ಭಾರತೀಯ ಚಿತ್ರರಂಗಕ್ಕೆ ‘ಐಟಂ ನಂಬರ್’ ಹೊಸದೇನಲ್ಲ. ಪಡ್ಡೆಗಳ ಕಿವಿ ನೆಟ್ಟಗಾಗಿಸುವಂತಹ ಸಾಹಿತ್ಯವಿರುವ ಗೀತೆಗೆ, ಪೊಗದಸ್ತು ಮೈಕಟ್ಟಿನ ಚೆಲುವೆಯೊಬ್ಬಳು ಲವಲವಿಕೆಯಿಂದ ಮೈಚಳಿ ಬಿಟ್ಟು ಕುಣಿದಿದ್ದರೆ ಅದನ್ನು ಐಟಂ ನಂಬರ್ ವರ್ಗಕ್ಕೆ ಸೇರಿಸಲಾಗುತ್ತದೆ. ಟಪ್ಪಾಂಗುಚ್ಚಿ ಸ್ಟೆಪ್ ಹಾಕುತ್ತ ಪಡ್ಡೆಗಳ ಎದೆಬಡಿತವನ್ನು ಹೆಚ್ಚಿಸುವ ‘ಐಟಂ ಸಾಂಗ್’ಗೆ ಪ್ರೇಕ್ಷಕರ ಮನಸ್ಸಿನಲ್ಲಿ ಅಡಗಿರುವ ಲೈಂಗಿಕ ಭಾವನೆಯನ್ನು ಉದ್ದೀಪಿಸುವ ಶಕ್ತಿಯೂ ಇದೆ.
ಇತ್ತೀಚಿನ ದಿನಗಳಲ್ಲಿ ಚಿತ್ರ ತಯಾರಕರು ತಮ್ಮ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ದೃಷ್ಟಿಯಿಂದ ಐಟಂ ನಂಬರ್ ಅನ್ನು ಪ್ರಚಾರ ತಂತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಬರುವ ಟ್ರೇಲರ್‌ನಲ್ಲಿ ‘ಐಟಂ ಸಾಂಗ್’ಗಳನ್ನು ತೂರಿಬಿಡುವುದು ಕೂಡ ಇದೇ ಉದ್ದೇಶದಿಂದ. ಅದ್ಭುತ ಎನಿಸುವಂತಹ ಐಟಂ ಡಾನ್ಸರ್ ಒಬ್ಬರು ಸಿನಿಮಾವೊಂದರಲ್ಲಿ ಮೈಚಳಿ ಬಿಟ್ಟು ಕುಣಿದಿದ್ದಾರೆ ಅಂದರೆ ಆ ಚಿತ್ರವನ್ನು ಪದೇಪದೇ ನೋಡುವ ಪ್ರೇಕ್ಷಕ ವರ್ಗವೂ ಇದೆ. ಹಾಗಾಗಿ, ಸಿನಿಮಾ ವ್ಯಾಕರಣದಲ್ಲಿ ಈಗ ‘ಐಟಂ ನಂಬರ್’ ಎಂಬುದು ಒಂದು ಗೆಲುವಿನ ಸಾಧನವಾಗಿಯೂ ಗುರ್ತಿಸಿಕೊಂಡಿದೆ.
ಚೆಂದದ ಮೈಕಟ್ಟಿನ ಹುಡುಗಿಯೊಬ್ಬಳು ‘ಐಟಂ’ ಸಾಂಗ್‌ಗೆ ಕುಣಿದರೆ ಆಕೆಯನ್ನು ಐಟಂ ಡಾನ್ಸರ್ ಅಥವಾ ಐಟಂ ಗರ್ಲ್ ಎನ್ನಲಾಗುತ್ತದೆ. ಇಪ್ಪತ್ತು ವರ್ಷಗಳ ಹಿಂದಕ್ಕೆ ಕತ್ತು ಹೊರಳಿಸಿ ನೋಡಿದರೆ ಭಾರತೀಯ ಚಿತ್ರರಂಗದಲ್ಲಿ ಐಟಂ ಡಾನ್ಸ್ ಮಾಡಲಿಕ್ಕೆಂದೇ ಕೆಲವು ಡಾನ್ಸರ್‌ಗಳಿದ್ದರು. ಅವರಷ್ಟೇ ಐಟಂ ನಂಬರ್ ಮಾಡುತ್ತಿದ್ದರು.
ಈಗ ಐಟಂ ಡಾನ್ಸ್‌ನ ಸೂತ್ರ ತುಸು ಬದಲಾಗಿದೆ. ಕಣ್ಣುಕುಕ್ಕುವ ಅಂಗಸೌಷ್ಠವದಿಂದಲೇ ಜನಪ್ರಿಯತೆ ಪಡೆದಿದ್ದ ಐಟಂ ಡಾನ್ಸರ್‌ಗಳು ಈಗ ತೆರೆಮರೆಗೆ ಸರಿದಿದ್ದಾರೆ; ಇದೇ ವೇಳೆ ಅವರ ಉಡುಪುಗಳು ಈಗ ನಾಯಕಿಯರ ಮೈಮೇಲೆ ನಗು ಚೆಲ್ಲುತ್ತ ಕುಳಿತಿವೆ. ಇತ್ತೀಚಿನ ದಿನಗಳಲ್ಲಿ ನಟರೇ ನಗಿಸುವ ಹೊಣೆ ಹೊತ್ತುಕೊಂಡು ‘ಹಾಸ್ಯನಟರ’ ಪೋಷಾಕು ಧರಿಸಿದಂತೆ, ಇತ್ತ ಚೆಂದದ ನಟಿಮಣಿಯರೂ ಐಟಂ ಡಾನ್ಸ್ ಮಾಡುವ ಹೊಣೆಯನ್ನು ಹೊತ್ತುಕೊಂಡರು.
ಇಂತಹ ಸಮಯದಲ್ಲೇ ಸೈಜ್ ಝೀರೊ ಚೆಲುವೆ ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಮೊದಲಾದವರು ಐಟಂ ನಂಬರ್‌ಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ತಮ್ಮ ಬಿಡುಬೀಸಾದ ನೃತ್ಯದ ಮೂಲಕ ಕಚಗುಳಿಯಿಟ್ಟರು. ನಟಿಯರಾಗಿ ಛಾಪು ಮೂಡಿಸಿದ್ದ ಇವರೆಲ್ಲರೂ ಐಟಂ ನಂಬರ್‌ಗಳಲ್ಲೂ ಸೈ ಎನಿಸಿಕೊಂಡರು. ನಟಿಯರಾಗಿ ಹೆಸರು ಮಾಡಿ, ಐಟಂ ನಂಬರ್‌ಗಳಲ್ಲೂ ಗೆದ್ದ ಬಾಲಿವುಡ್‌ನ ಟಾಪ್ 5 ಐಟಂ ಗರ್ಲ್‌ಗಳ ಪರಿಚಯ ಇಲ್ಲಿದೆ.
*
ಕತ್ರಿನಾ ಕೈಫ್
ಬಿ–ಟೌನ್‌ನ ವಯ್ಯಾರಿ, ಬಾರ್ಬಿ ಡಾಲ್ ಹೀಗೆ ಹಲವು ವಿಶೇಷಣಗಳಿಂದ ಕರೆಯಿಸಿಕೊಳ್ಳುವ ನಟಿ ಕತ್ರಿನಾ ಕೈಫ್ ಭಾರತೀಯ ಸಿನಿಮಾರಂಗ ಬಯಸುವ ಮೋಸ್ಟ್ ವಾಂಟೆಡ್ ಐಟಂ ಗರ್ಲ್. ‘ಶೀಲಾ ಕಿ ಜವಾನಿ’ ಹಾಡಿನಲ್ಲಿ ಈಕೆ ಕುಣಿದ ರೀತಿಯನ್ನು ನೋಡಿ ಸಿನಿಪ್ರಿಯರು ದಂಗಾಗಿ ಹೋಗಿದ್ದರು. ಅಲ್ಲಿಂದ ಕತ್ರಿನಾ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ಐಟಂ ಗರ್ಲ್ ಎಂಬ ಕೀರ್ತಿಗೆ ಪಾತ್ರರಾದರು.
ನಿರ್ದೇಶಕಿ ಮತ್ತು ನೃತ್ಯ ಸಂಯೋಜಕಿ ಫರ್ಹಾ ಖಾನ್ ಅವರು ಕ್ಯಾಟ್‌ಗೆ ಕಠಿಣ ಡಯೆಟ್ ಸೂತ್ರ ಬೋಧಿಸುವುದರ ಜೊತೆಗೆ ತಪ್ಪದಂತೆ ಬೆಲ್ಲಿ ಡಾನ್ಸ್ ಕಲಿಯುವಂತೆ ತಾಕೀತು ಮಾಡಿದರು. ಫರ್ಹಾ ಅವರ ಮಾತನ್ನು ಚಾಚೂ ತಪ್ಪದೇ ಪಾಲಿಸಿದ ಕತ್ರಿನಾಗೆ ಇದು ವರವಾಗಿ ಪರಿಣಮಿಸಿತು. ‘ಶೀಲಾ ಕಿ ಜವಾನಿ’ ನಂತರ ಅವರಿಗೆ ಸಾಕಷ್ಟು ಐಟಂ ನಂಬರ್‌ಗಳು ಸಿಕ್ಕವು. ‘ಚಿಕ್ನಿ ಚಮೇಲಿ’ ಐಟಂ ಸಾಂಗ್‌ಗಳು ಕೂಡ ಇವರಿಗೆ ಹೆಸರು ತಂದುಕೊಟ್ಟವು.
*
ಮಲೈಕಾ ಅರೋರ
ಐಟಂ ಡಾನ್ಸರ್‌ಗಳ ಪಟ್ಟಿಯಲ್ಲಿ ಇಂದಿಗೂ ಗಮನಾರ್ಹರಾದವರು ಮಲೈಕಾ ಅರೋರ. ಬಾಲಿವುಡ್‌ನ ಐಟಂ ಕ್ವೀನ್ ಎಂದೇ ಜನಪ್ರಿಯತೆ ಗಳಿಸಿದವರು ಇವರು. ‘ಮುನ್ನಿ ಬದ್ನಾಮ್ ಹುಯಿ’ ಮತ್ತು ‘ಚಯ್ಯ ಚಯ್ಯ’ ಗೀತೆಗಳಿಗೆ ಮೈಚಳಿ ಬಿಟ್ಟು ಕುಣಿದ ಮಲೈಕಾಗೆ ಈಗ 41 ವರ್ಷ ವಯಸ್ಸು. ಗೋಧಿ ಮೈಬಣ್ಣ, ತಿದ್ದಿ ತೀಡಿದಂತಹ ಆಕರ್ಷಕ ಮೈಕಟ್ಟಿನ ಮಲೈಕಾ ಐಟಂ ನಂಬರ್ ಮಾಡುವಾಗ ಕಣ್ಣಲ್ಲೇ ಹೊರಸೂಸುವ ಪ್ರಚೋದಕ ಭಾವನೆಗಳಿಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಈ ಅಂಶವೇ ಇಂದಿಗೂ ಅವರಿಗೆ ನಂಬರ್ 1 ಪಟ್ಟವನ್ನು ಉಳಿಸಿಕೊಟ್ಟಿದೆ.
*
ದೀಪಿಕಾ ಪಡುಕೋಣೆ
ಹಾಟ್ ಬೆಡಗಿ ದೀಪಿಕಾ ಪಡುಕೋಣೆ ಬಾಲಿವುಡ್‌ನ ಜನಪ್ರಿಯ ನಟಿಯಲ್ಲೊಬ್ಬರು. ಅವರು ಬಿ–ಟೌನ್‌ನ ನಂಬರ್ ಒನ್ ಸಿಂಹಾಸನದ ಮೇಲೆ ವಿರಾಜಮಾನರಾದ ಅಗ್ಗಳಿಕೆ ಹೊಂದಿದ್ದಾರೆ. ನೀಳ ಕಾಲುಗಳ ಸುಂದರಿ ದೀಪಿಕಾ, ‘ಧಮ್ ಮಾರೊ ಧಮ್’ ಗೀತೆಯ ಮೂಲಕ ಐಟಂ ನಂಬರ್‌ನಲ್ಲಿ ಕಾಣಿಸಿಕೊಂಡರು. ತಮ್ಮ ಮೊದಲ ಐಟಂ ಸಾಂಗ್‌ನಲ್ಲೇ ಪ್ರೇಕ್ಷಕನ ಭಾವತಂತುವನ್ನು ಮೀಟುವಂತಹ ನೋಟ ಹೊರಸೂಸುತ್ತಾ ಡಾನ್ಸ್ ಮಾಡಿದ್ದು ದೊಡ್ಡ ಆಕರ್ಷಣೆಯಾಗಿತ್ತು.
ದೀಪಿಕಾ ಐಟಂ ನಂಬರ್‌ನಲ್ಲಿ ಕಾಣಿಸಿಕೊಳ್ಳುವುದಕ್ಕೂ ಮುನ್ನ ಚಿತ್ರ ತಯಾರಕರ ಕಣ್ಣಿಗೆ ಕಾಣಿಸುತ್ತಿದ್ದುದು ಕರೀನಾ, ಕತ್ರಿನಾ, ಪ್ರಿಯಾಂಕಾ ಚೋಪ್ರಾ ಮಾತ್ರ. ‘ಧಮ್ ಮಾರೊ ಧಮ್’ನಲ್ಲಿ ಕುಣಿದ ನಂತರ ದೀಪಿಕಾಗೆ ಡಿಮ್ಯಾಂಡ್ ಹೆಚ್ಚಿತು. ಇದಾದ ಮೇಲೆ ಹಲವು ಐಟಂ ನಂಬರ್‌ಗಳಲ್ಲಿ ಕಾಣಿಸಿಕೊಂಡ ದೀಪಿಕಾ ಅನೇಕ ಪಡ್ಡೆಗಳ ನಿದ್ರಾಭಂಗ ಮಾಡಿದ್ದಾರೆ.
*
ಕರೀನಾ ಕಪೂರ್
ಮುಂಬೈ ಬೆಡಗಿ ಕರೀನಾ ಕಪೂರ್ 2000ನೇ ವರ್ಷದಲ್ಲಿ ತೆರೆಕಂಡ ‘ರೆಫ್ಯೂಜಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶ ಪಡೆದರು. ಆನಂತರದಲ್ಲಿ ಬಾಲಿವುಡ್‌ನಲ್ಲಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿದರು. ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿರುವ ಕರೀನಾ, ‘ಡಾನ್’ ಚಿತ್ರದಲ್ಲಿನ ‘ಯೇ ಮೇರಾ ದಿಲ್’ ಹಾಡಿನ ಮೂಲಕ ಐಟಂ ನಂಬರ್‌ನಲ್ಲಿ ಕಾಣಿಸಿಕೊಂಡರು.
ಮೊದಲ ಐಟಂ ಸಾಂಗ್‌ನಲ್ಲೇ ಪಡ್ಡೆಗಳಿಗೆ ಹಬ್ಬದೂಟ ಉಣಿಸಿದ ಕರೀನಾ, ಆನಂತರದಲ್ಲಿ ‘ಫೆವಿಕಾಲ್ ಸೆ’ ‘ದಿಲ್ ಮೇರಾ ಮುಫ್ತ್ ಕಾ’, ‘ಹಲ್ಕಟ್ ಜವಾನಿ’, ‘ಚಮ್ಮಕ್ ಚಲ್ಲೊ’ ಐಟಂ ನಂಬರ್‌ಗಳಲ್ಲಿ ಕಾಣಿಸಿಕೊಂಡು ಮತ್ತಷ್ಟು ಜನಪ್ರಿಯರಾದರು. ‘ಫೆವಿಕಾಲ್ ಸೆ’ ಅವರು ಕಾಣಿಸಿಕೊಂಡ ಕೊನೆಯ ಐಟಂ ನಂಬರ್. ಆದರೆ, ಆನಂತರದಲ್ಲೂ ಕರೀನಾ ಐಟಂ ಮಾದರಿಯ ನೃತ್ಯಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ. ಬಾಲಿವುಡ್ ಐಟಂ ಗರ್ಲ್‌ಗಳ ಪೈಕಿ ಕರೀನಾ ಮೂರನೇ ಸ್ಥಾನದಲ್ಲಿದ್ದಾರೆ.
*
ಸನ್ನಿ ಲಿಯಾನ್
‘ಜಿಸ್ಮ್ 2’ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ನೀಲಿಚಿತ್ರ ತಾರೆ ಸನ್ನಿ ಲಿಯಾನ್ ಈಗ ಐಟಂ ಡಾನ್ಸರ್ ಆಗಿಯೂ ಗುರ್ತಿಸಿಕೊಂಡಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದ ಸನ್ನಿ, ಮುಂದೆ ಅದೇ ಮಾದರಿಯ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮೈಮನಸ್ಸನ್ನು ಬೆಚ್ಚಗಾಗಿಸಿದರು. ‘ಬೇಬಿ ಡಾಲ್’ ಗೀತೆಯಲ್ಲಿ ಐಟಂ ಡಾನ್ಸರ್ ಆಗಿ ಕಾಣಿಸಿಕೊಂಡ ಸನ್ನಿ ಕೂಡ ಕತ್ರಿನಾ, ಕರೀನಾ ಸಾಲಿಗೆ ಸೇರಿಕೊಂಡರು.
ಗಮನಸೆಳೆಯುವ ಸಾಹಿತ್ಯ, ನೋಡುಗರ ಎದೆಯಲ್ಲಿ ಕಿಚ್ಚುಹೊತ್ತಿಸುವಂತಹ ಸನ್ನಿಯ ನೃತ್ಯ ಚಲನೆಗಳಿಂದ ಕೂಡಿದ್ದ ‘ಬೇಬಿ ಡಾಲ್’ ಗೀತೆ 2014ರಲ್ಲಿ ಸೂಪರ್ ಹಿಟ್ ಅನಿಸಿಕೊಂಡಿತು. ಆಕೆಯ ಮುಡಿಗೆ ಐಟಂ ಡಾನ್ಸರ್ ಕಿರೀಟವನ್ನು ತೊಡಿಸಿತು. ಆ ಯಶಸ್ಸಿನಿಂದ ಪುಳಕಿತರಾದ ಸನ್ನಿ ಮುಂದೆ ‘ಲೈಲಾ’, ‘ದೇಸಿ ಲುಕ್’ ಹಾಗೂ ‘ಪಿಂಕ್ ಲಿಪ್ಸ್’ ಐಟಂ ಗೀತೆಗಳಿಗೆ ಕುಣಿದು ಮತ್ತಷ್ಟು ಮೈಲೇಜ್ ಪಡೆದುಕೊಂಡರು. ಐಟಂ ಗರ್ಲ್‌ಗಳ ಪೈಕಿ ಸನ್ನಿ ಎರಡನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.