ADVERTISEMENT

ಕುಸುರಿ ಕೆತ್ತನೆಯ ಜಿನಮಂದಿರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2011, 19:30 IST
Last Updated 28 ನವೆಂಬರ್ 2011, 19:30 IST
ಕುಸುರಿ ಕೆತ್ತನೆಯ ಜಿನಮಂದಿರ
ಕುಸುರಿ ಕೆತ್ತನೆಯ ಜಿನಮಂದಿರ   

ಚಿಕ್ಕಪೇಟೆಯಲ್ಲಿರುವ ಶ್ರೀ ಆದಿನಾಥ ಜೈನ ಶ್ವೇತಾಂಬರ ದೇವಸ್ಥಾನಕ್ಕೆ 93 ವರ್ಷಗಳ ಇತಿಹಾಸವಿದೆ. ಅಲ್ಲದೇ ಇದು ಶ್ವೇತಾಂಬರ ಜೈನರಿಗೆ ನಗರದಲ್ಲಿರುವ ಏಕೈಕ ದೇವಸ್ಥಾನ ಕೂಡಾ ಹೌದು. ಈ ಮಂದಿರದ ಪ್ರತಿಷ್ಠಾಪನೆ ಪೂಜೆಗಳು ಮಂಗಳವಾರದ ವರೆಗೆ ನಡೆಯಲಿವೆ.  ಬುಧವಾರದಿಂದ ಭಕ್ತಾದಿಗಳಿಗೆ ಮುಕ್ತವಾಗಲಿದೆ.

ಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅಂಜನಾ ಶಲಾಕ ಪ್ರತಿಷ್ಠಾಪನ ಮಹೋತ್ಸವದಲ್ಲಿ ಜೈನಧರ್ಮದ ಸಹಸ್ರಾರು ಅನುಯಾಯಿಗಳು ಪಾಲ್ಗೊಂಡಿದ್ದಾರೆ.
ರಾಜಸ್ತಾನದಿಂದ ವಿಶೇಷವಾಗಿ ತರಿಸಲಾದ ಬಿಳಿ ಅಮೃತಶಿಲೆಯಿಂದ ದೇವಾಲಯ ನಿರ್ಮಾಣಗೊಂಡಿದ್ದು, ಇದರ ಶುಭ್ರ ಶ್ವೇತವರ್ಣದ ಸೊಬಗು ಮನಸೆಳೆಯುತ್ತದೆ.

`ಇದು ದಕ್ಷಿಣ ಭಾರತದ ಅತಿದೊಡ್ಡ ಹಾಗೂ ಪುರಾತನ ಜೈನ ದೇವಾಲಯಗಳಲ್ಲೊಂದು. ಮೌಂಟ್ ಅಬು ಬಳಿಯ ಜೈನ ದೇವಾಲಯದ ಶಿಲ್ಪಕಲಾ ಶೈಲಿಯಿಂದ ಪ್ರೇರಣೆ ಪಡೆದಿದೆ. ಬರೋಬ್ಬರಿ 91 ಅಡಿ ಎತ್ತರವಿದ್ದು, ಒಟ್ಟು 216 ಕಂಬಗಳಿವೆ. ನೂರಾರು ಕುಶಲಕರ್ಮಿಗಳು ಇದರ ಮೇಲೆ ಸೂಕ್ಷ್ಮ ಕಲಾಕೃತಿಗಳನ್ನು ಕೆತ್ತಿದ್ದಾರೆ. ಮಧ್ಯದಲ್ಲಿರುವ ಬೃಹದಾಕಾರದ ಕಮಾನಿನನಲ್ಲಿ ಜೈನ ಪರಂಪರೆಯನ್ನು ಬಿಂಬಿಸುವ ಕೆತ್ತನೆಗಳಿವೆ~ ಎನ್ನುತ್ತಾರೆ ಜೈನ ದೇವಾಲಯ ಟ್ರಸ್ಟ್‌ನ ಅಧ್ಯಕ್ಷ ಉತ್ತಮ್‌ಜಿ ಭಂಡಾರಿ.

ದಾಖಲೆಗಳ ಪ್ರಕಾರ ಚಿಕ್ಕಪೇಟೆಯಲ್ಲಿರುವ ಈ ದೇವಾಲಯ ಸ್ಥಾಪನೆಯಾಗಿದ್ದು 1918ರಲ್ಲಿ. ಇಲ್ಲಿ ಆದಿನಾಥ ತೀರ್ಥಂಕರ, ಪಾರ್ಶ್ವನಾಥ ತೀರ್ಥಂಕರ, ಶಾಂತಿನಾಥ ತೀರ್ಥಂಕರ ಮತ್ತು ಮಹಾವೀರ ತೀರ್ಥಂಕರರ ಮೂರ್ತಿಗಳಿವೆ.

ಜೈನ ದೇವಾಲಯದ ಟ್ರಸ್ಟ್ 2000ನೇ ಇಸವಿಯಲ್ಲಿ ಈ ಪುರಾತನ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಿತು. ಆಗ ದೇವಾಲಯವನ್ನು ಮರ ಹಾಗೂ ಮೊಸಾಯಿಕ್ ಹಾಸುಗಳಿಂದ ಸಿಂಗರಿಸಲಾಗಿತ್ತು. ಈಗ ಅದರ ಸ್ಥಾನದಲ್ಲಿ ಅಮೃತಶಿಲೆ ಬಳಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.