ADVERTISEMENT

ಕಲಾಕೃತಿಗಳ ಭಾರೀ ಹರಾಜು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 19:30 IST
Last Updated 21 ಆಗಸ್ಟ್ 2012, 19:30 IST
ಕಲಾಕೃತಿಗಳ ಭಾರೀ ಹರಾಜು
ಕಲಾಕೃತಿಗಳ ಭಾರೀ ಹರಾಜು   

ಆರ್ಟ್ ಬೆಂಗಳೂರು ಕಳೆದೊಂದು ತಿಂಗಳಿಂದ ನಡೆಸುತ್ತಿರುವ `ಕಲಾ ಹಬ್ಬ~ದ ಕೊನೆಯ ಭಾಗವಾಗಿ ಈ ಕಾರ್ಯಕ್ರಮ ನಡೆಯಲಿದೆ. ಸ್ವಾತಂತ್ರ್ಯಪೂರ್ವ ಕಲಾವಿದರಾದ ರವೀಂದ್ರನಾಥ ಟ್ಯಾಗೋರರಿಂದ ಆರಂಭಿಸಿ ಯುವ ಕಲಾವಿದರ ಕಲಾಕೃತಿಗಳೂ ಕಲಾಪ್ರಿಯರಿಗೆ ಲಭ್ಯವಾಗಲಿವೆ.

ಇದರೊಂದಿಗೆ ಕಲಾವಿದರ ಮೂರ್ತಿ, ಅವರು ಬಳಸುತ್ತಿದ್ದ ಕಾಫಿ ಟೇಬಲ್, ಕುರ್ಚಿ ಹಾಗೂ ಇತರ ದಿನಬಳಕೆಯ ವಸ್ತುಗಳೂ ಹರಾಜಿನ ಭಾಗವಾಗಿರುವುದು ವಿಶೇಷ.
ಎಂ.ಎಫ್.ಹುಸೇನ್, ಜಾಮಿನಿ ರಾಯ್, ಎಸ್.ಎಚ್.ರಾಜಾ, ಬಿ.ಪ್ರಭಾ, ಎಫ್.ಎನ್. ಸೋಜಾ, ಗಣೇಶ್ ಪ್ಯಾನೆ, ಕೆ.ಕೆ.ಹೆಬ್ಬಾರ್, ಕೃಷ್ಣನ್ ಖನ್ನಾ, ರಾಮ್‌ಕುಮಾರ್, ಬಾಕ್ರೆ, ಸೋಮ್‌ನಾಥ್ ಹೊರೆ ಮೊದಲಾದ ಹಿರಿಯ ಕಲಾವಿದರ ಕಲಾಕೃತಿಗಳು ಎರಡರಿಂದ ಹತ್ತು ಲಕ್ಷದ ಆಸುಪಾಸಿನಲ್ಲಿ ದೊರೆಯಲಿವೆ.

`ಕಲಾಕೃತಿಗಳ ಸಾಲಿಗೆ ಈ ಬಾರಿ ಆಧುನಿಕ ಪೀಠೋಪಕರಣಗಳನ್ನು, ಆಭರಣಗಳನ್ನು ಸೇರಿಸಿರುವುದು ವಿಶಿಷ್ಟ. ಜ್ಯುವೆಲ್ಲರಿಗಳ ವಿನ್ಯಾಸವನ್ನು ನೋಡಿ ಕಲಾಕೃತಿ ರಚಿಸಿದ್ದು ಭಾರೀ ಪ್ರಶಂಸೆಗೆ ಪಾತ್ರವಾಯಿತು. ವಿವಿಧ ರಾಜ್ಯಗಳ ಕಲಾಸಂಸ್ಕೃತಿಯನ್ನು ಪರಿಚಯಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ. ಹಾಗೆಯೇ ಅನ್ಯಭಾಷಿಗರ ಕಲಾಕೃತಿಗಳು ಕನ್ನಡಿಗರಿಗೆ ದೊರೆಯಲಿವೆ~ ಎಂದರು `ಆರ್ಟ್ ಬೆಂಗಳೂರು~ ಸಂಯೋಜಕಿ ಉಜ್ಮಾ ಇರ್ಫಾನ್.

`ವೃತ್ತಿಪರರ ಕಲಾಕೃತಿಗಳು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹರಾಜಾಗುತ್ತಿವೆ. ಕಳೆದ 60 ವರ್ಷಗಳಲ್ಲಿ ಕಲಾಕ್ಷೇತ್ರದಲ್ಲಾದ ಎಲ್ಲಾ ಬದಲಾವಣೆಗಳನ್ನೂ ಗುರುತು ಹಾಕಿಕೊಂಡು ಆಯಾ ಕಾಲಘಟ್ಟದ ಒಬ್ಬೊಬ್ಬ ಕಲಾವಿದರ ಕಲಾಕೃತಿಗಳನ್ನು ಹರಾಜಿನಲ್ಲಿಟ್ಟಿದ್ದೇವೆ.

ದಕ್ಷಿಣ ಭಾರತದ ಹಲವಾರು ಮಹಿಳಾ ಕಲಾವಿದರನ್ನೂ  ಸೇರಿಸಿಕೊಂಡಿದ್ದೇವೆ~ ಎಂದರು ಈ ಹರಾಜು ನಡೆಸಿಕೊಡಲಿರುವ ಅಂಜೀರಾ ಆರ್ಯ. ದೇಶದಾದ್ಯಂತ ನಡೆಯುವ ಶೇ 80ರಷ್ಟು ಹರಾಜು ಕಾರ್ಯಕ್ರಮಗಳಲ್ಲಿ  ಪಾಲ್ಗೊಂಡಿರುವ ಅಂಜಿರಾ ಆರ್ಯ ನಗರದಲ್ಲಿ ನಡೆಯಲಿರುವ ಹರಾಜಿನ ಜವಾಬ್ದಾರಿ ಹೊತ್ತಿದ್ದಾರೆ.

ಇಲ್ಲಿ ಸಂಗ್ರಹವಾಗುವ ಹಣವನ್ನು ಕ್ರಿಸ್ಟೆಲ್ ಹೌಸ್ ಇಂಡಿಯಾಗೆ ಸಹಾಯಾರ್ಥವಾಗಿ ನೀಡಲಾಗುವುದು. `ನಾವು ಐದು ವರ್ಷದ ಅನಾಥ ಮಕ್ಕಳಿಗೆ ಶಿಕ್ಷಣ ನೀಡಿ, ಅವರಿಗೆ ಉದ್ಯೋಗ ದೊರಕುವವರೆಗೆ ನೋಡಿಕೊಳ್ಳುತ್ತೇವೆ.


ಪ್ರಸ್ತುತ 1000 ಮಕ್ಕಳು ನಮ್ಮಲ್ಲಿ ಆಶ್ರಯ ಪಡೆದಿದ್ದಾರೆ. ಶಾಲೆಯ ಮೇಲುಸ್ತುವಾರಿಗೆ ಟ್ರಸ್ಟ್ ನೇಮಿಸಿರುವುದರಿಂದ ನಿಧಿ ಸಂಗ್ರಹದ ಅಷ್ಟೂ ಭಾಗ ಮಕ್ಕಳಿಗೆ ಸಂದಾಯವಾಗುತ್ತದೆ. ಬೆಂಗಳೂರಿಗರಿಗೆ  ಉತ್ತಮ ಗುಣಮಟ್ಟದ ಕಲಾಕೃತಿ ಕೊಳ್ಳಲು ಇದೊಂದು ಉತ್ತಮ ಅವಕಾಶ~ ಎಂದರು ಕ್ರಿಸ್ಟೆಲ್ ಹೌಸ್ ಇಂಡಿಯಾದ ಮುಖ್ಯಸ್ಥ ರಾಜು ಸಹಾನಿ.

ಹಿರಿಯ ಕಲಾವಿದ ಎಸ್.ಜಿ. ವಾಸುದೇವ್ ಸಹ ಈ ಕಾರ್ಯಕ್ರಮದ ಭಾಗವಾಗಿದ್ದರು. “ದೆಹಲಿ, ಮುಂಬೈನಂತಹ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಕಲಾ ಹರಾಜು ಬೆಂಗಳೂರಿಗೂ ಬಂದಿದ್ದು ಸಂತಸದ ಸಂಗತಿ. ಕಲೆಗೆ ಅಷ್ಟಾಗಿ ಪ್ರೋತ್ಸಾಹ ಸಿಗದ ಉದ್ಯಾನನಗರಿಯಲ್ಲೂ ಕಳೆದ ಹತ್ತು ವರ್ಷಗಳಿಂದ ಉತ್ತಮ ಕಲಾಕೃತಿಗಳನ್ನು ಇಷ್ಟಪಡುವ ಮಂದಿ ಹೆಚ್ಚುತ್ತಿದ್ದಾರೆ.
 
ನಮ್ಮ ಕಲಾಕೃತಿಗಳು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತವೆ ಎಂದಾದರೆ ಚಿತ್ರ ಬಿಡಿಸಿದ ನಮಗೂ ಹೆಮ್ಮೆಯ ವಿಷಯವೇ. ಯುವ ಕಲಾವಿದರು ಇದರಿಂದ ಪ್ರೇರಣೆ ಪಡೆಯಬೇಕು. ನನ್ನ `ಶೀ ಆಂಡ್ ಟ್ರೀ~ ಸರಣಿಯ ಕೆಲವು ಕಲಾಕೃತಿಗಳನ್ನು ಈ ಹರಾಜಿಗಾಗಿ ಕೊಟ್ಟಿದ್ದೇನೆ” ಎಂದರು.

1930ರ ಬಳಿಕದ ಅನೇಕ ಕಲಾವಿದರ ಕಲಾಕೃತಿಗಳು ಹರಾಜಾಗಲಿವೆ. ಇದು ಸಾರ್ವಜನಿಕರಿಗೆ ಮುಕ್ತವಾಗಿದ್ದು ಆಸಕ್ತರೆಲ್ಲರೂ ಪಾಲ್ಗೊಳ್ಳಬಹುದು. ಆಫ್ರಿಕನ್ ಕಲಾವಿದರ ಎರಡು ಕಲಾಕೃತಿಗಳೂ ಸೇರಿದಂತೆ 114 ಕಲಾಕೃತಿಗಳು ಇಲ್ಲಿ ಮಾರಾಟವಾಗಲಿವೆಯಂತೆ.                                         

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT