರ್ಯಕ್ರಮದಲ್ಲಿಯೇ ಅಳವಡಿಸಿಕೊಳ್ಳಲಾಗಿದೆ. ವಸಂತೋತ್ಸವ ಸೂರ್ಯನ ಬೆಳಕಿನಲ್ಲಿ ನಡೆಯುವ ಉತ್ಸವ. ಇದಾದ ನಂತರ ಮೂರ್ತಿಗಳನ್ನು ಶುದ್ಧಗೊಳಿಸಲಾಗುವುದು. 

ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಧ್ವಜಸ್ತಂಭಕ್ಕೆ ಪೂಜೆ ಮಾಡಿ ಅದನ್ನು ಇಳಿಸಲಾಗುವುದು. ಇದು ಆಯಾ ವರ್ಷದ ಕರಗ ಶಕ್ತ್ಯೋತ್ಸವದ ಮುಕ್ತಾಯದ ಭಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.