ADVERTISEMENT

ಕೆಕೆ ಬಯಕೆ!

ಇ.ಎಸ್.ಸುಧೀಂದ್ರ ಪ್ರಸಾದ್
Published 22 ಜೂನ್ 2012, 19:30 IST
Last Updated 22 ಜೂನ್ 2012, 19:30 IST

`ಬೆಂಗಳೂರಿನ ಹೊರ ವಲಯದಲ್ಲೊಂದು ಮನೆ ಬೇಕು. ಹುಡುಕುತ್ತಿದ್ದೇನೆ. ಒಳ್ಳೆಯ ಮನೆ ಸಿಗಲಿ ಎಂದು ನನಗಾಗಿ ಒಮ್ಮೆ ಪ್ರಾರ್ಥಿಸಿ~ ಬಹುಶಃ ಬೆಂಗಳೂರಿನಲ್ಲಿ ಸ್ವಂತ ಸೂರಿಲ್ಲದ ಪ್ರತಿಯೊಬ್ಬರೂ ಹೇಳುವ ಮಾತಿದು. ಆದರೆ ನಿನ್ನೆ ಬೆಂಗಳೂರಿಗೆ ಬಂದಿದ್ದ ಬಾಲಿವುಡ್ ಗಾಯಕ ಕೃಷ್ಣಕುಮಾರ್ ಮೆನನ್ ಉರುಫ್ `ಕೆಕೆ~ಗೂ ಅದೇ ಬಯಕೆಯಂತೆ.

ಕೇರಳ ಮೂಲದ ಕೆಕೆ, ಹುಟ್ಟಿ ಬೆಳೆದದ್ದು ದೆಹಲಿಯಲ್ಲಿ. ವೃತ್ತಿ ಜೀವನ ಆರಂಭಿಸಿದ್ದು ಮುಂಬೈನಲ್ಲಿ. ಬಹಳಷ್ಟು ಉತ್ತಮ ಗೀತೆಗಳನ್ನು ನೀಡಿರುವ ಕೆಕೆ ಇದೀಗ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ಕೈಯಲ್ಲಿ ಸಾಕಷ್ಟು ಕೆಲಸವಿದೆ. ಜತೆಗೆ ಹಣವೂ ಇದೆ. ಹೀಗಾಗಿ ಜೀವನದ ಉಳಿದ ದಿನಗಳನ್ನು ಬೆಂಗಳೂರಿನಲ್ಲಿ ಕಳೆಯುವ ಇಂಗಿತ ಅವರದು.

ಕೆಕೆ ಬೆಂಗಳೂರಿಗೆ ಬಂದಿದ್ದು ಮನೆ ಹುಡುಕಲು ಅಲ್ಲ. ಬದಲಿಗೆ ಫಿವರ್ ಎಂಟರ್‌ಟೈನ್‌ಮೆಂಟ್ ಆಯೋಜಿಸುತ್ತಾ ಬಂದಿರುವ `ಫಿವರ್ ಅನ್‌ಪ್ಲಗ್ಡ್~ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅವರ ಉದ್ದೇಶವಾಗಿತ್ತು. ಈಗಾಗಲೇ ಈ ಕಾರ್ಯಕ್ರಮದಲ್ಲಿ ಕೈಲಾಶ್ ಖೇರ್, ಮೋಹಿತ್ ಚೌಹಾಣ್ ಪಾಲ್ಗೊಂಡಿದ್ದರು. ಇದೀಗ ಕೆಕೆ ತಮ್ಮ ಕಂಠ ಸಿರಿಯಲ್ಲಿ `ಝರಾ ಸಿ ದಿಲ್ ಮೆ ದೇ ಜಗಹ್ ತೂ...~ ಎಂದು ಬೆಂಗಳೂರಿಗರನ್ನು ಕೇಳಲು ಆಗಮಿಸಿದ್ದರು.

ADVERTISEMENT

ಮಲೆಯಾಳಂ ಪೋಷಕರಿಂದ ಮಲೆಯಾಳಂ ಕಲಿತಿದ್ದರೂ ಅವರ ಮಾತೃ ಭಾಷೆ ಹಿಂದಿ. ಹೀಗಾಗಿ ಅವರು ದೆಹಲಿಗೆ ಮೊದಲು ತಮ್ಮ ಕೃತಜ್ಞತೆ ಅರ್ಪಿಸಿದರು. ಬಹಳಷ್ಟು ದಕ್ಷಿಣ ಭಾರತದ ಗಾಯಕರ ಗಾಯನದಲ್ಲಿ ದ್ರಾವಿಡ ಭಾಷೆಯ ಪ್ರಭಾವ ಇರುತ್ತದೆ. ಆದರೆ ನನಗೆ ಆ ಸಮಸ್ಯೆ ಎದುರಾಗಲಿಲ್ಲ ಎನ್ನುವುದೇ ಸಮಾಧಾನ. ಆದರೆ ಮಲೆಯಾಳಂ ಹಾಡಬೇಕೆಂದರೆ ಹಿಂದಿಯನ್ನು ಸಂಪೂರ್ಣವಾಗಿ ಮರೆಯಬೇಕು. ಅದು ತುಸು ಕಷ್ಟ.

ನಿಮ್ಮ ಗುರು ಯಾರು ಎಂದು ಕೆಕೆಗೆ ಕೇಳಿದ್ದಕ್ಕೆ, `ನಾನು ಯಾರೊಬ್ಬರಿಂದ ಸಂಗೀತ ಕಲಿತವನಲ್ಲ. ನನಗೆ ಹಲವು ಗುರುಗಳು. ಹಲವರಿಂದ ಕಲಿತ ಸಂಗೀತ ವಿದ್ಯೆಯನ್ನು ನಾನು ನನ್ನ ಕಂಠದ ಮೂಲಕ ಅರ್ಪಿಸುತ್ತಿದ್ದೇನಷ್ಟೆ. ಹೀಗಾಗಿ ನಾನೊಂದು ರೀತಿಯಲ್ಲಿ ಏಕಲವ್ಯನಿದ್ದಂತೆ. ಸ್ಟುಡಿಯೋಗಳಲ್ಲಿ ಹಾಡುವುದಕ್ಕಿಂತ ವೇದಿಕೆ ಮೇಲೆ ಹಾಡುವುದು ಒಂದು ರೀತಿಯ ಮಜಾ. ಏಕೆಂದರೆ ಅಲ್ಲಿ ನಾನು ಮಾತ್ರ ಹಾಡುವುದಿಲ್ಲ. ನನ್ನೊಂದಿಗೆ ಸಭಿಕರೂ ಹಾಡುತ್ತಾರೆ. ನನ್ನ ಹಾಡಿನ ಸಂಭ್ರಮದಲ್ಲಿ ಅವರೂ ಪಾಲ್ಗೊಳ್ಳುತ್ತಾರೆ. ಹೀಗಾಗಿ ವೇದಿಕೆ ಏರಿದರೆ ನನ್ನ ಮೇಲಿನ ಹಿಡಿತವನ್ನು ನಾನು ಕಳೆದುಕೊಂಡ ಸಾಕಷ್ಟು ಉದಾಹರಣೆಗಳಿವೆ~ ಎಂದೆನ್ನುವ ಕೆಕೆಗೆ ತಮ್ಮ ಹಾಡಿಗೆ ಭಾರತದ ಬೇರೆ ಬೇರೆ ಸ್ಥಳಗಳಲ್ಲಿರುವ ಮಂದಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕೇಳಿದರೆ...

`ಉತ್ತರ ಭಾರತೀಯರು ಸದಾ ಕುಣಿತ, ಜೋಷ್ ಭರಿತ ಹಾಡುಗಳನ್ನು ಇಷ್ಟಪಡುತ್ತಾರೆ. ದಕ್ಷಿಣ ಭಾರತದಲ್ಲಿ ಮಾಧುರ್ಯಪ್ರಧಾನ ಗೀತೆಗಳನ್ನು ಇಷ್ಟಪಡುತ್ತಾರೆ. ಇಬ್ಬರನ್ನೂ ತೃಪ್ತಿಪಡಿಸುವ ಗೀತೆಗಳು ನನ್ನ ಬಳಿ ಇವೆ. ಮಾಧುರ್ಯಪ್ರಧಾನ ಗೀತೆ, ರ‌್ಯಾಪ್, ರಾಕ್, ಡ್ಯಾನ್ಸ್ ನಂಬರ್ ಇತ್ಯಾದಿ ಗೀತೆಗಳನ್ನು ಹಾಡಿದ ಅನುಭವ ನನ್ನದು~ ಎಂದು ಕೆಕೆ ತಮ್ಮ ಸಾಮರ್ಥ್ಯವನ್ನು ವಿವರಿಸಿದರು.

ಗೀತೆಯೊಂದಕ್ಕೆ ಸಂಗೀತ ಇದ್ದರೆ ಸಾಕೆ? ಎಂಬ ಪ್ರಶ್ನೆಗೆ `ಸಂಗೀತ ಸಂಯೋಜನೆಯೊಂದರಿಂದಲೇ ಗೀತೆ ಪೂರ್ಣವಾಗದು. ಅದಕ್ಕೆ ಉತ್ತಮ ಸಾಹಿತ್ಯವೂ ಇರಬೇಕು. ಸಾಹಿತ್ಯವಿಲ್ಲದ ಗೀತೆ ಕೇಳುವುದಿರಲಿ ಹಾಡುವುದೂ ಕಷ್ಟ. ಭಾವನೆ ಬೆರೆತ ಗೀತೆ ಕಂಠಕ್ಕೆ ಹಾಗೂ ಕಿವಿಗೆ ಎರಡಕ್ಕೂ ಸಮಾಧಾನ ನೀಡುತ್ತದೆ~ ಎಂದು ಕೆಕೆ ಉತ್ತರಿಸಿದರು.

`ಪಲ್ ರೆಹನಾ...~ ಎಂಬ ಮಾಧುರ್ಯಭರಿತ ಗೀತೆಯನ್ನು ಕಣ್ಣು ಮುಚ್ಚಿ ಹಾಡಿ ಪತ್ರಕರ್ತರು ಹಾಗೂ ಇತರರನ್ನು ರಂಜಿಸಿದರು. ಫಿವರ್ 104 ಎಫ್‌ನ ಈ ಕಾರ್ಯಕ್ರಮಕ್ಕೆ ಸಾಥ್ ನೀಡಿರುವ ಇಷ್ತಾ ಹೋಟೆಲ್‌ನ ಸಿಬ್ಬಂದಿ ನಾ ಮುಂದು ತಾ ಮುಂದು ಎಂದು ಕೆಕೆ ಭಾವಚಿತ್ರ ಪಡೆದರು.

ಕೊನೆಯದಾಗಿ `ಎಫ್‌ಎಂ ರೇಡಿಯೊ ಕಂಪೆನಿಗಳು ಗೀತೆಗಳನ್ನು ಪ್ರಸಾರ ಮಾಡುವಾಗ ದಯವಿಟ್ಟು ಗಾಯಕರ ಹೆಸರಿನ ಜತೆಗೆ ಗೀತ ರಚನೆಕಾರರ ಹೆಸರನ್ನೂ ಹೇಳಲು ಮರೆಯಬಾರದು~ ಎಂದೂ ಕೆಕೆ ಮನವಿ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.