ADVERTISEMENT

ಕೌಶಲಗಳ `ತರಂಗ್'

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ಟಿ.ಜಾನ್ ಸಮೂಹ ಶಿಕ್ಷಣ ಸಂಸ್ಥೆ ಈಚೆಗೆ ಆಯೋಜಿಸಿದ್ದ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ `ತರಂಗ್-2013'ನಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಲಲಿತಕಲೆಗಳನ್ನು ಪ್ರದರ್ಶಿಸಿದರು. ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಲ್ಲಿನ ಸುಪ್ತ ಕೌಶಲಗಳನ್ನು ಹೊರಗೆಳೆಯುವ ಪ್ರಯತ್ನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

`ತರಂಗ್' ಕಾರ್ಯಕ್ರಮದ ವಿದ್ಯಾರ್ಥಿಗಳ ಆಕರ್ಷಕ ನೃತ್ಯದೊಂದಿಗೆ ಆರಂಭವಾಯಿತು. ನಂತರ ಸಮೂಹ ಗಾಯನ ಸ್ಪರ್ಧೆ ಹಾಗೂ ವಾದ್ಯಸಂಗೀತ ಸ್ಪರ್ಧೆಗಳು ನಡೆದವು. ಚುಟುಕು ನಾಟಕ ಪ್ರದರ್ಶನ ಹಾಗೂ ಹಾಸ್ಯ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದವು. ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ನೃತ್ಯ ಪ್ರದರ್ಶನಗಳು ಟ್ಯಾಲೆಂಟ್ ಶೋನ ಪ್ರಮುಖ ಆಕರ್ಷಣೆಯಾಗಿದ್ದವು. ಟಿಜೆಐಟಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಫ್ಯಾಷನ್ ಶೋ ಮತ್ತು ರಾಕ್ ಸಂಗೀತ ಎಲ್ಲರ ಮೆಚ್ಚುಗೆ ಗಳಿಸಿದವು.

ಕಾರ್ಯಕ್ರಮದ ಎರಡನೇ ದಿನ ಹಲವು ಕ್ರೀಡಾ ಸ್ಪರ್ಧೆಗಳಿಗೆ ಸಾಕ್ಷಿಯಾಯಿತು. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ತಂಡ ಕ್ರಿಕೆಟ್ ಪಂದ್ಯದಲ್ಲಿ ಗೆದ್ದರೆ, ಮೆಕ್ಯಾನಿಕಲ್ ತಂಡ ವಾಲಿಬಾಲ್ ಹಾಗೂ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಗೆದ್ದಿತು. ಮೊದಲನೇ ವರ್ಷದ ಬಿಇ ತಂಡ ಥ್ರೋಬಾಲ್ ಪಂದ್ಯಾವಳಿಯಲ್ಲಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ತಮ್ಮ ತಮ್ಮ ವಿಭಾಗಗಳಲ್ಲಿ  ಶೇ 100 ಫಲಿತಾಂಶ ತಂದುಕೊಟ್ಟ ಬೋಧಕ ಸಿಬ್ಬಂದಿಯನ್ನು ಸಮಾರೋಪ ಸಮಾರಂಭದಲ್ಲಿ ಅಭಿನಂದಿಸಲಾಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.