ADVERTISEMENT

ಕೈ ಬೀಸಿ ಕರೆವ ಕಾಕೋಳು ಕೃಷ್ಣಾಲಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST
ಕೈ ಬೀಸಿ ಕರೆವ ಕಾಕೋಳು ಕೃಷ್ಣಾಲಯ
ಕೈ ಬೀಸಿ ಕರೆವ ಕಾಕೋಳು ಕೃಷ್ಣಾಲಯ   

ಇಲ್ಲಿ ಆಡಂಬರವಿಲ್ಲ; ಆದರವಿದೆ. ಶ್ರೀಮಂತಿಕೆಯಿಲ್ಲ ಸಂತಸವಿದೆ. ದುಬಾರಿ ದೇವದರ್ಶನದ ತಾಪವಿಲ್ಲ. ನಿತ್ಯನೋಟದ ಶಾಂತಿ ಇದೆ. ಈ ಇರುವುದನ್ನು ಲೆಕ್ಕಹಾಕುತ್ತ ಹೋದರೆ ಅದು ಬೆಟ್ಟವಾಗುತ್ತದೆ.
 
ಇಂತಹ ಮಾತನ್ನು ಕೇಳುವಾಗಲೇ ರೋಮಾಂಚನ! ಇದನ್ನು ಪ್ರತ್ಯಕ್ಷ ಕಂಡರೆ? ದೈನಂದಿನ ಜಂಜಡ, ಮಾನಸಿಕ ತುಮುಲಗಳಿಂದ ಮುಕ್ತಿ ಪಡೆಯಬಯಸಿದರೆ ನೇರ ಕಾಕೋಳಿಗೆ ಬನ್ನಿ. ಇಲ್ಲಿನ ವಿಶಿಷ್ಟ ದೇವಾಲಯವೊಂದು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಯಲಹಂಕ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಧಾರ್ಮಿಕ ಸೊಗಡಿನ ಐತಿಹಾಸಿಕ ಪ್ರೇಕ್ಷಣೀಯ ನೆಲೆಯಾಗಿರುವ ಕಾಕೋಳು ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ.
 
ಆಧುನಿಕತೆಯ ಮಿಂಚಿದ್ದರೂ ಗ್ರಾಮೀಣ ಸಂಸ್ಕೃತಿಯಿಂದ ಬೇರ್ಪಟ್ಟಿಲ್ಲ. ಗ್ರಾಮದ ಮಧ್ಯಭಾಗದಲ್ಲಿರುವ ದಾಸಸಾಹಿತ್ಯದ ಆದ್ಯಪ್ರವರ್ತಕ ಶ್ರೀಪಾದರಾಜರು ಪ್ರತಿಷ್ಠಾಪಿಸಿದ ಆಳೆತ್ತರದ ಅನನ್ಯವಾದ ಬೃಂದಾವನದ ಚತುರ್ಭುಜ ವೇಣುಗೋಪಾಲಕೃಷ್ಣ ಮತ್ತು ವ್ಯಾಸರಾಜ ಸ್ಥಾಪಿತ ಕಂಬದ ಆಂಜನೇಯನ ಗುಡಿ ಇಲ್ಲಿನ ಪ್ರಮುಖ ಆಕರ್ಷಣೆ .

ಕಾಕೋಳು ತೇರು - ವೇಣುಗೋಪಾಲನ ವೈಭವದ ಮೇರು
ಮೂಲವಿಗ್ರಹಗಳ ಪ್ರತಿಷ್ಠಾಪನೆಯ ಸಂಸ್ಮರಣಾರ್ಥವಾಗಿ ಆಚರಿಸುವ ಉತ್ಸವವೇ ಬ್ರಹ್ಮರಥೋತ್ಸವ. ಮಾರ್ಚ್ 25ರಿಂದ 28ರವರೆಗೆ ಇದು ನಡೆಯಲಿದೆ. ರಥೋತ್ಸವ ದೈವಭಕ್ತಿಯ ಅನನ್ಯತೆಯನ್ನು, ಅಸ್ಮಿತೆಯನ್ನು ಬಿಂಬಿಸುವ ಒಂದು ವಿಶಿಷ್ಟರೂಪಕ.

ಪ್ರತಿವರ್ಷ ಚೈತ್ರಮಾಸದ ಶುದ್ಧ ತೃತೀಯದಿಂದ ರಾಮನವಮಿ ಪರ್ಯಂತ ಅತಿ ವಿಜೃಂಭಣೆಯಿಂದ ಕಣ್ಮನಗಳಿಗೆ ಹಬ್ಬವನ್ನುಂಟುಮಾಡುವ ಈ ಪರಂಪರೆ 78 ವಸಂತಗಳನ್ನು ಪೂರೈಸಿದೆ. ಇದು 79ನೇ ಬ್ರಹ್ಮರಥೋತ್ಸವ.

ಕಾಕೋಳು ತಲುಪುವುದು ಹೇಗೆ?
ಬೆಂಗಳೂರಿಂದ 285ಇ, 251ಎ ಮತ್ತು 266ಸಿ, 285ಎಲ್ , 285ಆರ್, 285ಎಂ,  285ಕ್ಯೂ ಬಸ್ಸುಗಳು ಕಾಕೋಳಿಗೆ ಬರುತ್ತದೆ. ಮಾಹಿತಿಗೆ 90356 18076/ 92415 00335.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.