ADVERTISEMENT

ಕೀನ್ಯಾದಲ್ಲಿ ಕನ್ನಡ ಧ್ಯಾನ

ಇ.ಎಸ್.ಸುಧೀಂದ್ರ ಪ್ರಸಾದ್
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

`ಎಲ್ಲವೂ ನಾವು ಅಂದುಕೊಂಡಂತೆಯೇ ನಡೆದರೆ ಆಫ್ರಿಕಾ ಖಂಡದಲ್ಲಿ ಮೊದಲ ಕನ್ನಡ ಭವನ ಕಟ್ಟಿ ಅದರ ಮೇಲೆ ಕನ್ನಡ ಧ್ವಜ ಹಾರಿಸುತ್ತೇವೆ. ಇದೇ ವಿಚಾರ ಕರ್ನಾಟಕ ಸರ್ಕಾರದೊಂದಿಗೆ ಮಾತನಾಡಲು ಕೀನ್ಯಾದಿಂದ ಬೆಂಗಳೂರಿಗೆ ಬಂದಿದ್ದೇನೆ' ಎಂದರು ಕೀನ್ಯಾದ ಕನ್ನಡ ಸಾಂಸ್ಕೃತಿಕ ಸಂಘದ ಸ್ಥಾಪಕ ಅಧ್ಯಕ್ಷ ಕೆ.ಎನ್. ಅಶೋಕ್ ರೆಡ್ಡಿ.

ಹೇರಳ ಖನಿಜ, ತೈಲ ನಿಕ್ಷೇಪಗಳಿಂದ ಸಂಪದ್ಭರಿತವಾಗಿರುವ ಆಫ್ರಿಕಾ ಖಂಡ ಕಗ್ಗತ್ತಲೆಯ ಖಂಡ ಎಂಬ ಹಣೆಪಟ್ಟಿಯನ್ನು ಕಳಚಿಹಾಕಿಕೊಳ್ಳಲಿದೆ ಎಂದು ಈಗಾಗಲೇ ಆರ್ಥಿಕ ಪಂಡಿತರು ಹೇಳಿರುವ ಬೆನ್ನಲ್ಲೇ ಆಫ್ರಿಕಾದ ಹಲವು ರಾಷ್ಟ್ರಗಳತ್ತ ಜಗತ್ತು ಈಗ ಮುಖ ಮಾಡಿದೆ. ಅದಕ್ಕೆ ಪುಷ್ಟಿ ನೀಡುವಂತೆ ಕೀನ್ಯಾ ರಾಷ್ಟ್ರವಾಗಿ ಈಗ ಕೇವಲ ಎರಡು ವರ್ಷಗಳು ಮಾತ್ರ ಕಳೆದಿದ್ದು, ಅಲ್ಲಿ ಬಂಡವಾಳ ಹೂಡಲು ವಿಪುಲ ಅವಕಾಶಗಳಿವೆ. ಈಗಾಗಲೇ ಗುಜರಾತ್, ಪಂಜಾಬ್, ಆಂಧ್ರ, ತಮಿಳುನಾಡು ಹಾಗೂ ಕೇರಳದ ಹಲವಾರು ಮಂದಿ ಬಂದು ಇಲ್ಲಿ ಬದುಕು ಕಂಡುಕೊಂಡಿದ್ದಾರೆ. ಕನ್ನಡಿಗರ ಸಂಖ್ಯೆ ಹೆಚ್ಚಿಲ್ಲದಿದ್ದರೂ ಸಂಘಟನೆಯ ಕೊರತೆಯ ನಡುವೆಯೂ ಕನ್ನಡ ಸಾಂಸ್ಕೃತಿಕ ಸಂಘವೊಂದು ಹುಟ್ಟಿಕೊಂಡು ಇದೀಗ ದಶಮಾನೋತ್ಸವದ ಹೊಸ್ತಿಲಲ್ಲಿದೆ ಎಂದರೆ ನಿಜಕ್ಕೂ ಅಚ್ಚರಿ.
ಕೈಗಾರಿಕೋದ್ಯಮಿಯ ಕನ್ನಡಪ್ರೇಮ

ಕೋಲಾರದ ಚಿಂತಾಮಣಿ ಬಳಿಯ ಕಾಪ್ಪಲ್ಲಿ ಗ್ರಾಮದ ಅಶೋಕ್ ರೆಡ್ಡಿ ಇಂಡಸ್ಟ್ರಿಯಲ್ ಪ್ರೊಡಕ್ಷನ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು, 1993ರಲ್ಲಿ ಉದ್ಯೋಗ ಅರಸಿ ಆಫ್ರಿಕಾ ಖಂಡ ಸೇರಿದವರು. ತಾಂಜೇನಿಯಾದಲ್ಲಿ ಐದು ವರ್ಷ ಕೆಲಸ ಮಾಡಿದ ನಂತರ 1998ರಲ್ಲಿ ಕೀನ್ಯಾಗೆ ವಲಸೆ ಬಂದರು. ಬೇರೊಂದು ಸಂಸ್ಥೆಗೆ ದುಡಿಯುತ್ತಿದ್ದ ಅಶೋಕ್ ರೆಡ್ಡಿ `ವಾಟರ್ ಆಫ್ರಿಕಾ' ಎಂಬ ನೀರಿನ ಯೋಜನೆ, `ಕೀನ್ಯಾ ಕೆಮಿಕಲ್ಸ್' ಎಂಬ ರಾಸಾಯನಿಕ ಕೈಗಾರಿಕೆ, `ಇಂಡೋ ಆಫ್ರಿಕನ್ ಕಂಪೆನಿ' ಎಂಬ ಡ್ರಿಲ್ಲಿಂಗ್ ಹಾಗೂ ಮೈನಿಂಗ್ ತಂತ್ರಜ್ಞಾನದ ಆಮದು ಹಾಗೂ ರಫ್ತು ಹಾಗೂ `ಗ್ಲೋಬಲ್ ಇನ್‌ಫ್ರಾಸ್ಟ್ರಕ್ಚರ್' ಎಂಬ ನಿರ್ಮಾಣ ಯೋಜನೆಯ ಜತೆಗೆ ಇನ್ನೂ ಹಲವು ಕಂಪೆನಿಗಳನ್ನು ತೆರೆದು ಕೀನ್ಯಾದ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ. ವ್ಯಾಪಾರ ವಹಿವಾಟು ವಿಸ್ತರಿಸಿದಂತೆ ಕೆಲಸದ ಒತ್ತಡ ಹೆಚ್ಚಾದರೂ, ಕನ್ನಡತನವನ್ನು ಕಾಪಾಡಲು ಹಾಗೂ ಕನ್ನಡಿಗರ ಸಂಘಟನೆಗೆ ಅವರು ಸದಾ ಮುಂದು.

`ಮೂವತ್ತೈದು ವರ್ಷದಿಂದಲೂ ಗುಜರಾತಿ, ಪಂಜಾಬಿ, ತಮಿಳು, ತೆಲುಗು, ಮಲಯಾಳಿಗಳಂತೆ ಕನ್ನಡಿಗರೂ ಆಫ್ರಿಕಾ ಖಂಡದಲ್ಲಿದ್ದರೂ ಸಂಘಟಿತರಾಗಲು ಏಕೋ ಹಿಂಜರಿಯುತ್ತಿದ್ದರು. ಗುರುತು, ಪರಿಚಯವಿರುವ 10-15 ಕುಟುಂಬಗಳು ಆಗೊಮ್ಮೆ ಈಗೊಮ್ಮೆ ಅವರಿವರ ಮನೆಯಲ್ಲಿ ಸೇರಿಕೊಂಡು ಒಂದು ಊಟ ಮಾಡಿ ಬರುವುದಷ್ಟಕ್ಕೇ ಇದು ಸೀಮಿತವಾಗಿತ್ತು. ಇವರಲ್ಲೂ ಅರ್ಧದಷ್ಟು ಮಂದಿ ಕನ್ನಡ ಮಾತಾಡುವ ತಮಿಳಿಗರು. ಅಸಂಘಟಿತ ಕನ್ನಡಿಗರನ್ನು ಸಂಘಟಿಸಲು ಹಲವು ಬಾರಿ ಪ್ರಯತ್ನಿಸಿದರೂ ನಕಾರಾತ್ಮಕ ಧೋರಣೆಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ.

ಒಮ್ಮೆ ದಕ್ಷಿಣ ಭಾರತದ ಸಾಂಸ್ಕೃತಿಕ ಸಂಘ ಕಾರ್ಯಕ್ರಮ ಆಯೋಜಿಸಿ ಕನ್ನಡಿಗರು ತಮ್ಮ ರಾಜ್ಯವನ್ನು ಪ್ರತಿನಿಧಿಸುವ ಕಾರ್ಯಕ್ರಮ ನೀಡಬೇಕೆಂದು ತಿಳಿಸಿದರು. ಅದಕ್ಕೂ ಇದೇ ರೀತಿಯ ನಿರುತ್ಸಾಹ. ಯಾರೊಬ್ಬರೂ ಮುಂದೆ ಬರಲಿಲ್ಲ. ಆಗ ನಾನೇ ಮುಂದೆ ಹೋಗಿ ಒಂದು ನಾಟಕವನ್ನು ಸಿದ್ಧಪಡಿಸಿ ನಾಟಕವಾಡಿದೆ. ಕ್ರಿಕೆಟ್ ಪಂದ್ಯವೊಂದನ್ನೂ ಆಯೋಜಿಸಲಾಗಿತ್ತು. ಅದಕ್ಕೂ ಮುಂದೆ ನಿಂತು ಒಂದಿಷ್ಟು ಕನ್ನಡಿಗರನ್ನು ಸೇರಿಸಿ, ಅಭ್ಯಾಸ ನಡೆಸಿ ದ್ವಿತೀಯ ಸ್ಥಾನ ಪಡೆದೆವು. ಆಗ ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ಮೂಡಿ, ತಮ್ಮ ಕೈಯಲ್ಲಾದಷ್ಟು ಹಣ ಹೂಡಿ ಸಂಘ ಕಟ್ಟಿದೆವು. 2004ರಲ್ಲಿ ಸಂಘದ ನೋಂದಣಿಯೂ ಆಯಿತು' ಎಂದು ಅಶೋಕ್ ಅವರು ಕೀನ್ಯಾ ಕನ್ನಡ ಸಂಘ ಹುಟ್ಟಿಕೊಂಡ ನೆನಪುಗಳನ್ನು ಬಿಚ್ಚಿಟ್ಟರು.

ಸ್ವಹೀಲ್ ಜತೆ ಕನ್ನಡ
`ಈ ಕನ್ನಡ ಸಾಂಸ್ಕೃತಿಕ ಸಂಘದಲ್ಲಿ ಈಗ 350ಕ್ಕೂ ಅಧಿಕ ಸದಸ್ಯರಿದ್ದಾರೆ. ವರ್ಷಕ್ಕೆ ಕನಿಷ್ಠ ಆರು ಬಾರಿಯಾದರೂ ಒಟ್ಟಿಗೆ ಸೇರುತ್ತಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ಸಿಖ್ ಬಾಂಧವರು ಸಂಘದ ಸದಸ್ಯತ್ವ ಪಡೆದಿದ್ದಾರೆ. ಕನ್ನಡ ರಾಜ್ಯೋತ್ಸವ ಹಾಗೂ ದೊಡ್ಡ ಹಬ್ಬಗಳನ್ನು ಆಚರಿಸುವುದರ ಜತೆಗೆ ತಮ್ಮ ಮಕ್ಕಳು ಕನ್ನಡ ಮರೆಯದಂತೆ ಮುಂದಿನ ಪೀಳಿಗೆಗೆ ಕನ್ನಡ ಹಾಗೂ ಕನ್ನಡತನವನ್ನು ವರ್ಗಾಯಿಸುವ ಕಾರ್ಯ ನಡೆದಿದೆ.

ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, ಭರತನಾಟ್ಯ, ಕನ್ನಡ ಪೌರಾಣಿಕ ಹಾಗೂ ಐತಿಹಾಸಿಕ ಸಿನಿಮಾಗಳ ಪ್ರದರ್ಶನ ಹಾಗೂ ಆ ಚಿತ್ರಗಳಿಂದ ಆಯ್ದ ತುಣುಕುಗಳಿಗೆ ಮಕ್ಕಳೇ ಅಭಿನಯಿಸುವ ಕಾರ್ಯಕ್ರಮವೂ ಇರುತ್ತದೆ. ಒಟ್ಟಿನಲ್ಲಿ ದೇಶ, ಭಾಷೆ ಬಿಟ್ಟು ಬಂದಿರುವ ನಮಗೆ ಕೀನ್ಯಾದ `ಸ್ವಹೀಲ್' ಭಾಷೆ ಕರಗತವಾಗಿದ್ದರೂ ಅರಳು ಹುರಿದಂತೆ ಮಾತಾಡುವ ಕನ್ನಡವನ್ನು ಮರೆಯುವ ಮನಸ್ಸಿಲ್ಲ. ಹೀಗಾಗಿ ಕೀನ್ಯಾದಲ್ಲೂ ಕನ್ನಡದ ಧ್ವನಿ ಮೊಳಗಿಸುವ ಇರಾದೆ ಇದೆ' ಎಂದು ತಿಳಿಸಿದರು.

`ನಾನು ಆಫ್ರಿಕಾಕ್ಕೆ ಹೋದಾಗ ಅಲ್ಲಿನ ಹವೆಯನ್ನು ಬೆಂಗಳೂರಿಗೆ ಹೋಲಿಸುತ್ತಿದ್ದೆ. ಈಗ ಬೆಂಗಳೂರು ತೀರಾ ಹದಗೆಟ್ಟಿದೆ. ಬೆಂಗಳೂರಿನಲ್ಲಿ ಮೊದಲು ಫ್ಯಾನ್‌ಗಳು ಮಾರಾಟವಾಗದು ಎಂಬ ಮಾತಿತ್ತು. ಕೀನ್ಯಾದಲ್ಲಿ ಈಗಲೂ ಯಾವ ಮನೆಯಲ್ಲೂ ಫ್ಯಾನ್ ಇಲ್ಲ. ಬೇಸಿಗೆಯಲ್ಲಿ ಕನಿಷ್ಠ ಒಂದು ಕಂಬಳಿ ಹಾಗೂ ಚಳಿಗಾಲದಲ್ಲಿ ಎರಡು ಕಂಬಳಿ ಹೊದಿಯಲೇಬೇಕಾದಷ್ಟು ಚಳಿ ಇರುತ್ತದೆ. ಮಳೆ, ಹವೆ ಎಲ್ಲವೂ ಅಲ್ಲಿ ಅತ್ಯುತ್ತಮ. ಕೀನ್ಯಾ, ಉಗಾಂಡ ಹಾಗೂ ತಾಂಜೇನಿಯಾ ರಾಷ್ಟ್ರಗಳಲ್ಲಿ ಈಗ ಅವಕಾಶಗಳ ಹೆಬ್ಬಾಗಿಲು ತೆರೆದಿವೆ.

ಕನ್ನಡಿಗರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಗತ್ತಿನ ಅತಿ ದೊಡ್ಡ ಐಟಿ ಪಾರ್ಕ್ ನಿರ್ಮಾಣವಾಗುತ್ತಿದೆ. ರಿಯಲ್ ಎಸ್ಟೇಟ್, ಕೃಷಿ ಸೇರಿದಂತೆ ಹತ್ತು ಹಲವು ಅವಕಾಶಗಳು ಅಲ್ಲಿವೆ. ರಾಯಭಾರ ಕಚೇರಿಯ ಕೌನ್ಸಲರ್ ಕೂಡ ಕನ್ನಡಿಗರೇ. ಜತೆಗೆ ಎಂಜಿನಿಯರ್, ತಂತ್ರಜ್ಞರು, ಅಕೌಂಟೆಂಟ್, ಐಟಿ ಕ್ಷೇತ್ರದಲ್ಲಿ ದುಡಿಯುತ್ತಿರುವವರು, ವೈದ್ಯರೂ ಇದ್ದಾರೆ' ಎಂದು ಅಲ್ಲಿರುವ ಅವಕಾಶಗಳನ್ನು ಅಶೋಕ್ ವಿವರಿಸಿದರು.

ಕನ್ನಡ ಸಾಂಸ್ಕೃತಿಕ ಸಂಘದ ದಶಮಾನೋತ್ಸವ ಸಂದರ್ಭವನ್ನು ಸ್ಮರಣೀಯವನ್ನಾಗಿಸಲು ಕರ್ನಾಟಕದ ಪ್ರತಿಯೊಂದು ಕಲಾ ತಂಡವನ್ನೂ ಕರೆಸುವ ಉದ್ದೇಶ ಅಲ್ಲಿನ ಕನ್ನಡ ಸಂಘದ್ದು. ನ. 9 ಹಾಗೂ 10ರಂದು ನಡೆಯಲಿರುವ ಈ ಸಂದರ್ಭದಲ್ಲಿ ಕನ್ನಡ ಭವನ ನಿರ್ಮಾಣದ ಕನಸನ್ನೂ ನನಸು ಮಾಡುವ ಯೋಜನೆ ಅವರದ್ದು. ಇದಕ್ಕಾಗಿ ಅವರು ಕರ್ನಾಟಕ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಜತೆಗೆ ಕೀನ್ಯಾದ ಕನ್ನಡ ಸಾಂಸ್ಕೃತಿಕ ಸಂಘಕ್ಕೆ ಕರಾವಳಿ ಕನ್ನಡಿಗ ಸೋದರರು ಸೇರದೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು, `ಹೀಗಾದಲ್ಲಿ ಕನ್ನಡಿಗರು ಒಂದಾಗುವುದೆಂದು' ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ಕನ್ನಡಿಗರೆಲ್ಲರೂ ತಮ್ಮ ಬಿಗುಮಾನವನ್ನು ಬಿಟ್ಟು ಒಂದಾದಲ್ಲಿ ಅನ್ಯ ಭಾಷಿಗರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಸಂಘವನ್ನು ಬೆಳೆಸುವ ಗುರಿಯನ್ನೂ ಅವರು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT