ADVERTISEMENT

‘ಕಾರ್ಟಿಸ್ಟ್‌ ಹಬ್ಬ’ದಲ್ಲಿ ಅರಳಿದ ಕಲಾಕೃತಿಗಳು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 19:30 IST
Last Updated 11 ಡಿಸೆಂಬರ್ 2017, 19:30 IST
ಕಲಾಕೃತಿ ರಚನೆಯಲ್ಲಿ ತೊಡಗಿರುವ ಕಲಾವಿದ
ಕಲಾಕೃತಿ ರಚನೆಯಲ್ಲಿ ತೊಡಗಿರುವ ಕಲಾವಿದ   

ಸೆಂಟ್ರಲ್‌ ಕಾಲೇಜು ಆವರಣ ಮತ್ತು ಅರಮನೆ ರಸ್ತೆಯು ಕಲಾ ಮೆರುಗು ಪಡೆದು ಕಂಗೊಳಿಸುತ್ತಿತ್ತು. ರಸ್ತೆಯುದ್ದಕ್ಕೂ ಅಲ್ಲಲ್ಲಿ ನಿಲ್ಲಿಸಿದ್ದ ಕ್ಯಾನ್ವಾಸ್‌ಗಳಲ್ಲಿ ಕಾರುಗಳ ಬೇರೆ ಬೇರೆ ಭಾಗಗಳು ಕಲಾಕೃತಿಗಳ ರೂಪ ಪಡೆಯುತ್ತಿದ್ದವು. ಹಾದು ಹೋಗುತ್ತಿದ್ದ ಪ್ರತಿ ವಾಹನ ಸವಾರರೂ ಒಂದು ಕ್ಷಣ ನಿಂತು ಕಲಾಕೃತಿಗಳನ್ನು ಕಣ್ತುಂಬಿಕೊಂಡು ಮುಂದುವರಿಯುತ್ತಿದ್ದರು.

ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಮತ್ತು ಆಸುಪಾಸಿನಲ್ಲಿ ಇತ್ತೀಚಿಗೆ ನಡೆದ ‘ಕಾರ್ಟಿಸ್ಟ್‌ ಹಬ್ಬ’ದ ನೋಟಗಳಿವು. ‘ಜನರಲ್ ಮೋಟಾರ್ಸ್‌’ ಹಮ್ಮಿಕೊಂಡಿರುವ ‘ಕಾರ್ಟಿಸ್ಟ್ ಯಾತ್ರಾ’ದ ಭಾಗವಾಗಿ ನಗರದಲ್ಲಿ ಕಾರ್ಟಿಸ್ಟ್‌ ಹಬ್ಬ ನಡೆಯಿತು. ಕಂಪೆನಿಯ ಉದ್ಯೋಗಿಗಳು ತಮ್ಮ ಕಲಾ ಕೌಶಲವನ್ನು ಪ್ರದರ್ಶಿಸಲೂ ಇದು ವೇದಿಕೆಯಾಯಿತು. ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಕಾರಿನ ಬಿಡಿಭಾಗಗಳ ಮೇಲೆ ಮೂಡಿಸುವ ಅಪರೂಪದ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡರು. ಆಟೊಮೊಬೈಲ್‌ನಿಂದ ಸ್ಫೂರ್ತಿ ಪಡೆದ ಕಲಾಕೃತಿಗಳ ಪ್ರದರ್ಶನಕ್ಕೆ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಇದೇ ತಿಂಗಳು ಆರಂಭವಾಗಿರುವ ‘ಕಾರ್ಟಿಸ್ಟ್‌ ಹಬ್ಬ’ ಮುಂದಿನ ಫೆಬ್ರುವರಿವರೆಗೆ ನಡೆಯಲಿದೆ. ಈ ಕಲಾ ಉತ್ಸವಕ್ಕೆ 9,100 ಕಿ.ಮೀ. ವ್ಯಾಪ್ತಿಯ 10 ಪ್ರಮುಖ ನಗರಗಳು ಸಾಕ್ಷಿಯಾಗಲಿವೆ. 1,000 ಕಲಾವಿದರು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲಿದ್ದಾರೆ. ಆಯ್ದ 200 ಮಂದಿ ಕಲಾವಿದರಿಗೆ ಜೈಪುರದಲ್ಲಿ ನಡೆಯುವ ಅಂತಿಮ ಹಂತದ ಕಾರ್ಟಿಸ್ಟ್‌ ಯಾತ್ರೆಯಲ್ಲಿ ಭಾಗವಹಿಸಿ ಕಲಾಕೃತಿಗಳನ್ನು ಪ್ರದರ್ಶಿಸಲು ಅವಕಾಶ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದರು.

ADVERTISEMENT

‘ಕಾರ್ಟಿಸ್ಟ್‌ ಯಾತ್ರವು ಕಲೆ ಹಾಗೂ ಕಂಪೆನಿಯ ಕಾರುಗಳ ನವೀನ ಮಾದರಿಯ ಕುರಿತ ದೃಷ್ಟಿಕೋನದ ಹದಪಾಕದಂತಿದೆ. ಉದ್ಯೋಗಿಗಳಿಗೆ ತಮ್ಮ ಕಲಾ ಪ್ರದರ್ಶನಕ್ಕೆ ಪೂರಕ ವೇದಿಕೆಯೂ ಆಗಿದೆ. ಸಹೋದ್ಯೋಗಿಗಳ ಸೃಜನಶೀಲತೆಯನ್ನು ‍ಪ್ರೋತ್ಸಾಹಿಸುವ ಇಂತಹ ಕಲಾ ಮಹೋತ್ಸವದ ಭಾಗವಾಗಿದ್ದಕ್ಕೆ ಹೆಮ್ಮೆ ಇದೆ’ ಎಂದು ಜನರಲ್ ಮೋಟಾರ್ಸ್‌ನ ಎಂಜಿನಿಯರಿಂಗ್‌ ವಿಭಾಗದ ಉಪಾಧ್ಯಕ್ಷ ಬ್ರಿಯಾನ್‌ ಮ್ಯಾಕ್‌ಮೊರ್ ಸಂತಸ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ, ‘ಕಾರ್ಟಿಸ್ಟ್‌ ಹಬ್ಬ’, ಕಾರುಪ್ರಿಯರು ಮತ್ತು ಕಲಾಸಕ್ತರ ಕಣ್ಣಿಗೆ ಹಬ್ಬ ಮತ್ತು ಕಲಾವಿದರ ಕೌಶಲದ ಅನಾವರಣಕ್ಕೆ ವೇದಿಕೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.