ADVERTISEMENT

ಕ್ರಿಸ್ ಮಸ್ ಕೊಡುಗೆಗಳ ಮುನ್ನುಡಿ

ಎಸ್.ರಶ್ಮಿ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST
ಕ್ರಿಸ್ ಮಸ್ ಕೊಡುಗೆಗಳ ಮುನ್ನುಡಿ
ಕ್ರಿಸ್ ಮಸ್ ಕೊಡುಗೆಗಳ ಮುನ್ನುಡಿ   

ಚಳಿಗಾಲದಲ್ಲಿ ಬರುವ ಕ್ರಿಸ್‌ಮಸ್ ಕೊಡುಗೆಗಳ ಹಬ್ಬವಾಗಿದೆ. ಪ್ರತಿಯೊಬ್ಬರೂ ಪರಸ್ಪರ ಅದೆಷ್ಟು ಪ್ರೀತಿಸುತ್ತಾರೆ, ಬೆಚ್ಚನೆಯ ಪ್ರೀತಿಯನ್ನು ತೋರಿಸಲು ಏನೆಲ್ಲ ಉಡುಗೆಯಾಗಿ ಕೊಡಬಹುದು ಎನ್ನುವುದೇ ಚರ್ಚೆಯ ವಿಷಯವಾಗಿರುತ್ತದೆ.

ಕ್ರೈಸ್ತ ಮತದಲ್ಲಿ ಈ ಕೊಡು ಕೊಳ್ಳುವ ಸಂಪ್ರದಾಯ ಆರಂಭವಾಗಿ ಶತಮಾನಗಳೇ ಕಳೆದಿವೆ. ಮೊದಲೆಲ್ಲ ನಿಟ್ಟಿಂಗ್ ಕಲೆಯಲ್ಲಿ ಕೈಗವಸು, ಕಾಲುಚೀಲಗಳು, ಸಾಕ್ಸುಗಳನ್ನು ನೇಯ್ದು ನೀಡುವುದು ಸಂಪ್ರದಾಯವಾಗಿತ್ತು.

ತಮ್ಮ ಕೈಗಳಿಂದಲೇ ಪ್ರತಿಯೊಬ್ಬರಿಗಾಗಿ ಬಿಡುವಿನ ಸಮಯದಲ್ಲಿ ಕ್ರಿಸ್‌ಮಸ್ ಉಡುಗೊರೆಯನ್ನು ಸಿದ್ಧಪಡಿಸುವುದೇ ಒಂದು ಸಂಭ್ರಮವಾಗಿತ್ತು. ಬಂಧು ಬಾಂಧವರಿಗಾಗಿ ತಮ್ಮ ಪ್ರೀತಿಯನ್ನೇ ಅಪ್ಪಿದ ಬಿಸುಪು ಅನುಭವಕ್ಕೆ ಬರಲಿ ಎಂಬಂಥ ಉಡುಗೆಗಳನ್ನು ನೀಡುವುದು ಸಾಮಾನ್ಯವಾಗಿತ್ತು. ಪುರುಷರು ತಮ್ಮ ಪ್ರೀತಿ ಪಾತ್ರರಿಗೆ ತಾವೇ ತಯಾರಿಸಿದ, ಬಾಕು, ಕ್ರಾಸು ಮುಂತಾದವುಗಳನ್ನು ನೀಡುವ ಪರಂಪರೆ ಇತ್ತು.

ಹಬ್ಬದ ಮುನ್ನಾದಿನ ಚಿಣ್ಣರೆಲ್ಲ ಬಣ್ಣಬಣ್ಣದ ಸಾಕ್ಸುಗಳನ್ನಿರಿಸಿ, ಹಿಮ ಪ್ರದೇಶದಿಂದ ಬಿಳಿ ಜಿಂಕೆಗಾಡಿಯಲ್ಲಿ ಕುಳಿತ ಸಾಂತಾ ಅಜ್ಜ, ತಮಗೊಂದು ಉಡುಗೊರೆ ತಂದೇ ತರುತ್ತಾನೆ ಎಂಬ ನಂಬಿಕೆಯಲ್ಲಿ ಮಲಗುತ್ತಾರೆ. ಆ ಮುಗ್ಧ ನಂಬಿಕೆಯನ್ನು ಪುರಸ್ಕರಿಸುವಂತೆ ಈ ಕೊಡುಗೆ ನೀಡುವ ಸಂಪ್ರದಾಯ ಮುಂದುವರಿದು ಬಂದಿದೆ. ಮಕ್ಕಳಿಗಾಗಿ ಸಕ್ಕರೆ ತಿನಿಸುಗಳು, ಡೋನಟ್, ಪ್ರಾಣಿ ಆಕಾರದ ಬಿಸ್ಕತ್ತು ಮುಂತಾದ ಸಿಹಿ ಸವಿತಿನಿಸುಗಳನ್ನು ಕೊಡುಗೆಯಾಗಿ ನೀಡಲಾಗುತ್ತಿತ್ತು.

ಕಾಲ ಬದಲಾದಂತೆಲ್ಲ ಪೇಟೆ ಸಂಸ್ಕೃತಿ ಬೆಳೆಯತೊಡಗಿತು. ಇದೀಗ ಸಿಹಿತಿಂಡಿಗಳಿಂದ ಆಭರಣಗಳವರೆಗೂ ಉಡುಗೊರೆಯನ್ನು ನೀಡಲಾಗುತ್ತದೆ. ಪ್ರೀತಿ-ವಿಶ್ವಾಸದೊಂದಿಗೆ ಪ್ರತಿಷ್ಠೆ ಹಾಗೂ ಸಾಮರ್ಥ್ಯವೂ ಸೆಡ್ಡು ಹೊಡೆದು ನಿಲ್ಲುವಂತಾಗಿದೆ. ಉಡುಗೊರೆಗಳ ಸುರಿಮಳೆಯೇ ಇರುತ್ತದೆ. ಸಿಹಿ ಸಕ್ಕರೆಯಿಂದ ಆರಂಭಿಸಿ, ಪ್ಲೇಸ್ಟೇಷನ್‌ವರೆಗೂ, ಉಡುಗೆಯಿಂದ ಶುರುವಾಗಿ ಆಭರಣದವರೆಗೂ ಉಡುಗೊರೆಗಳನ್ನು ನೀಡಲಾಗುತ್ತದೆ.

ಈಗಲೂ ಬೆಂಗಳೂರಿನಲ್ಲಿ ಇದೇ ಬೆಚ್ಚನೆಯ ಪ್ರೀತಿ, ವಿಶ್ವಾಸದ ಪ್ರತೀಕವೆಂಬಂತೆ ಕೈಯಿಂದ ಮಾಡಿದ ಒಣಹಣ್ಣುಗಳ ಉಂಡಿ, ಮೇಣದ ಬತ್ತಿ, ಹುಡುಗಿಯರ ಉಡುಗೆಯನ್ನು ಸಿದ್ಧಪಡಿಸಿ ನೀಡುವವರಿದ್ದಾರೆ. ದೀಪಾವಳಿಯಿಂದಲೇ ಅವರ ಕ್ರಿಸ್‌ಮಸ್ ತಯಾರಿ ಆರಂಭವಾಗುತ್ತದೆ.

ಬೆಂಗಳೂರಿನ ಸಜನಾ ಎಂಬುವವರು ಕ್ರಿಸ್‌ಮಸ್‌ಗಾಗಿಯೇ ಒಣ ಹಣ್ಣುಗಳ ಉಂಡಿಯನ್ನು ತಯಾರಿಸುತ್ತಾರೆ. ಇದರಲ್ಲಿ ಖರ್ಜೂರ ಹಾಗೂ ಅಂಜೂರದೊಂದಿಗೆ ಬದಾಮಿ, ಗೋಡಂಬಿ, ಪಿಸ್ತಾ, ಅಕ್ರೋಟುಗಳನ್ನು ಇಡಿಯಾಗಿ ಸೇರಿಸಿ, ಕೈಯಿಂದಲೇ ಮಿದುಗೊಳಿಸುತ್ತ ಉಂಡಿ ಕಟ್ಟುತ್ತಾರೆ. ಎಣ್ಣೆ, ತುಪ್ಪಗಳ ಬಳಕೆ ಇಲ್ಲದೆ, ಕೃತಕ ಸಕ್ಕರೆ ಅಥವಾ ಬೆಲ್ಲಗಳ ಬೆರಕೆ ಇಲ್ಲದ ಈ ಉಂಡಿಗೆ ಈಗ ಇನ್ನಿಲ್ಲದ ಬೇಡಿಕೆಯಂತೆ. (ಮಾಹಿತಿಗೆ: 90080 02270)

ಕ್ರಿಸ್ಮಸ್ ಬಂದರೆ ಮೇಣದ ಬತ್ತಿಗಳಿಗೂ ಇನ್ನಿಲ್ಲದ ಆದ್ಯತೆ ದೊರೆಯುತ್ತದೆ. ಬಣ್ಣಬಣ್ಣದ ವೈವಿಧ್ಯಮಯ ವಿನ್ಯಾಸದ ಮೇಣದ ಬತ್ತಿಗಳದ್ದೀಗ ಎಲ್ಲ ಮಾಲ್‌ಗಳಲ್ಲೂ ಮೆರವಣಿಗೆ. `ಅರೋಮಾ' ಹೆಸರಿನಲ್ಲಿ ಸುವಾಸನಾಯುಕ್ತ ಬೆಳಕಿನ ಕುಡಿಗಳು ಎಲ್ಲೆಡೆಯೂ ಲಭ್ಯ ಇವೆ. ಪ್ರೀತಿಯ ಪ್ರತಿಬಿಂಬವಾದ ಕೆಂಪುಬಣ್ಣದ ಮೇಣದ ಬತ್ತಿಗಂತೂ ಹೆಚ್ಚಿನ ಬೇಡಿಕೆ ಇರುತ್ತದೆ. ಇದಲ್ಲದೆ, ಗುಲಾಬಿ, ಬಿಳಿ ಬಣ್ಣಕ್ಕೂ ಹೆಚ್ಚಿನ ಬೇಡಿಕೆ ಬರುವುದು ಇದೇ ತಿಂಗಳಲ್ಲಿ. (ಮಾಹಿತಿಗೆ: 97407 10359 ರೂಪರಾಣಿ ರವೀಂದ್ರನ್)

ಅಜ್ಜ, ಅಜ್ಜಿಯಂದಿರು ಮೊಮ್ಮಕ್ಕಳಿಗೆ ವಸ್ತ್ರಗಳನ್ನೇ ಉಡುಗೊರೆಯಾಗಿ ಕೊಡುವುದು ಹೆಚ್ಚು. ಹೆಣ್ಣು ಮಕ್ಕಳಿಗಂತೂ ಅಲೆಅಲೆಯಂಥ ಅಂಗಿಗಳನ್ನು, ತಿಳಿಬಣ್ಣದ ಗೌನುಗಳನ್ನು ನೀಡಿ, ಮನೆಯ ಪುಟ್ಟ ದೇವತೆಯಂತೆ ಅಲಂಕರಿಸಿ ಸಂತಸ ಪಡುತ್ತಾರೆ. ಈ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಬಂದರೆ ಸಾಕು, ಉದ್ದನೆಯ ನಿಲುವಂಗಿ, ಗೌನು ಹಾಗೂ ಫ್ರಿಲ್ಸ್ ಇರುವ ಅಂಗಿಗಳಿಗೆ ಬೇಡಿಕೆ ಹೆಚ್ಚುತ್ತದೆ. ಎಲ್ಲ ಮಳಿಗೆಗಳಲ್ಲೂ ತಿಳಿ ಗುಲಾಬಿ, ನಿಂಬೆ ಹಳದಿ, ಆಕಾಶ ನೀಲಿ, ಕನಕಾಂಬರ ಹಾಗೂ ಅಪ್ಪಟ ಬಿಳಿಯ ಬಣ್ಣದ ಅಂಗಿಗಳು ಮಿಂಚತೊಡುಗುತ್ತವೆ.

ಬಣ್ಣದಂಗಿಗೆ ಲೇಸುಗಳ ಅಲಂಕಾರ, ಫ್ಲಾನೆಲ್ ಸ್ಪರ್ಶ ಅಜ್ಜ ಅಜ್ಜಿಯ ಪ್ರೀತಿಯ ಪ್ರತೀಕದಂತಿರುತ್ತದೆ ಎನ್ನುವುದು ವಸ್ತ್ರವಿನ್ಯಾಸಕಿ ಟ್ವಿಂಕಲ್ ಜೋಸ್ ವಿವರಣೆಯಾಗಿದೆ. ಬೆಂಗಳೂರು ಮೂಲದ ಆನ್‌ಲೈನ್ ಮಳಿಗೆಯ ಒಡತಿಯೂ ಆಗಿರುವ ಟ್ವಿಂಕಲ್‌ಗೆ ಈಗಾಗಲೇ ಕೈ ತುಂಬ ಕೆಲಸವಿದೆಯಂತೆ. ಉಡುಗೆಗಾಗಿ ಆದೇಶ ನೀಡುವವರು ತಮ್ಮ ಮೊಮ್ಮಕ್ಕಳಿಗೆ, ಮಕ್ಕಳಿಗೆ ಎಂಬುದನ್ನು ತಿಳಿಸುವುದರಿಂದ ಇವುಗಳೆಲ್ಲ ಉಡುಗೊರೆಗಳೇ ಎಂಬುದು ಸ್ಪಷ್ಟವಾಗುತ್ತದೆ ಎನ್ನುತ್ತಾರೆ ಅವರು. ಮಾಹಿತಿಗೆ: (ಟ್ವಿಂಕಲ್ ಜೋಸ್: 80232 38167, 98869 67799)

ಕೊಡುವ ಖುಷಿ, ಪಡೆಯುವ ಸಂಭ್ರಮ ಎರಡರಲ್ಲಿಯೂ ಹಬ್ಬ ಅರಳುತ್ತದೆ. ಕೊಡುಗೆ ವಿನಿಮಯ ಮಾಡಿಕೊಂಡವರ ಮುಖದಲ್ಲಿ ನಗೆ ಮಿಂಚಿದಾಗಲೆಲ್ಲ, ಮತ್ತೆ ಮತ್ತೆ ಕೆಂಪುಡುಗೆಯಲ್ಲಿ ಉಡುಗೊರೆಗಳ ಅಜ್ಜ ತನ್ನ ಮಾಸದ ನಗೆಯರಳಿಸಿ, ಹೊರಡುತ್ತಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.