ADVERTISEMENT

ಕ್ಯಾನ್ಸರ್‌ಗೆ ನೋವುರಹಿತ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 19:30 IST
Last Updated 11 ಮಾರ್ಚ್ 2011, 19:30 IST

ಕ್ಯಾನ್ಸರ್‌ಗಿಂತ ಅದಕ್ಕೆ ಪಡೆಯುವ ಚಿಕಿತ್ಸೆ ಭಯಾನಕ ಎಂಬ ಅಭಿಪ್ರಾಯ ರೋಗಿಗಳಲ್ಲಿದೆ. ಶಸ್ತ್ರಚಿಕಿತ್ಸೆ ಮತ್ತು ನಂತರದ ಕಿಮೊಥೆರಪಿಯ ಪಾರ್ಶ್ವ ಪರಿಣಾಮಗಳು ವ್ಯಕ್ತಿಯ ದೈಹಿಕ, ಭಾವನಾತ್ಮಕ, ಮಾನಸಿಕ ಸ್ಥಿತಿಯ ಮೇಲೆ ಮೂಡಿಸುವ ಪರಿಣಾಮ ಹಾಗಿರುತ್ತದೆ.

 ಆದರೆ ಕ್ಯಾನ್ಸರ್ ರೋಗಕ್ಕೆ ನೋವುರಹಿತ ಕ್ಯು.ಎಂ.ಆರ್ ಚಿಕಿತ್ಸೆಯೂ ಇದೆ. ಈ ಚಿಕಿತ್ಸೆಯಲ್ಲಿ ನಿರ್ದಿಷ್ಟ ಗತಿಯಲ್ಲಿ ನಿಗದಿಪಡಿಸಿದ ಕಂಪ್ಯೂಟರ್ ನಿಯಂತ್ರಿತ ಕಾಂತೀಯ ವಲಯ ಸೃಷ್ಟಿಯಾಗುತ್ತದೆ. ಲೇಸರ್ ನಿರ್ದೇಶನಗಳ ನೆರವಿನಿಂದ ಉದ್ದೇಶಿತ ಜೀವಕೋಶಗಳ ಮೇಲೆ ಮಾತ್ರ ಈ ಕಿರಣಗಳನ್ನು ಹರಿಸಲು ಸಾಧ್ಯ. ಈ ಕಿರಣಗಳು ಉಷ್ಣತೆಯಿಂದ ಕೂಡಿರುವುದಿಲ್ಲ, ಅಯಾನೀಕರಣ ಹೊಂದುವುದಿಲ್ಲ, ಪಾರ್ಶ್ವ ಪರಿಣಾಮಗಳೂ ಇಲ್ಲ ಎಂದು ವಿವರಿಸುತ್ತಾರೆ ಎಸ್‌ಬಿಎಫ್ ಹೆಲ್ತ್ ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ವಸಿಷ್ಠ. 

 ಅವರು ಈ ಮೊದಲು ಬೆಂಗಳೂರಿನಲ್ಲಿ ವಾಯುಪಡೆ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ (ಐಎಎಂ) ರೇಡಿಯೊ ಡಯಾಗ್ನೊಸಿಸ್ ವಿಭಾಗದ ಮುಖ್ಯಸ್ಥರೂ ಪ್ರೊಫೆಸರೂ ಆಗಿದ್ದವರು. ಸೀಕ್ವೆನ್ಶಿಯಲಿ ಪ್ರೋಗ್ರಾಮ್ಡ್ ಮ್ಯಾಗ್ನೆಟಿಕ್ ಫೀಲ್ಡ್ (ಎಸ್‌ಪಿಎಂಎಫ್) ಎಂಬ ನೂತನ ಚಿಕಿತ್ಸೆ ವಿಧಾನವನ್ನು ಅಭಿವೃದ್ಧಿಪಡಿಸಿದವರು.

ಈ ಚಿಕಿತ್ಸೆಯ ಕುರಿತು ಸಾಕಷ್ಟು ಸಂಶೋಧನೆ ಕೂಡ ಮಾಡಿದ್ದಾರೆ. ನಾಲ್ಕು ವರ್ಷಗಳಿಂದ ಸುಮಾರು 2000 ವೈದ್ಯಕೀಯ ಪ್ರಕರಣಗಳಲ್ಲಿ ಈ ಚಿಕಿತ್ಸೆಯನ್ನು ನೀಡುತ್ತಿರುವ ಡಾ. ವಸಿಷ್ಠ, ಇದು ವೈದ್ಯಕೀಯವಾಗಿ ಸಾಬೀತಾದ ಚಿಕಿತ್ಸೆ ಎನ್ನುತ್ತಾರೆ. ‘ಕೆಲವು ವಾರಗಳು ಇಲ್ಲವೆ ಕೆಲವು ತಿಂಗಳು, ಹೆಚ್ಚೆಂದರೆ ಒಂದು ವರ್ಷ ಬದುಕಬಹುದೆಂದು ಐದಾರು ವರ್ಷಗಳ ಹಿಂದೆಯೇ ವೈದ್ಯರ ಅಭಿಪ್ರಾಯ ಪಡೆದವರೂ ಇನ್ನೂ ನಮ್ಮ ನಡುವೆ ಇದ್ದಾರೆ. ರೋಗವೂ ಮರುಕಳಿಸಿಲ್ಲ. ಶಸ್ತ್ರಚಿಕಿತ್ಸೆ, ಕಿಮೊಥೆರಪಿ, ರೇಡಿಯೊ ಥೆರಪಿಗೆ ಒಳಗಾದ ರೋಗಿಗಳು ಕೂಡ ಎಸ್‌ಪಿಎಂಎಫ್ ಚಿಕಿತ್ಸೆ ಪಡೆದು ಆರೋಗ್ಯ ಸುಧಾರಿಸಿಕೊಂಡ ದಾಖಲೆಗಳಿವೆ’ ಎಂದು ಹೇಳುತ್ತಾರೆ.

ಈ ಚಿಕಿತ್ಸೆಯಿಂದ ರೋಗಿಗಳು ನೋವು ನಿವಾರಕ ಮಾತ್ರೆಗಳಿಂದ ಮುಕ್ತರಾಗಬಹುದು. ಅವರ ಭಾವನಾತ್ಮಕ ಮತ್ತು ಮಾನಸಿಕ ಸ್ಥಿತಿ ಸುಧಾರಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಇತರ ಚಿಕಿತ್ಸೆಗಳಂತೆ ಮೃತ ಗಡ್ಡೆಯ ಕೋಶಗಳು ದೇಹದಿಂದ ಹೊರಹೋಗುವಾಗ ಕಿಡ್ನಿಗಳ ಮೇಲೆ ಹೆಚ್ಚಿನ ಹೊರೆ ಬೀಳದು; ಬದಲಾಗಿ ಅವುಗಳನ್ನು ದೇಹವು ಪುನರ್ಬಳಕೆ ಮಾಡಿಕೊಳ್ಳುತ್ತದೆ ಎನ್ನುತ್ತಾರೆ. 

 ಚಿಕಿತ್ಸೆ: ಎಂಆರ್‌ಐನಂತೆ ಒಂದೇ ದೊಡ್ಡ ಆಯಸ್ಕಾಂತದಿಂದ ಹೊರಹೊಮ್ಮುವ  ಕಿರಣಗಳಲ್ಲದೆ ಈ ಚಿಕಿತ್ಸೆಯಲ್ಲಿ ಹಲವು ಚಿಕ್ಕ ಆಯಸ್ಕಾಂತಗಳಿಂದ ಹೊಮ್ಮುವ ಕಿರಣಗಳಿಂದ ಬಹು ಕಾಂತೀಯ ಕ್ಷೇತ್ರಗಳು ಹುಟ್ಟಿಕೊಳ್ಳುತ್ತವೆ. ಪ್ರತಿ ಜೀವಕೋಶಕ್ಕೂ ಅದರದೇ ಆದ ಕಂಪನ (ಫ್ರೀಕ್ವೆನ್ಸಿ) ಇದ್ದು ಕ್ಯಾನ್ಸರ್ ಜೀವಕೋಶಗಳ ಮೆಂಬ್ರೇನ್ ಸಾಮರ್ಥ್ಯ ಸುಮಾರು -15ಎಂವಿಯಿಂದ -30ಎಂವಿ. ಕ್ಯುಎಂಆರ್ ಚಿಕಿತ್ಸೆ (ಕ್ವಾಂಟಮ್ ಮ್ಯಾಗ್ನೆಟಿಕ್ ರಿಸೊನನ್ಸ್ ಥೆರಪಿ)ಯಿಂದ ಸಹಜ ಜೀವಕೋಶಗಳನ್ನು ಹೊರತುಪಡಿಸಿ ಕೇವಲ ಕ್ಯಾನ್ಸರ್ ಕೋಶಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿದೆ. ಮ್ಯಾಗ್ನೆಟಿಕ್ ಫೀಲ್ಡ್ ಜನರೇಟರ್ (ಎಂಎಫ್‌ಜಿ) ಗಳು ಕ್ಯಾನ್ಸರ್ ಗಡ್ಡೆಯತ್ತ ಮಾತ್ರ ಕಿರಣ ಬೀರುತ್ತವೆ. ಕ್ಯಾನ್ಸರ್ ಕೋಶಗಳು ಸಹಜ ಸ್ಥಿತಿಯಲ್ಲೇ ಉಳಿದರೂ ಪುನರುತ್ಪತ್ತಿಯಾಗದಂತೆ ಹಾಗೂ ದೇಹದ ಇತರ ಭಾಗಗಳಿಗೆ ಹರಡದಂತೆ ತಡೆಯಲೂ ಸಾಧ್ಯ. 28 ದಿನಗಳ ಕಾಲ ಪ್ರತಿ ದಿನ ಒಂದು ಗಂಟೆಯಂತೆ ಈ ಚಿಕಿತ್ಸೆ ಪಡೆಯಬೇಕಾಗುತ್ತದೆ. ಇದು ನೋವುರಹಿತ. ಹೀಗಾಗಿ ಹೊರರೋಗಿಯಾಗೇ ಚಿಕಿತ್ಸೆ ಪಡೆದು ತಕ್ಷಣವೇ ಸಹಜ ಜೀವನದಲ್ಲಿ ತೊಡಗಿಕೊಳ್ಳಬಹುದು.

 ರಕ್ತದ ಕ್ಯಾನ್ಸರ್ ಹೊರತುಪಡಿಸಿ ಉಳಿದೆಲ್ಲ ಕ್ಯಾನ್ಸರ್‌ಗೂ,ಚಿಕಿತ್ಸೆಯ ವೆಚ್ಚ ಸುಮಾರು 1 ರಿಂದ ಒಂದೂವರೆ ಲಕ್ಷ ರೂಪಾಯಿ ಆಗಬಹುದು. ಮಾಹಿತಿಗೆ: ಎಸ್‌ಬಿಎಫ್ ಹೆಲ್ತ್‌ಕೇರ್, 39/4, ಹೊರ ವರ್ತುಲ ರಸ್ತೆ, ದೊಡ್ಡನಕುಂದಿ, ಮಾರತ್‌ಹಳ್ಳಿ ರಿಂಗ್ ರಸ್ತೆ. ದೂ: 4211 6555.               

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.