ADVERTISEMENT

ಕೈ ಜೋಡಿಸು ಬಾ ಚಪ್ಪಾಳೆಗೆ

ರೋಹಿಣಿ ಮುಂಡಾಜೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ಕೈ ಜೋಡಿಸು ಬಾ ಚಪ್ಪಾಳೆಗೆ
ಕೈ ಜೋಡಿಸು ಬಾ ಚಪ್ಪಾಳೆಗೆ   

ಶ್ರೀನಿಧಿ, ಇನ್ನೆರಡೇ ದಿನಕ್ಕೆ ಬಾಣಂತನ ಮುಗಿಸಿ ನಿಮ್ಮ ಮನೆಗೆ ಬರುವವಳಿದ್ದೇನೆ. ಆರು ತಿಂಗಳ ಹೆರಿಗೆ ರಜೆ ಮುಗಿಯುತ್ತಿದೆ. ಮುಂದಿನ ತಿಂಗಳು ಕೆಲಸಕ್ಕೆ ಹೋಗಲೇಬೇಕು. ಅದಕ್ಕೂ ಮೊದಲು ನಾವು ನಮ್ಮ ಹೊಸ ಜವಾಬ್ದಾರಿಗಳನ್ನು ನಿಭಾಯಿಸುವ ಬಗ್ಗೆ ಮಾತನಾಡಬೇಕಿದೆ. ಇವತ್ತು ಸಂಜೆ ನಮ್ಮನೇಲೇ ಉಳಿದುಕೊಳ್ಳಬಹುದು. ಬೇಗ ಬಂದು ಬಿಡು, ಕಾಯುತ್ತಿರುತ್ತೇನೆ’

ಮಣಿ ತನ್ನ ಪತಿಗೆ ಮಾಡಿದ ಮೆಸೇಜ್ ಇದು. ಹೆಂಡತಿಯ ಮನೆ ತಲುಪುವ ಹೊತ್ತಿಗೆ ಗಂಡನ ಮನದಲ್ಲಿ ಒಂದು ನಿರ್ಧಾರ ಹರಳುಗಟ್ಟಿತ್ತು.

‘ಮಣಿ, ಇನ್ನು ಮನೆಯಲ್ಲಿದ್ದು ಬಿಡು. ನಾನು ದುಡಿದದ್ದು ನಮಗೆ ಸಾಕು’ ಎಂದು ತನ್ನ ನಿರ್ಧಾರವನ್ನು ದೃಢವಾಗಿ ಉಚ್ಚರಿಸಿದ.

ADVERTISEMENT

ಆದರೆ ಮಣಿಯ ಮನಸು ಬೇರೆಯೇ ಆಗಿತ್ತು. ‘ಸಂಸಾರದ ಎರಡನೇ ಇನ್ನಿಂಗ್ಸ್‌ ಇದು. ಜವಾಬ್ದಾರಿ ಹಂಚಿಕೊಳ್ಳೋಣ. ನಾನು ನೌಕರಿ ಬಿಡೋದು ಕೊನೆಯ ಆಯ್ಕೆ. ನಾನು ವಾಪಸಾದ ಮೇಲೆ ಮಗು, ಮನೆ, ಸಂಸಾರವನ್ನು ಒಂದು ತಕ್ಕಡಿಯಲ್ಲೂ, ನೌಕರಿಯನ್ನು ಮತ್ತೊಂದು ತಕ್ಕಡಿಯಲ್ಲೂ ಹಾಕಿ ತೂಗಿದರೆ ಹೆಚ್ಚು ನೌಕರಿಯ ತೂಕವೇ ಹೆಚ್ಚು. ನಮ್ಮ ಭವಿಷ್ಯದ ಸವಾಲುಗಳೇ ಹಾಗಿವೆ. ₹33 ಲಕ್ಷ ರೂಪಾಯಿ ಸಾಲ ತೀರಿಸೋದು ಅಂದ್ರೆ ತಮಾಷೆನಾ?’ ಮಣಿ ವಾದ ಮುಂದಿಟ್ಟಳು.

‘ಜವಾಬ್ದಾರಿ ಹಂಚಿಕೊಳ್ಳುವುದೆಂದರೆ ಏನು? ನಾನೂ ಅಡುಗೆ ಮಾಡಬೇಕು, ಮಗುವಿನ ಡೈಪರ್‌ ಬದಲಾಯಿಸಬೇಕು ಅಂತೀಯಾ?’ ಶ್ರೀನಿಧಿಯ ಮಾತಿನಲ್ಲಿದ್ದುದು ಪುರುಷಾಹಂಕಾರ.

‘ಹೌದು ಕಣೋ. ಏನು ತಪ್ಪು? ಸಂಸಾರವೆಂದರೆ ಚಿಟಿಕೆ ಅಲ್ಲ, ಚಪ್ಪಾಳೆ. ಬಾ ನನ್ನ ಜತೆ ನೀನೂ ಕೈ ಜೋಡಿಸು ಚಪ್ಪಾಳೆ ತಟ್ಟೋಣ, ದಾಂಪತ್ಯದಲ್ಲೂ ಸಂಸಾರದಲ್ಲೂ ಸಮರಸ ಹೇಗಿರುತ್ತದೆ ಎಂದು ನೀನೇ ನೋಡುವಿಯಂತೆ’ ಈಗ ಮಣಿ ತನ್ನ ಮನದ ಮಾತು ಹೇಳಿ ಮುಗಿಸಿದ್ದಳು.

***

ಮಣಿಯ ಮಾತು ಕೇಳಿದ ಶ್ರೀನಿಧಿ ಮನಸಿನಲ್ಲಿ ಮಥನ ಆರಂಭವಾಗಿತ್ತು.

ಮದುವೆಯಾಗಿ ವರ್ಷ ತುಂಬುವುದಕ್ಕೂ ಮೊದಲೇ ಮಣಿ ತಾಯಿಯಾಗಿದ್ದಾಳೆ. ತುಂಬು ಗರ್ಭಿಣಿಯಾಗಿದ್ದಾಗಲೂ ಅವಳು ಎಷ್ಟು ಹೊತ್ತಿಗೆ ಏಳುತ್ತಾಳೆ ಎಂದು ಒಂದು ದಿನವೂ ನೋಡಲಿಲ್ಲ. ಪಕ್ಕದಲ್ಲೇ ಮಲಗಿದ ಪತ್ನಿ ಹೊದಿಕೆ ಸರಿಸಿ ಮಂಚ ಇಳಿದು ಹೋಗುವುದೂ, ಸ್ನಾನ ಮಾಡುವುದೂ, ರೂಮಿನ ಬಾಗಿಲು ಹಾಕುವುದೂ... ಊಹೂಂ ಯಾವುದೂ ನನಗೆ ಒಂದು ದಿನವೂ ಕಾಣಿಸಲಿಲ್ಲ. ನನ್ನದು ಅಷ್ಟು ಗಾಢ ನಿದ್ದೆ. ನಾನು ಎದ್ದು ಹೊರಬರುವಾಗ ದೇವರ ಮನೆಯ ಊದುಕಡ್ಡಿ ಮತ್ತು ಹೂವಿನ ಘಮ, ಅಡುಗೆ ಮನೆಯ ಒಗ್ಗರಣೆ, ಸಾಂಬಾರು ಘಮ, ಬಚ್ಚಲಿನಿಂದ ಸಾಬೂನು ಘಮ, ಡೈನಿಂಗ್‌ ಟೇಬಲ್‌ನಿಂದ ತಿಂಡಿಯ ಘಮ... ಮೂರನೇ ಸೀಟಿ ಕೂಗುವ ಕುಕ್ಕರ್‌ನಿಂದ ಕುಚಿಲಕ್ಕಿ ಗಂಜಿಯ ಘಮ... ತರಕಾರಿ, ಹಣ್ಣು, ಸೊಪ್ಪು, ಪೂಜೆಗೆ ಹೂವು, ಪಕ್ಕದ ಬೀದಿಯ ಬೇಕರಿಯಿಂದ ಬೆಳಿಗ್ಗೆ ಹಾಲು ಇವನ್ನೆಲ್ಲ ಅವಳು ತರೋದ್ಯಾವಾಗ? ಅಬ್ಬಾ ಮಣಿ ಎಷ್ಟು ಕೈಗಳಿಂದ ಕೆಲಸ ಮಾಡ್ತಾ ಇದ್ದಳೋ ಏನೋ?

ಅವಳ ಚಿಟಿಕೆ ಎಂಬ ಮಾತಿನಲ್ಲಿ ಹತಾಶೆ, ಸುಸ್ತು, ದಾಂಪತ್ಯದಲ್ಲಿ ಅವಳು ಒಂಟಿಯಾಗಿದ್ದಾಳೆಂಬುದರ ಸೂಚನೆ ಇತ್ತೆ? ಐದನೇ ತರಗತಿಯಿಂದಲೇ ಅಮ್ಮನಿಗೆ ನೆರವಾಗುತ್ತಿದ್ದ ನಾನು ಮಣಿಗೆ ಸಹಕಾರ ನೀಡಲೇ ಇಲ್ಲ. ಉಕ್ಕಿಹೋಗುತ್ತಿದ್ದ ಹಾಲನ್ನು ನೋಡುತ್ತಾ, ‘ಮಣಿ ಹಾಲು ಉಕ್ಕಿಹೋಗ್ತಿದೆ ನೋಡ್ಬಾರ್ದಾ’ ಎಂದು ಕರೆಯುತ್ತಿದ್ದೆ, ಆದರೆ ಒಮ್ಮೆಯೂ ನಾನೇ ಹೋಗಿ ಸ್ಟೌ ಆಫ್‌ ಮಾಡ್ತಾ ಇರಲಿಲ್ಲ. ತಂಗಿಯ ಮದುವೆಯಾಗುವವರೆಗೂ ಅವಳ ಬಟ್ಟೆಗಳನ್ನೂ ನನ್ನದರ ಜೊತೆ ತೊಳೆದುಹಾಕುತ್ತಿದ್ದೆ. ಆದರೆ ಮಣಿಗೆ ಈ ಅದೃಷ್ಟ ಇರಲಿಲ್ಲ. ಹೆರಿಗೆಯ ಹಿಂದಿನ ದಿನವೂ ನಾನು ಮಣಿಗೆ ಬಟ್ಟೆ ಜಾಡಿಸಿಕೊಡಲೂ ಇಲ್ವಲ್ಲ?

‘ಚಪ್ಪಾಳೆ ತಟ್ಟಲು ನಿಮ್ಮ ಕೈಗಳೂ ಬೇಕು’ ಅಂದಿದ್ದಾಳೆ ಮಣಿ. ಮಗುವಿಗೆ ಡೈಪರ್ ಬದಲಾಯಿಸುವುದು ಗಂಡಸ್ತನಕ್ಕೆ ಅವಮಾನ ಅಂತ ನನ್ನ ತಲೆಯಲ್ಲಿ ತುಂಬಿದ್ದು ರೂಪೇಶ್‌. ಬಹುಶಃ ಅವನ ಸಂಸಾರವೂ ಚಿಟಿಕೆಯೇ. ಚಿಟಿಕೆಯೆಂದರೆ ಅಪಸ್ವರ, ನಾನು ಚಪ್ಪಾಳೆ ತಟ್ಟುವ ಗಂಡನಾಗಬೇಕು.

ನನ್ನ ಒರಟುತನಕ್ಕೆ ಬೇಸರಿಸಿಕೊಂಡಿರುವ ಅವಳ ಅಮ್ಮ ಮನೆಗೆ ಬರಲಾರೆ ಎಂದು ಹೇಳುತ್ತಿದ್ದಾರೆ. ನಮ್ಮೊಂದಿಗೆ ಇರುವಂತೆ ಅವರ ಮನವೊಲಿಸಬೇಕು. ಮಣಿ ಹೆರಿಗೆಗೆ ಹೋದ ಮೇಲೆ ಕೆಲಸಕ್ಕೆ ಗೊತ್ತುಮಾಡಿದ ಭಾರತಿಗೆ ಸಂಜೆವರೆಗೂ ಮನೆಯಲ್ಲಿರುವಂತೆ ಹೇಳಬೇಕು. ಮಣಿಯನ್ನು ದಿನಾ ಮೆಟ್ರೊ ಸ್ಟೇಷನ್‌ವರೆಗೆ ಬಿಟ್ಟುಬರಬೇಕು. ಬರುವಾಗ ಹಣ್ಣು, ಸೊಪ್ಪು ತರಕಾರಿ ತರಬೇಕು. ಸಂಜೆ ಸ್ನೇಹಿತರೊಂದಿಗೆ ಹರಟೆ ಹೊಡೆಯುವುದನ್ನು ಬಿಟ್ಟು ಮಣಿ ಮತ್ತು ಮಗುವಿನ ಜತೆಗಿರಬೇಕು. ಅವಳೊಂದಿಗೆ ಹರಟಬೇಕು. ಮನೆಯಲ್ಲಿ ಅವಳು ನಗುತ್ತಿರಬೇಕು. ನಗುವಿನ ಬೆಳಕು ಬದುಕು ಬೆಳಗಬೇಕು.

***

‘ಹೌದು ಮಣಿ, ಚಿಟಿಕೆ ಹೊಡೆಯಲು ಎರಡೇ ಬೆರಳು ಸಾಕು. ಚಪ್ಪಾಳೆಗೆ ಎರಡು ಕೈಗಳು ಬೇಕು. ಚಿಟಿಕೆ ಎಂದರೆ ಅಪಸ್ಮರ ಚಪ್ಪಾಳೆಯೇ ಸುಸ್ವರ, ಸಂಸಾರದಲ್ಲಿ ಸಂಗೀತದ ಝೇಂಕಾರ. ದುಡಿಯುವ ಹೆಂಡತಿಗೆ ಗಂಡನ ಸಾಥಿ ಸಿಗದಿದ್ದರೆ ಅವಳು ಒಂಟಿ. ನೀನೇನೂ ಯೋಚನೆ ಮಾಡಬೇಡ. ನಾನಿದ್ದೀನಿ. ಸಂಸಾರ ಅಂದ್ರೆ ಜಂಟಿ ಪಯಣ ಅನ್ನೋದು ನನಗೀಗ ಅರ್ಥವಾಯಿತು. ಮಗುವಿನೊಂದಿಗೆ ಬಾ. ಇಬ್ಬರೂ ಕೈಸೇರಿಸಿ ಚಪ್ಪಾಳೆ ತಟ್ಟೋಣ’ ಶ್ರೀನಿಧಿ ಇಷ್ಟು ಹೇಳಿ ಹೆಂಡತಿಯ ಹಣೆಗೆ ಹೂಮುತ್ತು ಕೊಟ್ಟ.

ಮಣಿ ನಸುವೇ ನಾಚಿ, ‘ಎಲ್ಲರಂಥವನಲ್ಲ ನನ ಗಂಡ’ ಗುನುಗುತ್ತಾ ಮಗುವಿನ ಮುಖ ನೋಡಿದಳು. ಅಲ್ಲೂ ಶ್ರೀನಿಧಿಯೇ ನಗುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.