ADVERTISEMENT

ಕ್ಯಾರಲ್ ಎಂಬ ಯೇಸು ಭಜನೆ

ಪ್ರಜಾವಾಣಿ ವಿಶೇಷ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ಮಕ್ಕಳ ಮೆಚ್ಚಿನ ಸಾಂತಾಕ್ಲಾಸ್‌ನ `ಮೆರ‌್ರಿ ಕ್ರಿಸ್‌ಮಸ್' ಪುಟಾಣಿ ಗಂಟೆಯ ಟಿಣ್‌ಟಿಣ್... ಅಲ್ಲೊಂದು ಇಲ್ಲೊಂದು ಮನೆಯಲ್ಲಿ ಒಕ್ಕೊರಲ ಕ್ಯಾರಲ್ ಹಾಡುಗಳು ಮತ್ತು ಪಿಯಾನೊ ನಾದದ ಅನುರಣನ... ಕ್ರೈಸ್ತ ಸಮುದಾಯ ಶಾಂತಿದೂತನ ಜನ್ಮದಿನಕ್ಕೆ ದಿನಗಣನೆ ಮಾಡುತ್ತಿರುವಂತೆ ಕ್ಯಾರಲ್ ಹಾಡುಗಾರರ ತಂಡಗಳು ದಿನಚರಿ ಹೊಂದಿಸಿಕೊಳ್ಳುವ ತರಾತುರಿಯಲ್ಲಿವೆ.

 
“ಸೈಲೆಂಟ್ ನೈಟ್... ಹೋಲಿ ನೈಟ್...”
“ಮೇರಿಸ್ ಬಾಯ್ ಚೈಲ್ಡ್ ಜಸ್ಟ್ ಬಾರ್ನ್ ಆನ್ ಕ್ರಿಸ್‌ಮಸ್‌”
“ಮೇರಿ ಡಿಡ್ ಯೂ ನೋ ದಟ್ ಯುವರ್ ಬೇಬಿ ಬಾಯ್ ವಿಲ್ ಒನ್ ಡೇ ವಾಕ್ ಆನ್ ವಾಟರ್‌”

ಮುಂತಾದ ಜನಪ್ರಿಯ ಕ್ಯಾರಲ್ ಹಾಡುಗಳು ಒಳಮನೆಯಲ್ಲಿ ಹಾಸಿಗೆ ಹಿಡಿದು ಮಲಗಿರುವ ಕ್ರೈಸ್ತ ಭಕ್ತರಲ್ಲೂ ಹಬ್ಬ ಸಂಪನ್ನವಾಗುವಂತೆ ಮಾಡುತ್ತಿವೆ.
 
`ನಗರದ ಚರ್ಚ್‌ಗಳಲ್ಲಿ ಅತ್ಯುತ್ತಮ ಹಾಡುಗಾರರ ತಂಡಗಳಿವೆ. ಈ ತಂಡಗಳು ಚರ್ಚ್ ಮತ್ತು ಮನೆಗಳಿಗೆ ತೆರಳಿ ಕ್ಯಾರಲ್ ಗೀತೆಗಳನ್ನು ಹಾಡುವುದು ಸಂಪ್ರದಾಯ' ಎನ್ನುತ್ತಾರೆ ಮಹಾತ್ಮ ಗಾಂಧಿ ರಸ್ತೆಯ, ಗಾಂಧಿ ಪ್ರತಿಮೆ ಬಳಿಯಿರುವ ಸೇಂಟ್ ಮಾರ್ಕ್ಸ್ ಕೆಥೆಡ್ರಲ್‌ನ ಕ್ಯಾರಲ್ ತಂಡದ ಮುಖ್ಯಸ್ಥ ಸುಕೀತನ್ ಕೆ. ದಾಸ್.
 
`ಕ್ಯಾರಲ್ ಗೀತೆಗಳೆಂದರೆ ಯೇಸುಕ್ರಿಸ್ತರ ಭಜನೆ. ಯೇಸು ಬಗ್ಗೆ ಅವರ ತಾಯಿ ಮೇರಿಯಲ್ಲಿ ಹೊಗಳುವ, ಸ್ತುತಿಸುವ ಒಕ್ಕಣೆಗಳೇ ಇರುತ್ತವೆ. ಹಬ್ಬದ ಮುನ್ನಾದಿನ (ಡಿ.24) ಮಧ್ಯರಾತ್ರಿ ಹಾಗೂ ಹಬ್ಬದ ದಿನ (25ರಂದು) ಮುಂಜಾನೆ ಚರ್ಚ್‌ಗಳಲ್ಲಿ ನಡೆಯುವ ಪೂಜೆಗೆ ಖುದ್ದು ಹಾಜರಾಗಲು ಸಾಧ್ಯವಾಗದೆ ಇರುವ ಅಶಕ್ತರು, ಅಂಗವಿಕಲರು, ರೋಗಿಗಳು ಮತ್ತು ವಯೋವೃದ್ಧರ ಸಂತೋಷಕ್ಕಾಗಿ ಮನೆಗಳಿಗೆ ಕ್ಯಾರಲ್ ಬ್ಯಾಂಡ್‌ಗಳನ್ನು ಕರೆಸಿ ಹಾಡಿಸುವ ಮೂಲಕ ಹಬ್ಬದ ವಾತಾವರಣ ಸೃಷ್ಟಿಸುವುದು ಇದರ ಉದ್ದೇಶ' ಎಂದು ಅವರು ವಿವರಿಸುತ್ತಾರೆ.
 
ಕ್ಯಾರಲ್ ತಂಡದಲ್ಲಿ 30ರಿಂದ 35 ಮಂದಿ ಇರುತ್ತಾರೆ. ನಮ್ಮ ತಂಡ 10 ಮಂದಿಯದ್ದು. ಪಕ್ಕವಾದ್ಯಗಳಾಗಿ ಪಿಯಾನೊ ಮತ್ತು ಆರ್ಗಾನ್ ಬಳಸುತ್ತೇವೆ. ಉಳಿದವರು ಹಾಡುತ್ತೇವೆ. ತಂಡದೊಂದಿಗೆ ಮನೆಮಂದಿ ಮತ್ತು ಆಹ್ವಾನಿತರು ಸೇರಿಕೊಂಡು ವೃತ್ತಾಕಾರವಾಗಿ ಸುತ್ತುತ್ತಾ ಡ್ಯಾನ್ಸ್ ಮಾಡುತ್ತಾ ಹಾಡುತ್ತೇವೆ' ಎಂದುಕ್ಯಾರಲ್‌ನ ಚಿತ್ರಣ ಕೊಡುತ್ತಾರೆ ಸುಕೀತನ್.

ಸುಶ್ರಾವ್ಯ ಹಾಡುಗಳು
ಮೆಲ್ಲನೆ ಬಡಿಯುವ ಗಂಟೆ ನಾದ, ಇಂಪಾದ ವಾದ್ಯ ಹಾಗೂ ಮೆಲುದನಿಯಲ್ಲಿ ಹಾಡುವ ಕ್ಯಾರಲ್, ಕ್ರಿಸ್ತನ ಹುಟ್ಟು ಹಾಗೂ ಮಹತ್ವವನ್ನು ಹೇಳುತ್ತವೆ.“ಜಿಂಗಲ್ ಬೆಲ್ ಜಿಂಗಲ್ ಬೆಲ್ ಜಿಂಗಲ್ ಆಲ್ ದ ವೇ” ಹಾಡನ್ನಂತೂ ಕೇಳಿ ತಲೆದೂಗದವರಿಲ್ಲ. `ಜಾಯ್ ಟು ದ ವರ್ಲ್ಡ್', `ಸೈಲ್ ಅಂಡ್ ಮೈಟ್ ಹೋಲಿ ನೈಟ್', `ವೈಲ್ ಷೆಫರ್ಡ್ ವಾಚ್ ದೇರ್ ಫ್ಲಾಕ್ಸ್ ಬೈ ನೈಟ್', `ಹಾರ್ಕ್ ದ ಹೆರಾಲ್ಡ್' ಮುಂತಾದ ಗೀತೆಗಳನ್ನು ನಾವೂ ಗುನುಗುವಂತಾಗುತ್ತದೆ' ಎಂಬುದು ಲಿಂಗರಾಜಪುರ ನಿವಾಸಿ, ಮಂಗಳೂರು ಮೂಲದ ಅವಿಲ್ ಅಭಿಪ್ರಾಯ.
 
ಕ್ಯಾರೊಲ್ ಬ್ಯಾಂಡ್‌ಗಳು ಈಗ ಕೆಲವು ಶಾಲೆ, ಕಾಲೇಜುಗಳಲ್ಲೂ ಇವೆ. `ಕ್ರಿಸ್ತ ಹುಟ್ಟಿದ ಡಿಸೆಂಬರ್ ತಿಂಗಳುದ್ದಕ್ಕೂ ನಮಗೆ ಹಬ್ಬ. ಭಾಷೆ ಮತ್ತು ಆಯಾ ಸ್ಥಳದ ಆಚರಣೆಯ ಸಂಪ್ರದಾಯಕ್ಕೆ ಅನುಗುಣವಾಗಿ ಕ್ಯಾರಲ್‌ಗಳು ಬದಲಾಗುತ್ತವೆ. ಚರ್ಚ್‌ಗಳಲ್ಲಿ ಕ್ಯಾರಲ್‌ಗಳನ್ನು ಹಾಡುವ ಕಲೆಯನ್ನೂ ಕಲಿಸಿಕೊಡಲಾಗುತ್ತದೆ. ಈಗಂತೂ ಎಲ್ಲವೂ ಕ್ಯಾಸೆಟ್ ರೂಪದಲ್ಲಿರುವುದರಿಂದ ಕಲಿಯುವುದು ಸುಲಭವಾಗಿದೆ. ಪ್ರತಿ ವರ್ಷಕ್ಕಿಂತ ಸಂಭ್ರಮಾಚರಣೆಯಲ್ಲಿ ವ್ಯತ್ಯಾಸವೇನೂ ಇಲ್ಲ. ಕ್ರಿಸ್‌ಮಸ್ ಟ್ರೀ, ಮೇಣದಬತ್ತಿಯ ಬೆಳಕು, ಕ್ಯಾರಲ್‌ಗಳು ಮುಖ್ಯ ಆಕರ್ಷಣೆ' ಎನ್ನುತ್ತಾರೆ ಅಶೋಕ್‌ನಗರದ `ವೆಸ್ಲೆ ತಮಿಳು ಚರ್ಚ್'ನ ರೆವರೆಂಡ್ ಫಾದರ್ ಡಿ.ಎಂ. ಭಾಸ್ಕರನ್. 
 
`ಹಾಡುಗಳ ಮೂಲಕ ಪ್ರತಿ ಕುಟುಂಬಕ್ಕೆ ಉತ್ತಮ ಸಂದೇಶ ನೀಡುತ್ತೇವೆ. ಜನರಿಗೆ ಸಂತೋಷ ಹಾಗೂ ಶಾಂತಿಯನ್ನು ಕರುಣಿಸುವ ಸಲುವಾಗಿ ಭೂಮಿಯಲ್ಲಿ ಅವತರಿಸಿದ ಕ್ರಿಸ್ತನಿಗೆ ಗೌರವ ಸೂಚಿಸಬೇಕು ಹಾಗೂ ಆತನಿಗೆ ನಿಷ್ಠವಾಗಿರಬೇಕು. ತಪ್ಪು ಮಾಡಿದವರಿಗೆ ಮುಕ್ತಿಯ ಮಾರ್ಗವನ್ನೂ ಈ ಕ್ಯಾರಲ್‌ಗಳ ಮುಖಾಂತರ ಹೇಳಲಾಗುವುದು. ಒಳ್ಳೆಯ ವಿಷಯ, ಚಿಂತನೆಯನ್ನು ಹೇಳುವುದೇ ಇವುಗಳ ವಿಶೇಷತೆ' ಎನ್ನುತ್ತಾರೆ ಎಂ.ಜಿ. ರಸ್ತೆಯ ಈಸ್ಟ್ ಪೆರೇಡ್ ಚರ್ಚ್‌ನ ರೆವರೆಂಡ್ ಫಾದರ್ ಜಾನ್ ಕಿರುಬಕರನ್. 
 
ಕೆಲವು ಚರ್ಚ್‌ಗಳ ವ್ಯಾಪ್ತಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ಮಾತ್ರ ಮನೆಮನೆಗೆ ಹೋಗಿ ಕ್ರೈಸ್ತ ಗೀತೆಗಳನ್ನು ಹಾಡುತ್ತಾರೆ. ಕ್ಯಾರಲ್ ತಂಡಕ್ಕೆ ಮನೆಮನೆಯ ಸದಸ್ಯರು ನಿಧಾನವಾಗಿ ಸೇರಿಕೊಂಡು ದೊಡ್ಡದೊಂದು ಗುಂಪು ಸೃಷ್ಟಿಯಾಗಿ ಬೆಳಗಿನ ಜಾವ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಇನ್ನು ಕೆಲವು ಕಡೆಗಳಲ್ಲಿ 15 ದಿನ ಕ್ಯಾರಲ್ ಗೀತೆಗಳನ್ನು ಮನೆಮನೆಗೆ ತೆರಳಿ ಹೇಳಲಾಗುತ್ತದೆ. ಆದರೆ ಈಸ್ಟ್ ಪೆರೇಡ್ ಚರ್ಚ್ ವಿಶೇಷತೆಯೆಂದರೆ ಪ್ರತಿದಿನ ಸಂಜೆ 6.30ರಿಂದ ಬೆಳಗಿನ ಜಾವ ಎರಡು ಗಂಟೆಯವರೆಗೆ ಮನೆಮನೆಗಳಲ್ಲಿ ಹಾಡುಗಳನ್ನು ಹಾಡಿ ಶುಭಕೋರಿ ಬರುತ್ತಾರಂತೆ.

ಕ್ಯಾರಲ್ ಎಂದರೆ...
ಆಂಗ್ಲದಲ್ಲಿ ಕ್ಯಾರಲ್ ಎಂದು ಕರೆಯುವ ಈ ಹಾಡುಗಳು ಕರ್ನಾಟಕದಲ್ಲಿ ಅದರಲ್ಲೂ ಕನ್ನಡದಲ್ಲಿ ಕ್ರಿಸ್‌ಮಸ್ ಗೀತೆಗಳು ಎಂದೇ ಜನಪ್ರಿಯ. ಸಂತೋಷವನ್ನು ಹಂಚಿಕೊಳ್ಳುವುದು ಹಾಗೂ ಉತ್ತಮ ವಿಷಯಗಳನ್ನು ಜನರಿಗೆ ಪಸರಿಸುವ ಕೆಲಸವನ್ನು ಮಾಡುವ ಈ ಕ್ಯಾರಲ್ಸ್ ಎಂಬ ಪದ ಹುಟ್ಟಿಕೊಂಡಿದ್ದು ಫ್ರೆಂಚ್‌ನ ಕ್ಯಾರಲ್ ಪದದಿಂದ. ಕ್ಯಾರಲ್ ಎಂದರೆ ಹಾಡುಗಾರರನ್ನೊಳಗೊಂಡ ತಂಡವನ್ನು ಕಟ್ಟಿಕೊಂಡು ವೃತ್ತಾಕಾರದಲ್ಲಿ ನೃತ್ಯ ಮಾಡುವುದು ಎಂದರ್ಥ. 
 
ಈ ಕ್ಯಾರಲ್ಸ್‌ಗಳ ಹುಟ್ಟನ್ನು ಕೆದಕಿದರೆ ಕ್ರಿಸ್ತನ ಮರಣಾನಂತರ ಪ್ರಾರಂಭವಾಗುತ್ತದೆ ಎಂಬುದು ನಂಬಿಕೆ. 1150 ಇಸವಿಯಿಂದ 1350ರವರೆಗೆ ಕ್ಯಾರಲ್‌ಗಳು ನೃತ್ಯವಾಗಿ ಜನಪ್ರಿಯವಾಗಿತ್ತು. ನಂತರದ ದಿನಗಳಲ್ಲಿ ಹಬ್ಬದ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಹಾಡುವ ಹಾಡುಗಳಾಗಿ ಕ್ಯಾರಲ್‌ಗಳು ಬದಲಾದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.