ADVERTISEMENT

ಕೋಟೆ ಜಲಕಂಠೇಶ್ವರ ಸನ್ನಿಧಿಯಲ್ಲಿ ಶಿವಾರಾಧನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST
ಕೋಟೆ ಜಲಕಂಠೇಶ್ವರ ಸನ್ನಿಧಿಯಲ್ಲಿ ಶಿವಾರಾಧನೆ
ಕೋಟೆ ಜಲಕಂಠೇಶ್ವರ ಸನ್ನಿಧಿಯಲ್ಲಿ ಶಿವಾರಾಧನೆ   

ಬೆಂಗಳೂರಿನಲ್ಲಿ ಇತಿಹಾಸದ ಪುಟಗಳನ್ನು ತೆರೆದಿಡುವ ಪ್ರದೇಶಗಳಲ್ಲಿ ಕೋಟೆ/ಕಲಾಸಿಪಾಳ್ಯಕ್ಕೆ ಅಗ್ರಸ್ಥಾನವೆನ್ನಬಹುದು.
 
`ಕೋಟೆ~ ಎಂದಾಕ್ಷಣ ಟಿಪ್ಪು ಸುಲ್ತಾನ್, ಹೈದರನ ಕಾಲಕ್ಕೆ ಕರೆದೊಯ್ಯುವ ಸಾಕ್ಷಾತ್ ಕೋಟೆ, ಕೆಂಪೇಗೌಡನ ಆಳ್ವಿಕೆಯ ಹೆಗ್ಗುರುತುಗಳನ್ನು ತೆರೆದಿಡುವ ದೇವಸ್ಥಾನಗಳು, ಅದೇ ಟಿಪ್ಪುವಿನ ಕಾಲದ ಅರಮನೆ, ರಾಣಿ ವಿಲಾಸ, ವಿಕ್ಟೋರಿಯಾ ಆಸ್ಪತ್ರೆ... ಹೀಗೆ ಹತ್ತಾರು ತಾಣಗಳು ಕಣ್ಮುಂದೆ ಸುಳಿಯುತ್ತವೆ.
 

ಇದೇ ಪ್ರದೇಶದಲ್ಲಿರುವ ಕೋಟೆ ಜಲಕಂಠೇಶ್ವರ ಸನ್ನಿಧಿ ಇಂತಹ ಜನಾಕರ್ಷಣೆಯ ಮತ್ತೊಂದು ಕೇಂದ್ರ.

ಧಾರ್ಮಿಕ ಶ್ರದ್ಧಾಳುಗಳ ನೆಚ್ಚಿನ ತಾಣವಾಗಿ, ಪ್ರವಾಸಿ ಕೇಂದ್ರವಾಗಿ ಹೆಸರುವಾಸಿಯಾಗಿರುವ ಜಲಕಂಠೇಶ್ವರ ದೇವಸ್ಥಾನಕ್ಕೆ ಮಹಾಶಿವರಾತ್ರಿಯಂದು ಭೇಟಿ ನೀಡಿದರೆ ಇಷ್ಟಾರ್ಥ ಸಿದ್ಧಿಯಾಗುವುದು ಖಚಿತ ಎಂಬುದು ಜನಸಾಮಾನ್ಯರ ನಂಬಿಕೆ. ದೇವಸ್ಥಾನದ ಗರ್ಭಗುಡಿಯಲ್ಲಿ ಜಲಕಂಠೇಶ್ವರ, ಪಾರ್ವತಿ ಹಾಗೂ ಕೈಲಾಸನಾಥೇಶ್ವರ ವಿಗ್ರಹಗಳಿವೆ.
 
ಈ ಜಲಕಂಠೇಶ್ವರನನ್ನು ದೇವಸ್ಥಾನದ ಮುಂಭಾಗದಲ್ಲಿರುವ ಧ್ವಜಸ್ತಂಭದ ಬಳಿ ನಿಂತು ನೋಡಿದರೆ ಅರ್ಧನಾರೀಶ್ವರನಂತೆ ಕಾಣಿಸುವುದು ವಿಶೇಷ.

ಸಂಪೂರ್ಣ ಶಿಲಾವೃತವಾದ, ಸುಮಾರು 400 ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನವನ್ನು ಕೆಂಪೇಗೌಡರ ಕಾಲದಲ್ಲಿ ನಿರ್ಮಿಸಲಾಯಿತು. ಪ್ರಾಕಾರದ ಮೇಲ್ಛಾವಣಿಯಲ್ಲಿ ಮತ್ಸ್ಯ, ಕೂರ್ಮ ಮತ್ತು ಸರ್ಪದ ಕೆತ್ತನೆಗಳಿದ್ದು, ಇವುಗಳ ಕೆಳಗೆ ಕುಳಿತು ಧ್ಯಾನ ಮಾಡಿದಲ್ಲಿ ಇಷ್ಟಾರ್ಥ ಸಿದ್ಧಿಯಾಗುತ್ತದೆ, ಮಾತೃ-ಪಿತೃ ದೋಷಗಳು ನಿವಾರಣೆಯಾಗುತ್ತವೆ, ಶಾಪವಿಮೋಚನೆಯಾಗುತ್ತದೆ ಎಂಬುದು ಪ್ರತೀತಿ.

ಶಿವರಾತ್ರಿ ಪ್ರಯುಕ್ತ ಸೋಮವಾರ (ಫೆ. 20) ಸಾಯಂಕಾಲದಿಂದ ಮಂಗಳವಾರ ಮುಂಜಾವಿನವರೆಗೂ ನಾಲ್ಕು ಯಾಮದ ಪೂಜೆ, ಲಕ್ಷ ಬಿಲ್ವಾರ್ಚನೆ ಮೊದಲಾದ ಸೇವೆಗಳು ನಡೆಯಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT