ADVERTISEMENT

ಕುಂಚದಲ್ಲಿ ಮನೆ-ಮನದ ಬಿಂಬ...

ಅನುಪಮಾ ಫಾಸಿ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ಬಹುತೇಕರು ತಮ್ಮ ಮನೆಯನ್ನು ಮತ್ತು ಮನೆಯ ಒಳಾಂಗಣದ ಅಲಂಕಾರವನ್ನು ನಿರ್ಲಕ್ಷಿಸಿರುತ್ತಾರೆ. ನಮ್ಮ ಮನೆ ತಾನೇ? ಹೇಗಿದ್ದರೇನು ಎನ್ನುವ ಭಾವ ಎಲ್ಲರಲ್ಲಿರುವುದು ಸಾಮಾನ್ಯ ಸಂಗತಿ.

ಆದರೆ ಇಲ್ಲಿ ಮನೆ ಮತ್ತು ಮನೆಯ ಒಳಾಂಗಣವೇ ಸ್ಫೂರ್ತಿಯಾಗಿ ಕಲೆಯ ರೂಪದಲ್ಲಿ ಬೆಳಕಿಗೆ ಬಂದಿದೆ.

ಈಗಿನ ಆಧುನಿಕ ಯುಗದಲ್ಲಿ ಮನೆಯ ರೂಪವೇ ಬದಲಾಗಿರುವಾಗ ಕಲಾಕೃತಿಗಳಲ್ಲಿ ಮನೆಯೇ ಗೀಳಿನಂತೆ ಕಾಡಿರುವುದು ವಿಸ್ಮಯ ಹಾಗೂ ಆಶ್ಚರ್ಯ.

ADVERTISEMENT

ಮನೆ ಅಂದರೆ ಅಲ್ಲಿ ಹಲವು ಮನಸ್ಸುಗಳಿರುತ್ತವೆ, ಅದರೊಂದಿಗೆ ಬೇರೆಬೇರೆ ಧೋರಣೆಗಳು. ಅವುಗಳಿಗೆ ಹೊಂದಾಣಿಕೆ ಆದಾಗಲೇ ಒಂದು ಮನೆಯ ಮನಃಸ್ಥಿತಿ ರೂಪುಗೊಳ್ಳುತ್ತದೆ. ಇಲ್ಲವಾದರೆ ಮನೆಯಲ್ಲಿ ಬಿರುಕು! ಮನಸ್ಸುಗಳು ಕೂಡ ಒಡೆದ ಗಾಜಿನ ಕನ್ನಡಿಯಾಗುತ್ತವೆ. ಈಗಿನ ಆಧುನಿಕ ಯುಗದಲ್ಲಿ ಭಾವನಾತ್ಮಕ ಸಂಬಂಧಗಳು ಕಣ್ಮರೆಯಾಗುತ್ತಿರುವ ಸಂದರ್ಭವನ್ನು ಈ ಕಲಾಕೃತಿಗಳು ಕಟ್ಟಿಕೊಡುತ್ತವೆ.

ಮನೆ-ಮನ-ಬದುಕು ಸದಾ ಒಂದಕ್ಕೊಂದು ಬೆಸೆದುಕೊಂಡಂಥವು. ಮನೆಯ ನೆನಪುಗಳು ಈ ಕಲಾಕೃತಿಗಳಲ್ಲಿ ಬಿಟ್ಟೂ ಬಿಡದೆ ಕಾಡಿವೆ. ಇವೆಲ್ಲವೂ ಸಾಧ್ಯವಾಗಿರುವುದು ಪ್ರತಿಮಾ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಿ.ವಿ. ಶ್ರುತಿ ಅವರ ಚಿತ್ರಕಲಾಕೃತಿಗಳಿಂದ.

ಶ್ರುತಿ ಕಲಾಮಂದಿರ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಇನ್ ಫೈನ್ ಆರ್ಟ್ಸ್ ಕೋರ್ಸ್ ಮಾಡಿದ್ದಾರೆ.

ಮೊದಲಿದ್ದ ಅವರ ಅವಿಭಕ್ತ ಕುಟುಂಬ ಈಗ ವಿಭಕ್ತ ಕುಟುಂಬವಾಗಿದೆ. ಆ ಒಂದು ಎಳೆಯೇ ಅವರ ಮನಸ್ಸನ್ನು ಬಹುವಾಗಿ ಕಾಡುತ್ತಿದೆ. ಅವರ ಬಾಲ್ಯದ ಒಂದುಗೂಡಿದ ಮನೆಯ ನೆನಪು ಮತ್ತು ಈಗಿನ ವಿಭಕ್ತ ಕುಟುಂಬದ ತುಮುಲಗಳು, ಇಂದಿನ ಬದುಕಿನ ಧಾವಂತಗಳು ಎಲ್ಲ ಒಂದೊಂದಾಗಿ ಅವರ ಕುಂಚದ ಕಲೆಯಲ್ಲಿ ಮೂಡಿಬಂದಿವೆ.

ಮನೆಗೆ ಆಗ ಒಂದು ಬಾಗಿಲು ಇದ್ದದ್ದು ಈಗ ಮೂರಾಗಿರುವುದು, ಸದಾ ಮುಚ್ಚಿದಂತೆ ಕಾಣುವ ಬಾಗಿಲು, ಬದುಕಿನ ನವಿರು ಭಾವನೆಗಳ ಅಡಗಿಸಿಟ್ಟುಕೊಂಡ ಮನಸ್ಸುಗಳು ಒಳಗೊಳಗೇ ನರಳುತ್ತಿರುವುದರ ಕುರುಹುನಂತೆ ಕಾಣುವ ಕಪಾಟುಗಳು ಕಳೆದುಕೊಂಡದ್ದೆಲ್ಲದರ ಬಿಂಬಗಳಂತೆ ಕಾಣುತ್ತವೆ. 

`ರೈನಿಂಗ್ ಮೆಮೊರೀಸ್~ ಎಂಬ ಚಿತ್ರಕಲಾಕೃತಿಯಲ್ಲಿ ಅಪ್ಪ-ಅಮ್ಮನ ಜೊತೆಗೆ ಕಳೆದ ಬಾಲ್ಯ, ತಾಯಿ ಪ್ರೀತಿ ಕಂಡುಬಂದರೆ, ಇನ್ನೊಂದೆಡೆ ವಿಭಕ್ತ ಕುಟುಂಬದ ಕುರಿತ ವಿಡಂಬನೆಗಳೂ ಕಂಡುಬರುತ್ತವೆ.

ಶ್ರುತಿ ಅವರ ಕಲಾಕೃತಿಗಳಲ್ಲಿ ಸಾಮಾನ್ಯವಾದ ಮನೆಯ ಅಂಶಗಳು ಕಂಡುಬಂದರೂ ಯಾರಿಗೂ ಭೇದಿಸಲಾಗದ ವಿಶ್ವಮೌನ ಆ ಮನೆಗಳ ಒಳಾಂಗಣದಲ್ಲಿ ತಾಂಡವವಾಡುತ್ತಿದೆಯೇನೋ ಎಂದೆನಿಸುತ್ತದೆ. ಮನೆಯ ಒಳಾಂಗಣದ ಚಿತ್ರಣಗಳು ಮಹಿಳೆಯ ಮನೋಭಾವವನ್ನು ಸೃಜಿಸುವಂತಿವೆ. ಶ್ರುತಿ ಇದುವರೆಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ, ಕಲಾಮಂದಿರ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ತಮ್ಮ ಅನೇಕ ಚಿತ್ರಕಲಾಕೃತಿಗಳನ್ನು ಪ್ರಸ್ತುತಪಡಿಸಿದ್ದಾರೆ.

`ಚಿತ್ರಕಲೆ ಕೇವಲ ಹವ್ಯಾಸವಲ್ಲ. ಅದು ನನ್ನ ಬದುಕಿನ ಒಂದು ಅವಿಭಾಜ್ಯ ಭಾಗ. ಅದರಲ್ಲೇ ಏನಾದರೂ ಸಾಧನೆ ಮಾಡುವಾಸೆ ನನಗಿದೆ. ಮನೆಯವರೆಲ್ಲರ ಪ್ರೋತ್ಸಾಹವಂತೂ ಇದ್ದೇ ಇದೆ. ಅಪ್ಪ-ಅಮ್ಮನಿಗೂ ಹೆಮ್ಮೆಯಿದೆ~ ಎನ್ನುವ ಶ್ರುತಿ ಹೇಳಬೇಕಾದದ್ದನ್ನು ಚಿತ್ರಗಳಲ್ಲೇ ಮೂಡಿಸಿದ ಸಾರ್ಥಕ್ಯಭಾವದಲ್ಲಿದ್ದರು.

ನಿಮ್ಮ ಹಳೆ ಮನೆಯ ನೆನಪಾದರೆ ಅವಿಭಕ್ತ ಕುಂಟುಂಬದಲ್ಲಿ ಒಟ್ಟಾಗಿ ಬದುಕಿದ್ದ ಸಂಭ್ರಮದ ದಿನಗಳು ಮತ್ತೆ ನೆನಪಾಗಬೇಕೆಂದಿದ್ದರೆ ಒಮ್ಮೆ ಮಹಾತ್ಮ ಗಾಂಧಿ ರಸ್ತೆಯ ಪ್ರತಿಮಾ ಕಲಾ ಗ್ಯಾಲರಿಗೆ ಒಮ್ಮೆ ಭೇಟಿ ಕೊಡಿ. ಜನವರಿ 31 ರ ವರೆಗೆ ಚಿತ್ರಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.