ADVERTISEMENT

ಕೂಲ್ ಇರುವುದು ತಂಪಲ್ಲ

ಮಂಜುಶ್ರೀ ಎಂ.ಕಡಕೋಳ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಎ.ಸಿ.
ಎ.ಸಿ.   

ಬಿರು ಬಿಸಿಲಿನಲ್ಲಿ ಬಳಲಿದವರಿಗೆ ತಂಪಾದ ವಾತಾವರಣ ಸಿಕ್ಕರೆ ಆಗುವ ಆನಂದ ಅಷ್ಟಿಷ್ಟಲ್ಲ. ಅದರಲ್ಲೂ ಮನೆ ಅಥವಾ ಕಚೇರಿಯೊಳಗೆ ಎಸಿ (ಏರ್ ಕಂಡೀಷನರ್, ಏರ್ ಕೂಲರ್) ಇದ್ದರಂತೂ ಬೇಸಿಗೆಕಾಲದಲ್ಲಿ ಆಗುವ ಖುಷಿ ಹೇಳತೀರದು. ಅತ್ತ ಸೂರ್ಯನ ಪ್ರಖರತೆ ಹೆಚ್ಚಾದಷ್ಟೂ ಇತ್ತ ಎಸಿಯ ತಂಪು ಕೂಡಾ ಹೆಚ್ಚುತ್ತಿರುತ್ತದೆ.

ನಗರದ ಬಹುತೇಕ ಕಟ್ಟಡಗಳು ಮತ್ತು ಮನೆಗಳಲ್ಲಿ ಎಸಿ ಬಳಸುವುದು ಸಾಮಾನ್ಯ ಅನ್ನುವಂತಾಗಿದೆ. ಆದರೆ, ಬಿಸಿಲಿನ ತಾಪದಿಂದ ಪಾರಾಗಲು ನಾವು ಬಳಸುವ ಎಸಿ ಸದ್ದಿಲ್ಲದೇ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು. ಪ್ರಕೃತಿ ಸಹಜವಾಗಿ ದೊರೆಯುವ ಗಾಳಿಗಿಂತ ತಂಪಾದ ಕೃತಕ ಗಾಳಿಯ ಮೊರೆ ಹೋಗುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತವೆ. ದೇಹದ ಸಹಜ ರೋಗನಿರೋಧಕ ಶಕ್ತಿ ಕುಂದುವುದು ಸೇರಿದಂತೆ ಚರ್ಮ, ಜೀರ್ಣಕ್ರಿಯೆ, ಸಂಧಿವಾತ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಆರೋಗ್ಯಧಾಮದ ಯೋಗ ಮತ್ತು ಪ್ರಕೃತಿಚಿಕಿತ್ಸೆ ತಜ್ಞವೈದ್ಯೆ ಡಾ.ಮೇಘನಾ ಶೆಟ್ಟಿ.

ನಿತ್ಯವೂ ಎಸಿ ಬಳಸುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಡಾ.ಮೇಘನಾ ಹೀಗೆ ಹೇಳುತ್ತಾರೆ.

ADVERTISEMENT

ನಿರಂತರವಾಗಿ ಎಸಿ ಬಳಸುವವರ ದೇಹದಲ್ಲಿ ಬೆವರು ಉಂಟಾಗದು. ದೈಹಿಕ ಶ್ರಮದ ಕೆಲಸಗಳು ಇಲ್ಲವೇ ಬಿಸಿಲಿನಲ್ಲಿದ್ದಾಗ ದೇಹದಲ್ಲಿರುವ ವಿಷಕಾರಿ ಅಂಶಗಳು ಬೆವರಿನ ರೂಪದಲ್ಲಿ ಹೊರಹೋಗುತ್ತವೆ. ಬೆವರು ಪ್ರಕೃತಿದತ್ತ ವರ. ಆದರೆ, ಎಸಿಯಲ್ಲಿರುವವರಲ್ಲಿ ಬೆವರಿನ ಕ್ರಿಯೆ ನಡೆಯುವುದಿಲ್ಲ. ಬೆವರಿನ ರಂಧ್ರಗಳು ಮುಚ್ಚಿಹೋಗುವುದರಿಂದ ಚರ್ಮದ ಮೇಲೆ ಸತ್ತಕೋಶಗಳ ಪದರ ರೂಪುಗೊಳ್ಳುತ್ತದೆ. ಆಗ ಚರ್ಮಕ್ಕೆ ಸಹಜವಾಗಿ ಉಸಿರಾಡಲು ಆಗದು. ತಾಜಾ ಆಮ್ಲಜನಕ ದೊರೆತರೂ ಚರ್ಮ ಅದನ್ನು ಸ್ವೀಕರಿಸುವ ಸ್ಥಿತಿಯಲ್ಲಿರುವುದಿಇಲ್ಲ. ಆಗ ಚರ್ಮದೊಳಗೆ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ನಿರ್ಜಲೀಕರಣ ಸ್ಥಿತಿ ಉಟಾಗುತ್ತದೆ. ಅಷ್ಟೇ ಅಲ್ಲ ರೋಗನಿರೋಧಕ ಶಕ್ತಿಯೂ ಕುಂದುತ್ತದೆ.

ದ್ರವಾಹಾರ ಒಳ್ಳೆಯದು
ಬೆವರುವುದು ಒಳ್ಳೆಯದು. ಹಾಗಂತ ಅತಿಯಾಗಿ ಬೆವರುವುದು ಒಳ್ಳೆಯದಲ್ಲ. ಅನಿವಾರ್ಯವಾಗಿ ಎಸಿ ವಾತಾವರಣದಲ್ಲಿ ಇರಬೇಕಾದವರು ನಿತ್ಯವೂ ದೇಹಕ್ಕೆ ಬೇಕಾದ ಅಗತ್ಯ ವಾರ್ಮ್ ಅಪ್ ವ್ಯಾಯಾಮ ಮಾಡಲೇಬೇಕು. ಇದು ದೇಹದ ಉಷ್ಣತೆಯ ಪ್ರಮಾಣವನ್ನು ಸಹಜ ಸ್ಥಿತಿಯಲ್ಲಿಡಲು ಸಹಕಾರಿ. ಬೆಳಿಗ್ಗೆ ಎದ್ದತಕ್ಷಣವೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಒಳಿತು. ಬೇಸಿಗೆಯ ದಿನಗಳಲ್ಲಿ ಎಸಿ ವಾತಾವರಣದಲ್ಲಿರುವವರು ಗಂಟೆಗೊಮ್ಮೆಯಾದರೂ ಒಂದು ಲೋಟ ನೀರು ಕುಡಿಯಬೇಕು. ದ್ರವಾಹಾರ ಸೇವನೆಯೂ ಉತ್ತಮ. ಬಾರ್ಲಿ ನೀರು, ಎಳನೀರು ಸೇವನೆಯಿಂದ ಮೂತ್ರದಲ್ಲಿ ವಿಷಕಾರಿ ಅಂಶಗಳು ಹೊರಹೋಗುತ್ತವೆ. ಇದರಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು.

ಎಸಿ ಪರಿಸರದಲ್ಲಿ ಕೆಲಸ ಮಾಡುವವರಿಗೆ ಶೀತ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ಅಂಥವರು ನೇರವಾಗಿ ಎಸಿಯ ಗಾಳಿಗೆ ದೇಹವನ್ನು ಒಡ್ಡಬಾರದು. ಸಾಧ್ಯವಾದಷ್ಟೂ ಹೊರಗಿನ ತಾಪಮಾನಕ್ಕೆ ಅನುಗುಣವಾಗಿ ಅಂದರೆ ಹೊರಗಿನ ತಾಪಮಾನಕ್ಕಿಂತ ನಾಲ್ಕೈದು ಡಿಗ್ರಿಯಷ್ಟು ಕಡಿಮೆ ಮಟ್ಟದಲ್ಲಿ ಎಸಿಯನ್ನು ಅಳವಡಿಸಿಕೊಳ್ಳುವುದು ಉತ್ತಮ. ಎಸಿ ಮೂಲಕ ಹೊರಬರುವ ಅನಿಲ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ಕೆಲವರಿಗೆ ಉಸಿರಾಡಲು ಸರಾಗವಾಗಿ ಬೇಕಾದಷ್ಟು ಆಮ್ಲಜನಕ ದೊರೆಯದೇ ಉಸಿರುಕಟ್ಟಿದಂತಾಗಹುದು. ಇಂಥವರು ಎಸಿಯಿಂದ ದೂರ ಇರುವುದೊಳಿತು.

ಅನಿವಾರ್ಯವಾಗಿ ಅಂಥ ಪರಿಸರದಲ್ಲೇ ಕೆಲಸ ಮಾಡಬೇಕು ಅನ್ನುವವರು ಮನೆಯಲ್ಲೇ ಯೋಗ ಮತ್ತು ಪ್ರಾಣಾಯಾಮ ತಪ್ಪದೇ ಮಾಡಬೇಕು. ಶುದ್ಧೀಕರಣ ಕ್ರಿಯೆಗಳಾದ ಜಲನೇತಿ,ಸೂತ್ರನೇತಿಗಳನ್ನು ಮಾಡಬೇಕು. ಮುಖಕ್ಕೆ ಬಿಸಿನೀರಿನಲ್ಲಿ ಹಬೆ ತೆಗೆದುಕೊಳ್ಳುವುದರಿಂದ ಶೀತ ತಡೆಗಟ್ಟಬಹುದು. ಯೋಗ ಮತ್ತು ಪ್ರಾಣಾಯಾಮ ದೇಹದ ಉಷ್ಣತೆ ಕಾಪಾಡಿಕೊಳ್ಳಲು ಸಹಕಾರಿ. ಎಸಿಯಲ್ಲಿ ಕೆಲಸ ಮಾಡುವವರಿಗೆ ಬೇಗ ಬಾಯಾರಿಕೆ ಆಗದು. ಹಾಗೆಂದು ನಿರ್ಲಕ್ಷ್ಯ ಮಾಡದೇ, ತುಸು ಬೆಚ್ಚನೆಯ ನೀರು ಇಲ್ಲವೇ ಕೊಠಡಿ ತಾಪಮಾನಕ್ಕನುಗುಣವಾದ ನೀರು ಸೇವಿಸಬೇಕು. ಎಸಿಯ ತಂಪಿನಿಂದಾಗಿ ಕೆಲವರಿಗೆ ತಲೆನೋವು ಕಾಡಬಹುದು. ಅಂಥವರು ತುಸು ಹೊತ್ತು ಹೊರಗೆ ಬಂದು ರಿಲ್ಯಾಕ್ಸ್ ಮಾಡಿಕೊಳ್ಳಬೇಕು.

ಎಸಿಯ ತಂಪಿನಿಂದಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ದೈಹಿಕ ಸಮಸ್ಯೆಗಳು ಕಾಡಬಹುದು. ಕೆಲವರಲ್ಲಿ ಸೈನಸ್, ಆಸ್ತಮ, ಚರ್ಮದ ಕಾಯಿಲೆಗಳೂ ಉಂಟಾಗಬಹುದು. ಮುಖ್ಯವಾಗಿ ಚರ್ಮದ ಸಮಸ್ಯೆಗಳಾದ ಶುಷ್ಕ ತ್ವಚೆ, ಸೋರಿಯಾಸೀಸ್ ಕಾಣಿಸಿಕೊಳ್ಳಬಹುದು. ದೇಹದಲ್ಲಿ ರಕ್ತದ ಪರಿಚಲನೆಯ ಸರಿಯಾಗಿ ಆಗದೇ, ಕೈಕಾಲು ನೋವು, ಸಂಧಿವಾತವೂ ಆಗಬಹುದು. ಇದರ ನಿವಾರಣೆಗಾಗಿ ಮುಂಜಾನೆ ಸರಳ ವ್ಯಾಯಾಮ, ಯೋಗ, ವಾಕಿಂಗ್, ಪ್ರಾಣಾಯಾಮ ಮಾಡಬೇಕು.

ಎಸಿ ಕೊಠಡಿಗಳಲ್ಲಿ ಕೆಲಸ ಮಾಡುವವರಿಗೆ ಜ್ವರ, ಶೀತ, ತೀವ್ರ ತಲೆನೋವು ಉಂಟಾದಾಗ ಹೆಚ್ಚಿನ ಆಯಾಸ ಅನುಭವಿಸುತ್ತಾರೆ. ಹೊರಗಿನಿಂದ ಶುದ್ಧಗಾಳಿಯ ಪ್ರವೇಶವಿಲ್ಲದ ಕಾರಣ, ಜ್ವರ, ನ್ಯೂಮೋನಿಯಾ, ವೈರಲ್ ಜ್ವರದಂಥ ಕಾಯಿಲೆಗಳು ಅಕ್ಕಪಕ್ಕದವರಿಗೆ ಎಸಿ ವಾತಾವರಣದಲ್ಲಿ ಸುಲಭವಾಗಿ ಹರಡಬಲ್ಲದು.

ಬಿಸಿಲು ಜೋರಾಗಿದೆಯೆಂದು ಎಸಿಯ ತಂಪಿನ ಪ್ರಮಾಣ ಹೆಚ್ಚಿಸಬಾರದು. ಹೊರಗಿನಿಂದ ಬಂದ ತಕ್ಷಣವೇ ಎಸಿಗೆ ಮೈಯೊಡ್ಡವುದಾದರೆ ಐದು ನಿಮಿಷಗಳ ಕಾಲ ಮಾತ್ರ ಒಡ್ಡಿ. ನಂತರ ಸಾಮಾನ್ಯ ಉಷ್ಣತೆಯ ವಾತಾವರಣದಲ್ಲಿರುವುದು ಉತ್ತಮ. ಎಸಿಯಲ್ಲಿ ಕೆಲಸ ಮಾಡುವವರ ದೇಹ ಹೊರಗೆ ಬಂದ ತಕ್ಷಣ ಬಿಸಿಲಿನ ತಾಪಕ್ಕೆ ಒಗ್ಗಿಕೊಳ್ಳಲು ಕಷ್ಟಪಡುತ್ತದೆ. ಹಾಗಾಗಿ, ಕಚೇರಿಯಲ್ಲಿ ಮಧ್ಯೆಮಧ್ಯೆ ಬಿಡುವು ಪಡೆದು ತುಸು ಬಿಸಿಲಿನಲ್ಲಿ ಓಡಾಡುವುದು ಉತ್ತಮ. ಇದರಿಂದ ನರಕೋಶಗಳು ಕ್ರಿಯಾಶೀಲವಾಗುತ್ತವೆ. 
**
ಕಣ್ಣುಗಳು ಜೋಪಾನ
ಎಸಿ ಪರಿಸರದಲ್ಲಿ ಕೆಲಸ ಮಾಡುವವರಲ್ಲಿ ಕಣ್ಣಿನ ಸಮಸ್ಯೆಗಳು ತಲೆದೋರುತ್ತವೆ. ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ಉರಿ, ಕಣ್ಣಿನಲ್ಲಿ ಒತ್ತಿದಂಥ ಅನುಭವವಾಗುತ್ತದೆ. ಕಣ್ಣಿನಲ್ಲಿ ತೇವಾಂಶ ಕಡಿಮೆಯಾಗುವುದೇ ಇದಕ್ಕೆ ಕಾರಣ. ಎಸಿ ಇರುವ ಕಡೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಕಣ್ಣಿನ ಭಾಗಕ್ಕೂ ಇದು ಅನ್ವಯಿಸುತ್ತದೆ. ಇದನ್ನು ತಡೆಯಲು ದ್ರವಾಹಾರ ಹೆಚ್ಚು ಸೇವಿಸಬೇಕು. ನೇರವಾಗಿ ಎಸಿಗೆ ಮುಖ ಒಡ್ಡದಿರಿ. ಕಚೇರಿ, ಮಾಲ್  ಮತ್ತು ಕಾರ್‌ಗಳಲ್ಲಿರುವ ಎಸಿಯನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು.
–ಡಾ.ರಘು ನಾಗರಾಜ್, ಹಿರಿಯ ನೇತ್ರ ತಜ್ಞ, ಡಾ.ಅಗರ್‌ವಾಲ್ ಕಣ್ಣಿನ ಆಸ್ಪತ್ರೆ
**
ಎಸಿಯಲ್ಲಿ ಈಜ್ಹಿ ಬದುಕಿಗೆ
* ಗಂಟೆಗೊಮ್ಮೆಯಾದರೂ ಒಂದು ಲೋಟ ಉಗುರು ಬೆಚ್ಚಗಿನ ನೀರು ಸೇವಿಸಿ
* ದೇಹದ ಸಹಜ ಉಷ್ಣತೆ ಕಾಪಾಡಿಕೊಳ್ಳಲು ನಿತ್ಯವೂ ಯೋಗ–ಪ್ರಾಣಾಯಾಮ ಮಾಡಿ
* ದ್ರವಾಹಾರಗಳನ್ನು ಹೆಚ್ಚು ಸೇವಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.