ADVERTISEMENT

ಕಾಫಿ ಆಯ್ತಾ ಗುರು...

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

 ವಿಶ್ವದ ಆಗುಹೋಗುಗಳ ಬಗ್ಗೆ `ಬನವಾಸಿ ಗೆಳೆಯರ ಬಳಗ~ದ ನಿಲುವುಗನ್ನಡಿ- `ಏನ್ ಗುರು... ಕಾಫಿ ಆಯ್ತಾ?~. ಕಾಫಿ ಕುಡಿಯುತ್ತಲೇ  `ಬ್ಲಾಗಿಲು~ ಸರಿಸೋಣ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಒಂದಷ್ಟು ಗೆಳೆಯರು ಕಟ್ಟಿಕೊಂಡ ಗುಂಪು `ಬನವಾಸಿ ಬಳಗ~. ಈ ಹೈಟೆಕ್ ಹುಡುಗರದು ದೇಸಿ ಮನಸು. ಸಮಾನ ಆಸಕ್ತಿಯ ಈ ಗುಂಪಿನ ಬೀಜಮಂತ್ರ ಕನ್ನಡ - ಕನ್ನಡಿಗ - ಕರ್ನಾಟಕ! 

ಕನ್ನಡ ಜಾಗೃತಿ ಮೂಡಿಸುವುದು, ಕನ್ನಡಿಗರಿಗೆ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಕನ್ನಡೇತರರಿಗೆ ಕನ್ನಡ ಕಲಿಯಲು ನೆರವು ನೀಡುವುದು, ಐಟಿ ಗೆಳೆಯರನ್ನು ಸಂಘಟಿಸುವುದು, ಪ್ರಚಲಿತ ಸಂಗತಿಗಳ ಬಗ್ಗೆ ಸಂವಾದ- ಇವು ಗೆಳೆಯರ ಗುಂಪಿನ ಕೆಲವು ಕಾರ್ಯಕ್ರಮಗಳು.
 
`ಕರ್ನಾಟಕ ಗತ ವೈಭವ~ದ ಪುನರುಜ್ಜೀವನಕ್ಕೆ ತುಡಿಯುವಂತೆ ಕಾಣುವ ಈ ಗೆಳೆಯರು ತಮ್ಮದೇ ಆದ ನೀತಿಸಂಹಿತೆ ರೂಪಿಸಿಕೊಂಡಿದ್ದಾರೆ. ಕನ್ನಡದ ವಿವಿಧ ಸಂಗತಿಗಳ ಕುರಿತಂತೆ `ಏನ್ ಗುರು ಕಾಫಿ ಆಯ್ತಾ~ ಹೆಸರಿನ ಪುಸ್ತಕ ಪ್ರಕಟಿಸಿದ್ದಾರೆ. ಈಚಿನ ದಿನಗಳಲ್ಲಿ, ರಾಜಧಾನಿಯ ಕನ್ನಡಪರ ಚಟುವಟಿಕೆಗಳಲ್ಲಿ ಈ ಗೆಳೆಯರು ರುಜು ಇರುವುದು ಮಾಮೂಲು.

ಈ ಗೆಳೆಯರ ಗುರಿ-ಯೋಜನೆಗಳ ವಿವರಗಳು www.banavasibalaga.org ಕೊಂಡಿಯಲ್ಲಿ ಲಭ್ಯ. ಕನ್ನಡ ಬಾರದವರಿಗಾಗಿ    karnatique.blogspot.in  ಎನ್ನುವ ಬ್ಲಾಗೂ ಇದೆ. ಇವುಗಳ ವಿಸ್ತರಣೆಯೇ `ಏನ್ ಗುರು..~- www.enguru.blogspot.in

ರಾಜಕಾರಣ, ಸಿನಿಮಾ, ಭಾಷೆ, ದೋಸೆ, ಕ್ರಿಕೆಟ್, ಶಿಕ್ಷಣ, - ಹೀಗೆ `ಏನ್ ಗುರು...~ ವಿಷಯ ವೈವಿಧ್ಯ ಸಮೃದ್ಧವಾಗಿದೆ. 

***
`ಏನ್ ಗುರು..~ವಿನಲ್ಲಿ ಕಂಡ ಒಂದು ಕೊಂಡಿ:
ದೋಸೆಮನೆಗೆ ಹೋಗಿದ್ದೀರಾ?
ಬೆಂಗಳೂರಿನಲ್ಲಿ ವಿಶ್ವೇಶ್ವರಪುರಂ ತಿಂಡಿ ತಿನಿಸಿಗೆ ಭಾಳಾ ಹೆಸರುವಾಸಿ ಗುರೂ! ಅಲ್ಲಿ ವಿ.ಬಿ ಬೇಕರಿ, ತಿಂಡಿ ಬೀದಿ, ಅವರೆಕಾಳು ಪರಿಶೆ, ಮಾರ್ಡ್ರನ್, ಕಾಮತ್, ಜನತಾ ಹೋಟಲ್ಲುಗಳಿವೆ. ಆಹಾ...

ನೆನೆದರೆ ಬಾಯಲ್ಲಿ ನೀರೂರುವುದು! ಇದೀಗ ಕೆಲದಿನಗಳಿಂದ ಆ ಬಡಾವಣೇಲಿ ಮತ್ತೊಂದು ಹೋಟೆಲ್ ಜನರನ್ನು ಹೆಚ್ಚು ಹೆಚ್ಚು ಸೆಳೀತಾ ಇದೆ. ಅದೇ ದೋಸೆ ಮನೆ. ಮೂರು ಮಹಡಿಯ ಹೋಟೆಲ್ಲಿನ ನೆಲ ಅಂತಸ್ತಿನಲ್ಲಿ ದರ್ಶಿನಿ, ಮೊದಲಲ್ಲಿ ತಿಂಡಿ, ಎರಡನೆಯದರಲ್ಲಿ ಮತ್ತು ಮೂರನೆಯದರಲ್ಲಿ ಊಟ ಸಿಗುತ್ತದೆ. ಹೊಸತನದಿಂದ ಕಂಗೊಳಿಸುತ್ತಿರುವ ಈ ಹೋಟೆಲ್ಲಿಗೆ ಹೋಗಿದ್ದೀರಾ ಗುರೂ?

ಈ ದೋಸೆಮನೆ ಹೋಟೆಲ್‌ನಲ್ಲಿ ನೂರಾರು ಬಗೆಯ ದೋಸೆಗಳು ಸಿಗುತ್ತವೆ. ಬಾಯಿರುಚಿ ಒಬ್ಬೊಬ್ಬರದು ಒಂದೊಂದು ರೀತಿ ನಿಜಾ. ಆದರೆ ಈ ಹೋಟೆಲ್ಲಿನಲ್ಲಿ ಕನ್ನಡಕ್ಕೆ ಕೊಟ್ಟಿರೋ ಸ್ಥಾನ ಮಾತ್ರಾ ಕನ್ನಡಿಗರೆಲ್ಲರನ್ನೂ ಮೆಚ್ಚಿಸುವಂತಿದೆ. ಇಲ್ಲಿ ಕನ್ನಡದ ಮೆನುವಿದೆ.

ಈ ಹೋಟೆಲ್ಲಿನ ಹೊರಗೆ ಮತ್ತು ಒಳಗೆ ಇರೋ ಬೋರ್ಡುಗಳಲ್ಲಿ ಕನ್ನಡಕ್ಕೆ ದೊಡ್ಡಸ್ಥಾನವಿದೆ. ಇಲ್ಲಿ ದೋಸೆ ಇದೆ ದೋಸಾ ಇಲ್ಲ. ಇಲ್ಲಿ ವಡೆ ಇದೆ ವಡಾ ಇಲ್ಲ. ಅಚ್ಚ ಕನ್ನಡದ ವಾತಾವರಣವಿರೋ ಈ ಹೋಟೆಲ್ಲಿಗೆ ಹೋದರೆ ಬರೀ ಹೊಟ್ಟೆ ತುಂಬುಸ್ಕೊಳ್ಳೋದಲ್ಲದೆ ಕನ್ನಡದ ವಾತಾವರಣವನ್ನು ಕಂಡು ಕಣ್ಣು, ಮನಸ್ಸು ಎರಡನ್ನೂ ತುಂಬ್ಕೋಬೌದು.. ಗುರೂ!

ಕೊನೆಹನಿ: ಈ ಹೋಟೆಲ್ಲಿನವರದ್ದೊಂದು ಅಂತರ್ಜಾಲ ತಾಣವಿದೆ. ಅದನ್ನು ತೆರೆದ ಕೂಡಲೇ ಆಹಾ ಅನ್ನಿಸುವಂತೆ ಕನ್ನಡ ಕಂಡರೂ ಒಳಗೆ ಹೋದಂತೆಲ್ಲಾ ಕೊಂಡಿಗಳೆಲ್ಲಾ ಇಂಗ್ಲೀಶಿನಲ್ಲೇ ತೆರೆದುಕೊಳ್ಳುತ್ತದೆ. ತಿಂಡಿಗಳ ಹೆಸರು ದೋಸಾ ಅಂತಾನೆ ಇದೆ. ಇರಲಿ ಬಿಡಿ, ಮುಂದಿನ ಸಲ ದೋಸೆಮನೆ ಹೋಟೆಲ್ಲಿಗೆ ಹೋದಾಗ ಹೊಟ್ಟೆ ತುಂಬಾ ದೋಸೆ ತಿಂದು ಅಂತರ್ಜಾಲ ತಾಣದಲ್ಲೂ ಕನ್ನಡ ತರುವ ಬಗ್ಗೆ ಸಲಹೆ ಕೊಟ್ಟು ಬರೋಣ! ಏನಂತೀರಾ ಗುರುಗಳೇ?
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT